ಬಿರಿಯಾನಿ ಕಲ್ಲಂಗಡಿ ತಿಂದ ಪರಿಣಾಮ ಒಂದೇ ಕುಟುಂಬದ ನಾಲ್ವರ ಸಾವು
- ಬಿರಿಯಾನಿ ಕಲ್ಲಂಗಡಿ ತಿಂದ ಪರಿಣಾಮ ಒಂದೇ ಕುಟುಂಬದ ನಾಲ್ವರ ಸಾವು
- ಶನಿವಾರ ಪಾರ್ಟಿ ಸೋಮವಾರ ತಿಥಿ
- ಮುಂಬೈನಲ್ಲಿ ವರದಿಯಾಗಿರುವ ಘಟನೆ
ಮುಂಬೈ: ಬಿರಿಯಾನಿ (Biryani) ಹಾಗೂ ಕಲ್ಲಂಗಡಿ ಹಣ್ಣನ್ನು ಸೇವಿಸಿದ ನಂತರ ಫುಡ್ ಪಾಯಿಸ್ನಿಂಗ್ (Food Poisoning) ಆಗಿ ಕುಟುಂಬದ ನಾಲ್ಕು ಜನ ಮೃತಪಟ್ಟಿರುವ (FamilyDeath) ಘಟನೆ ಮುಂಬೈನ ಪೈಧೋನಿ ಪ್ರದೇಶದಲ್ಲಿ ವರದಿಯಾಗಿದೆ. ಮೃತರನ್ನು ಅಬ್ದುಲ್ಲಾ ದೊಕಾಡಿಯಾ (40), ನಸ್ರೀನ್ ದೋಕಾಡಿಯಾ (35), ಮತ್ತು ಅವರ ಪುತ್ರಿಯರಾದ ಆಯಿಷಾ (16) ಮತ್ತು ಜೈನಾಬ್ (13) ಎಂದು ಗುರುತಿಸಲಾಗಿದೆ.
ಶನಿವಾರ (ಏ.25) ರಾತ್ರಿ ಇವರ ಮನೆಯಲ್ಲಿ ಔತಣಕೂಟವನ್ನು ಏರ್ಪಡಿಸಿದ್ದು, ಆ ದಿನ ಇವರೊಟ್ಟಿಗೆ ಇತರ ಐದು ಜನ ಊಟ ಮಾಡಿದ್ದಾರೆ. 10.30 ಸುಮಾರಿಗೆ ಅತಿಥಿಗಳು ತಮ್ಮ ಮನೆಗೆ ಹಿಂದಿರುಗಿದ ನಂತರ, ಇವರು ಸುಮಾರು ರಾತ್ರಿ ಒಂದು ಗಂಟೆಗೆ ಕಲ್ಲಂಗಡಿ ಹಣ್ಣನ್ನು ತಿಂದಿದ್ದಾರೆ.
48 ಗಂಟೆಯಲ್ಲಿ ಕುಟುಂಬ ಖತಂ!
ಮಾರನೇ ದಿನ ಬೆಳಿಗ್ಗೆ ನಾಲ್ಕು ಜನ ವಾಂತಿ, ಬೇಧಿ ಹಾಗೂ ಹೊಟ್ಟೆ ನೋವಿನಿಂದ ಬಳಲಲು ಪ್ರಾರಂಭಿಸಿದ್ದಾರೆ. ಕೂಡಲೇ ಕುಟುಂಬದ ವೈದ್ಯರನ್ನು ಇವರು ಸಂಪರ್ಕಿಸಿದ್ದಾರೆ. ಅವರು ಜೆಜೆ ಆಸ್ಪತ್ರೆಗೆ ದಾಖಲಾಗುವಂತೆ ನಿರ್ದೇಶಿಸಿದ್ದಾರೆ.
ಆದರೆ, ಆಸ್ಪತ್ರೆ ದಾಖಲಾಗುವ ಮೊದಲೇ ಮಗಳು ಆಯಿಷಾ ಸಾವನ್ನಪ್ಪಿದ್ದಾಳೆ. ಅದೇ ದಿನ ರಾತ್ರಿ ಮನೆ ಯಜಮಾನ ಅಬ್ದುಲ್ಲಾ ದೊಕಾಡಿಯಾ ಮೃತನಾಗಿದ್ದು, ಮಾರನೆ ದಿನ ಸೋಮವಾರ (ಏ.27) ನಸ್ರೀನ್ ದೋಕಾಡಿಯಾ ಮತ್ತು ಕಿರಿಯ ಮಗಳು ಜೈನಾಬ್ ಕೂಡ ಅಸುನಿಗಿದ್ದಾರೆ.
ಸದ್ಯ ಈ ನಾಲ್ಕು ಜನರ ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದು, ಸಾವಿಗೆ ನಿಖರ ಕಾರಣ ಏನೆಂದು ತಿಳಿದು ಬರಬೇಕಾಗಿದೆ. ಜೆ.ಜೆ. ಮಾರ್ಗ್ ಪೊಲೀಸರು ಇದೊಂದು ಆಕಸ್ಮಿಕ ಸಾವೆಂದು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ.
ಜಾರ್ಖಂಡ್ನಲ್ಲಿ ಪಾಲಿಪುರಿ ತಿಂದು ಸಾವು!
ಇದೇ ರೀತಿಯ ಘಟನೆ ಜಾರ್ಖಂಡ್ ರಾಜ್ಯದ ಗಿರಿಧನ್ನಲ್ಲಿ ನಡೆದಿದ್ದು, ಪಾನಿಪುರಿ ಸೇವಿಸಿ ಆರು ವರ್ಷದ ಬಾಲಕನೊಬ್ಬ ಸಾವನ್ನಪ್ಪಿದ್ದಾನೆ. ಹಾಗೆಯೇ ಅದೇ ಅಂಗಡಿಯಲ್ಲಿ ಪಾನಿಪುರಿ ತಿಂದ ಇತರೆ 18 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಅಂಗಡಿ ಮಾಲೀಕ ತಲೆ ಮರೆಸಿಕೊಂಡಿದ್ದು, ಪೊಲೀಸರು ಆತನನ್ನು ಹುಡುಕಲು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ,(ಏಜನ್ಸೀಸ್).