ಅರೆಬೆತ್ತಲಾಗಿ ಹಿಟ್ಟಿನ ಮೇಲೆ ಉರುಳುತ್ತಾ ತಯಾರಿಸುತ್ತಿರುವ ಆಘಾತಕಾರಿ ವಿಡಿಯೋ ವೈರಲ್ 
ದೇಶ

ಸೋಯಾ ಚಾಪ್ ಪ್ರಿಯರೇ ಎಚ್ಚರ! ಅರೆ ಬೆತ್ತಲಾಗಿ ಹಿಟ್ಟಿನ ಮೇಲೆ ಉರುಳಿದ ಯುವಕ; ವಿಡಿಯೋ ವೈರಲ್​! Soya Chaap Viral Video

ಪ್ರಮುಖ ಮುಖ್ಯಾಂಶಗಳು

  • ಸೋಯಾ ಚಾಪ್ ತಯಾರಿಕೆಯಲ್ಲಿ ನೈರ್ಮಲ್ಯ ಕೊರತೆ!
  • ಅರೆಬೆತ್ತಲಾಗಿ ಹಿಟ್ಟಿನ ಮೇಲೆ ಉರುಳುತ್ತಾ ತಯಾರಿಸುತ್ತಿರುವ ಆಘಾತಕಾರಿ ವಿಡಿಯೋ ವೈರಲ್
  • ಸಸ್ಯಾಹಾರಿಗಳ ಆರೋಗ್ಯದ ಜತೆ ಆಟವಾಡುತ್ತಿರುವ ಕರಾಳ ಸತ್ಯ ಬಯಲು
ವೈರಲ್​​: ಸೋಯಾ ಚಾಪ್ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ? ಅದರಲ್ಲೂ ಸಸ್ಯಾಹಾರಿಗಳು ಈ ಸೋಯಾ ಚಾಪ್​ ಅನ್ನು ಮಾಂಸಹಾರದ ಬದಲಿ ಆಹಾರ ಎಂದು ನಾಲಿಗೆ ಚಪ್ಪರಿಸುತ್ತಾ ತಿನ್ನುತ್ತಾರೆ.
ಆದರೆ, ಸೋಯಾ ಚಾಪ್ ಪ್ರಿಯರ ನಿದ್ದೆಗೆಡಿಸುವಂಥ ಬಹಳ ಅಸಹ್ಯಕರವಾದ ವಿಡಿಯೋವೊಂದು ಸೋಷಿಯಲ್​ ಮೀಡಿಯಾನಲ್ಲಿ ವೈರಲ್ (Soya Chaap Viral Video) ​ ಆಗುತ್ತಿದೆ.

ವಿಡಿಯೋದಲ್ಲಿ ಏನಿದೆ?

ಸಾಮಾಜಿಕ ಜಾಲತಾಣ ಎಕ್ಸ್ (X) ನಲ್ಲಿ ಹರಿದಾಡುತ್ತಿರುವ ಈ ವಿಡಿಯೋದಲ್ಲಿ ಸೋಯಾ ಚಾಪ್ ತಯಾರಿಸುವ ಫ್ಯಾಕ್ಟರಿಯೊಂದರ ಒಳನೋಟವನ್ನು ತೋರಿಸಲಾಗಿದೆ. ಸೋಯಾ ಚಾಪ್ ತಯಾರಿಕೆಯಲ್ಲಿ ಯಾವ ಮಟ್ಟದ ನೈರ್ಮಲ್ಯವಿಲ್ಲದ ವಾತಾವರಣವಿದೆ ಎಂಬುದನ್ನು ನೋಡಬಹುದಾಗಿದೆ.
ಯಾವುದೇ ಸ್ವಚ್ಛತೆಯ ನಿಯಮಗಳನ್ನು ಪಾಲಿಸದೆ, ಧೂಳು ಮತ್ತು ಕೊಳಕು ತುಂಬಿದ ನೆಲದ ಮೇಲೆಯೇ ಇವುಗಳನ್ನು ತಯಾರಿಸುತ್ತಿರುವ ದೃಶ್ಯಗಳು ದೇಶದ ಎಲ್ಲ ಆಹಾರ ಪ್ರಿಯರನ್ನು ಬೆಚ್ಚಿಬೀಳಿಸಿದೆ. ಅಷ್ಟೇ ಅಲ್ಲದೆ, ಈ ವಿಡಿಯೋನಲ್ಲಿ ಹುಡುಗನೊಬ್ಬ ಅರೆ ಬೆತ್ತಲಾಗಿ ಕಲಿಸಿಟ್ಟ ಹಿಟ್ಟಿನ ಮೇಲೆ ಉರುಳುತ್ತಿರುವ ದೃಶ್ಯ ಜನರ ವಾಕರಿಕೆಗೆ ಕಾರಣವಾಗಿದೆ ಎಂದರೆ ಸುಳ್ಳಲ್ಲ. ಒಟ್ಟಾರೆ, ನಮ್ಮ ಆರೋಗ್ಯದ ಜತೆ ಯಾವ ಮಟ್ಟಿಗೆ ಆಟವಾಡುತ್ತಿದ್ದಾರೆ ಎಂಬುದಕ್ಕೆ ಈ ವಿಡಿಯೋನೇ ಸಾಕ್ಷಿಯಾಗಿದೆ.

ಜನರಿಂದ ತೀವ್ರ ಆಕ್ರೋಶ!

ಈ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆ ನೆಟ್ಟಿಗರು ಕೆಂಡಾಮಂಡಲರಾಗಿದ್ದಾರೆ. ಕಾಮೆಂಟ್ ಬಾಕ್ಸ್‌ನಲ್ಲಿ ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ. ಈ ವಿಡಿಯೋ ನೋಡಿದ ಮೇಲಂತೂ ನನ್ನ ಜೀವಮಾನದಲ್ಲಿ ಇನ್ನು ಮುಂದೆ ಎಂದಿಗೂ ಹೊರಗಡೆ ಸೋಯಾ ಚಾಪ್ ತಿನ್ನುವುದಿಲ್ಲ ಎಂದು ಅನೇಕರು ಶಾಪ ಹಾಕುತ್ತಿದ್ದಾರೆ.
ಇನ್ನು ಕೆಲವರು ಆಹಾರ ಸುರಕ್ಷತಾ ಇಲಾಖೆ (FSSAI) ಹಾಗೂ ಸ್ಥಳೀಯ ಆಡಳಿತದ ಅಧಿಕಾರಿಗಳನ್ನು ಟ್ಯಾಗ್ ಮಾಡಿ, ಇಂಥಾ ಕೃತ್ಯ ಎಸಗುವ ನೈರ್ಮಲ್ಯರಹಿತ ಫ್ಯಾಕ್ಟರಿಗಳಿಗೆ ಕೂಡಲೇ ಬೀಗ ಜಡಿದು, ಮಾಲೀಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಇಂಥಾ ಕಲುಷಿತ ಆಹಾರ ತಿಂದು ಕ್ಯಾನ್ಸರ್ ಅಥವಾ ಗಂಭೀರ ಕಾಯಿಲೆಗಳು ಬರುವುದು ಖಚಿತ ಎಂದು ಜನರು ತಮ್ಮ ಆತಂಕ ಹೊರಹಾಕುತ್ತಿದ್ದಾರೆ, (ಏಜನ್ಸೀಸ್​).