ಮಹಾರಾಷ್ಟ್ರದ ಮೊದಲ ಮಹಿಳಾ ಡಿಸಿಎಂ ಆಗಿ ಸುನೇತ್ರಾ ಪವಾರ್ ಪದಗ್ರಹಣ: ಅಜಿತ್ ದಾದಾ ಕನಸಿನ ಹಾದಿಯಲ್ಲಿ ಹೊಸ ಪಯಣ ಎಂದ ಪತ್ನಿ
ಮುಂಬೈ: ಮಹಾರಾಷ್ಟ್ರ ರಾಜಕೀಯದಲ್ಲಿ ಹೊಸ ಅಧ್ಯಾಯವೊಂದು ಆರಂಭವಾಗಿದೆ. ಅಜಿತ್ ಪವಾರ್ ಅವರ ಅಕಾಲಿಕ ನಿಧನದ ನಂತರ ಉಂಟಾಗಿದ್ದ ನಾಯಕತ್ವದ ಶೂನ್ಯವನ್ನು ತುಂಬಲು ಅವರ ಪತ್ನಿ ಸುನೇತ್ರಾ ಪವಾರ್(Sunetra Pawar) ಅಧಿಕೃತವಾಗಿ ಅಖಾಡಕ್ಕಿಳಿದಿದ್ದಾರೆ. ಶನಿವಾರ (ಜ.31) ಮಹಾರಾಷ್ಟ್ರದ ನೂತನ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸುನೇತ್ರಾ, ರಾಜ್ಯದ ಜನತೆಗಾಗಿ ಪ್ರಾಮಾಣಿಕ ಮತ್ತು ಅವಿಶ್ರಾಂತ ಕೆಲಸ ಮಾಡುವುದಾಗಿ ಘೋಷಿಸಿದ್ದಾರೆ.
ಭಾವನಾತ್ಮಕ ಕ್ಷಣ ಮತ್ತು ದಾದಾ ನೆನಪು
ಪದಗ್ರಹಣದ ನಂತರ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಸುನೇತ್ರಾ ಪವಾರ್, ತಮ್ಮ ಪತಿ ದಿವಂಗತ ಅಜಿತ್ ಪವಾರ್ ಅವರನ್ನು ನೆನೆದು ಭಾವುಕರಾದರು.
ತ್ಯಾಗದ ಮಂತ್ರ
ರೈತರು, ಕಾರ್ಮಿಕರು, ಮಹಿಳೆಯರು ಮತ್ತು ಯುವಜನತೆಯ ಕಲ್ಯಾಣಕ್ಕಾಗಿ ಜೀವನವನ್ನೇ ಮುಡಿಪಾಗಿಡುವ ಮಂತ್ರವನ್ನು ಅಜಿತ್ ದಾದಾ ನನಗೆ ಕಲಿಸಿದ್ದಾರೆ. ಅವರ ನಿಧನ ನನ್ನ ಹೃದಯಕ್ಕೆ ಬೆಟ್ಟದಷ್ಟು ದುಃಖ ತಂದಿದ್ದರೂ, ಅವರು ಕಲಿಸಿದ ಕರ್ತವ್ಯ ಪ್ರಜ್ಞೆ ಮತ್ತು ಹೋರಾಟದ ಹಾದಿಯೇ ನನಗೆ ಶಕ್ತಿ ಎಂದು ಸುನೇತ್ರಾ ಹೇಳಿದ್ದಾರೆ.
ಸಮಾನತೆ ಮತ್ತು ಅಭಿವೃದ್ಧಿ ಹೊಂದಿದ ಮಹಾರಾಷ್ಟ್ರದ ಕನಸನ್ನು ನನಸು ಮಾಡಲು ಶ್ರಮಿಸುವುದಾಗಿ ಸುನೇತ್ರಾ ಭರವಸೆ ನೀಡಿದ್ದಾರೆ.
ಎನ್‌ಸಿಪಿಯ ನೂತನ ಸಾರಥಿ
ಅಜಿತ್ ಪವಾರ್ ಅವರ ನಿಧನದ ಬೆನ್ನಲ್ಲೇ ಎನ್‌ಸಿಪಿ (NCP) ಪಕ್ಷದಲ್ಲಿ ಸುನೇತ್ರಾ ಅವರ ಪ್ರಾಬಲ್ಯ ಹೆಚ್ಚಾಗಿದೆ. ಅಲ್ಲದೆ, ಅವರನ್ನು ಎನ್‌ಸಿಪಿ ಶಾಸಕಾಂಗ ಪಕ್ಷದ ನಾಯಕಿಯಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ರಾಜ್ಯಸಭೆಗೆ ರಾಜೀನಾಮೆ
ಉಪಮುಖ್ಯಮಂತ್ರಿ ಜವಾಬ್ದಾರಿ ವಹಿಸಿಕೊಳ್ಳಲು ಅವರು ತಮ್ಮ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಶೀಘ್ರದಲ್ಲೇ ಅಜಿತ್ ಪವಾರ್ ಪ್ರತಿನಿಧಿಸುತ್ತಿದ್ದ ಬಾರಾಮತಿ ವಿಧಾನಸಭಾ ಕ್ಷೇತ್ರದಿಂದ ಸುನೇತ್ರಾ ಸ್ಪರ್ಧಿಸುವ ಸಾಧ್ಯತೆಯಿದೆ.
ಅಧ್ಯಕ್ಷ ಸ್ಥಾನದ ಬೇಡಿಕೆ
ಪಕ್ಷದ ಕಾರ್ಯಕರ್ತರು ಸುನೇತ್ರಾ ಅವರನ್ನು ರಾಷ್ಟ್ರೀಯ ಅಧ್ಯಕ್ಷರನ್ನಾಗಿ ನೇಮಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.
ಅಜಿತ್ ಪವಾರ್ ನಿಧನ ಮತ್ತು ನೇಮಕದ ಹಿನ್ನೆಲೆ
ಕಳೆದ ಬುಧವಾರ ಬಾರಾಮತಿ ಬಳಿ ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ಅವರು ದುರಂತ ಅಂತ್ಯ ಕಂಡಿದ್ದರು. ಈ ಆಘಾತದಿಂದ ಮಹಾರಾಷ್ಟ್ರ ಚೇತರಿಸಿಕೊಳ್ಳುವ ಮುನ್ನವೇ, ಪಕ್ಷದ ಅಸ್ತಿತ್ವ ಮತ್ತು ರಾಜ್ಯದ ಹಿತದೃಷ್ಟಿಯಿಂದ ಎನ್‌ಸಿಪಿ ಶಾಸಕಾಂಗ ಪಕ್ಷವು ಸುನೇತ್ರಾ ಪವಾರ್ ಅವರನ್ನು ತಮ್ಮ ನಾಯಕಿಯಾಗಿ ಸರ್ವಾನುಮತದಿಂದ ಆರಿಸಿದೆ.
ಅಧಿಕಾರ ಹಸ್ತಾಂತರ
ಅಜಿತ್ ಪವಾರ್ ಅವರು ಹೊಂದಿದ್ದ ಅಬಕಾರಿ ಸೇರಿದಂತೆ ಎಲ್ಲಾ ಪ್ರಮುಖ ಖಾತೆಗಳನ್ನು ಸುನೇತ್ರಾ ಅವರಿಗೆ ವಹಿಸಲಾಗಿದೆ.
ಶರದ್ ಪವಾರ್ ಮತ್ತು ಪಕ್ಷದ ವಿಲೀನ ವದಂತಿ
ಈ ಪ್ರಮಾಣವಚನ ಸಮಾರಂಭದ ಕುರಿತು ಹಿರಿಯ ನಾಯಕ ಶರದ್ ಪವಾರ್ ನೀಡಿರುವ ಹೇಳಿಕೆ ಕುತೂಹಲ ಮೂಡಿಸಿದೆ.
ಕುಟುಂಬದ ದೂರ
ಸುನೇತ್ರಾ ಅವರ ಪ್ರಮಾಣವಚನದ ಬಗ್ಗೆ ನನಗೆ ಮಾಧ್ಯಮಗಳ ಮೂಲಕವಷ್ಟೇ ತಿಳಿಯಿತು. ಪಕ್ಷದ ಆಂತರಿಕ ನಿರ್ಧಾರಗಳಲ್ಲಿ ನನ್ನನ್ನು ಸಮಾಲೋಚಿಸಿಲ್ಲ ಎಂದು ಶರದ್ ಪವಾರ್ ಬಾರಾಮತಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ವಿಲೀನಕ್ಕೆ ತಡೆ..?
ಫೆಬ್ರವರಿ 12ರಂದು ಎನ್‌ಸಿಪಿಯ ಎರಡು ಬಣಗಳು (ಅಜಿತ್ ಮತ್ತು ಶರದ್ ಬಣ) ಒಂದಾಗುವ ಮಾತುಕತೆಗಳು ಅಂತಿಮ ಹಂತದಲ್ಲಿದ್ದವು. ಆದರೆ ಅಜಿತ್ ಅವರ ನಿಧನ ಮತ್ತು ಸುನೇತ್ರಾ ಅವರ ಈ ಕ್ಷಿಪ್ರ ರಾಜಕೀಯ ಬೆಳವಣಿಗೆಯಿಂದ ಈ ವಿಲೀನ ಪ್ರಕ್ರಿಯೆ ಈಗ ಸಂಕಷ್ಟಕ್ಕೆ ಸಿಲುಕಿದಂತೆ ಕಾಣುತ್ತಿದೆ,(ಏಜೆನ್ಸೀಸ್).