ನವದೆಹಲಿ: ಕಾಕ್ರೋಚ್ ಜನತಾ ಪಕ್ಷದ ನಾಯಕರಾದ ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಬಂಧನಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ದೆಹಲಿ ಹೈಕೋರ್ಟ್ (Delhi High Court) ಮಹತ್ವದ ವಿಷಯದ ಬಗ್ಗೆ ಗಮನಸೆಳೆದಿದ್ದು, ಪ್ರತಿಭಟನೆಗಳಿಗೆ ಪೊಲೀಸರ ಅನುಮತಿಯು ಕೇವಲ ಪ್ರತಿಭಟನಾಕಾರರ ಹಕ್ಕನ್ನು ನಿರ್ಬಂಧಿಸಲು ಮಾತ್ರವಲ್ಲ, ಸಾರ್ವಜನಿಕ ಸುರಕ್ಷತೆ ಕಾಪಾಡಲು ಹಾಗೂ ಅತಿಕ್ರಮಣಕಾರರು ಒಳನುಗ್ಗಿ ಪರಿಸ್ಥಿತಿಯನ್ನು ಹದಗೆಡಿಸುವುದನ್ನು ತಡೆಯಲು ಅತ್ಯಗತ್ಯ ಎಂದು ಅಭಿಪ್ರಾಯಪಟ್ಟಿದೆ.
ವಿಚಾರಣೆ ವೇಳೆ ಈ ಮಾತಿಗೆ ಪುಷ್ಟಿ ನೀಡಲು ನ್ಯಾಯಾಲಯವು ಪ್ರಸ್ತುತ ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ವಿದ್ಯಾರ್ಥಿ-ನೇತೃತ್ವದ ಪ್ರತಿಭಟನೆಗಳನ್ನು ಉಲ್ಲೇಖಿಸಿತು. ಫ್ರಾನ್ಸ್‌ನಲ್ಲಿ ಪ್ರತಿಭಟನೆಗಳು ಯಾವ ರೀತಿ ಹಿಂಸಾಚಾರ, ಬೆಂಕಿ ಹಚ್ಚುವುದು ಮತ್ತು ಲೂಟಿಗೆ ತಿರುಗಿವೆ ಎಂಬುದನ್ನು ಪ್ರಸ್ತಾಪಿಸಿದ ನ್ಯಾಯಪೀಠ, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ನಿಯಂತ್ರಣ ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಪ್ರಾಮುಖ್ಯತೆಯನ್ನು ಒತ್ತಿಹೇಳಿತು.
ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ನ್ಯಾಯಾಂಗ ಬಂಧನದ ಅವಧಿ ವಿಸ್ತರಣೆಯನ್ನು ಪ್ರಶ್ನಿಸಿ ಸಲ್ಲಿಕೆಯಾದ ತುರ್ತು ಅರ್ಜಿಯ ವಿಚಾರಣೆ ವೇಳೆ ದೆಹಲಿ ಹೈಕೋರ್ಟ್, ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ವೇಳೆ ಬ್ಯಾರಿಕೇಡ್ ಮುರಿದು ಒಳನುಗ್ಗಿದ ನಾಯಕರ ಕ್ರಮವನ್ನು ಪ್ರಶ್ನಿಸಿರುವ ನ್ಯಾಯಾಲಯ, ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಅನುಮತಿ ಹಾಗೂ ಬ್ಯಾರಿಕೇಡ್‌ಗಳ ಅಗತ್ಯತೆಯನ್ನು ಒತ್ತಿಹೇಳಿದೆ.
ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪ್ರಸಾದ್ ಅವರು, ಜಂತರ್ ಮಂತರ್ ಅನ್ನು ಪ್ರತಿಭಟನಾ ಸ್ಥಳದಿಂದ ರದ್ದುಪಡಿಸಿದ ನಂತರವೂ ಅಲ್ಲಿಗೆ ನುಗ್ಗಿದ್ದೇಕೆ ಎಂದು ನಾಯಕರನ್ನು ಪ್ರಶ್ನಿಸಿದರು. ಬ್ಯಾರಿಕೇಡ್‌ಗಳು ಇರುವುದೇ ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ. ನೀವು ಬ್ಯಾರಿಕೇಡ್ ಮುರಿದು ಮುನ್ನಡೆದಾಗ, ನಿಮ್ಮ ನಿಯಂತ್ರಣದಲ್ಲಿಲ್ಲದ ಇತರ ವ್ಯಕ್ತಿಗಳು ಕೂಡ ಅಲ್ಲಿಗೆ ನುಗ್ಗುವ ಅಪಾಯವಿರುತ್ತದೆ ಎಂದು ನ್ಯಾಯಾಲಯ ಕಳವಳ ವ್ಯಕ್ತಪಡಿಸಿತು.
ನಮ್ಮ ದೇಶದ ಹೊರಗೂ ಇದನ್ನು ಕಾಣುತ್ತಿದ್ದೇವೆ. ವಿದ್ಯಾರ್ಥಿ ಪ್ರತಿಭಟನೆಯಾಗಿ ಆರಂಭವಾದದ್ದು ಇಂದು ಬೆಂಕಿ ಹಚ್ಚುವುದು ಮತ್ತು ಲೂಟಿಗೆ ತಿರುಗಿದೆ. ಅದಕ್ಕಾಗಿಯೇ ಪೊಲೀಸರ ಅನುಮತಿ ಬೇಕು. ಇದು ಕೇವಲ ನಿಮ್ಮನ್ನು ತಡೆಯುವುದಕ್ಕಲ್ಲ, ಬದಲಾಗಿ ಇತರರು ಒಳನುಗ್ಗಿ ನಿಮ್ಮ ಹೆಸರಿಗೆ ಕಳಂಕ ತರುವುದನ್ನು ತಡೆಯಲೂ ಸಹ ಎಂದು ಅಭಿಪ್ರಾಯಪಟ್ಟಿತು.
ವಿಚಾರಣೆ ವೇಳೆ ನಾಯಕರ ವಯಸ್ಸಿನ ಬಗ್ಗೆಯೂ ನ್ಯಾಯಾಲಯ ಚರ್ಚಿಸಿತು. ಸೌರವ್ ದಾಸ್ ವಯಸ್ಸು 26 ಮತ್ತು ಅಶುತೋಷ್ ರಾಂಕಾ ಅವರಿಗೆ 31 ವರ್ಷ. ಹಾಗಾದರೆ ನೀವು ಜೆನ್ ಜೀ ಅಲ್ಲ, ಮಿಲೆನ್ನಿಯಲ್ಸ್ ಯಾವ ವಯೋಮಾನಕ್ಕೆ ಸೇರುತ್ತಾರೆ..? ಎಂದು ನ್ಯಾಯಾಲಯ ಹಾಸ್ಯಮಯವಾಗಿ ಪ್ರಶ್ನಿಸಿತು. ಆರಂಭದಲ್ಲಿ ಇದು ವಿದ್ಯಾರ್ಥಿ ಚಳವಳಿಯಂತೆ ತೋರಿದರೂ, ನಂತರ ಅದರ ಉದ್ದೇಶ ಬದಲಾಗಿದೆ ಎಂದು ನ್ಯಾಯಪೀಠ ಗಮನಿಸಿತು.
ಜನರು ಒಂದೇ ಆಗಿರಬಹುದು, ಆದರೆ ಕಾರಣ ಬದಲಾಗಿದೆ. ಮುಂದಿನ ಪ್ರಶ್ನೆಯೆಂದರೆ ನೀವು ಯಾರು, ನಿಮ್ಮ ಸಂಘಟನೆ ಯಾವುದು ಮತ್ತು ಅದರ ಉದ್ದೇಶವೇನು..? ಶಾಂತಿ ಮತ್ತು ಸುವ್ಯವಸ್ಥೆಗೆ ಭಂಗ ಬರುವ ಆತಂಕವಿದ್ದಾಗ ಈ ಎಲ್ಲ ಪ್ರಶ್ನೆಗಳು ಅತ್ಯಂತ ಪ್ರಾಮುಖ್ಯತೆ ಪಡೆಯುತ್ತವೆ, ಪ್ರತಿಭಟನೆಯ ಕಾನೂನುಬದ್ಧತೆಯ ಕುರಿತು ಮುಂದಿನ ದಿನಗಳಲ್ಲಿ ಪರಿಶೀಲನೆ ನಡೆಸಲಿದ್ದೇವೆ ಎಂದು ನ್ಯಾಯಾಲಯ ತಿಳಿಸಿತು.
ಪ್ರಕರಣದ ಹಿನ್ನಲೆ
ಅಕ್ಟೋಬರ್ 13 ರಂದು ಸಿಜೆಪಿ ನಾಯಕರು ಜಂತರ್ ಮಂತರ್‌ನ ನಿಷೇಧಿತ ಪ್ರದೇಶಕ್ಕೆ ಅತಿಕ್ರಮವಾಗಿ ಪ್ರವೇಶಿಸಿ ತ್ರಿವರ್ಣ ಧ್ವಜವನ್ನು ಹಾರಿಸಿದ್ದರು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಘೋಷಣೆಗಳನ್ನು ಕೂಗುತ್ತಾ ಪೊಲೀಸರ ಬ್ಯಾರಿಕೇಡ್‌ಗಳನ್ನು ದಾಟಿ ಒಳಗೆ ಹೋಗಿದ್ದರಿಂದ ಇವರನ್ನು ಬಂಧಿಸಲಾಗಿತ್ತು. ಬಂಧನ ವಿಸ್ತರಣೆ ಆದೇಶವನ್ನು ಪ್ರಶ್ನಿಸಿ ಇವರು ಹೈಕೋರ್ಟ್ ಮೆಟ್ಟಿಲೇರಿದ್ದರು(ಏಜೆನ್ಸೀಸ್).