Suryakumar Yadav | ಟೀಮ್ ಇಂಡಿಯಾ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್  
ದೇಶ

ಟೀಮ್ ಇಂಡಿಯಾದಲ್ಲಿ ಹರಡಿದೆಯಂತೆ 'ವೈರಸ್'!..ಸೂರ್ಯಕುಮಾರ್ ನೀಡಿದ ಆ ಹೇಳಿಕೆಯ ಮರ್ಮವೇನು ಗೊತ್ತಾ..? | Suryakumar Yadav

ನವದೆಹಲಿ: ಟೀಮ್ ಇಂಡಿಯಾ ಟಿ20 ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ ಬರೆದಿದ್ದು, ಸೂರ್ಯಕುಮಾರ್ ಯಾದವ್ (Suryakumar Yadav) ನಾಯಕತ್ವ ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್ ಮಾರ್ಗದರ್ಶನದಲ್ಲಿ ಭಾರತ ತಂಡವು ಈಗ ನಿರ್ಭೀತ ಮತ್ತು ನಿಸ್ವಾರ್ಥ ಬ್ರ್ಯಾಂಡ್ ಕ್ರಿಕೆಟ್‌ನ ಹೊಸ ಪರ್ವವನ್ನು ಆರಂಭಿಸಿದೆ.
ಇತ್ತೀಚಿನ ಟಿ20 ವಿಶ್ವಕಪ್‌ನಲ್ಲಿ ಸತತ ಎರಡನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ಭಾರತ ತನ್ನ ಪ್ರಾಬಲ್ಯವನ್ನು ಜಗತ್ತಿಗೆ ಸಾರಿದೆ.
ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಸೂರ್ಯಕುಮಾರ್ ಯಾದವ್ ತಂಡದ ಈ ಯಶಸ್ಸಿನ ಹಿಂದಿನ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ. 2024ರ ವಿಶ್ವಕಪ್ ಗೆದ್ದ ಬೆನ್ನಲ್ಲೇ ನಾವು ಒಂದು ನಿರ್ಧಾರಕ್ಕೆ ಬಂದಿದ್ದೆವು. ಹಳೆಯ ಶೈಲಿಯ ಕ್ರಿಕೆಟ್ ಇನ್ನು ಮುಂದೆ ನಡೆಯುವುದಿಲ್ಲ ಎಂಬುದು ನಮಗೆ ತಿಳಿದಿತ್ತು. ಹಾಗಾಗಿ, ವೈಯಕ್ತಿಕ ಮೈಲಿಗಲ್ಲುಗಳ (Personal Milestones) ಬಗ್ಗೆ ಗಮನ ಹರಿಸದೆ, ಕೇವಲ ಪಂದ್ಯ ಗೆಲ್ಲುವುದನ್ನೇ ಗುರಿಯಾಗಿಸಿಕೊಂಡೆವು ಎಂದು ತಿಳಿಸಿದ್ದಾರೆ.
ಈ ಬದಲಾವಣೆಯ ಫಲವಾಗಿಯೇ ಭಾರತ ತಂಡವು 2026ರ ವಿಶ್ವಕಪ್‌ನ ಸೆಮಿಫೈನಲ್ ಮತ್ತು ಫೈನಲ್ ಎರಡರಲ್ಲೂ 250ಕ್ಕೂ ಅಧಿಕ ರನ್ ಗಳಿಸಿ ಎದುರಾಳಿಗಳನ್ನು ಬೆಚ್ಚಿಬೀಳಿಸಿತ್ತು. ವಿಶೇಷವೆಂದರೆ, ಸೆಮಿಫೈನಲ್‌ ಹಂತದವರೆಗೆ ಭಾರತದ ಯಾವುದೇ ಆಟಗಾರ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಇರಲಿಲ್ಲ. ಆದರೆ, ಪ್ರತಿ ಪಂದ್ಯದಲ್ಲೂ ಒಬ್ಬೊಬ್ಬರು ಸ್ಫೋಟಕ ಪ್ರದರ್ಶನ ನೀಡುವ ಮೂಲಕ ತಂಡದ ಗೆಲುವಿಗೆ ಕಾರಣರಾದರು.

ವೈರಸ್​​ನಂತೆ ಹರಡಿದ ಹೊಸ ಸಂಸ್ಕೃತಿ

ತಂಡದ ಈ ನಿಸ್ವಾರ್ಥ ಆಟದ ಬಗ್ಗೆ ಮಾತನಾಡಿದ ಸೂರ್ಯಕುಮಾರ್, ಈ ಹೊಸ ಸಂಸ್ಕೃತಿಯನ್ನು ತಂಡದ ಪ್ರತಿಯೊಬ್ಬ ಆಟಗಾರನಿಗೂ ವೈರಸ್‌ನಂತೆ ಹರಡುವುದು ನಮಗೆ ಮುಖ್ಯವಾಗಿತ್ತು. ಕಳೆದ 18 ತಿಂಗಳುಗಳಿಂದ ನಾವು ಈ ಯೋಜನೆಯ ಮೇಲೆ ಕೆಲಸ ಮಾಡುತ್ತಿದ್ದೇವೆ. ಈಗ ಅದರ ಫಲಿತಾಂಶ ಎಲ್ಲರ ಮುಂದಿದೆ ಎಂದರು.
2024ರಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ನಿವೃತ್ತಿಯ ಬಳಿಕ ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್​ರಂತಹ ಯುವ ಆಟಗಾರರು ತಂಡಕ್ಕೆ ಹೊಸ ವೇಗ ನೀಡಿದರು. ಗೌತಮ್ ಗಂಭೀರ್​​ರ ಆಕ್ರಮಣಕಾರಿ ತಂತ್ರಗಾರಿಕೆ ಸೂರ್ಯಕುಮಾರ್ ನಾಯಕತ್ವಕ್ಕೆ ಆನೆಬಲ ನೀಡಿದೆ ಎನ್ನುವುದರಲ್ಲಿ ಎರಡನೇ ಮಾತಿಲ್ಲ.

ಬಿಸಿಸಿಐ ಮುಂದಿನ ಗುರಿ ಏನು..?

ವಿಶ್ವಕಪ್ ಯಶಸ್ಸಿನ ಬೆನ್ನಲ್ಲೇ ಬಿಸಿಸಿಐ ಈಗ 2027ರ ಏಕದಿನ ವಿಶ್ವಕಪ್ ಮೇಲೆ ಕಣ್ಣಿಟ್ಟಿದ್ದು, ಟಿ20 ಮಾದರಿಯಿಂದ ನಿವೃತ್ತರಾಗಿರುವ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಅನುಭವವನ್ನು ಏಕದಿನ ಮಾದರಿಯಲ್ಲಿ ಹೇಗೆ ಬಳಸಿಕೊಳ್ಳಬೇಕು ಎಂಬ ಬಗ್ಗೆ ಮಂಡಳಿಯು ಮಹತ್ವದ ಚರ್ಚೆಗಳನ್ನು ನಡೆಸುತ್ತಿದೆ ಎಂದು ವರದಿಯಾಗಿದೆ.
ಸೂರ್ಯಕುಮಾರ್ ನೇತೃತ್ವದ ಈ ಸೆಲ್ಫ್​​ಲೆಸ್ ಭಾರತ ತಂಡವು ಮುಂಬರುವ ದಿನಗಳಲ್ಲಿ ವಿಶ್ವ ಕ್ರಿಕೆಟ್ ಅನ್ನು ಆಳುವ ಎಲ್ಲಾ ಲಕ್ಷಣಗಳನ್ನು ತೋರುತ್ತಿದೆ. ಆಟಗಾರರು ತಮ್ಮ ವೈಯಕ್ತಿಕ ಸ್ಕೋರ್‌ಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ತಂಡದ ಒಟ್ಟು ಮೊತ್ತಕ್ಕೆ ಒತ್ತು ನೀಡುತ್ತಿರುವುದು ಕ್ರಿಕೆಟ್‌ನ ಹೊಸ ಯುಗಕ್ಕೆ ನಾಂದಿ ಹಾಡಿದೆ ಎಂದರೆ ಅತಿಶಯೋಕ್ತಿಯಾಗಲಾರದು(ಏಜೆನ್ಸೀಸ್​).