- ಮಧ್ಯಪ್ರಾಚ್ಯ ಉದ್ವಿಗ್ನತೆಯ ನಡುವೆಯೇ ಚಿನ್ನ-ಬೆಳ್ಳಿ ಬೆಲೆಗಳಲ್ಲಿ ಭಾರೀ ಕುಸಿತ
- 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 5,950 ರೂ. ಇಳಿಕೆ
- ಕೆಜಿ ಬೆಳ್ಳಿ ಬೆಲೆ ಕೂಡ ಭಾರೀ ಕುಸಿತ
ನವದೆಹಲಿ: ವಾರದ ಮೊದಲ ದಿನವೇ ಭಾರತೀಯ ಷೇರು ಮಾರುಕಟ್ಟೆ ಭಾರಿ ಕುಸಿತದಿಂದ ಆರಂಭವಾಗಿದ್ದು, ಹೂಡಿಕೆದಾರರಲ್ಲಿ ಲಾಭದ ಭರವಸೆಯನ್ನು ಕಸಿದುಕೊಂಡಿದೆ. ಮತ್ತೊಂದೆಡೆ, ಇಸ್ರೇಲ್-ಇರಾನ್ ಯುದ್ಧದ ಮಧ್ಯೆ ಚಿನ್ನ-ಬೆಳ್ಳಿ ಬೆಲೆಗಳು (Gold Rates) ದಾಖಲೆಯ ಮಟ್ಟಿಗೆ ಇಳಿಕೆ ಕಂಡಿರುವುದು ಸದ್ಯ ಗೋಲ್ಡ್ ಪ್ರಿಯರನ್ನು ಖರೀದಿಯತ್ತ ಕೈಬೀಸಿ ಕರೆಯುತ್ತಿದೆ.
ಮದುವೆ ಸೀಸನ್ಗೆ ಗುಡ್ ನ್ಯೂಸ್
ಒಂದೇ ದಿನದಲ್ಲಿ, 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 5,950 ರೂ. ಇಳಿಕೆಯಾಗಿದೆ. ಮದುವೆ ಸೀಸನ್, ಶುಭ ಕಾರ್ಯಗಳ ಓಡಾಟದ ಚಿಂತೆಯಲ್ಲಿದ್ದ ಜನರಿಗೆ ಇದು ನಿಜಕ್ಕೂ ಸಿಹಿ ಸುದ್ದಿಯೇ. ಚಿನ್ನದ ಬೆಲೆಯಲ್ಲಿ ಇಷ್ಟು ಇಳಿಕೆ ಕಾಣುತ್ತೆ ಎಂಬ ಊಹೆ ಯಾರೊಬ್ಬರಿಗೂ ಇರಲಿಲ್ಲ. ವಾರದ ಆರಂಭದಲ್ಲೇ ಹೂಡಿಕೆದಾರರಿಗೆ ಹಾಗೂ ಖರೀದಿದಾರರಿಗೆ ಶುಭ ಸುದ್ದಿ ಲಭಿಸಿದ್ದು, ಚಿನ್ನ ಮತ್ತು ಬೆಳ್ಳಿ ಕೊಳ್ಳುವಿಕೆಗೆ ಇದೇ ಸೂಕ್ತ ಸಮಯ.
ಯುದ್ಧ ಮಧ್ಯೆಯೂ ದಿಢೀರ್ ಕುಸಿತ
ಪ್ರಸ್ತುತ ನಡೆಯುತ್ತಿರುವ ಭೌಗೋಳಿಕ ರಾಜಕೀಯ ಅನಿಶ್ಚಿತತೆಯ ಹೊರತಾಗಿಯೂ, ಚಿನ್ನ ಸುರಕ್ಷಿತ ಹೂಡಿಕೆಯಾಗಿ ಉಳಿದಿರುವುದು ಗಮನಾರ್ಹ. ಇನ್ನು 10 ಗ್ರಾಂಗೆ 22 ಕ್ಯಾರೆಟ್ ಚಿನ್ನ 5,450 ರೂ. ಇಳಿಕೆಯಾಗಿದ್ದು, ಕೆಜಿ ಬೆಳ್ಳಿಯ 20,000 ರೂ. ಕುಸಿತ ಕಂಡಿದೆ.
ಚಿನ್ನದ ಬೆಲೆ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ, 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 1,40,170 ರೂ. ತಲುಪಿದ್ದು, 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 1,28,500 ರೂ. ಆಗಿದೆ. ಬೆಂಗಳೂರಿನಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 1,40,020 ರೂ. ಆಗಿದೆ. ಇನ್ನು ಹೈದರಾಬಾದ್ ಬುಲಿಯನ್ ಮಾರುಕಟ್ಟೆಯಲ್ಲಿ, 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 1,40,020 ರೂ.ಗೆ ತಲುಪಿದ್ದು, 22 ಕ್ಯಾರೆಟ್‌ನ 10 ಗ್ರಾಂ ಗೋಲ್ಡ್ 1,28,350 ರೂ.ನಲ್ಲಿ ವಹಿವಾಟು ನಡೆಸುತ್ತಿದೆ.
ಬೆಳ್ಳಿ ಬೆಲೆ
ಇನ್ನು ಚಿನ್ನಕ್ಕೆ ಸಖತ್ ಪೈಪೋಟಿ ನೀಡುತ್ತಿದ್ದ ಬೆಳ್ಳಿ ಬೆಲೆಯೂ ಭಾರೀ ಕುಸಿತ ಕಂಡಿದೆ. ದೆಹಲಿ ಮತ್ತು ಬೆಂಗಳೂರಿನಲ್ಲಿ ಪ್ರತಿ ಕೆಜಿ ಬೆಳ್ಳಿ 15,000 ರೂ. ಕಡಿಮೆಯಾಗಿ, 2 ಲಕ್ಷದ 30,000 ರೂ.ಗೆ ತಲುಪಿದೆ. ಇನ್ನು ಹೈದರಾಬಾದ್ನಲ್ಲಿ ಕೆಜಿ ಬೆಳ್ಳಿ 20,000 ಕುಸಿತ ಕಂಡಿದ್ದು, 2,30,000 ರೂ.ಗೆ ವಹಿವಾಟು ನಡೆಸುತ್ತಿದೆ.