'ದೃಶ್ಯಂ 3' ನೋಡಿ ತಂದೆಗೆ ಚೂರಿ ಇರಿದು ಕೊಂದ ಮಗರಾಯ! ಹೃದಯ ಇಲ್ಲದ ಪಾಪಿ ಸಿಕ್ಕಿಬಿದ್ದಿದ್ದೇ ರೋಚಕ | Drishyam 3 
ದೇಶ

'ದೃಶ್ಯಂ 3' ನೋಡಿ ತಂದೆಗೆ ಚೂರಿ ಇರಿದು ಕೊಂದ ಮಗರಾಯ! ಹೃದಯ ಇಲ್ಲದ ಪಾಪಿ ಸಿಕ್ಕಿಬಿದ್ದಿದ್ದೇ ರೋಚಕ | Drishyam 3

ಸಿನಿಮಾ ನೋಡಿದ ಕೂಡಲೇ ಗುಜರಾತ್‌ನ ಸೂರತ್‌ನಿಂದ ಬಿಹಾರದ ಸಮಸ್ತಿಪುರಕ್ಕೆ ಪ್ರಯಾಣಿಸಿ, ನಿದ್ರೆಗೆ ಜಾರಿದ್ದ ತಂದೆಯನ್ನು ಕೊಡಲಿಯಿಂದ ಕಡಿದು ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದ. ಆದ್ರೆ, ಅವನ ಒಂದೇ ಒಂದು ಫೋನ್​ ಕಾಲ್​ನಿಂದ ಕಡೆಗೂ ಖಾಕಿ ಕೈಗೆ ಸಿಕ್ಕಿಬಿದ್ದಿದ್ದಾನೆ.

ಪಾಟ್ನಾ: ಬಾಲಿವುಡ್​ನ 'ದೃಶ್ಯಂ 3' (Drishyam 3) ಸಿನಿಮಾ ನೋಡಿದ ವ್ಯಕ್ತಿಯೊಬ್ಬ, ಬರೋಬ್ಬರಿ 2 ಸಾವಿರ ಕಿ.ಮೀ ದೂರ ಪ್ರಯಾಣಿಸಿ ತನ್ನ ತಂದೆಯನ್ನು ಬರ್ಬರವಾಗಿ ಇರಿದು ಕೊಂದ ಘಟನೆ ಇದೀಗ ತಡವಾಗಿ ಆರೋಪಿ ಸೆರೆಯಾದ ಬಳಿಕ ಬೆಳಕಿಗೆ ಬಂದಿದೆ.

ಚಿತ್ರಮಂದಿರಗಳಲ್ಲಿ ಉತ್ತಮ ಗಳಿಕೆ ಕಾಣುತ್ತಿರುವ ದೃಶ್ಯಂ-3 ಚಿತ್ರವನ್ನು ನೋಡಿದ ನಂತರ ತನ್ನ ತಂದೆಯನ್ನು ಕೊಲೆಗೈಯಲು 2,000 ಕಿ.ಮೀ ಪ್ರಯಾಣಿಸಿದ ಹೃದಯ ಇಲ್ಲದ ಪಾಪಿ ಮಗರಾಯ, ಸಿನಿಮಾ ನೋಡಿದ ಕೂಡಲೇ ಗುಜರಾತ್‌ನ ಸೂರತ್‌ನಿಂದ ಬಿಹಾರದ ಸಮಸ್ತಿಪುರಕ್ಕೆ ಪ್ರಯಾಣಿಸಿ, ನಿದ್ರೆಗೆ ಜಾರಿದ್ದ ತಂದೆಯನ್ನು ಕೊಡಲಿಯಿಂದ ಕಡಿದು ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದ. ಆದ್ರೆ, ಅವನ ಒಂದೇ ಒಂದು ಫೋನ್​ ಕಾಲ್​ನಿಂದ ಕಡೆಗೂ ಖಾಕಿ ಕೈಗೆ ಸಿಕ್ಕಿಬಿದ್ದಿದ್ದಾನೆ.

ಈ ಘಟನೆ ಜು.26ರ ರಾತ್ರಿ ಬಿಹಾರದ ಸಮಸ್ತಿಪುರ ಜಿಲ್ಲೆಯ ದರ್ವಾ ಗ್ರಾಮದಲ್ಲಿ ನಡೆದಿದೆ. ಮನೆಯ ಹೊರಗೆ ಮಲಗಿದ್ದ ರಘುವೀರ್ ಸಾಹ್ನಿ (50) ಎಂಬುವವರನ್ನು ಮಗ ಶಿವಶಂಕರ್ (26) ಕೊಡಲಿಯಿಂದ ಕಡಿದು ಕೊಲೆ ಮಾಡಿ, ರಾತ್ರೋ ರಾತ್ರಿ ಸ್ಥಳದಿಂದ ಪರಾರಿಯಾಗಿದ್ದ. ಎಲ್ಲ ಸಾಕ್ಷ್ಯಗಳನ್ನು ನಾಶಪಡಿಸಿದ್ದೇನೆ ಎಂಬ ಬಲವಾದ ನಂಬಿಕೆಯ ಮೇಲೆ ಆತ ವಾಪಾಸ್​ ಸೂರತ್‌ಗೆ ಬರುತ್ತಿದ್ದ ವೇಳೆ ತನ್ನ ಪತ್ನಿಗೆ ಮಾಡಿದ ಒಂದೇ ಒಂದು ಫೋನ್ ಕರೆಯೇ ಆರೋಪಿಯ ಇಡೀ ಪ್ಲ್ಯಾನ್​ ಅನ್ನು ತಲೆಕೆಳಗಾಗಿಸಿತು ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

ಅಂಥ ದ್ವೇಷ ಏನ್ನಿತ್ತು?

ತಂದೆಯಿಂದ ಪ್ರತ್ಯೇಕವಾಗಿ ಸೂರತ್‌ನಲ್ಲಿ ವಾಸವಿದ್ದ ಶಿವಶಂಕರ್‌, ತನ್ನ ತಂದೆಯ ಜತೆ ಒಳ್ಳೆಯ ಸಂಬಂಧ ಹೊಂದಿರಲಿಲ್ಲ ಎನ್ನಲಾಗಿದೆ. ಕೌಟುಂಬಿಕ ಆಸ್ತಿಯ ವಿಚಾರಕ್ಕಾಗಿ ಅಪ್ಪ-ಮಗನ ನಡುವೆ ಹಲವು ಬಾರಿ ಜಗಳಗಳು ನಡೆದಿತ್ತು. ಈ ಸಿಟ್ಟು, ದ್ವೇಷವೇ ಕೊಲೆಗೆ ಕಾರಣವಾಯಿತು. ಸಿನಿಮಾದಲ್ಲಿನ ಕಥೆಯಿಂದ ಪ್ರೇರಣೆಗೊಂಡು, ಹತ್ಯೆಗೆ ಸಂಚು ರೂಪಿಸಿ ಮತ್ತು ಡಿಜಿಟಲ್ ಸಾಕ್ಷ್ಯಗಳನ್ನು ಆತ ನಾಶಪಡಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಹತ್ಯೆಯ ಬಳಿಕ ಪಟ್ಟೋರಿ ರೈಲ್ವೆ ನಿಲ್ದಾಣ ತಲುಪಿದ ಶಿವಶಂಕರ್, ಸ್ವಿಚ್ ಆಫ್ ಮಾಡಿದ್ದ ಫೋನ್ ಅನ್ನು ಆನ್​ ಮಾಡಿ ಹೆಂಡತಿಗೆ ಕರೆ ಮಾಡಿದ್ದೇ ಆತನಿಗೆ ಮುಳುವಾಯಿತು. ಕೊಲೆಯಾದ ತಂದೆಯ ಅಂತ್ಯಕ್ರಿಯೆಗೂ ಬಾರದ ಮಗನ ಬಗ್ಗೆ ಪೊಲೀಸರಲ್ಲಿ ಮೂಡಿದ ಅನುಮಾನ ಸತ್ಯಕ್ಕೆ ಹತ್ತಿರವಾಯಿತು. ಎಲ್ಲ ಚುಕ್ಕೆಗಳನ್ನು ಕೂಡಿಸಿದ ಸೈಬರ್ ಕ್ರೈಮ್ ಪೊಲೀಸರು, ಕೊಲೆಯಾದ ದಿನ ಆರೋಪಿಯ ಮೊಬೈಲ್ ಲೋಕೇಶನ್ ಪರಿಶೀಲಿಸಿದಾಗ, ಶಿವಶಂಕರ್​ ಫೋನ್ ಪಟ್ಟೋರಿ ಸ್ಟೇಷನ್ ವ್ಯಾಪ್ತಿಯಲ್ಲಿತ್ತು. ಆ ಬಳಿಕ 36 ಗಂಟೆಗಳ ಬಳಿಕ ಸೂರತ್‌ನಲ್ಲಿ ಆನ್ ಆಗಿರುವುದು ಸ್ಪಷ್ಟವಾಗಿದೆ.

ಈ ಸಾಕ್ಷ್ಯಗಳ ಆಧಾರದ ಮೇಲೆ ವಿಚಾರಣೆಗೆ ಒಳಪಡಿಸಿದಾಗ ಆತ ಸತ್ಯ ಬಾಯ್ಬಿಟ್ಟಿದ್ದಾನೆ. ಸದ್ಯ ಶಿವಶಂಕರ್​ನನ್ನು ಬಂಧಿಸಿರುವ ಪೊಲೀಸರು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ,(ಏಜೆನ್ಸೀಸ್).