ಅಕ್ರಮವಾಗಿ ನೇಪಾಳಕ್ಕೆ ನುಸುಳಲು ಯತ್ನಿಸುತ್ತಿದ್ದ ಉಕ್ರೇನ್ ಮಹಿಳೆ ಬಂಧನ
- ಅಕ್ರಮವಾಗಿ ನೇಪಾಳಕ್ಕೆ ನುಸುಳಲು ಯತ್ನಿಸುತ್ತಿದ್ದ ಉಕ್ರೇನ್ ಮಹಿಳೆ ಬಂಧನ
- ಗಡಿಯಲ್ಲಿ ಭದ್ರತಾ ಸಿಬ್ಬಂದಿ ಕೈಗೆ ಸಿಕ್ಕಿಬಿದ್ದಿದ್ದ ಒಕ್ಸಾನಾ ಶೆವ್ಟ್ಸೊವಾ
- ವೀಸಾ ಅವಧಿ ಮುಗಿದರೂ ಭಾರತದಲ್ಲೇ ಅಡಗಿದ್ದ ಮಹಿಳೆ
ಬಿಹಾರ: ಭಾರತದಲ್ಲಿ ವೀಸಾ ಅವಧಿ ಮುಗಿದ ಮೇಲೂ ಅಕ್ರಮವಾಗಿ ಉಳಿದುಕೊಂಡು, ಪೊಲೀಸರ ಕಣ್ಣು ತಪ್ಪಿಸಿ ನೇಪಾಳಕ್ಕೆ ನುಸುಳಲು ಯತ್ನಿಸುತ್ತಿದ್ದ ಉಕ್ರೇನಿಯನ್ ಮಹಿಳೆಯೊಬ್ಬಳ್ಳನ್ನು (Ukrainian Women Arrest) ಬಿಹಾರ ಗಡಿಯಲ್ಲಿ ಭದ್ರತಾ ಸಿಬ್ಬಂದಿಗಳು ವಶಕ್ಕೆ ಪಡೆದಿದ್ದಾರೆ. ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯ ಭಾರತ-ನೇಪಾಳ ಗಡಿಯ ಬಳಿ ಸಶಸ್ತ್ರ ಸೀಮಾ ಬಲ್ (SSB) ಮತ್ತು ಜಿಲ್ಲಾ ಪೊಲೀಸರು ಜಂಟಿ ಕಾರ್ಯಾಚರಣೆಯಲ್ಲಿ ಈ ಮಹಿಳೆ ಬಂಧವಾಗಿದ್ದಾಳೆಂದು ವರದಿಯಾಗಿದೆ
ಬಂಧಿತ ಮಹಿಳೆಯನ್ನು ಉಕ್ರೇನ್ ಮೂಲದ ಒಕ್ಸಾನಾ ಶೆವ್ಟ್ಸೊವಾ (Oksana Shevtsova) ಎಂದು ಗುರುತಿಸಲಾಗಿದೆ. ಸದ್ಯ ಗಡಿಯ ಹಾರ್ಪುರ್ ಪೊಲೀಸ್ ಠಾಣೆಯಲ್ಲಿ ಈಕೆಯ ವಿರುದ್ಧ ಎಫ್‌ಐಆರ್ ದಾಖಲಿಸಿ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.
ಸೋಮವಾರ ಸಂಜೆ ನಡೆದ ಕಾರ್ಯಾಚರಣೆ!
ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಸೋಮವಾರ (ಜುಲೈ.6) ಸಂಜೆ ಸುಮಾರು 6:30 ರ ಸುಮಾರಿಗೆ ಹಾರ್ಪುರ್ ಗಡಿಯ ಸೈನಿಕ್ ರಸ್ತೆಯ ಬಳಿ ಈ ಮಹಿಳೆ ಸಂಶಯಾಸ್ಪದವಾಗಿ ಓಡಾಡುತ್ತಿದ್ದಳು. ಭಾರತದಿಂದ ಅಕ್ರಮವಾಗಿ ನೇಪಾಳದ ಗಡಿ ದಾಟಲು ಈಕೆ ಸ್ಕೆಚ್ ಹಾಕಿದ್ದಳು. ಆದರೆ ಅಷ್ಟರಲ್ಲೇ ಅಲರ್ಟ್ ಆದ ಎಸ್‌ಎಸ್‌ಬಿ ಸಬ್-ಇನ್‌ಸ್ಪೆಕ್ಟರ್ ನಾರಾಯಣ್ ಸಿಧು ನೇತೃತ್ವದ ತಂಡ ಆಕೆಯನ್ನು ತಡೆದು ನಿಲ್ಲಿಸಿ ವಿಚಾರಣೆ ನಡೆಸಿದೆ.
2022ರಲ್ಲೇ ಮುಗಿದಿತ್ತು ವೀಸಾ!
ಭದ್ರತಾ ಸಿಬ್ಬಂದಿ ಆಕೆಯನ್ನು ತಡೆದು ಭಾರತದಲ್ಲಿ ಇರಲು ಬೇಕಾದ ಅಸಲಿ ಪಾಸ್‌ಪೋರ್ಟ್ ಮತ್ತು ವೀಸಾ ದಾಖಲೆಗಳನ್ನು ಕೇಳಿದಾಗ ಆಕೆ ತಡಬಡಾಯಿಸಿದ್ದಾಳೆ. ಯಾವುದೇ ಒರಿಜಿನಲ್ ದಾಖಲೆಗಳು ಆಕೆಯ ಬಳಿ ಇರಲಿಲ್ಲ. ಕೊನೆಗೆ ತನ್ನ ಮೊಬೈಲ್ ಫೋನ್‌ನಲ್ಲಿದ್ದ ಪಾಸ್‌ಪೋರ್ಟ್ ಮತ್ತು ವೀಸಾದ ಎಲೆಕ್ಟ್ರಾನಿಕ್ ಫೋಟೋಗಳನ್ನು ತೋರಿಸಿದ್ದಾಳೆ.
ಅಧಿಕಾರಿಗಳು ಅದನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅಸಲಿ ಕಥೆ ಬೆಳಕಿಗೆ ಬಂದಿದೆ. ಆಕೆಯ ವೀಸಾ ಅವಧಿ ಬರೋಬ್ಬರಿ 4 ವರ್ಷಗಳ ಹಿಂದೆಯೇ, ಅಂದರೆ 2022 ರಲ್ಲೇ ಮುಗಿದುಹೋಗಿತ್ತು. ಅಂದಿನಿಂದ ಇಂದಿನವರೆಗೂ ಆಕೆ ಭಾರತದಲ್ಲೇ ಅಕ್ರಮವಾಗಿ ನೆಲೆಸಿದ್ದಾಳೆ ಎಂಬ ಶಾಕಿಂಗ್ ಸತ್ಯ ಬಯಲಾಗಿದೆ.
ವಶಕ್ಕೆ ಪಡೆದ ವಸ್ತುಗಳೇನು? ಮುಂದೇನು?
ಬಂಧಿತ ಉಕ್ರೇನ್ ಮಹಿಳೆಯಿಂದ ಒಂದು ಮೊಬೈಲ್ ಫೋನ್, ಇಯರ್‌ಬಡ್ಸ್ ಮತ್ತು 7,330 ಮೌಲ್ಯದ ಭಾರತೀಯ ಕರೆನ್ಸಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಈಕೆ ಭಾರತದ ಯಾವ ಯಾವ ನಗರಗಳಲ್ಲಿ ಅಡಗಿದ್ದಳು? ಈಕೆಗೆ ಇಲ್ಲಿ ಆಶ್ರಯ ನೀಡಿದವರು ಯಾರು? ಮತ್ತು ಈಗ ಇದ್ದಕ್ಕಿದ್ದಂತೆ ನೇಪಾಳಕ್ಕೆ ನುಸುಳಲು ಪ್ರಯತ್ನಿಸುತ್ತಿದ್ದರ ಹಿಂದಿನ ಅಸಲಿ ಮರ್ಮವೇನು? ಎಂಬೆಲ್ಲಾ ಪ್ರಶ್ನೆಗಳಿಗೆ ಪೊಲೀಸ್ ಹಾಗೂ ಗುಪ್ತಚರ ಇಲಾಖೆ ಅಧಿಕಾರಿಗಳ ತನಿಖೆ ನಂತರ ಉತ್ತರ ದೊರೆಯಲಿದೆ, (ಏಜನ್ಸೀಸ್).