ನವದೆಹಲಿ: ತಮಿಳುನಾಡಿನ ಮಧುರೈನಲ್ಲಿರುವ ತಿರುಪ್ಪರಂಕುಂದ್ರಂ ದೇವಸ್ಥಾನದ ಬೆಟ್ಟದ ಮೇಲಿರುವ ದೀಪಪತ್ತೂನ್‌ನಲ್ಲಿ ಕಾರ್ತಿಕ ದೀಪ ಹಚ್ಚಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದ್ದು, ನಾಳೆಯೇ (ಶನಿವಾರ, ನ.28) ದೀಪ ಹಚ್ಚಬೇಕೆಂದು ತಿಳಿಸಿರುವ ನ್ಯಾಯಪೀಠ, ಭದ್ರತೆ ಜವಾಬ್ದಾರಿಯನ್ನು ಕೇಂದ್ರ ಮೀಸಲು ಪೊಲೀಸ್ ಪಡೆಗೆ ವಹಿಸಿ ಆದೇಶಿಸಿದೆ. ಸರ್ವೋಚ್ಚ ನ್ಯಾಯಾಲಯದಿಂದ ಈ ತೀರ್ಮಾನ ಬರುತ್ತಲೇ, ಭಾರತೀಯ ಜನತಾ ಪಾರ್ಟಿ (BJP), ತಮಿಳುನಾಡು ಸರ್ಕಾರ ಹಾಗೂ ಸಿಎಂ ಜೋಸೆಫ್ ವಿಜಯ್ ವಿರುದ್ಧ ವಾಗ್ದಾಳಿ ಆರಂಭಿಸಿದ್ದಾರೆ.
ಸುಪ್ರೀಂ ಕೋರ್ಟ್ ತೀರ್ಪು ಹೊರಬಿದ್ದ ನಂತರ ಮಾಧ್ಯಮದವರ ಜತೆಗೆ ಮಾತನಾಡಿದ ಬಿಜೆಪಿ ವಕ್ತಾರ ಗೌರವ್ ಭಾಟಿಯಾ, ಇದೇ ಮೊದಲಲ್ಲ, ಈ ದೇಶದಲ್ಲಿ ನಿರಂತರವಾಗಿ ಹಿಂದೂಗಳ, ಅವರ ಆಚರಣೆಗಳನ್ನು ಕೀಳಾಗಿ ನೋಡುವುದು ಮತ್ತು ಸಂಪ್ರದಾಯಗಳನ್ನು ವಿರೋಧಿಸು ನೀತಿ ನಡೆದುಕೊಂಡು ಬಂದಿದೆ.
ಕಾಂಗ್ರೆಸ್ನ ರಾಹುಲ್ ಗಾಂಧಿ ಇರಲೀ, ತಮಿಳುನಾಡಿನ ವಿಜಯ್ ಇರಲಿ, ಸಂವಿಧಾನದ 25 ಮತ್ತು 26ನೇ ವಿಧಿಗಳ ಅಡಿಯಲ್ಲಿ ಹಿಂದೂಗಳಿಗೆ ಯಾವುದೇ ಹಕ್ಕುಗಳಿಲ್ಲ ಎಂದು ಅವರು ಏಕೆ ಭಾವಿಸುತ್ತಾರೆ? ಎಂದು ಭಾಟಿಯಾ ಪ್ರಶ್ನಿಸಿದ್ದಾರೆ.
ಈ ಎರಡು ನಾಯಕರು ಸೇರಿದಂತೆ ಇನ್ನು ಹಲವರು ಹಿಂದೂ ವಿರೋಧಿಗಳಿದ್ದಾರೆ. ಇವರಿಗೆ ಹಿಂದೂಗಳ ಧಾರ್ಮಿಕ ಭಾವನಗಳಿಗೆ ಧಕ್ಕೆ ಉಂಟುಮಾಡುವುದೇ ರಾಜಕೀಯವಾಗಿದೆ. ಇವರೆಲ್ಲರೂ ಹಿಂದೂ ವಿರೋಧಿಗಳೆಂದು ಜರಿದಿದ್ದಾರೆ.
ಇಂದು ನಡೆದ ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಧುರೈ ಜಿಲ್ಲಾಧಿಕಾರಿ ನಿಶಾಂತ್ ಕೃಷ್ಣ ಸಲ್ಲಿಸಿದ್ದ ಆರಂಭಿಕ ವರದಿ ಮತ್ತು ಕ್ಷಮೆಯಾಚನೆಯನ್ನು ನ್ಯಾಯಾಲಯ ಸಾರಾಸಗಟಾಗಿ ತಿರಸ್ಕರಿಸಿದೆ. ಜಿಲ್ಲಾಧಿಕಾರಿಗೆ ಏನೂ ತಿಳಿಯದವರಂತೆ ವರ್ತಿಸಿ ನಂತರ ವಿಷಾದ ವ್ಯಕ್ತಪಡಿಸುತ್ತಿರುವುದು ಕೇವಲ ಮೊಸಳೆ ಕಣ್ಣೀರು ಎಂದು ನ್ಯಾಯಪೀಠ ಕಟುವಾಗಿ ಟೀಕಿಸಿದೆ.
ನವೆಂಬರ್ 20ರ ಆದೇಶದ ಹೊರತಾಗಿಯೂ ದೀಪ ಬೆಳಗಿಸದೆ, ದೇವಾಲಯದ ಸಂಪ್ರದಾಯಗಳು ಮತ್ತು ಆಚರಣೆಗಳ ನೆಪವೊಡ್ಡಿ ನಿರ್ಣಯ ಅಂಗೀಕರಿಸಿದ ಟ್ರಸ್ಟ್ ಮಂಡಳಿಯ ನಡೆ ಉದ್ದೇಶಪೂರ್ವಕ ಮತ್ತು ಬಹಿರಂಗ ಉಲ್ಲಂಘನೆಯಾಗಿದೆ ಎಂದು ನ್ಯಾಯಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ನವೆಂಬರ್ 20 ರ ಆದೇಶವನ್ನು ಉಲ್ಲಂಘಿಸಿದ ಆರೋಪದ ಮೇಲೆ ಮುಖ್ಯ ಕಾರ್ಯದರ್ಶಿ ಎಂ. ಸಾಯಿ ಕುಮಾರ್ ಮತ್ತು ಡಿಜಿಪಿ ಮಹೇಶ್ ಕುಮಾರ್ ಅವರೊಂದಿಗೆ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯ ಹಿರಿಯ ಅಧಿಕಾರಿಗಳು, ಮಧುರೈ ಜಿಲ್ಲಾಡಳಿತ, ಪೊಲೀಸ್ ಅಧಿಕಾರಿಗಳು ಮತ್ತು ದೇವಾಲಯದ ಆಡಳಿತ ಮಂಡಳಿ ಸದಸ್ಯರು ಸೇರಿದಂತೆ ಒಟ್ಟು 15 ಮಂದಿಗೆ ಸುಪ್ರೀಂ ನೋಟಸ್ ಜಾರಿಗೊಳಿಸಿ ವಿವರಣೆ ಕೇಳಲಾಗಿದೆ, (ಏಜೆನ್ಸೀಸ್).