Murli Manohar Joshi | ಭಾರತೀಯ ಜನತಾ ಪಾರ್ಟಿಯ ಹಿರಿಯ ನಾಯಕ ಮುರಳಿ ಮನೋಹರ್ ಜೋಶಿ 
ದೇಶ

ವಿದ್ಯಾರ್ಥಿಗಳ ಆತಂಕ ನ್ಯಾಯಯುತ, ಮಾನವೀಯತೆಯಿಂದ ಸ್ಪಂದಿಸಿ!... ಸರ್ಕಾರಕ್ಕೆ ಬಿಜೆಪಿ ನಾಯಕ ಮುರಳಿ ಮನೋಹರ್ ಜೋಶಿ ಕಿವಿಮಾತು | Murli Manohar Joshi

ನವದೆಹಲಿ: ನೀಟ್​ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಯುವಜನರ ಆತಂಕ ಹಾಗೂ ಕಾಳಜಿಗಳು ನ್ಯಾಯಯುತವಾಗಿದ್ದು, ಅವರ ಹೋರಾಟವನ್ನು ಅತ್ಯಂತ ಅನುಕಂಪ ಮತ್ತು ಮಾನವೀಯತೆಯಿಂದ ನಿರ್ವಹಿಸಬೇಕು ಎಂದು ಭಾರತೀಯ ಜನತಾ ಪಾರ್ಟಿಯ ಹಿರಿಯ ನಾಯಕ ಮುರಳಿ ಮನೋಹರ್ ಜೋಶಿ (Murli Manohar Joshi) ಸಲಹೆ ನೀಡಿದ್ದಾರೆ.
 ಪ್ರತಿಭಟನಾನಿರತ ವಿದ್ಯಾರ್ಥಿಗಳ ವಿರುದ್ಧ ಪೊಲೀಸರು ಬಲಪ್ರಯೋಗ ಮಾಡಿರುವುದನ್ನು ಉಲ್ಲೇಖಿಸಿರುವ ಅವರು, ಇದು ವಿಕಸಿತ ಭಾರತದ ರಾಷ್ಟ್ರೀಯ ಗುರಿಯಿಂದ ದೇಶದ ಬಹುದೊಡ್ಡ ಜನಸಂಖ್ಯೆಯನ್ನು ದೂರ ತಳ್ಳುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಜೋಶಿ, ದೇಶದ ವಿವಿಧ ಭಾಗಗಳಿಂದ ಆಗಮಿಸಿರುವ ಯುವ ವಿದ್ಯಾರ್ಥಿಗಳು ನವದೆಹಲಿಯ ರಸ್ತೆಗಳಲ್ಲಿ ದಿನಗಟ್ಟಲೆ ಕುಳಿತಿರುವುದನ್ನು ನೋಡುವುದು ಅತ್ಯಂತ ನೋವಿನ ಸಂಗತಿ. ಪರೀಕ್ಷಾ ವ್ಯವಸ್ಥೆಯ ಕುರಿತು ಅವರಲ್ಲಿರುವ ಆತಂಕ ಹಾಗೂ ಕಾಳಜಿಗಳು ಸಮಂಜಸವಾಗಿವೆ. ಸರ್ಕಾರವು ಇವುಗಳನ್ನು ಅನುಕಂಪದಿಂದ ನಿರ್ವಹಿಸಬೇಕು ಮತ್ತು ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಪ್ರಾಮಾಣಿಕ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕು ಎಂದು ಹೇಳಿದ್ದಾರೆ.
ಪೊಲೀಸರ ಕಾರ್ಯಾಚರಣೆಯನ್ನು ಖಂಡಿಸಿರುವ ಬಿಜೆಪಿ ಹಿರಿಯ ನಾಯಕ, ಇದನ್ನು ಕೇವಲ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಯೆಂದು ಪರಿಗಣಿಸಿ, ಬಲಪ್ರಯೋಗದ ಮೂಲಕ ಹತೋಟಿಗೆ ತರಲು ಯತ್ನಿಸುವುದಿಲ್ಲ ಎಂದು ನಾನು ತೀವ್ರವಾಗಿ ಆಶಿಸುತ್ತೇನೆ. ಯುವತಿಯರ ಮೇಲೆಯೂ ಅತ್ಯಂತ ನಿಷ್ಠುರವಾಗಿ ದೌರ್ಜನ್ಯ ಎಸಗಿರುವುದನ್ನು ಕಂಡು ತೀವ್ರ ನೋವಾಗಿದೆ. ಇಂತಹ ಬಲಪ್ರಯೋಗಗಳು ಭಾರತೀಯ ಸಮಾಜದ ಬಹುದೊಡ್ಡ ವಿಭಾಗವನ್ನು ನಮ್ಮ ರಾಷ್ಟ್ರೀಯ ಗುರಿಯಾದ ವಿಕಸಿತ ಭಾರತದಿಂದ ದೂರ ತಳ್ಳುತ್ತವೆ ಎಂದು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

ಜಂತರ್ ಮಂತರ್ ಹೋರಾಟದ ಹಿನ್ನೆಲೆ

ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಜೂನ್ 6 ರಂದು ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದಲ್ಲಿ ಧರಣಿ ಆರಂಭವಾಗಿತ್ತು. ನೀಟ್​ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಮಾತ್ರವಲ್ಲದೆ, ಸಿಬಿಎಸ್‌ಇ ಆನ್‌ಸ್ಕ್ರೀನ್ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ಖಂಡಿಸಿ ಹಾಗೂ ಸಾರ್ವಜನಿಕ ಪರೀಕ್ಷೆಗಳ ನಿರ್ವಹಣೆಯಲ್ಲಿ ವ್ಯಾಪಕ ಸುಧಾರಣೆಗಳನ್ನು ತರಬೇಕೆಂದು ಅವರು ಆಗ್ರಹಿಸಿದ್ದರು.
ಬಳಿಕ ಜೂನ್ 28 ರಂದು ಸಾಮಾಜಿಕ ಕಾರ್ಯಕರ್ತ ಸೊನಾಮ್ ವಾಂಗ್ಚುಕ್ ಈ ಹೋರಾಟಕ್ಕೆ ಬೆಂಬಲ ಸೂಚಿಸಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ ನಂತರ, ಈ ವಿದ್ಯಾರ್ಥಿ ಪ್ರತಿಭಟನೆಯು ದೇಶಾದ್ಯಂತ ವ್ಯಾಪಕ ಗಮನ ಸೆಳೆಯಿತು(ಏಜೆನ್ಸೀಸ್​).