

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೀಡಿರುವ "ರಾಜಿ ಮಾಡಿಕೊಂಡ ಪ್ರಧಾನಿ" ಪ್ರಧಾನಿ ಎಂಬ ಹೇಳಿಕೆಗೆ ಕೇಂದ್ರ ಸಚಿವ ಕಿರಣ್ ರಿಜಿಜು ತಿರುಗೇಟು ನೀಡಿದ್ದು, ಈ ಸಂಬಂಧ ಕಾಂಗ್ರೆಸ್ ಪಕ್ಷಕ್ಕೆ ನಾಲ್ಕು ನೇರ ಪ್ರಶ್ನೆಗಳನ್ನು ಮುಂದಿಟ್ಟಿರುವ ರಿಜಿಜು, 1962ರ ಚೀನಾ ಯುದ್ಧದ ಸೋಲಿನ ಅವಮಾನಕ್ಕೆ ಕಾಂಗ್ರೆಸ್ ಕ್ಷಮೆಯಾಚಿಸುತ್ತದೆಯೇ ಮತ್ತು ದೇಶವನ್ನು ಬಡತನದಲ್ಲೇ ಏಕೆ ಇರಿಸಲಾಗಿತ್ತು ಎಂದು ಪ್ರಶ್ನಿಸಿದ್ದಾರೆ.
ಶನಿವಾರ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಸಚಿವ ಕಿರಣ್ ರಿಜಿಜು, ಕಾಂಗ್ರೆಸ್ ಪಕ್ಷವು ಈ ನಾಲ್ಕು ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದು ಆಗ್ರಹಿಸಿದ್ದಾರೆ.
1962ರಲ್ಲಿ ನನ್ನ ಗ್ರಾಮವನ್ನು ಚೀನಾ ಆಕ್ರಮಿಸಿಕೊಂಡಿತ್ತು. 1962ರ ಆ ಅವಮಾನಕ್ಕೆ ಕಾಂಗ್ರೆಸ್ ಕ್ಷಮೆಯಾಚಿಸುತ್ತದೆಯೇ?
ಕಾಂಗ್ರೆಸ್ ಭಾರತವನ್ನು ಬಡ ರಾಷ್ಟ್ರವಾಗಿ ಉಳಿಸಿದ್ದೇಕೆ ಏಕೆ?
ಭಾರತವನ್ನು ಹಾವಾಡಿಗರ ದೇಶ ಎಂದು ಏಕೆ ಕರೆಯಲಾಗುತ್ತಿತ್ತು?"
ಭಾರತದ ಆರ್ಥಿಕತೆಯನ್ನು ಹಿಂದೂ ಬೆಳವಣಿಗೆ ದರ (Hindu rate of growth) ಎಂದು ಏಕೆ ಅವಮಾನಿಸಲಾಯಿತು? ಎಂದು ರಿಜಿಜು ಪ್ರಶ್ನಿಸಿದ್ದಾರೆ.
ಗುರುವಾರ ಚೀನಾದಲ್ಲಿ ನಡೆದ ಅಪೆಕ್ (APEC) ಶೃಂಗಸಭೆಯ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವೆ ತ್ರಿಪಕ್ಷೀಯ ಸಭೆ ನಡೆದಿತ್ತು. ಈ ಸಭೆಯ ಕುರಿತು ಪ್ರತಿಕ್ರಿಯಿಸಿದ್ದ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಅವರನ್ನು ಟೀಕಿಸಿದ್ದರು.
ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದ ರಾಹುಲ್ ಗಾಂಧಿ, ಒಂದು ವೇಳೆ ಕಾಂಗ್ರೆಸ್ ಅಧಿಕಾರದಲ್ಲಿದ್ದರೆ, ಭಾರತದ ಪ್ರಧಾನಮಂತ್ರಿ ಈ ವೇದಿಕೆಯಲ್ಲಿ ಕುಳಿತಿರುತ್ತಿದ್ದರು. ರಾಜಿ ಮಾಡಿಕೊಂಡ ಪ್ರಧಾನಿಗೆ ಎಂದಿಗೂ ಇಂತಹ ವೇದಿಕೆಯಲ್ಲಿ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಈ ಹೇಳಿಕೆಯು ಆಡಳಿತಾರೂಢ ಬಿಜೆಪಿ ಮತ್ತು ವಿಪಕ್ಷ ಕಾಂಗ್ರೆಸ್ ನಡುವೆ ತೀವ್ರ ವಾಕ್ಸಮರಕ್ಕೆ ಕಾರಣವಾಗಿದೆ.
ಇದಕ್ಕೂ ಮುನ್ನ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ್ದ ಕಿರಣ್ ರಿಜಿಜು, ರಾಹುಲ್ ಗಾಂಧಿ ಅವರು ದೇಶದ ಒಳಗಿರಲಿ ಅಥವಾ ವಿದೇಶ ಪ್ರವಾಸದಲ್ಲಿರಲಿ, ಭಾರತದ ವಿರುದ್ಧ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಬೇಕು ಎಂದು ತಾಕೀತು ಮಾಡಿದ್ದರು.
ರಾಹುಲ್ ಗಾಂಧಿ ಅವರು ವಿದೇಶಿ ನೆಲದ ಭಾರತ ವಿರೋಧಿ ಶಕ್ತಿಗಳೊಂದಿಗೆ ಕೈಜೋಡಿಸಿದ್ದಾರೆ ಹಾಗೂ ಭಾರತದ ಪ್ರಜಾಪ್ರಭುತ್ವ ಮತ್ತು ಆರ್ಥಿಕತೆಯ ಸ್ಥಿತಿಯ ಬಗ್ಗೆ ಸುಳ್ಳುಗಳನ್ನು ಹರಡುತ್ತಿದ್ದಾರೆ ಎಂದು ರಿಜಿಜು ಆರೋಪಿಸಿದ್ದು, ವಿದೇಶದಲ್ಲಿರುವ ದೇಶ ವಿರೋಧಿ ಶಕ್ತಿಗಳು ರಾಹುಲ್ ಗಾಂಧಿ ಅವರನ್ನು ಪ್ರಚೋದಿಸುತ್ತಿರುವ ಸಾಧ್ಯತೆಯೂ ಇದೆ. ಭಾರತ, ಇಲ್ಲಿನ ನಾಗರಿಕತೆ, ಸಂಪ್ರದಾಯಗಳು, ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಹೇಗೆ ದುರ್ಬಲಗೊಳಿಸಬೇಕು ಎಂಬುದರತ್ತ ಗಮನಹರಿಸುವ ಮೂಲಕ ಅವರು ಸ್ವತಃ ರಾಷ್ಟ್ರ ವಿರೋಧಿ ಮನಸ್ಥಿತಿಯನ್ನು ಬೆಳೆಸಿಕೊಂಡಿದ್ದಾರೆ. ಕಾಂಗ್ರೆಸ್ ನಾಯಕ ಈಗಾಗಲೇ ಈ ಸಾಂವಿಧಾನಿಕ ಸಂಸ್ಥೆಗಳ ವಿರುದ್ಧ ಸಮರ ಸಾರಿದ್ದಾರೆ ಎಂದು ಸಚಿವರು ಗಂಭೀರ ಆರೋಪ ಮಾಡಿದರು.
ರಾಹುಲ್ ಗಾಂಧಿ ಅವರ ಟೀಕೆಗೆ ಬಿಜೆಪಿಯ ಹಲವು ನಾಯಕರು ತಿರುಗೇಟು ನೀಡಿದ್ದು, ಜಾಗತಿಕ ರಾಜಕೀಯದ ಬಗ್ಗೆ ವಿಪಕ್ಷ ನಾಯಕರಿಗೆ ಯಾವುದೇ ಅರಿವಿಲ್ಲ ಎಂದು ಟೀಕಿಸಿದ್ದಾರೆ.
ಇದೇ ವೇಳೆ ಬಿಜೆಪಿ ತನ್ನ ಅಧಿಕೃತ ಹಾಗೂ ನಾಯಕರ ಸಾಮಾಜಿಕ ಜಾಲತಾಣ ಖಾತೆಗಳ ಮೂಲಕ ರಾಹುಲ್ ಗಾಂಧಿ ಅವರನ್ನು ವ್ಯಂಗ್ಯವಾಡಿದೆ. ಚೀನಾದಲ್ಲಿ ನಡೆದ ತ್ರಿಪಕ್ಷೀಯ ಸಭೆಯ ವೇಳೆ ರಾಹುಲ್ ಗಾಂಧಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಡ್ರಿಂಕ್ಸ್ ನೀಡುತ್ತಿರುವುದನ್ನು ಬಿಂಬಿಸುವ ಎಐ ಚಿತ್ರವನ್ನು ಹಂಚಿಕೊಳ್ಳಲಾಗಿದೆ. ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ಅವರು ಈ ಚಿತ್ರವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿ, ಕುಛ್ ಐಸೆ (ಬಹುಶಃ ಹೀಗೆ ಇರುತ್ತಿತ್ತು) ಎಂಬ ಶೀರ್ಷಿಕೆಯೊಂದಿಗೆ ನಗುವ ಮತ್ತು ಬೆಂಕಿಯ ಎಮೋಜಿಗಳನ್ನು ಬಳಸಿ ರಾಹುಲ್ ಗಾಂಧಿ ಕಾಲೆಳೆದಿದ್ದಾರೆ(ಏಜೆನ್ಸೀಸ್).