ಪ್ರೀತಿಯ ಮಡದಿಗಾಗಿ ದೊಡ್ಡ ಕ್ರಿಕೆಟ್ ಸಾಮ್ರಾಜ್ಯವನ್ನೇ ಕಟ್ಟಿದ ಪೊಲೀಸ್ ಪೇದೆಯ ಯಶೋಗಾಥೆ ಇದು...Success Story
- ಪೊಲೀಸ್ ಪೇದೆ ಶಿವಪ್ರಸಾದ್ ಪತ್ನಿ ತಾರಾ ಅವರಿಗಾಗಿ 'DSP' ಕ್ರಿಕೆಟ್ ಬ್ಯಾಟ್ ಸಂಸ್ಥೆ ಆರಂಭಿಸಿದ್ದಾರೆ
- ಸ್ನೇಹಿತನ ಶಾಪ್ 'Deportivo' ಹಾಗೂ ತಮ್ಮ ಹೆಸರಿನ 'SP' ಸೇರಿಸಿ, ಪೊಲೀಸ್ ಹುದ್ದೆಗೂ ಮ್ಯಾಚ್ ಆಗುವಂತೆ 'DSP' ಹೆಸರು
- ತ್ರಿಸ್ಸೂರ್‌ನ ಸಣ್ಣ ಘಟಕದಲ್ಲಿ ತಯಾರಾಗುವ ಈ ಬ್ಯಾಟ್‌ಗಳು ಇಂದು ಅಮೆರಿಕ, ಆಸ್ಟ್ರೇಲಿಯಾ ಸೇರಿದಂತೆ ವಿಶ್ವದಾದ್ಯಂತ ರಫ್ತು
- ಸೋಶಿಯಲ್ ಮೀಡಿಯಾ ಮಾರ್ಕೆಟಿಂಗ್ ಹಾಗೂ ಆಪ್ತ ಸ್ನೇಹಿತರ ಬೆಂಬಲವೇ ಬ್ರ್ಯಾಂಡ್ ಬೆಳವಣಿಗೆಗೆ ಮುಖ್ಯ ಕಾರಣ
Success Story : ಶಿವಪ್ರಸಾದ್ ಪಾಲಿಗೆ ಬದುಕು ಯಾವತ್ತೂ ಎರಡು ಪ್ರಮುಖ ಪ್ರೀತಿಗಳ ಸುತ್ತಲೇ ಸುತ್ತುತ್ತಿತ್ತು. ಒಂದು ಕ್ರಿಕೆಟ್ ಮೈದಾನದಲ್ಲಿ ಬ್ಯಾಟಿನ ಮಧ್ಯಭಾಗಕ್ಕೆ ಬಂದು ಅಪ್ಪಳಿಸುವ ಚರ್ಮದ ಚೆಂಡಿನ ಆ ಮಧುರ ಸದ್ದು, ಮತ್ತೊಂದು ತನ್ನದೇ ಪಕ್ಕದ ಮನೆಯ ಹುಡುಗಿ ತಾರಾ! ಇವೆರಡೇ ಅವನ ಜೀವನದ ಸರ್ವಸ್ವವಾಗಿದ್ದವು. ಅದೇ ಸ್ವರ್ವಸ್ವ ಸ್ಫೂರ್ತಿಯಾಗಿ ಇಂದು ಒಂದು ದೊಡ್ಡ ಸಾಮ್ರಾಜ್ಯವಾಗಿ ನೆಲೆ ನಿಂತಿದೆ.
2017ರಲ್ಲಿ ಕೇರಳ ಪೊಲೀಸ್ ಇಲಾಖೆಗೆ ಸೇರಿ ಖಾಕಿ ಯುನಿಫಾರ್ಮ್ ತೊಟ್ಟ ಶಿವಪ್ರಸಾದ್, 2022ರಲ್ಲಿ ತಮ್ಮ ಪ್ರೇಯಸಿ ತಾರಾ ಕೈಹಿಡಿದರು. ಆದರೆ, ಮದುವೆಯ ನಂತರ ಸಾಮಾನ್ಯ ಪತಿಯರಂತೆ ಸಾಂಪ್ರದಾಯಿಕ ಉಡುಗೊರೆ ಕೊಡುವ ಬದಲು, ಕ್ರಿಕೆಟ್ ಹುಚ್ಚನಾಗಿದ್ದ ಈ ಪೊಲೀಸ್ ಪೇದೆ ತನ್ನ ಹೆಂಡತಿಗಾಗಿ ಒಂದು ಇಡೀ ಉದ್ಯಮ ಸಾಮ್ರಾಜ್ಯವನ್ನೇ ನಿರ್ಮಿಸಲು ನಿರ್ಧರಿಸಿದರು. ಅಂದು ಕೇವಲ ಪ್ರೀತಿಯ ದ್ಯೋತಕವಾಗಿ ಸಾಧಾರಣವಾಗಿ ಆರಂಭವಾದ ಈ ಪ್ರಯತ್ನ, ಇಂದು ಜಾಗತಿಕ ಮಟ್ಟದಲ್ಲಿ ಭಾರಿ ಸದ್ದು ಮಾಡುತ್ತಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಬ್ಯಾಟ್ ತಯಾರಿಕಾ ಉದ್ಯಮವಾಗಿ ಬದಲಾಗಿದೆ.
ಈ ಒಂದು ಉದ್ಯಮವನ್ನು ವ್ಯವಸ್ಥಿತವಾಗಿ ಮುನ್ನಡೆಸಲು ಶಿವಪ್ರಸಾದ್ ಅವರು ಪೊಲೀಸ್ ಇಲಾಖೆಯಿಂದ ಅಧಿಕೃತವಾಗಿ ರಜೆ ಪಡೆದರು ಮತ್ತು ತಮ್ಮ ಸಂಪೂರ್ಣ ಸಮಯವನ್ನು ಪತ್ನಿ ತಾರಾ ಅವರೊಂದಿಗೆ ಸೇರಿ ಬಿಜಿನೆಸ್ ವಿಸ್ತರಿಸಲು ಮುಡಿಪಾಗಿಟ್ಟರು. ಇನ್ನು ಇವರ ಬ್ರ್ಯಾಂಡ್ ಹೆಸರು ಕೂಡ ತುಂಬಾ ವಿಶಿಷ್ಟ ಹಾಗೂ ಚತುರತೆಯಿಂದ ಕೂಡಿದೆ. ತಮ್ಮ ಸ್ನೇಹಿತನ ಕ್ರೀಡಾ ಮಳಿಗೆಯ ಹೆಸರಾದ "ಡಿಪೋರ್ಟಿವೋ" (Deportivo) ಎಂಬುದರ ಜೊತೆಗೆ ಶಿವಪ್ರಸಾದ್ ಅವರ ಹೆಸರಿನ ಮೊದಲಕ್ಷರಗಳಾದ "ಎಸ್ಪಿ" (SP) ಯನ್ನು ಸಂಯೋಜಿಸಿ, ಈ ಬ್ಯಾಟ್‌ಗಳಿಗೆ 'ಡಿಎಸ್‌ಪಿ' (DSP) ಎಂದು ನಾಮಕರಣ ಮಾಡಲಾಯಿತು. ಇದು ಅವರ ಪೊಲೀಸ್ ಹಿನ್ನೆಲೆ ಮತ್ತು ಪತ್ನಿ ತಾರಾ ಇಬ್ಬರಿಗೂ ಗೌರವ ಸಲ್ಲಿಸುವ ರೀತಿಯಲ್ಲಿ ಅತ್ಯಂತ ಸೂಕ್ತವಾಗಿ ಮೂಡಿಬಂದಿದೆ.
ತ್ರಿಸ್ಸೂರ್‌ನ ಮುಲಂಕುನ್ನತುಕಾವು ಬಳಿಯ ಒಂದು ಸಣ್ಣ ಕಾರ್ಯಾಗಾರ ಮತ್ತು ತಿರುವನಂತಪುರಂನಲ್ಲಿರುವ ಮತ್ತೊಂದು ಘಟಕದಲ್ಲಿ ಆರಂಭವಾದ ಈ ಜರ್ನಿ, ಇಂದು ಜಾಗತಿಕ ಮಟ್ಟಕ್ಕೆ ವಿಸ್ತರಿಸಿದೆ. ಪ್ರಸ್ತುತ ತ್ರಿಸ್ಸೂರ್ನಲ್ಲಿ ಗ್ರಾಹಕರ ಇಚ್ಛೆಗೆ ತಕ್ಕಂತೆ ವಿಶೇಷವಾಗಿ ಸಿದ್ಧಪಡಿಸಲಾಗುವ ಈ 'ಡಿಎಸ್‌ಪಿ' ಕ್ರಿಕೆಟ್ ಬ್ಯಾಟ್‌ಗಳು ಅಮೆರಿಕ, ಆಸ್ಟ್ರೇಲಿಯಾ, ಕೆನಡಾ, ಜರ್ಮನಿ ಮತ್ತು ನ್ಯೂಜಿಲೆಂಡ್ ಸೇರಿದಂತೆ ವಿಶ್ವದಾದ್ಯಂತ ಇರುವ ಕ್ರಿಕೆಟ್ ಪ್ರೇಮಿಗಳಿಗೆ ರಫ್ತಾಗುತ್ತಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಸದ್ದು ಮಾಡುತ್ತಿವೆ.
ಗುಣಮಟ್ಟದ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದ 'ಡಿಎಸ್‌ಪಿ' (DSP) ಸಂಸ್ಥೆಗಾಗಿ ಶಿವಪ್ರಸಾದ್ ಅವರು ಪ್ರೀಮಿಯಂ ಇಂಗ್ಲಿಷ್ ವಿಲೋ (English Willow) ಮತ್ತು ಅಸಲಿ ಕಾಶ್ಮೀರ್ ವಿಲೋ (Kashmir Willow) ಮರಗಳನ್ನು ತರಿಸಿ, ಸಾಫ್ಟ್ ಟೆನ್ನಿಸ್, ಹಾರ್ಡ್ ಟೆನ್ನಿಸ್ ಹಾಗೂ ಪ್ರೊಫೆಷನಲ್ ಲೆದರ್ ಬಾಲ್ ಹೀಗೆ ಪ್ರತಿಯೊಂದು ಮಾದರಿಯ ಆಟಕ್ಕೂ ಸೂಕ್ತವಾಗುವಂತೆ ವಿಶೇಷ ಬ್ಯಾಟ್‌ಗಳನ್ನು ಸಿದ್ಧಪಡಿಸುತ್ತಾರೆ.
ಮೂಲತಃ ಇದೊಂದು ಕೌಟುಂಬಿಕ ಉದ್ಯಮವಾಗಿದ್ದರೂ, ಇದರ ದೈನಂದಿನ ನಿರ್ವಹಣೆಯಲ್ಲಿ ತಮ್ಮ ಆಪ್ತ ಸ್ನೇಹಿತರ ಬಳಗವಾದ ಸಂದೀಪ್, ರಾಜೀಶ್, ರಹೀಮ್ ಮತ್ತು ವಿಪಿನ್ ಅವರ ಶ್ರಮ ಹಾಗೂ ಬೆಂಬಲ ಅಪಾರ ಎಂದು ಶಿವಪ್ರಸಾದ್ ಹೆಮ್ಮೆಯಿಂದ ಸ್ಮರಿಸುತ್ತಾರೆ. ಇನ್ನು ಕಂಪನಿಯ ನಿಖರವಾದ ಲಾಭದ ಗಳಿಕೆಯ ಬಗ್ಗೆ ಪ್ರಶ್ನಿಸಿದಾಗ ಕೇವಲ ನಸುನಗುವ ಈ ಪೊಲೀಸ್ ಪೇದೆ ಕಮ್ ಉದ್ಯಮಿ, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಮೂಲಕ ನಾವು ಮಾಡಿದ ಡಿಜಿಟಲ್ ಮಾರ್ಕೆಟಿಂಗ್ ತಂತ್ರವೇ ಡಿಎಸ್‌ಪಿ ಬ್ರ್ಯಾಂಡ್ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಮಾರುಕಟ್ಟೆಯನ್ನು ತಲುಪಲು ಅಸಲಿ ಗೇಮ್ ಚೇಂಜರ್ ಆಯಿತು ಎಂದು ತಮ್ಮ ಯಶಸ್ಸಿನ ರಹಸ್ಯವನ್ನು ಹಂಚಿಕೊಂಡಿದ್ದಾರೆ.
ನೆನಪುಗಳನ್ನು ಜೀವಂತವಾಗಿರಿಸಿದ ಬ್ರ್ಯಾಂಡ್ ಹೆಸರು
ಈ ಕ್ರಿಕೆಟ್ ಬ್ಯಾಟ್ ಉದ್ಯಮದ ಡಿಜಿಟಲ್ ಮಾರ್ಕೆಟಿಂಗ್ ಪುಟಗಳು 'ಪೆರಿಂಗಾಂಡೂರ್ ಸಿಟಿ' (Peringandoor City) ಎಂಬ ವಿಶಿಷ್ಟ ಹೆಸರನ್ನು ಹೊಂದಿವೆ. ಇದು ಶಿವಪ್ರಸಾದ್ ಅವರ ದಶಕದ ಹಿಂದೆ ಅಗಲಿದ ಆಪ್ತ ಸ್ನೇಹಿತ ಜಿಷ್ಣುಪ್ರಸಾದ್ ಅವರಿಗೆ ಸಲ್ಲಿಸಿರುವ ಭಾವನಾತ್ಮಕ ಗೌರವವಾಗಿದೆ. ಈ ಹೆಸರು ಈ ಹಿಂದೆ ಜಿಷ್ಣು ಜೊತೆಗಿನ ಆಪ್ತ ತಮಾಷೆಯೊಂದರಿಂದ ಹುಟ್ಟಿಕೊಂಡಿದ್ದಾಗಿದ್ದು, ಇಂದು ಪ್ರತಿಯೊಂದು ವೈರಲ್ ವಿಡಿಯೋ ಮತ್ತು ಹೊಸ ಉತ್ಪನ್ನಗಳ ಬಿಡುಗಡೆಯಲ್ಲೂ ಆ ಹೆಸರನ್ನು ಬಳಸುವ ಮೂಲಕ ಶಿವಪ್ರಸಾದ್ ತಮ್ಮ ಸ್ನೇಹಿತನ ನೆನಪನ್ನು ಸದಾ ಜೀವಂತವಾಗಿರಿಸಿದ್ದಾರೆ.
ಪ್ರಸ್ತುತ ಈ ಉದ್ಯಮವು ಜಾಗತಿಕ ಮಟ್ಟದಲ್ಲಿ ಯಶಸ್ವಿಯಾಗಿ ನೆಲೆ ನಿಂತಿರುವುದರಿಂದ, ಶಿವಪ್ರಸಾದ್ ಅವರು ಈಗ ತಮ್ಮ ಕರ್ತವ್ಯಕ್ಕೆ ಮರಳಿ, ಮತ್ತೊಮ್ಮೆ ಪೊಲೀಸ್ ಯೂನಿಫಾರ್ಮ್ ಧರಿಸಲು ಸಜ್ಜಾಗುತ್ತಿದ್ದಾರೆ. ಅತ್ತ ಅಂತಾರಾಷ್ಟ್ರೀಯ ಮಟ್ಟದ ಬಿಜಿನೆಸ್ ನಿರ್ವಹಣೆ, ಇತ್ತ ಸಾರ್ವಜನಿಕ ಸೇವೆ ಮತ್ತು ಇದರ ನಡುವೆ ತಮ್ಮ ಒಂದು ವರ್ಷದ ಮುದ್ದಾದ ಮಗ 'ಸಮರ್ಥ್' ಪಾಲನೆ...ಹೀಗೆ ಎಲ್ಲ ಜವಾಬ್ದಾರಿಗಳನ್ನೂ ಅತ್ಯಂತ ಸಮರ್ಥವಾಗಿ ನಿಭಾಯಿಸುತ್ತಿರುವ ಈ ಪೊಲೀಸ್ ಅಧಿಕಾರಿಯ ಜೀವನ ಸದ್ಯ ಯಶಸ್ಸಿನ ಉತ್ತುಂಗದಲ್ಲಿದೆ, (ಏಜೆನ್ಸೀಸ್).