ಐಪಿಎಸ್ ಅಧಿಕಾರಿ ತೃಪ್ತಿ ಭಟ್  
ದೇಶ

ಇಸ್ರೋ ಸೇರಿ 16 ಸರ್ಕಾರಿ ನೌಕರಿಗೆ ನೋ ಎಂದು ಅಂದುಕೊಂಡಿದ್ದನ್ನು ಸಾಧಿಸಿದವಳ ಸ್ಫೂರ್ತಿದಾಯಕ ಯಶೋಗಾಥೆ ಇದು...Success Story

ತೃಪ್ತಿ ಭಟ್​ ಅವರು ತಮ್ಮ ಕಠಿಣ ಪರಿಶ್ರಮದಿಂದ ಬೌದ್ಧಿಕ ಸಾಮರ್ಥ್ಯದ ಮೇಲೆ ಒಟ್ಟು 16 ಪ್ರತಿಷ್ಠಿತ ಸರ್ಕಾರಿ ಉದ್ಯೋಗಗಳನ್ನು ಸುಲಭವಾಗಿ ಗಿಟ್ಟಿಸಿಕೊಂಡಿದ್ದರು.

Success Story : ದೇಶದ ಸೇವೆಗಾಗಿ ಇಸ್ರೋ ಸೇರಿದಂತೆ 16 ಸರ್ಕಾರಿ ಉದ್ಯೋಗಗಳನ್ನು ತ್ಯಜಿಸಿ ಐಪಿಎಸ್ ಅಧಿಕಾರಿಯಾದ ಉತ್ತರಾಖಂಡದ ಧೀಮಂತೆ ತೃಪ್ತಿ ಭಟ್ ಅವರ ಸ್ಫೂರ್ತಿದಾಯಕ ಯಶೋಗಾಥೆ ಇಲ್ಲಿದೆ.

ಉತ್ತರಾಖಂಡದ ಅಲ್ಮೋರಾ ಜಿಲ್ಲೆಯ ಪ್ರತಿಷ್ಠಿತ ಶಿಕ್ಷಕರ ಕುಟುಂಬದಲ್ಲಿ ಜನಿಸಿದ ತೃಪ್ತಿ ಭಟ್ ಅವರು ಬಾಲ್ಯದಿಂದಲೂ ಶಿಕ್ಷಣದಲ್ಲಿ ಅತ್ಯಂತ ಪ್ರತಿಭಾವಂತರಾಗಿದ್ದರು. ಅವರು ಪಂತ್‌ನಗರ ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಬಿ.ಟೆಕ್ ಪದವಿಯನ್ನು ಅತ್ಯಂತ ಉನ್ನತ ಶ್ರೇಣಿಯಲ್ಲಿ ಪೂರ್ಣಗೊಳಿಸಿದರು. ಇಂಜಿನಿಯರಿಂಗ್ ಪದವಿ ಮುಗಿಯುತ್ತಿದ್ದಂತೆ ಅವರ ಪ್ರತಿಭೆಗೆ ತಕ್ಕಂತೆ ದೇಶದ ಅತ್ಯುನ್ನತ ಬಾಹ್ಯಾಕಾಶ ಸಂಸ್ಥೆಯಾದ ಇಸ್ರೋದಲ್ಲಿ (ISRO) ವಿಜ್ಞಾನಿ/ಇಂಜಿನಿಯರ್ ಹುದ್ದೆ ಸೇರಿದಂತೆ ಎನ್.ಟಿ.ಪಿ.ಸಿ (NTPC) ಯಂತಹ ಮಹತ್ವದ ಕಂಪನಿಗಳಿಂದ ಅತ್ಯುತ್ತಮ ಆಫರ್‌ಗಳು ಹುಡುಕಿಕೊಂಡು ಬಂದವು. ಒಟ್ಟಾರೆಯಾಗಿ ಅವರು ತಮ್ಮ ಕಠಿಣ ಪರಿಶ್ರಮದಿಂದ ಬೌದ್ಧಿಕ ಸಾಮರ್ಥ್ಯದ ಮೇಲೆ ಒಟ್ಟು 16 ಪ್ರತಿಷ್ಠಿತ ಸರ್ಕಾರಿ ಉದ್ಯೋಗಗಳನ್ನು ಸುಲಭವಾಗಿ ಗಿಟ್ಟಿಸಿಕೊಂಡಿದ್ದರು.

ಉದ್ಯೋಗ ಆಫರ್​ಗೆ ನೋ ಎಂದ ತೃಪ್ತಿ

ಸಾಮಾನ್ಯವಾಗಿ ಯಾರೇ ಆಗಲಿ ಇಸ್ರೋದಂತಹ ಪ್ರತಿಷ್ಠಿತ ಸಂಸ್ಥೆಯಲ್ಲಿ ಉದ್ಯೋಗ ಸಿಕ್ಕರೆ ತಕ್ಷಣವೇ ಒಪ್ಪಿಕೊಂಡು ನೆಮ್ಮದಿಯ ಜೀವನ ನಡೆಸಲು ಮುಂದಾಗುತ್ತಾರೆ. ಆದರೆ, ತೃಪ್ತಿ ಭಟ್ ಅವರ ಆಲೋಚನೆ ಮತ್ತು ಗುರಿ ಸಂಪೂರ್ಣವಾಗಿ ಭಿನ್ನವಾಗಿತ್ತು. ಕೇವಲ ಹಣ ಸಂಪಾದನೆ ಅಥವಾ ಐಷಾರಾಮಿ ಜೀವನ ಅವರ ಮುಖ್ಯ ಉದ್ದೇಶವಾಗಿರಲಿಲ್ಲ, ಬದಲಿಗೆ ಸಮಾಜದಲ್ಲಿ ನೇರ ಬದಲಾವಣೆಯನ್ನು ತರಬೇಕೆಂಬ ಅಚಲವಾದ ತುಡಿತವಿತ್ತು. ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸಿ ನೇರವಾಗಿ ದೇಶ ಸೇವೆ ಮಾಡುವ ಮಹಾನ್ ಕನಸು ಅವರ ಮನಸ್ಸಿನಲ್ಲಿ ಬೇರೂರಿತ್ತು. ಈ ಕಾರಣಕ್ಕಾಗಿಯೇ ಅವರು ಇಸ್ರೋ ಸೇರಿದಂತೆ ತಮಗೆ ಸಿಕ್ಕಿದ್ದ ಎಲ್ಲಾ 16 ಸರ್ಕಾರಿ ಉದ್ಯೋಗಗಳ ಆಕರ್ಷಕ ಆಫರ್‌ಗಳನ್ನು ಧೈರ್ಯವಾಗಿ ತ್ಯಜಿಸಿದರು ಮತ್ತು ಯುಪಿಎಸ್‌ಸಿ (UPSC) ಕಡೆಗೆ ತಮ್ಮ ಹೆಜ್ಜೆಗಳನ್ನು ಇರಿಸಿದರು.

ಕೋಚಿಂಗ್ ಇಲ್ಲದೇ ಯಶಸ್ಸು

ಬಾಹ್ಯಾಕಾಶ ವಿಜ್ಞಾನಿಯಾಗುವ ಅಥವಾ ಸಾಂಪ್ರದಾಯಿಕ ಉದ್ಯೋಗಿಯಾಗುವ ಬದಲು ನಾಗರಿಕ ಸೇವಾ ಪರೀಕ್ಷೆಯ ಕಠಿಣ ಹಾದಿಯನ್ನು ಆಯ್ಕೆ ಮಾಡಿಕೊಂಡ ತೃಪ್ತಿ ಭಟ್, ಯಶಸ್ಸಿಗಾಗಿ ಯಾವುದೇ ದೊಡ್ಡ ಮತ್ತು ಖ್ಯಾತನಾಮ ಕೋಚಿಂಗ್ ಕೇಂದ್ರಗಳ ಸಹಾಯವನ್ನು ಪಡೆಯಲಿಲ್ಲ. ತಮ್ಮದೇ ಆದ ಸ್ಪಷ್ಟವಾದ ಯೋಜನೆ, ನಿರಂತರ ಪರಿಶ್ರಮ ಮತ್ತು ಪರಿಪೂರ್ಣ ಸ್ವಯಂ ಅಧ್ಯಯನದ ಮೂಲಕ ಯುಪಿಎಸ್‌ಸಿ ಪರೀಕ್ಷೆಯನ್ನು ಎದುರಿಸಲು ಸಿದ್ಧರಾದರು. ತಮ್ಮಲ್ಲಿರುವ ಆತ್ಮವಿಶ್ವಾಸ ಮತ್ತು ದೃಢ ಸಂಕಲ್ಪವೇ ತಮಗೆ ಅತಿ ದೊಡ್ಡ ಮಾರ್ಗದರ್ಶಕ ಎಂದು ನಂಬಿ ಮುನ್ನಡೆದರು. ಕಠಿಣ ಸವಾಲುಗಳು ಎದುರಾದರೂ ಅವರು ಎಂದಿಗೂ ಹಿಂದೆ ಸರಿಯಲಿಲ್ಲ, ಬದಲಿಗೆ ಗುರಿಯ ಕಡೆಗೆ ಮಾತ್ರ ತಮ್ಮ ಸಂಪೂರ್ಣ ಗಮನವನ್ನು ಹರಿಸಿದರು.

ಮೊದಲ ಪ್ರಯತ್ನದಲ್ಲೇ ಐಪಿಎಸ್

ತೃಪ್ತಿ ಭಟ್ ಅವರ ಅಚಲ ನಂಬಿಕೆ ಮತ್ತು ಕಠಿಣ ಪರಿಶ್ರಮಕ್ಕೆ 2013ರ ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ಅತ್ಯುತ್ತಮ ಪ್ರತಿಫಲ ಸಿಕ್ಕಿತು. ಅವರು ಯಾವುದೇ ಔಪಚಾರಿಕ ತರಬೇತಿಯಿಲ್ಲದೆ, ತಮ್ಮ ಮೊದಲ ಪ್ರಯತ್ನದಲ್ಲೇ ಅಖಿಲ ಭಾರತ ಮಟ್ಟದಲ್ಲಿ 168ನೇ ರ‍್ಯಾಂಕ್ ಗಳಿಸುವ ಮೂಲಕ ದೇಶದ ಗಮನ ಸೆಳೆದರು. ಒಬ್ಬ ಯಶಸ್ವಿ ಐಪಿಎಸ್ (IPS) ಅಧಿಕಾರಿಯಾಗಿ ಆಯ್ಕೆಯಾದ ಅವರಿಗೆ ತಮ್ಮ ಸ್ವಂತ ರಾಜ್ಯವಾದ ಉತ್ತರಾಖಂಡ ಕೇಡರ್​ ಹಂಚಿಕೆಯಾಯಿತು. ಅಲ್ಲಿ ತಮ್ಮ ಪ್ರಾಮಾಣಿಕತೆ, ನಿರ್ಭೀತ ನಡವಳಿಕೆ ಮತ್ತು ದಿಟ್ಟತನದ ಕರ್ತವ್ಯ ನಿರ್ವಹಣೆಯ ಮೂಲಕ ಸಾರ್ವಜನಿಕರ ಅಪಾರ ಗೌರವಕ್ಕೆ ಪಾತ್ರರಾಗಿದ್ದಾರೆ. ಇದೇ ಕಾರಣಕ್ಕೆ ಅವರನ್ನು 'ಸೂಪರ್ ಕಾಪ್' ಅಂತಾನೇ ಕರೆಯುತ್ತಾರೆ.

ಸ್ಪೂರ್ತಿಯ ಚಿಲುಮೆ

ತೃಪ್ತಿ ಭಟ್ ಅವರ ಈ ಅದ್ಭುತ ಜೀವನ ಪ್ರಯಾಣವು ಇಂದಿನ ಯುವಜನತೆಗೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುತ್ತಿರುವ ಪ್ರತಿಯೊಬ್ಬ ವಿದ್ಯಾರ್ಥಿಗೂ ಒಂದು ದಾರಿದೀಪವಾಗಿದೆ. ಕೇವಲ ಯಾವುದೋ ಒಂದು ಉದ್ಯೋಗವನ್ನು ಪಡೆದು ಜೀವನದಲ್ಲಿ ಸೆಟ್ ಆಗುವುದು ನಮ್ಮ ಮುಖ್ಯ ಉದ್ದೇಶವಾಗಬಾರದು, ಬದಲಿಗೆ ನಮ್ಮ ಬದುಕಿನ ನಿಜವಾದ ಗುರಿ ಏನು ಎಂಬುದನ್ನು ಅರಿಯುವುದು ಮುಖ್ಯ ಎಂಬ ದೊಡ್ಡ ಸಂದೇಶವನ್ನು ಅವರು ನೀಡಿದ್ದಾರೆ. ಸೋಲಿಗೆ ಹೆದರದೆ ಪ್ರಾಮಾಣಿಕವಾಗಿ ಶ್ರಮಿಸಿದರೆ, ಜಗತ್ತಿನಲ್ಲಿ ಯಾವುದೇ ಕ್ಷೇತ್ರದಲ್ಲೂ ಯಶಸ್ಸು ಸಾಧಿಸಬಹುದು ಎಂದು ಅವರು ತಮ್ಮ ಜೀವನದ ಮೂಲಕ ಸಾಬೀತುಪಡಿಸಿದ್ದಾರೆ, (ಏಜೆನ್ಸೀಸ್​).