1993 ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಭೂಗತ ಪಾತಕಿ ಅಬು ಸಲೇಂನ ಫೋಟೋ.
ನವದೆಹಲಿ: 1993 ರ ಬಾಂಬೆ ಸರಣಿ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಕುಖ್ಯಾತ ಭೂಗತ ಪಾತಕಿ ಅಬು ಸಲೇಂ (Abu Salem) ಗೆ ಸುಪ್ರೀಂ ಕೋರ್ಟ್ ನ್ಯಾಯಪೀಠ ಶಾಕ್ ನೀಡಿದೆ. ಜೈಲಿನಿಂದ ಶೀಘ್ರ ಬಿಡುಗಡೆ ಮಾಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ವಜಾ ಮಾಡಿ ಆದೇಶಿಸಿದೆ. ತಾನು ಈಗಾಗಲೇ ಸುಮಾರು 25 ವರ್ಷಗಳಿಂದ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದು, ಈಗಲಾದರೂ ಶಿಕ್ಷೆ ಪ್ರಮಾಣವನ್ನು ಕಡಿಮೆಮಾಡಿ ಶೀಘ್ರ ಬಿಡುಗಡೆಗೆ ಅನುಮತಿ ನೀಡುವಂತೆ ಅರ್ಜಿಯಲ್ಲಿ ತಿಳಿಸಲಾಗಿತ್ತು.
ಹೈಕೋರ್ಟ್ ನಲ್ಲೂ ನಿರಾಶೆ!
ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸುವ ಪೂರ್ವದಲ್ಲಿ ಅಬು ಸಲೇಂ ಏಪ್ರಿಲ್ ತಿಂಗಳಲ್ಲಿ ಬಾಂಬೆ ಹೈಕೋರ್ಟ್ಗೆ ಕೂಡ ಇದೇ ಅರ್ಜಿಯನ್ನು ಸಲ್ಲಿಸಿದ್ದನು. ಆದರೆ ಅಲ್ಲಿ ಕೂಡ ಭೂಗತ ಪಾತಕಿಗೆ ಹಿನ್ನಡೆಯಾಗಿತ್ತು.
ಅಂದು, ಅರ್ಜಿ ವಿಚಾರಣೆ ಮಾಡಿದ್ದ, ನ್ಯಾಯಮೂರ್ತಿ ವಿಕ್ರಮ್ ನಾಥ್ ಮತ್ತು ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಅವರ ನ್ಯಾಯಪೀಠವು, ಅಬು ಸಲೇಂನ ಶಿಕ್ಷೆ 2030 ರಂದು ಪೂರ್ಣಗೊಳ್ಳಲಿದ್ದು, ಅಲ್ಲಿವರೆಗೆ ಬಿಡುಗಡೆಮಾಡಲು ಸಾಧ್ಯವಿಲ್ಲ ಎಂದು ಆದೇಶಿಸಿತ್ತು.
ನಂತರ, ಅಬು ಸಲೇಂ, ಬಾಂಬೆ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ, ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದನು. ಆದರೆ ಗುರುವಾರ (ಸೆ.10) ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ನ್ಯಾಯಪೀಠ, ಬಾಂಬೆ ಹೈಕೋರ್ಟ್ ನೀಡಿದ್ದ ತೀರ್ಪನ್ನೇ ಎತ್ತಿಹಿಡಿದು, ಅಬು ಸಲೇಂನ ಅರ್ಜಿಯನ್ನು ವಜಾ ಮಾಡಿದೆ.
ಪೋರ್ಚುಗಲ್ ಒಪ್ಪಂದ ಮತ್ತು ಸುಪ್ರೀಂ ಕೋರ್ಟ್ ಹಸ್ತಕ್ಷೇಪ
2005ರಲ್ಲಿ ಪೋರ್ಚುಗಲ್‌ನಿಂದ ಅಬು ಸಲೇಂನನ್ನು ಭಾರತಕ್ಕೆ ಕರೆತರುವಾಗ, ಆತನಿಗೆ 25 ವರ್ಷಕ್ಕಿಂತ ಹೆಚ್ಚು ಶಿಕ್ಷೆ ನೀಡಬಾರದು ಎಂಬ ಭರವಸೆಯನ್ನು ಭಾರತ ಸರ್ಕಾರ ನೀಡಿತ್ತು. ಇದೇ ಅಂಶವನ್ನು ಸುಪ್ರೀಂ ಕೋರ್ಟ್ ಕೂಡ 2022ರಲ್ಲಿ ಉಲ್ಲೇಖಿಸಿತ್ತು. ಸಲೇಂ 25 ವರ್ಷಗಳ ಶಿಕ್ಷೆ ಪೂರೈಸಿದ ನಂತರ ಆತನನ್ನು ಬಿಡುಗಡೆ ಮಾಡಲು ರಾಷ್ಟ್ರಪತಿಗಳಿಗೆ ಸಲಹೆ ನೀಡಲು ಸರ್ಕಾರ ಬದ್ಧವಾಗಿದೆ. ಆದರೆ, ಈಗಲೇ ಅವನ ಶಿಕ್ಷೆಯನ್ನು ಮಿತಿಗೊಳಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಅಂದೇ ಹೇಳಿತ್ತು.
ಭೂಗತ ಪಾತಕಿಯ ಜೈಲು ಪಯಣ
ನವೆಂಬರ್ 2005 ರಲ್ಲಿ ಭಾರತಕ್ಕೆ ಹಸ್ತಾಂತರಗೊಂಡ ಸಲೇಂ ಮೇಲೆ ಭಯೋತ್ಪಾದಕ ಚಟುವಟಿಕೆಗಳ (TADA) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಸೆಪ್ಟೆಂಬರ್ 2017 ರಲ್ಲಿ ಮುಂಬೈ ಸ್ಫೋಟದ ದೋಷಿ ಎಂದು ಘೋಷಿಸಲಾಯಿತು. ಪ್ರಸ್ತುತ ತಲೋಜಾ ಜೈಲಿನಿಂದ ನಾಶಿಕ್ ಜೈಲಿಗೆ ವರ್ಗಾಯಿಸಲ್ಪಟ್ಟಿರುವ ಸಲೇಂ, ಜೈಲು ನಿಯಮಗಳ ಅಡಿಯಲ್ಲಿ ತನಗೆ ಸಿಗುವ ರಿಯಾಯಿತಿ ದಿನಗಳನ್ನು ಸೇರಿಸಿದರೆ ಈಗಾಗಲೇ 25 ವರ್ಷ ಮುಗಿದಿದೆ ಎಂದು ವಾದಿಸುತ್ತಿದ್ದ. ಆದರೆ ಹೈಕೋರ್ಟ್, ಅಪರಾಧದ ಸ್ವರೂಪ ಮತ್ತು ಸಾರ್ವಭೌಮ ಭರವಸೆಯ ಷರತ್ತುಗಳನ್ನು ಗಮನಿಸಿದರೆ ಈಗಲೇ ಬಿಡುಗಡೆ ಅಸಾಧ್ಯ ಎಂದು ಆದೇಶಿಸಿದೆ, (ಏಜನ್ಸೀಸ್).