- ಉನ್ನಾವ್ ಅತ್ಯಾಚಾರ ಪ್ರಕರಣದ ಆರೋಪಿಗೆ 'ಸುಪ್ರೀಂ' ಬಿಗ್ ಶಾಕ್
- ದೆಹಲಿ ಹೈಕೋರ್ಟ್ ಆದೇಶವನ್ನು ತಡೆಹಿಡಿದ ಸುಪ್ರೀಂ ಕೋರ್ಟ್
- ಗಲ್ಲು ಶಿಕ್ಷೆ ಆಗುವವರೆಗೂ ಕಾಯುತ್ತೇನೆ ಎಂದ ಸಂತ್ರಸ್ತೆ
- ಏನಿದು ಪ್ರಕರಣ? ಇಲ್ಲಿದೆ ನೋಡಿ ಪೂರ್ಣ ವಿವರ
ನವದೆಹಲಿ: ಇಂದು (ಡಿ.29) ಉನ್ನಾವ್ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಪ್ರಮುಖ ಆದೇಶವನ್ನೇ ಹೊರಡಿಸಿದೆ. ಈ ಕೇಸ್ನ ಆರೋಪಿಯಾಗಿರುವ ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್‌ಗೆ ದೆಹಲಿ ಹೈಕೋರ್ಟ್ ನೀಡಿದ್ದ ಜಾಮೀನು ಆದೇಶವನ್ನು ತಡೆ ಹಿಡಿದಿದೆ.
ದೆಹಲಿ ಹೈಕೋರ್ಟ್ ಆದೇಶಕ್ಕೆ ತಡೆ
ಅತ್ಯಾಚಾರ ಪ್ರಕರಣದಲ್ಲಿ ಆರೋಪಿ ಆಗಿರುವ ಕುಲದೀಪ್ಗೆ ಜೈಲು ಶಿಕ್ಷೆಯನ್ನು ಅಮಾನತುಗೊಳಿಸಿ ಎಂಬ ಆದೇಶವನ್ನು ದೆಹಲಿ ಹೈಕೋರ್ಟ್ ಹೊರಡಿಸಿತು. ಕೋರ್ಟ್ನಿಂದ ಈ ಆದೇಶ ಹೊರಬೀಳುತ್ತಿದ್ದಂತೆ ಸಂತ್ರಸ್ತೆಯ ಪರ ವಕೀಲರು ಮತ್ತು ಸಿಬಿಐ ಅಧಿಕಾರಿಗಳು ದೆಹಲಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ, ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದರು. ಇಂದು (ಡಿ.29) ಕೇಸ್ನ ವಿಚಾರಣೆ ನಡೆಸಿದ ಸುಪ್ರೀಂ, ದೆಹಲಿ ಹೈಕೋರ್ಟ್‌ನ ಆದೇಶವನ್ನು ತಡೆಹಿಡಿದಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿಗಳಾದ ಜೆ.ಕೆ. ಮಹೇಶ್ವರಿ ಮತ್ತು ಅಗಸ್ಟೀನ್ ಜಾರ್ಜ್ ಅವರನ್ನೊಳಗೊಂಡ ಪೀಠವು ಅರ್ಜಿಯ ವಿಚಾರಣೆ ನಡೆಸಿ, ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಆರೋಪಿಯನ್ನು ಜೈಲಿನಿಂದ ಬಿಡುಗಡೆಗೊಳಿಸಬಾರದು ಎಂದು ಆದೇಶ ಹೊರಡಿಸಿತು. ಇದರೊಟ್ಟಿಗೆ ಸಂತ್ರಸ್ತೆಗೆ ಕಾನೂನು ನೆರವು ನೀಡಬೇಕೆಂದು ಸಹ ತಿಳಿಸಿತು.
ಗಲ್ಲು ಶಿಕ್ಷೆ ಆಗುವವರೆಗೂ ಕಾಯುತ್ತೇನೆ...
ಇದಲ್ಲದೆ, ಜಾಮೀನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳ ಕುರಿತು ನಾಲ್ಕು ವಾರಗಳಲ್ಲಿ ಪ್ರತಿಕ್ರಿಯಿಸುವಂತೆ ಸುಪ್ರೀಂ ಕೋರ್ಟ್ ಸೆಂಗಾರ್‌ಗೆ ನೋಟಿಸ್ ಜಾರಿಗೊಳಿಸಿದೆ. ಇನ್ನು ಸುಪ್ರೀಂ ಆದೇಶವನ್ನು ಗೌರವಿಸಿದ ಸಂತ್ರಸ್ತೆ, "ನನಗೆ ತುಂಬಾ ಸಂತಸ ಉಂಟಾಗಿದೆ. ಸುಪ್ರೀಂ ಕೋರ್ಟ್ ತೀರ್ಪನ್ನು ನಾನು ಸ್ವಾಗತಿಸುತ್ತೇನೆ. ನ್ಯಾಯಾಲಯದ ಮೇಲೆ ನನಗೆ ನಂಬಿಕೆಯಿದೆ. ಆತನಿಗೆ ಗಲ್ಲು ಶಿಕ್ಷೆ ಆಗುವವರೆಗೂ ಕಾಯುತ್ತೇನೆ" ಎಂದರು.
ಸಂತ್ರಸ್ತೆಯ ತಾಯಿ ಮಾತನಾಡಿ, "ಸುಪ್ರೀಂ ಕೋರ್ಟ್ ಆದೇಶದ ಸಂತೋಷ ನೀಡಿದೆ. ಈ ಸಮಯದಲ್ಲಿ ನಮ್ಮ ಕುಟುಂಬಕ್ಕೆ ಹಾಗೂ ನಮ್ಮ ವಕೀಲರಿಗೆ ಭದ್ರತೆಯ ಅಗತ್ಯವಿದೆ. ಹಲವು ಕಡೆಯಿಂದ ನಮಗೆ ಬೆದರಿಕೆ ಕರೆಗಳು ಕೂಡ ಬರುತ್ತಿವೆ. ಸರ್ಕಾರ ಸೂಕ್ತ ಭದ್ರತೆಯನ್ನು ಒದಗಿಸಬೇಕು" ಎಂದು ಮನವಿ ಮಾಡಿಕೊಂಡರು.
ಏನಿದು ಪ್ರಕರಣ?
2017ರಲ್ಲಿ ಉತ್ತರ ಪ್ರದೇಶದ ಉನ್ನಾವ್ ಜಿಲ್ಲೆಯಲ್ಲಿ 17 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಯಿತು. ನಾಲ್ಕು ಬಾರಿ ಶಾಸಕನಾಗಿದ್ದ ಅಂದಿನ ಬಿಜೆಪಿ ನಾಯಕ ಕುಲದೀಪ್ ಸೆಂಗಾರ್ ಈ ಪ್ರಕರಣದಲ್ಲಿ ಪ್ರಮುಖ ಆರೋಪಿ ಎನ್ನಲಾಯಿತು. ಆದಾಗ್ಯೂ, ಈ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸದ ಕಾರಣ, ಅಂದಿನ ಸಿಎಂ ಯೋಗಿ ಆದಿತ್ಯನಾಥ್ ಅವರ ಮನೆಯ ಮುಂದೆ ಸಂತ್ರಸ್ತೆ ಆತ್ಮಹತ್ಯೆಗೆ ಯತ್ನಿಸಿದಾಗ ಪ್ರಕರಣವು ಹೈಪ್ರೊಫೈಲ್ ಕೇಸ್ ಆಗಿ ತಿರುಗಿತು.
ನಂತರದ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಸೆಂಗಾರ್ ಬೆಂಬಲಿಗರು ಸಂತ್ರಸ್ತೆಯ ತಂದೆಯನ್ನು ಕ್ರೂರವಾಗಿ ಥಳಿಸಿ, ಕೊಲೆಗೈದಿದ್ದಾಗಿ ವರದಿಗಳು ಉಲ್ಲೇಖಿಸಿವೆ. ಈ ಘಟನೆಗಳು ಪ್ರಕರಣಕ್ಕೆ ಇನ್ನಷ್ಟು ಕಿಚ್ಚು ಹಚ್ಚಿತು. ಉನ್ನಾವ್ ಅತ್ಯಾಚಾರ ಪ್ರಕರಣವನ್ನು 2018ರಲ್ಲಿ ಸಿಬಿಐಗೆ ವರ್ಗಾಯಿಸಲಾಯಿತು. ಆಗಸ್ಟ್ 2019ರಲ್ಲಿ, ಸುಪ್ರೀಂ ಕೋರ್ಟ್ ಅತ್ಯಾಚಾರ ಪ್ರಕರಣ ಮತ್ತು ಇತರ ಸಂಬಂಧಿತ ಪ್ರಕರಣಗಳನ್ನು ಉತ್ತರ ಪ್ರದೇಶದ ವಿಚಾರಣಾ ನ್ಯಾಯಾಲಯದಿಂದ ದೆಹಲಿ ಹೈಕೋರ್ಟ್‌ಗೆ ವರ್ಗಾಯಿಸಲು ಆದೇಶಿಸಿತು.
ಷರತ್ತುಬದ್ಧ ಜಾಮೀನು
ಡಿಸೆಂಬರ್ 2019ರಲ್ಲಿ, ಸೆಂಗಾರ್ನನ್ನು ಅಪರಾಧಿ ಎಂದು ಘೋಷಿಸಿ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿತು. ಆದಾಗ್ಯೂ, ಇತ್ತೀಚೆಗೆ ಪ್ರಕರಣದ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, ಸೆಂಗಾರ್ ಅವರ ಶಿಕ್ಷೆಯನ್ನು ಅಮಾನತುಗೊಳಿಸುವುದಾಗಿ ಆದೇಶ ಹೊರಡಿಸಿತು. ಪೋಕ್ಸೋ ಕಾಯ್ದೆ ಅನ್ವಯಿಸುವುದಿಲ್ಲ ಎಂದು ಹೇಳಿದ ಹೈಕೋರ್ಟ್, ಸೆಂಗಾರ್‌ಗೆ ಷರತ್ತುಬದ್ಧ ಜಾಮೀನು ನೀಡಿತು. ನ್ಯಾಯಾಲಯದ ತೀರ್ಪಿನ ವಿರುದ್ಧ ಸಂತ್ರಸ್ತೆ ಮತ್ತು ಮಹಿಳಾ ಪಡೆಗಳು ಹಾಗೂ ಮುಖಂಡರು ತೀವ್ರ ಪ್ರತಿಭಟನೆ ನಡೆಸಿದರು.
ಆರೋಪಿ ಪರ ದೆಹಲಿ ಹೈಕೋರ್ಟ್ ಆದೇಶ ನೀಡುತ್ತಿದ್ದಂತೆ ಸಿಡಿದೆದ್ದ ಸಂತ್ರಸ್ತೆಯ ವಕೀಲರು ಮತ್ತು ಸಿಬಿಐ ಅಧಿಕಾರಿಗಳು, ಸುಪ್ರೀಂ ಕೋರ್ಟ್ ಮೆಟ್ಟಿಲೇರಿದರು. ಈ ವಿಚಾರಣೆ ನಡೆಸಿದ ಸುಪ್ರೀಂ, ದೆಹಲಿ ಹೈಕೋರ್ಟ್‌ನ ಆದೇಶಕ್ಕೆ ತಡೆ ನೀಡುವ ಮೂಲಕ ಸಂತ್ರಸ್ತೆಯ ಸಂತಸಕ್ಕೆ ಕಾರಣವಾಗಿದೆ,(ಏಜೆನ್ಸೀಸ್).