ಭೋಪಾಲ್: ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ (Digvijaya Singh), ಹಿಂದುತ್ವ ಮತ್ತು ಸನಾತನ ಧರ್ಮದ ಕುರಿತು ನೀಡಿರುವ ಹೇಳಿಕೆಗಳು ರಾಷ್ಟ್ರ ರಾಜಕೀಯದಲ್ಲಿ ತೀವ್ರ ಸಂಚಲನ ಮೂಡಿಸಿವೆ.
ಉಜ್ಜಯಿನಿಯಿಂದ ಅಯೋಧ್ಯೆಯತ್ತ ತಾವು ಕೈಗೊಂಡಿರುವ ಸತ್ಯ ಸನಾತನ ಸ್ವಾಭಿಮಾನ ಯಾತ್ರೆಯ ವೇಳೆ ಗುಣ ಜಿಲ್ಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದ್ವೇಷವನ್ನು ಬಿತ್ತುವುದೇ ಹಿಂದುತ್ವ ಎಂದರು. ಸಿಂಗ್ರ ಈ ಹೇಳಿಕೆಗೆ ಆಡಳಿತಾರೂಢ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಖಡಕ್ ತಿರುಗೇಟು ನೀಡಿದೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ದಿಗ್ವಿಜಯ್ ಸಿಂಗ್, ಸನಾತನ ಧರ್ಮಕ್ಕೂ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ವಿಶ್ವ ಹಿಂದೂ ಪರಿಷತ್ನಂತಹ ಸಂಘಟನೆಗಳು ಅನುಸರಿಸುವ ಹಿಂದುತ್ವ ಸಿದ್ಧಾಂತಕ್ಕೂ ನಡುವೆ ಆಳವಾದ ವ್ಯತ್ಯಾಸವಿದೆ ಎಂದರು.
ಸನಾತನ ಧರ್ಮದ ಮೂಲ ತತ್ವವನ್ನು ವಿವರಿಸಿದ ಅವರು, ನಮ್ಮ ಸಿದ್ಧಾಂತದ ಸಂದೇಶ ಒಂದೇ ಆಗಿದ್ದು, ಸನಾತನ ಧರ್ಮವು ಜಗತ್ತಿನ ಎಲ್ಲಾ ಧರ್ಮಗಳನ್ನು ಗೌರವಿಸುತ್ತದೆ ಹಾಗೂ ಇಡೀ ಮಾನವಕುಲದ ಕಲ್ಯಾಣಕ್ಕಾಗಿ ಶ್ರಮಿಸುತ್ತದೆ. ಆದರೆ ದ್ವೇಷವನ್ನು ಹರಡುವುದೇ ಹಿಂದುತ್ವವಾಗಿದ್ದು, ಇದನ್ನು ಆರ್ಎಸ್ಎಸ್ ಮತ್ತು ವಿಎಚ್ಪಿ ನಾಯಕರು ಪ್ರಚಾರ ಮಾಡುತ್ತಿದ್ದಾರೆ. ಇವರು ವೀರ ಸಾವರ್ಕರ್ ಅವರನ್ನು ತಮ್ಮ ಆದರ್ಶ ನಾಯಕನೆಂದು ಸ್ವೀಕರಿಸಿದ್ದಾರೆ. ಸ್ವತಃ ಸಾವರ್ಕರ್ ಅವರೇ ಹಿಂದುತ್ವಕ್ಕೂ ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದರು, ಸನಾತನ ಸಂಸ್ಕೃತಿಯು ಶಾಂತಿ ಮತ್ತು ಸಮಾನತೆಯ ಪ್ರತೀಕವಾಗಿದ್ದರೆ, ಹಿಂದುತ್ವವು ಧ್ರುವೀಕರಣದಲ್ಲಿ ತೊಡಗಿಕೊಂಡಿದೆ ಎಂದು ಆರೋಪಿಸಿದರು.
ವಿಜಯದಶಮಿಯ ಪವಿತ್ರ ದಿನದಂದು ಉಜ್ಜಯಿನಿಯ ಮಹಾಕಾಳೇಶ್ವರ ಧಾಮದಿಂದ ಚಾಲನೆ ಪಡೆದ ಈ ಸತ್ಯ ಸನಾತನ ಸ್ವಾಭಿಮಾನ ಯಾತ್ರೆಯನ್ನು ಸಾಧು-ಸಂತರು ಮತ್ತು ಧಾರ್ಮಿಕ ಮುಖಂಡರ ತಂಡ ಮುನ್ನಡೆಸುತ್ತಿದೆ. ಶ್ರೀ ರಾಮಮಂದಿರವಿರುವ ಅಯೋಧ್ಯೆಯತ್ತ ಸಾಗುತ್ತಿರುವ ಈ ಪಾದಯಾತ್ರೆಯು ಒಟ್ಟು 930 ಕಿಲೋಮೀಟರ್ಗಳಿಗೂ ಹೆಚ್ಚು ದೂರವನ್ನು ಕ್ರಮಿಸಲಿದೆ.
ಸನಾತನ ಸಂಸ್ಕೃತಿಯ ಮೂಲ ಮೌಲ್ಯಗಳಾದ ಸತ್ಯ, ಶಾಂತಿ ಮತ್ತು ಪಾರದರ್ಶಕತೆಯನ್ನು ಸಾರ್ವಜನಿಕರಲ್ಲಿ ಜಾಗೃತಗೊಳಿಸುವುದು ಈ ಯಾತ್ರೆಯ ಮುಖ್ಯ ಉದ್ದೇಶವಾಗಿದೆ. ಇದರೊಂದಿಗೆ, ಧಾರ್ಮಿಕ ಕೇಂದ್ರಗಳಲ್ಲಿ ಸಂಗ್ರಹವಾಗುವ ಕಾಣಿಕೆ ಹಾಗೂ ಚಂದಾದಾರಿಕೆ ಹಣದಲ್ಲಿ ಸಂಪೂರ್ಣ ಪಾರದರ್ಶಕತೆ ಕಾಯ್ದುಕೊಳ್ಳುವುದು, ಧಾರ್ಮಿಕ ಅನುದಾನಗಳ ದುರ್ಬಳಕೆಯ ಪ್ರಕರಣಗಳ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸುವುದು ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತ ಕಳ್ಳತನ ತಡೆಯುವ ಬಗ್ಗೆ ಜಾಗೃತಿ ಮೂಡಿಸುವುದು ಈ ಯಾತ್ರೆಯ ಮುಖ್ಯ ಆದ್ಯತೆಯಾಗಿ ಸಿಂಗ್ ಇಟ್ಟುಕೊಂಡಿದ್ದಾರೆ.
ದಿಗ್ವಿಜಯ್ ಸಿಂಗ್ರ ಈ ಪ್ರಚೋದನಾತ್ಮಕ ಹೇಳಿಕೆಗಳಿಗೆ ಬಿಜೆಪಿ ಕಠಿಣ ಶಬ್ದಗಳಲ್ಲಿ ತಿರುಗೇಟು ನೀಡಿದ್ದು, ಕಾಂಗ್ರೆಸ್ ನಾಯಕರು ರಾಜಕೀಯ ಲಾಭಕ್ಕಾಗಿ ಮತ್ತು ತಮ್ಮ ಮತಬ್ಯಾಂಕ್ ಓಲೈಕೆಗಾಗಿ ಹಿಂದೂ ಧರ್ಮ, ಸನಾತನ ಪರಂಪರೆ ಹಾಗೂ ಹಿಂದುತ್ವವನ್ನು ನಿರಂತರವಾಗಿ ಅಪಮಾನಿಸುತ್ತಿದ್ದಾರೆ ಎಂದು ಬಿಜೆಪಿ ಕಿಡಿಕಾರಿದೆ. ಧಾರ್ಮಿಕ ಯಾತ್ರೆಯ ಹೆಸರಿನಲ್ಲಿ ಸಮಾಜವನ್ನು ವಿಭಜಿಸುವ ಮತ್ತು ಹಿಂದೂ ಭಾವನೆಗಳಿಗೆ ಧಕ್ಕೆ ತರುವ ಪ್ರಯತ್ನ ನಡೆಯುತ್ತಿದೆ ಎಂದು ಕೇಸರಿ ನಾಯಕರು ಆರೋಪಿಸಿದ್ದಾರೆ(ಏಜೆನ್ಸೀಸ್).