ನವದೆಹಲಿ: 1970ರ ದಶಕದ ಮಾರುತಿ ಯೋಜನೆಗೆ ಸಂಬಂಧಿಸಿದಂತೆ ಬಿಜೆಪಿ ಸಂಸದ ನಿಶಿಕಾಂತ್ ದುಬೆ (Nishikant Dubey) ಅವರು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ಯೋಜನೆಗೆ ಸಂಬಂಧಿಸಿದ ಕಂಪನಿಯ ಮಾಲೀಕತ್ವವನ್ನು ಪ್ರಶ್ನಿಸಿರುವ ದುಬೆ, ಅಂದಿನ ಪ್ರಧಾನಿ ಇಂದಿರಾ ಗಾಂಧಿ ನೇತೃತ್ವದ ಸರ್ಕಾರವು ಗಾಂಧಿ ಕುಟುಂಬಕ್ಕೆ ವಿಶೇಷ ಅನುಕೂಲಗಳನ್ನು ಮಾಡಿಕೊಟ್ಟಿತ್ತು ಎಂದು ಆರೋಪಿಸಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ದುಬೆ, ಕಾಂಗ್ರೆಸ್ನ ಕರಾಳ ಅಧ್ಯಾಯ ಎಂಬ ಶೀರ್ಷಿಕೆಯಡಿ ತಾವು ಬರೆಯುತ್ತಿರುವ ಸರಣಿಯ 250ನೇ ಕಂತಿನಲ್ಲಿ ಈ ಆರೋಪಗಳನ್ನು ಮಾಡಿದ್ದಾರೆ. ಅಂದು ವಿದೇಶಿ ಪ್ರಜೆಯಾಗಿದ್ದರೂ ಸೋನಿಯಾ ಗಾಂಧಿ ಅವರು ಮಾರುತಿ ಟೆಕ್ನಿಕಲ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ನಿರ್ದೇಶಕಿ ಮತ್ತು ಷೇರುದಾರರಾಗಿದ್ದರು ಹಾಗೂ ಇಂದಿರಾ ಗಾಂಧಿ ಸರ್ಕಾರದಿಂದ ಈ ಕಂಪನಿಗೆ ಆದ್ಯತೆಯ ಸೌಲಭ್ಯಗಳು ದೊರೆತಿದ್ದವು ಎಂದು ದುಬೆ ದೂರಿದ್ದಾರೆ.
ತಮ್ಮ ಪೋಸ್ಟ್ನಲ್ಲಿ ಸರಣಿ ಪ್ರಶ್ನೆಗಳನ್ನು ಎತ್ತಿರುವ ದುಬೆ, ವಿದೇಶಿ ಪ್ರಜೆಯಾಗಿದ್ದರೂ ಸೋನಿಯಾ ಗಾಂಧಿ ಅವರು ಮಾರುತಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಶೇಕಡಾ 50ರಷ್ಟು ಷೇರುದಾರರಾಗಿದ್ದರು ಎಂಬುದು ನಿಮಗೆ ತಿಳಿದಿದೆಯೇ? ಭಾರತ ಸರ್ಕಾರದ ನಿಯಮಗಳ ಪ್ರಕಾರ ಯಾವುದೇ ವಿದೇಶಿ ಪ್ರಜೆ ಭಾರತೀಯ ಕಂಪನಿಯ ನಿರ್ದೇಶಕರಾಗಲು ಸಾಧ್ಯವಿರಲಿಲ್ಲ. ಹಾಗಿರುವಾಗ 1970ರಲ್ಲಿ ಅವರು ನಿರ್ದೇಶಕಿಯಾಗಿದ್ದು ಹೇಗೆ?" ಎಂದು ಪ್ರಶ್ನಿಸಿದ್ದಾರೆ. ಸಂಜಯ್ ಗಾಂಧಿ ಅವರ ಮಾರುತಿ ಯೋಜನೆಯ ಸುತ್ತಲಿನ ವಿವಾದವನ್ನು 1977ರಲ್ಲಿ ತನಿಖಾ ಆಯೋಗವೊಂದು ಪರಿಶೀಲಿಸಿತ್ತು ಎಂಬ ಹಿನ್ನೆಲೆಯಲ್ಲಿ ಈ ಆರೋಪಗಳು ಕೇಳಿಬಂದಿವೆ.
1970ರ ನವೆಂಬರ್ 21ರಂದು ಸಂಜಯ್ ಗಾಂಧಿ ಅವರು ಸೋನಿಯಾ ಗಾಂಧಿ ಅವರ ಮಾರುತಿ ಟೆಕ್ನಿಕಲ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಜೊತೆ ಒಪ್ಪಂದ ಮಾಡಿಕೊಂಡಿದ್ದರು ಎಂದು ದುಬೆ ಹೇಳಿದ್ದಾರೆ. ಮಾರುತಿ ಕಂಪನಿಯ ನಿಜವಾದ ಮಾಲೀಕರು ಸೋನಿಯಾ ಗಾಂಧಿಯಾಗಿದ್ದರು. 1970ರಲ್ಲಿ ಕಂಪನಿ ಸ್ಥಾಪನೆಯಾಗಿದ್ದರೂ, ಕಾರುಗಳನ್ನು ತಯಾರಿಸಲು 1968ರಲ್ಲೇ ಭಾರತ ಸರ್ಕಾರದಿಂದ ಅನುಮತಿ ಪತ್ರವನ್ನು ಪಡೆದಿತ್ತು. 1969ರಲ್ಲಿ ಪ್ರಧಾನಿ ಇಂದಿರಾ ಗಾಂಧಿ ಅವರು ತಮ್ಮ ಸೊಸೆ ಸೋನಿಯಾ ಗಾಂಧಿಯವರ ಕಂಪನಿಗೆ ಕಾರು ತಯಾರಿಸಲು ಅವಕಾಶ ನೀಡಿ ಕ್ಯಾಬಿನೆಟ್ ಆದೇಶ ಹೊರಡಿಸಿದ್ದರು. 1972ರ ಏಪ್ರಿಲ್ 3ರಂದು ಸಂಜಯ್ ಗಾಂಧಿ ಕಂಪನಿಯ ಕೆಲಸಕ್ಕಾಗಿ ಕೇಂದ್ರ ಸರ್ಕಾರದ ವೆಚ್ಚದಲ್ಲಿ ವಿಶ್ವವನ್ನು ಸುತ್ತಿದ್ದರು ಎಂದು ದುಬೆ ಆರೋಪಿಸಿದ್ದಾರೆ.
ಅಷ್ಟೇ ಅಲ್ಲದೆ, ಅಂದು ಇಂದಿರಾ ಗಾಂಧಿ ಅವರ ನೇತೃತ್ವದಲ್ಲಿದ್ದ ಪ್ರಧಾನ ಮಂತ್ರಿ ಕಚೇರಿಯು, ಕಂಪನಿಯ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿತ್ತು ಮತ್ತು ಇಂದಿರಾ ಗಾಂಧಿಯವರ ಆಪ್ತ ಸಹಾಯಕ ಹಾಗೂ ಖಾಸಗಿ ಕಾರ್ಯದರ್ಶಿ ಆರ್.ಕೆ. ಧವನ್ ಕೂಡ ಇದರೊಂದಿಗೆ ಗುರುತಿಸಿಕೊಂಡಿದ್ದರು ಎಂದು ದುಬೆ ದೂರಿದ್ದಾರೆ. ಪ್ರಧಾನ ಮಂತ್ರಿ ಕಚೇರಿಯಲ್ಲಿ ಖಾಸಗಿ ಕಂಪನಿಯ ಕಚೇರಿಯನ್ನು ತೆರೆದಿದ್ದು ಹೇಗೆ? ಪ್ರಧಾನಿಯವರ ಖಾಸಗಿ ಕಾರ್ಯದರ್ಶಿ ಧವನ್ ಅವರು ಅದರ ನಿರ್ದೇಶಕರಾಗಿದ್ದು ಹೇಗೆ? ಎಂದು ಅವರು ಪ್ರಶ್ನಿಸಿದ್ದಾರೆ.
ಮಾರುತಿ ಯೋಜನೆಗೆ ಭೂಮಿ ಹಂಚಿಕೆ ಮಾಡಿರುವ ಬಗ್ಗೆಯೂ ದುಬೆ ಅನುಮಾನ ವ್ಯಕ್ತಪಡಿಸಿದ್ದಾರೆ. ಅಂದಿನ ಹರಿಯಾಣ ಸರ್ಕಾರದ ನಿಯಮಗಳ ಪ್ರಕಾರ ವಿದೇಶಿ ಪ್ರಜೆಯ ಹೆಸರಿನಲ್ಲಿ ಭೂಮಿ ಹಂಚಿಕೆ ಮಾಡಲು ಅವಕಾಶವಿರಲಿಲ್ಲವಾದರೂ, 1970ರಲ್ಲಿ ಸೋನಿಯಾ ಗಾಂಧಿ ಅವರಿಗೆ ಭೂಮಿ ನೀಡಲಾಗಿತ್ತು ಎಂದು ಅವರು ಆರೋಪಿಸಿದ್ದಾರೆ.
ಇದರೊಂದಿಗೆ ಬ್ಯಾಂಕ್ಗಳ ರಾಷ್ಟ್ರೀಕರಣದ ನಿರ್ಧಾರವನ್ನೂ ಈ ವಿವಾದಕ್ಕೆ ತಳುಕು ಹಾಕಿರುವ ಬಿಜೆಪಿ ಸಂಸದರು, ಗಾಂಧಿ ಕುಟುಂಬಕ್ಕೆ ಸಂಬಂಧಿಸಿದ ಕಂಪನಿಗಳಿಗೆ ಸಾಲ ನೀಡುವ ಏಕೈಕ ಉದ್ದೇಶದಿಂದ ಬ್ಯಾಂಕ್ಗಳನ್ನು ರಾಷ್ಟ್ರೀಕರಣಗೊಳಿಸಲಾಯಿತೇ? ಎಂದು ಕೇಳಿದ್ದಾರೆ. ಕಂಪನಿ ಕಾರ್ಯಾರಂಭ ಮಾಡುವ ಮೊದಲೇ ಬಸ್ ಬಾಡಿಗಳನ್ನು ನಿರ್ಮಿಸಲು ರಾಜ್ಯ ಸರ್ಕಾರಗಳಿಗೆ ಮುಂಗಡ ಹಣ ಪಾವತಿಸುವಂತೆ ಸೂಚಿಸಲಾಗಿತ್ತು ಹಾಗೂ ಸರ್ಕಾರಿ ಸ್ವಾಮ್ಯದ ಕಂಪನಿಗಳು ಯಾವುದೇ ಹಣ ಪಡೆಯದೆ ಮಾರುತಿಗೆ ಸಿಮೆಂಟ್, ಉಕ್ಕು ಮತ್ತು ಕಲ್ಲಿದ್ದಲನ್ನು ನೇರವಾಗಿ ಪೂರೈಸಿದ್ದವು ಎಂದು ದುಬೆ ಗಂಭೀರ ಆರೋಪ ಮಾಡಿದ್ದಾರೆ.
ತಮ್ಮ ಪೋಸ್ಟ್ನ ಕೊನೆಯಲ್ಲಿ, ಕಂಪನಿಯ ಸ್ಥಾಪನೆ ಮತ್ತು ಕಾರ್ಯನಿರ್ವಹಣೆಯ ಕುರಿತು ವಿವರಣೆ ನೀಡುವಂತೆ ಸೋನಿಯಾ ಗಾಂಧಿ ಅವರಿಗೆ ದುಬೆ ಸವಾಲು ಹಾಕಿದ್ದಾರೆ. ತಮ್ಮ ಸ್ವಂತ ಹಣವನ್ನು ಹೂಡಿಕೆ ಮಾಡದೆ ಇಷ್ಟು ದೊಡ್ಡ ಕಂಪನಿಯನ್ನು ಹೇಗೆ ಕಟ್ಟಿದರು ಮತ್ತು ಪ್ರಧಾನಿ ಇಂದಿರಾ ಗಾಂಧಿ ಅವರು ಮಾರುತಿ ಕಂಪನಿಯನ್ನು ಉಡುಗೊರೆಯಾಗಿ ಹೇಗೆ ನೀಡಿದರು ಎಂಬುದನ್ನು ಸೋನಿಯಾ ಜೀ ಅವರು ತಮ್ಮ ಪುಸ್ತಕದಲ್ಲಿ ವಿವರಿಸಲಿ ಎಂದು ನಿಶಿಕಾಂತ್ ದುಬೆ ಒತ್ತಾಯಿಸಿದ್ದಾರೆ(ಏಜೆನ್ಸೀಸ್).