ನವದೆಹಲಿ: ಸುಪ್ರೀಂಕೋರ್ಟ್ ದೆಹಲಿ-ಎನ್ಸಿಆರ್ ಪ್ರದೇಶದಲ್ಲಿ ದೀಪಾವಳಿಯ ಮುನ್ನಾದಿನವಾದ ನವೆಂಬರ್ 07 ಮತ್ತು ಹಬ್ಬದ ದಿನವಾದ ನ. 08ರಂದು, ಬೆಳಿಗ್ಗೆ 6ರಿಂದ 7ರವರೆಗೆ ಹಾಗೂ ರಾತ್ರಿ 8ರಿಂದ 10ರವರೆಗೆ 'ಹಸಿರು ಪಟಾಕಿ'ಗಳನ್ನು ಸಿಡಿಸಲು ಸೋಮವಾರ(ನ. 02) ಅನುಮತಿ ನೀಡಿದೆ.
ಈ ವರ್ಷ ದೀಪಾವಳಿಯನ್ನು ನವೆಂಬರ್ 8ರಂದು ಆಚರಿಸಲಾಗುತ್ತದೆ. ಹಸಿರು ಪಟಾಕಿಗೆ ಅನುಮತಿ ಕೋರಿ ಸಲ್ಲಿಸಲಾದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಮತ್ತು ಪ್ರಸನ್ನ ಬಿ. ವರಾಲೆ ಅವರಿದ್ದ ಪೀಠವು ಎರಡು ದಿನ ಮತ್ತು ಕೆಲವೇ ಗಂಟೆಗಳ ಕಾಲ ಪಟಾಕಿ ಸಿಡಿಸಲು ಅನುಮತಿ ನೀಡಿದೆ.
ಹಾಗೆಯೇ ಆಸ್ಪತ್ರೆಗಳು, ನರ್ಸಿಂಗ್ ಹೋಮ್ಗಳು, ಪ್ರಾಥಮಿಕ ಮತ್ತು ಜಿಲ್ಲಾ ಆರೋಗ್ಯ ಕೇಂದ್ರಗಳು, ವೃದ್ಧಾಶ್ರಮಗಳು ಹಾಗೂ ನಿಗದಿತ 'ಶಾಂತ ವಲಯ'ಗಳ 300 ಮೀಟರ್ ವ್ಯಾಪ್ತಿಯಲ್ಲಿ ಪಟಾಕಿಗಳನ್ನು ಸಿಡಿಸಬಾರದು ಎಂದು ನಿರ್ದೇಶನ ನೀಡಿದೆ.
ಈ ಹಿಂದೆ ಪಟಾಕಿಗಳ ಮೇಲೆ ವಿಧಿಸಲಾಗಿರುವ ಸಂಪೂರ್ಣ ನಿಷೇಧವನ್ನು 2026 ನವೆಂಬರ್ 9ರಿಂದ ಮತ್ತೆ ಜಾರಿಗೆ ಬರುತ್ತದೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಅಲ್ಲದೆ, 'ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್-ನ್ಯಾಷನಲ್ ಎನ್ವಿರಾನ್ಮೆಂಟಲ್ ಇಂಜಿನಿಯರಿಂಗ್ ರಿಸರ್ಚ್ ಇನ್ಸ್ಟಿಟ್ಯೂಟ್' (CSIR-NEERI) ಮತ್ತು 'ಪೆಟ್ರೋಲಿಯಂ ಅಂಡ್ ಎಕ್ಸ್ಪ್ಲೋಸಿವ್ಸ್ ಸೇಫ್ಟಿ ಆರ್ಗನೈಸೇಶನ್' (PESO) ನಿಂದ ಮಾನ್ಯ ಪ್ರಮಾಣಪತ್ರಗಳನ್ನು ಹೊಂದಿರುವ ತಯಾರಕರಿಗೆ, ನವೆಂಬರ್ 2 ರಿಂದ 6ರವರೆಗೆ ಕೇವಲ ಅನುಮೋದಿತ 'ಹಸಿರು ಪಟಾಕಿ'ಗಳನ್ನು ಮಾತ್ರ ತಯಾರಿಸಲು ನ್ಯಾಯಾಲಯ ಅನುಮತಿ ನೀಡಿದೆ.
ಸರಣಿಯಾಗಿ ಜೋಡಿಸಲಾದ ಪಟಾಕಿಗಳು, ಅಂದರೆ ಸಾಮಾನ್ಯವಾಗಿ 'ಲಡಿ'ಗಳು (ladis) ಅಥವಾ ಪಟಾಕಿ ಸರಮಾಲೆಗಳ ತಯಾರಿಕೆ ಮತ್ತು ಮಾರಾಟವನ್ನು ನ್ಯಾಯಾಲಯ ನಿಷೇಧಿಸಿದೆ. ಅಕ್ರಮ ಮತ್ತು ಸಾಂಪ್ರದಾಯಿಕ ಪಟಾಕಿಗಳ ಚಲಾವಣೆಯನ್ನು ತಡೆಯಲು ಕ್ರಮ ಕೈಗೊಳ್ಳುವಂತೆ ದೆಹಲಿ-ಎನ್ಸಿಆರ್ ಅಧಿಕಾರಿಗಳಿಗೆ ನ್ಯಾಯಾಲಯ ನಿರ್ದೇಶನ ನೀಡಿದೆ (ಏಜೆನ್ಸೀಸ್).