INDvsZIM | ವಂಡರ್ ಕಿಡ್ ಸೂರ್ಯವಂಶಿ 'ವೈಭವಯುತ' ಬ್ಯಾಟಿಂಗ್​; ಶ್ರೇಯಸ್ ಅಯ್ಯರ್ ನಾಯಕತ್ವಕ್ಕೆ ಮೊದಲ ಜಯದ ಸಿಹಿ! 
ದೇಶ

ವಂಡರ್ ಕಿಡ್ ಸೂರ್ಯವಂಶಿ 'ವೈಭವಯುತ' ಬ್ಯಾಟಿಂಗ್​; ಶ್ರೇಯಸ್ ಅಯ್ಯರ್ ನಾಯಕತ್ವಕ್ಕೆ ಮೊದಲ ಜಯದ ಸಿಹಿ | INDvsZIM

INDvsZIM: ಜಿಂಬಾಬ್ವೆ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಸರ್ವಾಂಗೀಣ ಪ್ರದರ್ಶನ ನೀಡಿ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಸಿಡಿಲಬ್ಬರದ ಅರ್ಧಶತಕ ಹಾಗೂ ವೇಗಿಗಳ ಮಾರಕ ಬೌಲಿಂಗ್ ನೆರವಿನಿಂದ ಭಾರತ ತಂಡವು ಅತಿಥೇಯ ಜಿಂಬಾಬ್ವೆಯನ್ನು ಧೂಳಿಪಟ ಮಾಡಿದೆ.
ಗುರುವಾರ ಹರಾರೆಯಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡದ ನಾಯಕ ಶ್ರೇಯಸ್ ಅಯ್ಯರ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ನಾಯಕನ ಆಯ್ಕೆಯನ್ನು ಸಮರ್ಥಿಸಿಕೊಂಡ ಭಾರತೀಯ ಬೌಲರ್‌ಗಳು ಆರಂಭದಿಂದಲೇ ಜಿಂಬಾಬ್ವೆ ಬ್ಯಾಟರ್‌ಗಳ ಮೇಲೆ ಸವಾರಿ ಮಾಡಿದರು. ನಿಖರ ಲೈನ್ ಅಂಡ್ ಲೆಂಗ್ತ್ ದಾಳಿ ಸಂಘಟಿಸಿದ ಟೀಮ್ ಇಂಡಿಯಾ ಬೌಲರ್‌ಗಳು ಜಿಂಬಾಬ್ವೆ ರನ್ ವೇಗಕ್ಕೆ ಸಂಪೂರ್ಣ ಬ್ರೇಕ್ ಹಾಕಿದರು.
ಅತಿಥೇಯರ ಪರ ವೆಸ್ಲಿ ಮಾಧೆವೆರೆ 34 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 1 ಫೋರ್ ನೆರವಿನಿಂದ 39 ರನ್ ಗಳಿಸಿ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಉಳಿದ ಬ್ಯಾಟರ್‌ಗಳನ್ನು ಕಟ್ಟಿಹಾಕಿದ ಭಾರತದ ಬೌಲಿಂಗ್ ವಿಭಾಗವು ಜಿಂಬಾಬ್ವೆಯನ್ನು ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ ಕೇವಲ 125 ರನ್‌ಗಳಿಗೆ ನಿಯಂತ್ರಿಸಿತು. ಭಾರತದ ಪರ ವೇಗಿಗಳಾದ ಮಯಾಂಕ್ ಯಾದವ್ (2/18) ಮತ್ತು ಪ್ರಿನ್ಸ್ ಯಾದವ್ (2/19) ತಲಾ ಎರಡು ವಿಕೆಟ್ ಕಬಳಿಸಿ ಮಿಂಚಿದರು.

ವೈಭವ್ ಸೂರ್ಯವಂಶಿ ದಾಖಲೆಯ ಅರ್ಧಶತಕ

126 ರನ್‌ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಭಾರತಕ್ಕೆ ಯುವ ಎಡಗೈ ಬ್ಯಾಟರ್ ವೈಭವ್ ಸೂರ್ಯವಂಶಿ ಸ್ಫೋಟಕ ಆರಂಭ ನೀಡಿದರು. ಜಿಂಬಾಬ್ವೆ ಬೌಲರ್‌ಗಳ ಮೇಲೆ ಅಕ್ಷರಶಃ ಸವಾರಿ ಮಾಡಿದ ವೈಭವ್, ಕೇವಲ 18 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು. ಈ ಅಬ್ಬರದ ಇನಿಂಗ್ಸ್‌ನಲ್ಲಿ ತಲಾ 4 ಬೌಂಡರಿ ಹಾಗೂ ಸಿಕ್ಸರ್‌ಗಳು ಸೇರಿವೆ.

ಟೀಮ್​ ಇಂಡಿಯಾ ಸ್ಕೋರ್ ಕಾರ್ಡ್​

ಇಶಾನ್ ಕಿಶನ್ 35(24)
ಶ್ರೇಯಸ್ ಅಯ್ಯರ್ 28 (24)
ಅರ್ಧಶತಕ ಪೂರೈಸಿದ ತಕ್ಷಣದ ಎಸೆತದಲ್ಲಿ ಅವರು ವಿಕೆಟ್ ಒಪ್ಪಿಸಿದರಾದರೂ, ಅಷ್ಟರಲ್ಲಾಗಲೇ ಭಾರತದ ಗೆಲುವಿನ ಹಾದಿಯನ್ನು ಸುಲಭಗೊಳಿಸಿದ್ದರು. ಅಂತಿಮವಾಗಿ ಭಾರತ ತಂಡವು ಇನ್ನು 40 ಎಸೆತಗಳು ಬಾಕಿ ಇರುವಂತೆಯೇ 126 ರನ್‌ಗಳ ಗುರಿಯನ್ನು ತಲುಪಿ, 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು(ಏಜೆನ್ಸೀಸ್​).