Mohan Bhagwat  
ದೇಶ

RSS ಮುಖ್ಯಸ್ಥ ಮೋಹನ್ ಭಾಗವತ್ ಇದ್ದ ರೈಲಿಗೆ ಕಲ್ಲು ಎಸೆತ: ತಪ್ಪಿದ ಭಾರಿ ಅನಾಹುತ! | Mohan Bhagwat

ಯುಪಿ: ಉತ್ತರ ಪ್ರದೇಶದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS)ದ ಮುಖ್ಯಸ್ಥ ಮೋಹನ್​​ ಭಾಗವತ್​( Mohan Bhagwat) ಪ್ರಯಾಣಿಸುತ್ತಿದ್ದ ರೈಲಿನ ಮೇಲೆ ಕಲ್ಲು ತೂರಾಟ ನಡೆದಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ. ಈ ಘಟನೆಯಲ್ಲಿ ರೈಲಿನ ಕಿಟಕಿ ಗಾಜು ಹಾನಿಗೊಂಡಿದ್ದರೂ, ಮೋಹನ್ ಭಾಗವತ್ ಸೇರಿದಂತೆ ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಗುರುವಾರ ಸಂಜೆ ಈ ಘಟನೆ ಉತ್ತರ ಪ್ರದೇಶದ ಫಿರೋಜಾಬಾದ್ ಜಿಲ್ಲೆಯ ಬಳಿ ನಡೆದಿದೆ. ಕಾನ್ಪುರದಿಂದ ದೆಹಲಿಗೆ ತೆರಳುತ್ತಿದ್ದ ಸ್ವರ್ಣ ಶತಾಬ್ದಿ ಎಕ್ಸ್‌ಪ್ರೆಸ್ ರೈಲು ಮಕ್ಖನ್‌ಪುರ ನಿಲ್ದಾಣವನ್ನು ದಾಟಿದ ಬಳಿಕ ವೇಗವಾಗಿ ಸಂಚರಿಸುತ್ತಿದ್ದ ವೇಳೆ, ಅಪರಿಚಿತ ವ್ಯಕ್ತಿಯೊಬ್ಬ ರೈಲಿನ ಮೇಲೆ ಕಲ್ಲು ಎಸೆದಿದ್ದಾನೆ.
ಕಲ್ಲು ರೈಲಿನ ಇ-1 ಕೋಚ್‌ನ ಕಿಟಕಿ ಗಾಜಿಗೆ ಬಡಿದ ಪರಿಣಾಮ ಹೊರಗಿನ ಗಾಜು ಒಡೆದಿದೆ. ಇದೇ ಕೋಚ್‌ನಲ್ಲಿ ಮೋಹನ್ ಭಾಗವತ್ ಪ್ರಯಾಣಿಸುತ್ತಿದ್ದರು. ಆದರೆ ಅವರು ಕೋಚ್‌ನ ಇನ್ನೊಂದು ಬದಿಯಲ್ಲಿ ಕುಳಿತಿದ್ದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ.
ಘಟನೆಯ ಮಾಹಿತಿ ಸಿಕ್ಕ ತಕ್ಷಣ ರೈಲನ್ನು ತುಂಡ್ಲಾ ಜಂಕ್ಷನ್ ಹೊರವಲಯದಲ್ಲಿ ತಾತ್ಕಾಲಿಕವಾಗಿ ನಿಲ್ಲಿಸಲಾಯಿತು. ಬಳಿಕ ರೈಲ್ವೆ ಪೊಲೀಸ್ (GRP), ರೈಲ್ವೆ ರಕ್ಷಣಾ ಪಡೆ (RPF) ಹಾಗೂ ಸ್ಥಳೀಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪರಿಶೀಲನೆ ಬಳಿಕ ರೈಲನ್ನು ಮತ್ತೆ ದೆಹಲಿಯತ್ತ ಕಳುಹಿಸಲಾಯಿತು. ಸುಮಾರು 20 ನಿಮಿಷಗಳ ವಿಳಂಬದ ನಂತರ ರೈಲು ತನ್ನ ಪ್ರಯಾಣ ಮುಂದುವರಿಸಿತು.
ಆಗ್ರಾ ವಲಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎಸ್.ಕೆ. ಭಗತ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು. ಈ ಕುರಿತು ಮಾತನಾಡಿದ ಅವರು, ಕಲ್ಲು ತೂರಿದ ವ್ಯಕ್ತಿಯನ್ನು ಪತ್ತೆಹಚ್ಚಲು ಶೋಧ ಕಾರ್ಯ ನಡೆಯುತ್ತಿದೆ. ಆರೋಪಿಯನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.
ಫಿರೋಜಾಬಾದ್ ಪೊಲೀಸ್ ವರಿಷ್ಠಾಧಿಕಾರಿ ಆದಿತ್ಯ ಲಾಂಗೆಹ್ ಮಾಹಿತಿ ನೀಡಿ, ಘಟನೆಯ ಸಂಬಂಧ ಒಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದ್ದು, ಕಲ್ಲು ತೂರಿದವರನ್ನು ಗುರುತಿಸಲು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಹೇಳಿದರು.
ನಾಲ್ಕು ಪೊಲೀಸ್ ಠಾಣೆಗಳ ಸಿಬ್ಬಂದಿ, ವಿಶೇಷ ಕಾರ್ಯಾಚರಣೆ ತಂಡ (SOG) ಹಾಗೂ ನಿಗಾವಳಿ ತಂಡಗಳು ತನಿಖೆಯಲ್ಲಿ ತೊಡಗಿವೆ. ಈ ಸಂಬಂಧ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ,(ಏಜೆನ್ಸೀಸ್​).