ಸುಖ್‌ಬೀರ್ ಸಿಂಗ್ ಬಾದಲ್ ಮತ್ತು ಪ್ರಧಾನಿ ಮೋದಿ
ಚಂಡೀಗಢ: ಶಿರೋಮಣಿ ಅಕಾಲಿ ದಳ ಮುಖ್ಯಸ್ಥ ಮತ್ತು ಪಂಜಾಬ್ ಮಾಜಿ ಡಿಸಿಎಂ ಸುಖ್‌ಬೀರ್ ಸಿಂಗ್ ಬಾದಲ್ ಶುಕ್ರವಾರ(ಆ. 07) ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಾರೆ. ಇದು 2027ರ ಪಂಜಾಬ್ ಚುನಾವಣೆಗೂ ಮುನ್ನ ಬಿಜೆಪಿ-ಶಿರೋಮಣಿ ಅಕಾಲಿದಳ(BJP-Akali Dal alliance) ನಡುವೆ ಮತ್ತೆ ಮೈತ್ರಿಯ ಕುರಿತು ಊಹಾಪೋಹಗಳು ಕಾರಣವಾಗಿದೆ.
2027ರ ವಿಧಾನಸಭೆ ಚುನಾವಣೆಗೆ ಪಂಜಾಬ್‌ನಲ್ಲಿ ರಾಜಕೀಯ ಚಟುವಟಿಕೆಗಳು ತೀವ್ರಗೊಳ್ಳುತ್ತಿರುವ ಸಮಯದಲ್ಲಿ ಈ ಭೇಟಿ ನಡೆದಿದೆ. ಸುಖ್‌ಬೀರ್ ಸಿಂಗ್ ಬಾದಲ್ ಕೆಲವು ದಿನಗಳ ಹಿಂದೆ ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಅವರನ್ನು ಭೇಟಿಯಾಗಿದ್ದರು. ಬಳಿಕ ಈಗ ಪ್ರಧಾನಿಯವರನ್ನು ಭೇಟಿಯಾಗಿದ್ದಾರೆ.
ಈ ಇಬ್ಬರ ನಾಯಕರ ಭೇಟಿಯೂ ಅಕಾಲಿದಳ ಎನ್ಡಿಎ ಸೇರುವ ಸಾಧ್ಯತೆಯಿದೆ ಎಂಬ ಚರ್ಚೆಗಳನ್ನು ಹುಟ್ಟು ಹಾಕಿದೆ. ಮತ್ತು ಸಭೆಯ ಚರ್ಚೆಯ ಕುರಿತು ಯಾವುದೇ ಪಕ್ಷಗಳು ಅಧಿಕೃತ ಹೇಳಿಕೆ ನೀಡಿಲ್ಲ. ಸುಖ್‌ಬೀರ್ ಸಿಂಗ್ ಬಾದಲ್ ಅವರ ಆಪ್ತ ಮೂಲಗಳು ಇದನ್ನು ಅನೌಪಚಾರಿಕ ಸಭೆ ಎಂದು ಕರೆದಿವೆ.
ಇನ್ನೂ ಬಿಜೆಪಿ ಮತ್ತು ಎಸ್‌ಎಡಿ ಎರಡೂ ಪಕ್ಷಗಳು ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಪದೇ-ಪದೇ ಹೇಳಿಕೊಂಡಿವೆ. ಪಂಜಾಬ್‌ಗೆ ಸಂಬಂಧಿಸಿದ ಕಾನೂನು ಮತ್ತು ಸುವ್ಯವಸ್ಥೆ, ಪುನರಾವರ್ತಿತ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು, ಹೆಚ್ಚುತ್ತಿರುವ ಮಾದಕ ದ್ರವ್ಯ ಪಿಡುಗು ಮತ್ತು ಇತರ ಆಡಳಿತ ಸವಾಲುಗಳ ಕುರಿತು ನಾಯಕರು ಚರ್ಚಿಸಿರಬಹುದು ಎಂದು ರಾಜಕೀಯ ವೀಕ್ಷಕರು ನಂಬಿದ್ದಾರೆ.
ಆದಾಗ್ಯೂ, ಎರಡೂ ಪಕ್ಷಗಳು ಮೈತ್ರಿ ಸಾಧ್ಯತೆಯನ್ನು ನಿರಂತರವಾಗಿ ತಳ್ಳಿಹಾಕಿವೆ. ಜೂನ್‌ನಲ್ಲಿ ಪಂಜಾಬ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರು ಪಕ್ಷವು ಎಲ್ಲಾ 117 ವಿಧಾನಸಭಾ ಸ್ಥಾನಗಳಲ್ಲಿಯೂ ಸ್ಪರ್ಧಿಸಲಿದೆ ಎಂದು ಹೇಳಿದ್ದರು. ಸುಖ್‌ಬೀರ್ ಬಾದಲ್ ಕೂಡ ಎಸ್‌ಎಡಿ ಎಲ್ಲಾ 117 ವಿಧಾನಸಭಾ ಕ್ಷೇತ್ರಗಳಲ್ಲೂ ಸ್ವತಂತ್ರವಾಗಿ ಸ್ಪರ್ಧಿಸಲು ಸಿದ್ಧತೆ ನಡೆಸುತ್ತಿದೆ ಎಂದಿದ್ದರು (ಏಜೆನ್ಸೀಸ್).