ಕೇಂದ್ರ ಸರ್ಕಾರ ಹಾಗೂ ಆಯೋಗಕ್ಕೆ ಸುಪ್ರೀಂ ಕೋರ್ಟ್ ನೋಟಿಸ್!  
ದೇಶ

ಚುನಾವಣಾ ಆಯುಕ್ತರ ಕಾನೂನು ವಿನಾಯಿತಿ ಕಾಯ್ದೆ ಪ್ರಶ್ನಿಸಿ ಅರ್ಜಿ: ಕೇಂದ್ರ ಸರ್ಕಾರ ಹಾಗೂ ಆಯೋಗಕ್ಕೆ ಸುಪ್ರೀಂ ಕೋರ್ಟ್ ನೋಟಿಸ್! | Supreme Court

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತರು ಹಾಗೂ ಚುನಾವಣಾ ಆಯುಕ್ತರಿಗೆ ಪೂರ್ಣ ಪ್ರಮಾಣದ ಕಾನೂನು ವಿನಾಯಿತಿ ನೀಡುವ ಚುನಾವಣಾ ಆಯುಕ್ತರ ಕಾಯ್ದೆ 2023ರ ಸೆಕ್ಷನ್ 16ರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ (Supreme Court), ಕೇಂದ್ರ ಸರ್ಕಾರ ಹಾಗೂ ಕೇಂದ್ರ ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿದೆ.

ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜಯಮಾಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿ. ಮೋಹನಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಈ ಆದೇಶ ಹೊರಡಿಸಿದ್ದು, ಉನ್ನತ ಚುನಾವಣಾ ಅಧಿಕಾರಿಗಳ ಜವಾಬ್ದಾರಿ ಮತ್ತು ಕಾನೂನು ಹೊಣೆಗಾರಿಕೆಯ ಕುರಿತು ನ್ಯಾಯಾಂಗ ಪರಿಶೀಲನೆಗೆ ಚಾಲನೆ ನೀಡಿದೆ.

ಸಂಸತ್ತು 2023ರಲ್ಲಿ ಅಂಗೀಕರಿಸಿದ ಈ ಕಾಯ್ದೆಯ ಪ್ರಕಾರ, ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರು ತಮ್ಮ ಅಧಿಕಾರಾವಧಿಯಲ್ಲಿ ಅಧಿಕೃತ ಕರ್ತವ್ಯದ ಭಾಗವಾಗಿ ಕೈಗೊಳ್ಳುವ ಯಾವುದೇ ನಿರ್ಧಾರ ಅಥವಾ ಕ್ರಮಗಳಿಗೆ ಸಿವಿಲ್ ಹಾಗೂ ಕ್ರಿಮಿನಲ್ ಮೊಕದ್ದಮೆಗಳಿಂದ ಸಂಪೂರ್ಣ ಕಾನೂನು ರಕ್ಷಣೆ ಪಡೆಯುತ್ತಾರೆ.

ಸಾಮಾಜಿಕ ಕಾರ್ಯಕರ್ತ ಹಾಗೂ ವಕೀಲ ಅರುಣ್ ಕುಮಾರ್ ಅಗರ್ವಾಲ್ ಅವರು ಈ ಕಾಯ್ದೆಯನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದು, ತಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿದ ಅಕ್ರಮ ಕೃತ್ಯಗಳಿಗೂ ಈ ವಿನಾಯಿತಿ ವಿಸ್ತರಿಸಿರುವುದು ಸರಿಯಲ್ಲ ಎಂದು ವಾದಿಸಿದ್ದಾರೆ. ಇಂತಹ ಅನಿಯಂತ್ರಿತ ರಕ್ಷಣೆಯು ಚುನಾವಣಾ ಅಧಿಕಾರಿಗಳ ವಿರುದ್ಧ ಸಿವಿಲ್ ಮತ್ತು ಕ್ರಿಮಿನಲ್ ಪರಿಹಾರಗಳನ್ನು ಪಡೆಯುವ ನಾಗರಿಕರ ಮೂಲಭೂತ ಹಕ್ಕನ್ನು ಕಸಿದುಕೊಳ್ಳುತ್ತದೆ. ಸಂಸ್ಥೆಯ ಸ್ವಾಯತ್ತತೆ ಕಾಯ್ದುಕೊಳ್ಳುವುದು ಅಗತ್ಯವಾದರೂ ಅಧಿಕಾರಿಗಳಿಗೆ ಸಂಪೂರ್ಣ ರಕ್ಷಣೆ ನೀಡುವುದನ್ನು ಸಮರ್ಥಿಸಲು ಸಾಧ್ಯವಿಲ್ಲ ಎಂದು ತಿಳಿಸಿರುವ ಅರ್ಜಿದಾರರು, ಕಾಯ್ದೆಯ ಸೆಕ್ಷನ್ 16ನ್ನು ಅಸಂವಿಧಾನಿಕ ಎಂದು ಘೋಷಿಸುವಂತೆ ಕೋರಿದ್ದಾರೆ.

ಸಣ್ಣ ನಿರ್ಲಕ್ಷ್ಯಕ್ಕೆ ಮತದಾರ ತನ್ನ ಹಕ್ಕು ಕಳೆದುಕೊಳ್ಳಬೇಕೆ..? ಪೀಠ

ಚುನಾವಣಾ ಆಯೋಗದ ಎಸ್​ಐಆರ್​ ಪ್ರಕ್ರಿಯೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಇತರ ಅರ್ಜಿಗಳ ವಿಚಾರಣೆಯ ಸಂದರ್ಭದಲ್ಲೇ ಸುಪ್ರೀಂ ಕೋರ್ಟ್ ಈ ನೋಟಿಸ್ ಜಾರಿ ಮಾಡಿದೆ. ಈ ವೇಳೆ, ದೆಹಲಿಯಲ್ಲಿ ತಕ್ಷಣಕ್ಕೆ ಯಾವುದೇ ಚುನಾವಣೆಗಳು ಇಲ್ಲದಿದ್ದರೂ ಈ ಪರಿಷ್ಕರಣೆಯನ್ನು ಇಷ್ಟೊಂದು ತರಾತುರಿಯಲ್ಲಿ ನಡೆಸುತ್ತಿರುವ ಉದ್ದೇಶವೇನು ಮತ್ತು ಇದು ಮತದಾರರಿಗೆ ಕಿರುಕುಳ ಅಥವಾ ಬೆದರಿಕೆ ಒಡ್ಡುವಂತಿದೆಯೇ ಎಂದು ನ್ಯಾಯಪೀಠವು ಆಯೋಗವನ್ನು ಪ್ರಶ್ನಿಸಿತು.

ಆಯೋಗವು ಕಟ್ಟುನಿಟ್ಟಿನ ಕಾಲಮಿತಿಗೆ ಪಟ್ಟು ಹಿಡಿಯಬಾರದು ಮತ್ತು ನಿಗದಿತ ದಿನಾಂಕ ಮುಗಿದ ನಂತರವೂ ಮತದಾರರು ನಮೂನೆಗಳನ್ನು ಸಲ್ಲಿಸಲು ಅವಕಾಶ ನೀಡಬೇಕು ಎಂದು ಪೀಠವು ಸೂಚನೆ ನೀಡಿದ್ದು, ಇದಲ್ಲದೆ, ಈಗಾಗಲೇ ಮತದಾರರ ಪಟ್ಟಿಯಲ್ಲಿದ್ದು, ಕರಡು ಪಟ್ಟಿಯಲ್ಲಿ ಹೆಸರು ಬಿಟ್ಟುಹೋದ ನಾಗರಿಕರನ್ನು ಮತ್ತೆ ಹೊಸದಾಗಿ ಫಾರಂ 6 ಭರ್ತಿ ಮಾಡಲು ಕೇಳುತ್ತಿರುವುದನ್ನು ನ್ಯಾಯಮೂರ್ತಿ ಬಾಗ್ಚಿ ಅವರು ಆಕ್ಷೇಪಿಸಿ, ಮತದಾರನ ಸಣ್ಣ ನಿರ್ಲಕ್ಷ್ಯಕ್ಕೆ ಅವರ ಹಕ್ಕನ್ನೇ ಶಾಶ್ವತವಾಗಿ ಕಸಿದುಕೊಳ್ಳಲು ಸಾಧ್ಯವೇ ಎಂದು ತಾರಟೆಗೆ ತೆಗೆದುಕೊಂಡರು.

ಇದೇ ವೇಳೆ, ಮತದಾರರ ಪಟ್ಟಿಯಿಂದ ಹೆಸರು ತೆರವುಗೊಳಿಸಲಾದ ನಾಗರಿಕರ ಭೌತಿಕ ಪಟ್ಟಿಯನ್ನು ಆಯಾ ಬ್ಲಾಕ್ ಮಟ್ಟದಲ್ಲಿ ಸ್ಥಳೀಯ ಭಾಷೆಗಳಲ್ಲಿ ಕಡ್ಡಾಯವಾಗಿ ಪ್ರದರ್ಶಿಸುವಂತೆ ನ್ಯಾಯಾಲಯ ಸೂಚಿಸಿದೆ. ಪ್ರಕರಣ ನ್ಯಾಯಾಲಯದ ಪರಿಶೀಲನೆಯಲ್ಲಿರುವುದರಿಂದ ನಾಗರಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಧೈರ್ಯ ತುಂಬಿದ ಪೀಠವು, ನಾಮಪತ್ರ ಸಲ್ಲಿಕೆಯ ಕೊನೆಯ ದಿನಾಂಕದವರೆಗೂ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಹಾಗೂ ತಿದ್ದುಪಡಿಗೆ ಅವಕಾಶವಿರುತ್ತದೆ ಎಂದು ಸ್ಪಷ್ಟಪಡಿಸಿತು. ದೆಹಲಿಯಲ್ಲಿ ಅರ್ಜಿ ಸಲ್ಲಿಕೆಯ ಕಾಲಮಿತಿಯನ್ನು ವಿಸ್ತರಿಸಲು ಹಾಗೂ ತಡವಾಗಿ ಸಲ್ಲಿಸುವ ನಮೂನೆಗಳನ್ನು ಸ್ವೀಕರಿಸಲು ಪರಿಶೀಲಿಸುವುದಾಗಿ ಚುನಾವಣಾ ಆಯೋಗ ಕೋರ್ಟ್‌ಗೆ ತಿಳಿಸಿದ್ದು, ಈ ಪ್ರಕರಣದ ಮುಂದಿನ ವಿಚಾರಣೆಯನ್ನು ನವೆಂಬರ್ 19ಕ್ಕೆ ನಿಗದಿಪಡಿಸಲಾಗಿದೆ(ಏಜೆನ್ಸೀಸ್​).