ಬಾಲ್ಕನಿಯಿಂದ ಗುಟ್ಕಾ ಉಗುಳುವಾಗ ಹೈಟೆನ್ಷನ್ ವೈರ್ ತಗುಲಿ ಸಾವನ್ನಪ್ಪಿದ ಗಾರೆ ಕಾರ್ಮಿಕ ಪ್ರಭುಲಾಲ್ ಗುಪ್ತಾ 
ದೇಶ

ಗುಟ್ಕಾ ಉಗುಳಿದ್ದೇ ತಪ್ಪಾಯ್ತು! ಹೈಟೆನ್ಷನ್ ವೈರ್‌ಗೆ ತಗುಲಿದ ಎಂಜಲು; ಗಾರೆ ಕೆಲಸದವ ಸ್ಥಳದಲ್ಲೇ ಸಾವು! Gutkha Tragedy

ಮಧ್ಯಪ್ರದೇಶ: ನಿರ್ಮಾಣ ಹಂತದಲ್ಲಿದ್ದ ಮನೆಯ ಬಾಲ್ಕನಿಯಿಂದ ಗುಟ್ಕಾ ಉಗಳಲು ಹೋಗಿ ಹೈಟೆನ್ಷನ್​​ ವೈರ್​ ಸ್ಪರ್ಶಿಸಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶ ರಾಜ್ಯದ ಗಂಜ್ಬಾಸೋಡ ಎಂಬಲ್ಲಿ ವರದಿಯಾಗಿದೆ.

ಮೃತ ದುರ್ದೈವಿಯನ್ನು ಪ್ರಭುಲಾಲ್ ಗುಪ್ತಾ (65) ಎಂದು ಗುರುತಿಸಲಾಗಿದ್ದು, ಹಲವು ವರ್ಷಗಳಿಂದ ಗಾರೆ ಕೆಲಸ ಮಾಡುತ್ತಿದ್ದ ಗುಪ್ತಾ, ಬಾಯಲ್ಲಿದ್ದ ಗುಟ್ಕಾವನ್ನು ಮೂರನೇ ಮಹಡಿಯಿಂದ ಉಗುಳಿದ್ದಾನೆ. ಆ ಎಂಜಲು ನೇರವಾಗಿ 11. ಕೆವಿ ಹೈಟೆನ್ಷನ್​ ವೈರ್​ಗೆ ತಗುಲಿ ಕರೆಂಟ್​ ಶಾಕ್​ ಹೊಡೆದಿದೆ. ಪರಿಣಾಮ ಪ್ರಭುಲಾಲ್ ಗುಪ್ತಾ ಬಾಲ್ಕನಿಯಲ್ಲಿ ನೇತಾಡುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಈ ಘಟನೆ ನಡೆಯುತ್ತಲೇ, ಸ್ಥಳೀಯರು ಕೂಡಲೇ ಪೊಲೀಸರಿಗೆ ಕರೆ ಮಾಡಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು, ಪ್ರಭುಲಾಲ್ ಗುಪ್ತಾ ನನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಆಸ್ಪತ್ರೆ ತಲುಪುವ ಮೊದಲೇ, ಪ್ರಾಣ ಕಳೆದುಕೊಂಡಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಸ್ಥಳೀಯರಲ್ಲಿ ಆತಂಕ!

ಈ ಘಟನೆ ನಡೆಯುತ್ತಿದ್ದಂತೆ ಗಂಜ್ಬಾಸೋಡ, ನಿವಾಸಿಗಳಲ್ಲಿ ಆತಂಕ ಮನೆಮಾಡಿದೆ. ಮನೆಗೆ ಅತ್ಯಂತ ಹತ್ತಿರದಲ್ಲಿಯೇ ಹೈಟೆನ್ಷನ್​ ವೈರ್​ ಹಾದು ಹೋಗಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಈ ಬಗ್ಗೆ ವಿದ್ಯುತ್​ ಸರಬರಾಜು ಇಲಾಖೆಗೆ ಮಾಹಿತಿ ನೀಡಿದ್ದರೂ, ಏನೂ ಕ್ರಮ ತೆಗೆದುಕೊಂಡಿಲ್ಲ, ಈಗ ಒಂದು ಹೆಣವೇ ಬೀಳುವಂತಾಗಿದೆ ಎಂದು ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.

ಕೇವಲ ಗುಟ್ಕಾ ತಿಂದು ಉಗುಳುವವರ ಸಲುವಾಗಿ ಅಲ್ಲ, ಮನೆಯಲ್ಲಿ ಮಕ್ಕಳಿರುತ್ತಾರೆ, ಮಹಿಳೆಯರು ಬಟ್ಟೆಯನ್ನು ಬಿಸಲಿಗೆ ಒಣಗಿಸಲು ಹೋಗುತ್ತಾರೆ. ಈ ಸಂದರ್ಭದಲ್ಲಿ ಏನಾದರೂ ಹೆಚ್ಚು ಕಡಿಮೆ ಆದರೆ ಯಾರು ಹೊಣೆ? ಕೂಡಲೇ ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು, ಸ್ಥಳೀಯರು ಒತ್ತಾಯಿಸಿದ್ದಾರೆ. ಈ ಸಾವಿಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.

ಉಗುಳುವುದರಿಂದ ಕರೆಂಟ್​ ಶಾಕ್​ ತಗಲುತ್ತದೆಯೇ?

ವಿದ್ಯುತ್ ಕ್ಷೇತ್ರದ ತಜ್ಞರ ಪ್ರಕಾರ, ಕೆಲವು ಸಂದರ್ಭಗಳಲ್ಲಿ ಇಂತಹ ಅಪಘಾತ ಸಂಭವಿಸಬಹುದು. ಲಾಲಾರಸವು ನೀರು ಮತ್ತು ಕರಗಿದ ಲವಣಗಳನ್ನು ಹೊಂದಿರುವುದರಿಂದ, ಅದು ಸ್ವಲ್ಪ ಪ್ರಮಾಣದ ವಿದ್ಯುತ್ ಪ್ರವಾಹವನ್ನು ಸಾಗಿಸಬಹುದು. ಲಾಲಾರಸದ ನೇರವಾಗಿ ವಿದ್ಯುತ್​ ತಂತಿಯನ್ನು ಸ್ಪರ್ಶಿಸಿದರೆ, ಅದು ವಿದ್ಯುತ್ ಪ್ರವಾಹಕ್ಕೆ ಅವಕಾಶ ನೀಡುತ್ತದೆ.

ಅಲ್ಲದೆ, 11 ಸಾವಿರ ವೋಲ್ಟ್‌ಗಳ ಹೈ-ವೋಲ್ಟೇಜ್ ವಿದ್ಯುತ್ ಮಾರ್ಗದ ಬಳಿ ಸಾಕಷ್ಟು ದೂರವಿಲ್ಲದಿದ್ದರೆ, ವಿದ್ಯುತ್ ಪ್ರವಾಹವು ಗಾಳಿಯ ಮೂಲಕವು ತಗಲುತ್ತದೆ ಎನ್ನುತ್ತಾರೆ. ಅಂತಹ ಸಂದರ್ಭದಲ್ಲಿ, ವಿದ್ಯುತ್ ಪ್ರವಾಹವು ದೇಹದ ಮೂಲಕ ಹಾದು ಹೋದರೆ, ಅದು ಗಂಭೀರವಾದ ಸುಟ್ಟಗಾಯಗಳು ಅಥವಾ ಸಾವಿಗೆ ಕಾರಣವಾಗಬಹುದು, (ಏಜೆನ್ಸೀಸ್​).