ಅಪ್ಪ ಎಸಿಪಿ ಮಗ ಡಿಸಿಪಿ... ಕರ್ತವ್ಯದ ಹಾದಿಯಲ್ಲಿ ತಂದೆ-ಮಗನ ಅಪರೂಪದ ಸಂಗಮಕ್ಕೆ CSK-SRH ಪಂದ್ಯ ಸಾಕ್ಷಿ! Success Story
- ರಕ್ತ ಸಂಬಂಧವೊಂದು ವೃತ್ತಿಧರ್ಮದ ಹಾದಿಯಲ್ಲಿ ಮುಖಾಮುಖಿಯಾದಾಗ ಅಲ್ಲಿ ಹೆಮ್ಮೆ ಮತ್ತು ಪ್ರೀತಿ ಮೇಳೈಸುತ್ತದೆ
- ಅಂತಹದ್ದೇ ಅಪರೂಪದ ದೃಶ್ಯಕ್ಕೆ ಉಪ್ಪಳದಲ್ಲಿರುವ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ಸಾಕ್ಷಿಯಾಯಿತು
- ಐಪಿಎಲ್ ಪಂದ್ಯದ ಬಿಗಿ ಭದ್ರತೆಯ ನಡುವೆ ತಂದೆ ಮತ್ತು ಮಗ ಇಬ್ಬರೂ ಪರಸ್ಪರ ಭೇಟಿಯಾದರು
Success Story : ರಕ್ತ ಸಂಬಂಧವೊಂದು ವೃತ್ತಿಧರ್ಮದ ಹಾದಿಯಲ್ಲಿ ಮುಖಾಮುಖಿಯಾದಾಗ ಅಲ್ಲಿ ಹೆಮ್ಮೆ ಮತ್ತು ಪ್ರೀತಿ ಮೇಳೈಸುತ್ತದೆ. ಅಂತಹದ್ದೇ ಒಂದು ಅಪರೂಪದ ಮತ್ತು ಭಾವುಕ ದೃಶ್ಯಕ್ಕೆ ಹೈದರಾಬಾದ್ನ ಉಪ್ಪಳದಲ್ಲಿರುವ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ಸಾಕ್ಷಿಯಾಯಿತು. ಐಪಿಎಲ್ ಪಂದ್ಯದ ಬಿಗಿ ಭದ್ರತೆಯ ನಡುವೆ, ತಂದೆ ಮತ್ತು ಮಗ ಇಬ್ಬರೂ ಪರಸ್ಪರ ಭೇಟಿಯಾದ ಕ್ಷಣ ಅಲ್ಲಿದ್ದವರ ಕಣ್ತುಂಬುವಂತೆ ಮಾಡಿತು.
ಹೆಮ್ಮೆಯ ತಂದೆ, ಸಾಧಕ ಮಗ
ಮಲ್ಕಾಜ್‌ಗಿರಿ ಪೊಲೀಸ್ ಕಮಿಷನರೇಟ್‌ನ ವಿಶೇಷ ಶಾಖೆಯಲ್ಲಿ (SB) ಎಸಿಪಿಯಾಗಿ (ACP) ಸೇವೆ ಸಲ್ಲಿಸುತ್ತಿರುವ ಭೂಸಿರೆಡ್ಡಿ ರವೀಂದರ್ ರೆಡ್ಡಿ ಅವರು ಶನಿವಾರ ಕ್ರೀಡಾಂಗಣದ ಭದ್ರತಾ ಉಸ್ತುವಾರಿಯಲ್ಲಿದ್ದರು. ಇದೇ ವೇಳೆ, ಇತ್ತೀಚೆಗಷ್ಟೇ ಗ್ರೂಪ್-1 ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಡಿಎಸ್‌ಪಿಯಾಗಿ (DSP) ಆಯ್ಕೆಯಾಗಿರುವ ಅವರ ಪುತ್ರ ಶಾಂತನ್ ಕುಮಾರ್ ರೆಡ್ಡಿ ಅವರು ತಮ್ಮ ತರಬೇತಿಯ ಭಾಗವಾಗಿ ಐಪಿಎಲ್ ಭದ್ರತಾ ಕರ್ತವ್ಯಕ್ಕೆ ಆಗಮಿಸಿದ್ದರು.
ಗಮನ ಸೆಳೆದ ಭೇಟಿ
ಮಗ ಉನ್ನತ ಅಧಿಕಾರಿಯಾಗಿ ತನ್ನಂತೆಯೇ ಸಮವಸ್ತ್ರ ಧರಿಸಿ ಕರ್ತವ್ಯಕ್ಕೆ ಹಾಜರಾದುದನ್ನು ಕಂಡ ತಂದೆ ರವೀಂದರ್ ರೆಡ್ಡಿ ಅವರ ಮೊಗದಲ್ಲಿ ಹೆಮ್ಮೆಯ ನಗು ಮಿಂಚಿತು. ಇತ್ತ, ತಂದೆಯ ಹಾದಿಯಲ್ಲೇ ನಡೆದು ಅಧಿಕಾರಿಯಾಗಿ ಬಂದ ಮಗನಿಗೆ ತಂದೆಯೇ ಮಾರ್ಗದರ್ಶಕರಾಗಿ ಕಂಡರು.
ಮಗ ತನ್ನಂತೆಯೇ ಸಮಾಜ ಸೇವೆಯ ಹಾದಿ ಹಿಡಿದು, ಉನ್ನತ ಅಧಿಕಾರಿಯಾಗಿ ತನ್ನ ಎದುರೇ ನಿಂತಾಗ ಒಬ್ಬ ತಂದೆಗೆ ಸಿಗುವ ತೃಪ್ತಿ ಅಪಾರ ಎಂದು ಅಲ್ಲಿ ನೆರೆದಿದ್ದ ಅಧಿಕಾರಿಗಳು ಈ ದೃಶ್ಯವನ್ನು ನೋಡಿ ಹರ್ಷ ವ್ಯಕ್ತಪಡಿಸಿದರು.
ಸಾಮಾಜಿಕ ಜಾಲತಾಣದಲ್ಲಿ ವೈರಲ್
ಖಾಕಿ ಸಮವಸ್ತ್ರದಲ್ಲಿದ್ದ ಈ ತಂದೆ-ಮಗನ ಭೇಟಿಯ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ. ಶಿಸ್ತು ಮತ್ತು ಕರ್ತವ್ಯಕ್ಕೆ ಹೆಸರಾದ ಪೊಲೀಸ್ ಇಲಾಖೆಯಲ್ಲಿ ಇಂತಹ ವೈಯಕ್ತಿಕ ಸಾಧನೆಯ ಮತ್ತು ಸಂಬಂಧದ ಸವಿಯಾದ ಕ್ಷಣಗಳು ಜನಸಾಮಾನ್ಯರ ಮೆಚ್ಚುಗೆಗೆ ಪಾತ್ರವಾಗಿವೆ. ಇಂಥದ್ದೊಂದು ಅಪರೂಪದ ಸಂಗಮಕ್ಕೆ ಸನ್ರೈಸರ್ಸ್ ಹೈದರಾಬಾದ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯ ಸಾಕ್ಷಿಯಾಯಿತು, (ಏಜೆನ್ಸೀಸ್).