ಉದಯನಿಧಿ ಸ್ಟಾಲಿನ್​ 
ದೇಶ

ತ್ರಿಶಾ ಕುರಿತ ಹೇಳಿಕೆ ವರದಿ; ಎರಡು ಇಂಗ್ಲೀಷ್ ಚಾನಲ್ ಮತ್ತು ಇಬ್ಬರು ಆ್ಯಂಕರ್​ಗಳಿಂದ 100 ಕೋಟಿ ರೂ. ಪರಿಹಾರ ಕೇಳಿದ ಉದಯನಿಧಿ ಸ್ಟಾಲಿನ್ | Udhayanidhi Stalin

ಚೆನ್ನೈ: ತ್ರಿಶಾ ಮತ್ತು ಸಿಎಂ ವಿಜಯ್ ವಿರುದ್ಧ ದ್ವಿಅರ್ಥದಲ್ಲಿ ಮತ್ತು ಆಸಭ್ಯಕರವಾಗಿ ಮಾತನಾಡಿದ್ದಾರೆ ಎನ್ನಲಾದ ವಿಡಿಯೋ ಸಂಬಂಧ ತಪ್ಪು ಮಾಹಿತಿ ಮತ್ತು ತಿರುಚಿದ ಆರೋಪಕ್ಕೆ ಸಂಬಂಧಿಸಿದಂತೆ, ಎರಡು ಇಂಗ್ಲೀಷ್ ಚಾನಲ್ ಮತ್ತು ಇಬ್ಬರು ಆ್ಯಂಕರ್​ಗಳಿಂದ 100 ಕೋಟಿ ರೂ. ಮಾನನಷ್ಟ ಪರಿಹಾರ ಕೇಳಿ ಡಿಎಂಕೆ ನಾಯಕ ಮತ್ತು ತಮಿಳುನಾಡು ವಿಧಾನಸಭೆ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್(Udhayanidhi Stalin) ನೋಟಿಸ್ ಕಳುಹಿಸಿದ್ದಾರೆ.
ಆಗಸ್ಟ್ 6ರಂದು ಚೆನ್ನೈ ಮೂಲದ ಕಾನೂನು ಸಂಸ್ಥೆಯ ಮೂಲಕ ನೀಡಲಾಗಿರುವ ನೋಟಿಸ್‌ಗಳನ್ನು, ಎರಡು ಚಾನಲ್​ಗಳು, ಅದರ ಮಾಲೀಕರು ಹಾಗೂ ಖ್ಯಾತ ಪತ್ರಕರ್ತರು ಮತ್ತು ನಿರೂಪಕರಾದ ಅಕ್ಷತಾ ನಂದಗೋಪಾಲ್ ಮತ್ತು ಶಿವ ಅರೂರ್​ಗೆ ಕಳುಹಿಸಲಾಗಿದೆ ಎನ್ನಲಾಗಿದೆ.
ನೋಟಿಸ್​ ಪ್ರಕಾರ, ಆಗಸ್ಟ್ 3ರಂದು ಈ ಎರಡು ಚಾನಲ್​ಗಳಲ್ಲಿ ನಿರೂಪಕರು ಉದಯನಿಧಿ ಅವರ ಭಾಷಣವನ್ನು ತಪ್ಪಾಗಿ ನಿರೂಪಿಸಿದ್ದಾರೆ. ಮತ್ತು ಆಕ್ಷೇಪಾರ್ಹ ವೀಡಿಯೊಗಳು ಎಂದು ವಿವರಿಸಲಾದ ವೀಡಿಯೊಗಳನ್ನು ಪ್ರಸಾರ ಮಾಡಿದ್ದಾರೆ. ಅಷ್ಟೇ ಅಲ್ಲದೇ ಅವರ ಹೇಳಿಕೆಗಳ ಚಾನೆಲ್‌ಗಳ ವ್ಯಾಖ್ಯಾನವನ್ನು ಇತರ ರಾಷ್ಟ್ರೀಯ ಮತ್ತು ಪ್ರಾದೇಶಿಕ ಮಾಧ್ಯಮಗಳು ಪ್ರತಿಧ್ವನಿಸಿವೆ. ಇದರಿಂದಾಗಿ ಉದಯನಿಧಿ ಅವರ ಖ್ಯಾತಿಗೆ ಹಾನಿಯಾಗಿದೆ ಎಂದು ಆರೋಪಿಸಲಾಗಿದೆ.
ಈ ಹಿನ್ನೆಲೆ ಎರಡೂ ಚಾನಲ್​ಗಳು ತಮ್ಮ ಅಧಿಕೃತ ಮತ್ತು ವೈಯಕ್ತಿಕ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಪ್ರಮುಖವಾಗಿ ಪ್ರಸಾರ ಮಾಡುವ ಮೂಲಕ ಬೇಷರತ್ತಾದ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು. ನಿರ್ದಿಷ್ಟ ವೀಡಿಯೊಗಳನ್ನು ಯೂಟ್ಯೂಬ್ ಮತ್ತು ಇತರ ಎಲ್ಲಾ ಅಧಿಕೃತ ಮತ್ತು ವೈಯಕ್ತಿಕ ಸಾಮಾಜಿಕ ಮಾಧ್ಯಮ ವೇದಿಕೆಗಳಿಂದ ತಕ್ಷಣ ತೆಗೆದುಹಾಕಬೇಕು ಎಂದು ಒತ್ತಾಯಿಸಲಾಗಿದೆ.
ಭವಿಷ್ಯದಲ್ಲಿ ಯಾವುದೇ ರೂಪದಲ್ಲಿ ಆರೋಪಗಳನ್ನು ಪ್ರಕಟಿಸುವುದನ್ನು ಅಥವಾ ಪ್ರಸಾರ ಮಾಡುವುದನ್ನು ನಿಲ್ಲಿಸಬೇಕು. ಈ ಕುರಿತು 48 ಗಂಟೆಗಳ ಕಾಲಾವಕಾಶ ನೀಡಲಾಗಿದ್ದು, ವಿಫಲವಾದರೆ ಸೂಕ್ತ ಸಿವಿಲ್ ಮತ್ತು ಕ್ರಿಮಿನಲ್ ಮೊಕದ್ದಮೆಗಳನ್ನು ಆರಂಭಿಸಲಾಗುವುದು. ಮಾನನಷ್ಟ ಪರಿಹಾರವಾಗಿ 100 ಕೋಟಿ ರೂ. ನೀಡಬೇಕು. ಈ ಮೊತ್ತವನ್ನು ಪ್ರಸ್ತುತ ಕೃಷಿ ಋತುವಿನಲ್ಲಿ ಕುರುವೈ ಬೆಳೆ ವೈಫಲ್ಯದಿಂದ ಹಾನಿಗೊಳಗಾದ ರೈತರಿಗೆ ನೀಡಲಾಗುವುದು ಎಂದು ನೋಟಿಸ್​ನಲ್ಲಿ ತಿಳಿಸಲಾಗಿದೆ. ಆದರೆ ಈ ಕುರಿತು ಎರಡೂ ಚಾನಲ್​ಗಳು ಮತ್ತು ನಿರೂಪಕರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ (ಏಜೆನ್ಸೀಸ್).