ದೇಶ

ಬಾಬರಿ ಮಸೀದಿ ಧ್ವಂಸ ಕಂಡು ಅತ್ತಿದ್ದೆ ಎಂದ ಸೋನಿಯಾ ಗಾಂಧಿ: ಹಿಂದು ವಿರೋಧಿ ನೀತಿ ಅಂದ್ರು ಕೇಸರಿ ಕಲಿಗಳು! | Sonia Gandhi

ನವದೆಹಲಿ: 1992ರ ಡಿಸೆಂಬರ್‌ನಲ್ಲಿ ನಡೆದ ಬಾಬರಿ ಮಸೀದಿ ಧ್ವಂಸ ಘಟನೆಯನ್ನು ಟಿವಿಯಲ್ಲಿ ವೀಕ್ಷಿಸುತ್ತಿದ್ದಾಗ ತಾವು ಕಣ್ಣೀರಿಟ್ಟಿದ್ದಾಗಿ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ನೆನಪಿಸಿಕೊಂಡಿದ್ದಾರೆ. ದಿ ಗಾರ್ಡಿಯನ್ ಪತ್ರಿಕೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಈ ವಿಷಯ ಹಂಚಿಕೊಂಡಿರುವ ಅವರು, ಈ ಘಟನೆಯು ಭಾರತ ತನ್ನ ಜಾತ್ಯತೀತ ಸ್ವರೂಪವನ್ನು ಉಳಿಸಿಕೊಳ್ಳಲು ಸುದೀರ್ಘ ಹೋರಾಟ ನಡೆಸಬೇಕಾಗುತ್ತದೆ ಎಂಬುದನ್ನು ತಮಗೆ ಅರಿವು ಮಾಡಿಕೊಟ್ಟಿತು ಎಂದು ಹೇಳಿದ್ದಾರೆ.

ತಮ್ಮ ಮುಂಬರುವ ಆತ್ಮಕಥೆ ಬಿಲಾಂಗಿಂಗ್: ಎ ಜರ್ನಿ ಆಫ್ ಲವ್ (Belonging: A Journey of Love) ಬಿಡುಗಡೆಯ ಹಿನ್ನೆಲೆಯಲ್ಲಿ ಗಾರ್ಡಿಯನ್‌ನ ಹನ್ನಾ ಎಲಿಸ್-ಪೀಟರ್ಸನ್ ಅವರೊಂದಿಗೆ ಸಂವಾದ ನಡೆಸಿದ ಸೋನಿಯಾ ಗಾಂಧಿ, ರಾಮ ಜನ್ಮಭೂಮಿ ಚಳವಳಿ ತೀವ್ರಗೊಳ್ಳುತ್ತಿದ್ದಂತೆ ಆ ಸಮಯದಲ್ಲಿ ಉತ್ತರ ಭಾರತದಲ್ಲಿ ಸಂಭವಿಸುತ್ತಿದ್ದ ರಾಜಕೀಯ ಮತ್ತು ಸಾಮಾಜಿಕ ಬದಲಾವಣೆಗಳ ಕುರಿತಾದ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಬಿಜೆಪಿ ನಾಯಕರು ಸೇರಿದಂತೆ ಚಳವಳಿಯ ಇತರ ಬೆಂಬಲಿಗರಿಂದ ನಡೆದ ಮಸೀದಿ ಧ್ವಂಸವನ್ನು ಸ್ಮರಿಸಿದ ಸೋನಿಯಾ, ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರೂ ಮತ್ತು ಅವರ ಸಹೋದ್ಯೋಗಿಗಳು ಕಲ್ಪಿಸಿಕೊಂಡಿದ್ದ ಜಾತ್ಯತೀತ ಆದರ್ಶಗಳನ್ನು ರಕ್ಷಿಸುವಲ್ಲಿ ದೇಶವು ಅತ್ಯಂತ ಕಠಿಣ ಹಂತವನ್ನು ಪ್ರವೇಶಿಸುತ್ತಿದೆ ಎಂಬುದು ತಮಗೆ ಆ ಕ್ಷಣದಲ್ಲೇ ಅರಿವಾಗಿತ್ತು ಎಂದಿದ್ದಾರೆ. ಇದೇ ವೇಳೆ, ಬಿಜೆಪಿಯ ಸಿದ್ಧಾಂತ ಮತ್ತು ಅದರ ತೀವ್ರ ಹಿಂದುತ್ವ ರಾಜಕೀಯದ ಬೆಳವಣಿಗೆಗೆ ಕಾಂಗ್ರೆಸ್ ಪಕ್ಷವೂ ಒಂದಷ್ಟು ಮಟ್ಟಿಗೆ ಕಾರಣವಾಗಿದೆ ಎಂಬುದನ್ನು ಒಪ್ಪಿಕೊಂಡಿದ್ದು, ನಾವು ಹಲವು ವಿಷಯಗಳಲ್ಲಿ ತೀರಾ ಅಸಡ್ಡೆ ತೋರಿದೆವು ಅಥವಾ ನಿರ್ಲಕ್ಷ್ಯದ ಧೋರಣೆಯನ್ನು ತಳೆದಿದ್ದೆವು ಎಂದು ನನಗನ್ನಿಸುತ್ತದೆ ಎಂದು ಸೋನಿಯಾ ಗಾಂಧಿ ತಿಳಿಸಿದ್ದಾರೆ.

ಸೋನಿಯಾ ವಿರುದ್ಧ ಬಿಜೆಪಿ ವಾಗ್ದಾಳಿ!

ಸೋನಿಯಾ ಗಾಂಧಿ ಅವರ ಈ ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದ್ದು, ವಕ್ತಾರ ಪ್ರದೀಪ್​ ಭಂಡಾರಿ ಅವರು ಕಾಂಗ್ರೆಸ್ ಪಕ್ಷವನ್ನು ಹಿಂದು ವಿರೋಧಿ ಎಂದು ಕರೆದಿದ್ದಾರೆ. ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಭಂಡಾರಿ, ಸೋನಿಯಾ ಗಾಂಧಿ ಬಾಬರಿ ಮಸೀದಿಗಾಗಿ ಕಣ್ಣೀರು ಸುರಿಸುತ್ತಾರೆ, ಬಟ್ಲಾ ಹೌಸ್ ಘಟನೆಗೂ ಕಣ್ಣೀರು ಸುರಿಸುತ್ತಾರೆ. ಕಾಂಗ್ರೆಸ್ ಪಕ್ಷವು ಬಾಬರ್ ಬೆಂಬಲಿಗ ಮತ್ತು ಶ್ರೀರಾಮನ ವಿರೋಧಿ ಎಂಬುದನ್ನು ಕೈ ನಾಯಕರು ಪದೇ ಪದೇ ತಮ್ಮ ನಡುವಳಿಕೆಯಿಂದ ಸಾಬೀತು ಮಾಡುತ್ತಲೇ ಇದ್ದಾರೆ. ಮತ್ತೊಮ್ಮೆ ಸೋನಿಯಾ ಗಾಂಧಿ ಅವರ ಈ ವೋಟ್ ಬ್ಯಾಂಕ್ ರಾಜಕೀಯ ನಿರಂತರವಾಗಿ ಹಿನ್ನಡೆ ಅನುಭವಿಸುತ್ತಲೇ ಇರುತ್ತದೆ ನೋಡುತ್ತಿರಿ ಎಂದು ಅವರು ಸವಾಲು ಹಾಕಿದ್ದಾರೆ.

1992ರ ಡಿಸೆಂಬರ್ 6 ರಂದು ಅಯೋಧ್ಯೆಯಲ್ಲಿ ಕರಸೇವಕರಿಂದ ಈ ಕಟ್ಟಡ ಧ್ವಂಸಗೊಂಡಿತ್ತು. ಈ ಘಟನೆಯು ಆ ಬಳಿಕ ದೇಶಾದ್ಯಂತ ಕೋಮು ಗಲಭೆಗಳಿಗೆ ಕಾರಣವಾಗಿತ್ತು. ಮೂರು ದಶಕಗಳ ನಂತರ, 2024ರ ಜನವರಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅದೇ ಸ್ಥಳದಲ್ಲಿ ಭವ್ಯ ರಾಮಮಂದಿರವನ್ನು ಉದ್ಘಾಟಿಸುವ ಮೂಲಕ ಬಿಜೆಪಿಯ ದಶಕಗಳ ಭರವಸೆಯನ್ನು ಈಡೇರಿಸಿದ್ದರು(ಏಜೆನ್ಸೀಸ್​).