ವಾರಣಾಸಿಯ ಬನಾರಸ್ ರೈಲ್ವೆ ನಿಲ್ದಾಣದಲ್ಲಿ ವಶಪಡಿಸಿಕೊಂಡ 23 ಅಪರೂಪದ ಇಂಡಿಯನ್ ಸಾಫ್ಟ್‌ಶೆಲ್ ಆಮೆಗಳು ಮತ್ತು ಬಂಧಿತ ಇಬ್ಬರು ಮಹಿಳಾ ಆರೋಪಿಗಳು. 
ದೇಶ

ಲಕ್ಷಾಂತರ ಬೆಲೆಯ ಜೀವಂತ ಆಮೆಗಳ ಕಳ್ಳಸಾಗಣೆ: ಬನಾರಸ್ ರೈಲು ನಿಲ್ದಾಣದಲ್ಲಿ ಇಬ್ಬರು ಮಹಿಳೆಯರು ಅರೆಸ್ಟ್​! Turtle Smuggling

ವಾರಣಾಸಿ: ಉತ್ತರ ಪ್ರದೇಶದಿಂದ ಪಶ್ಚಿಮ ಬಂಗಾಳಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ ಬರೋಬ್ಬರಿ 7 ಲಕ್ಷ ರೂಪಾಯಿ ಮೌಲ್ಯದ 23 ಅಪರೂಪದ ‘ಇಂಡಿಯನ್ ಸಾಫ್ಟ್‌ಶೆಲ್’ ಜಾತಿಯ ಜೀವಂತ ಆಮೆಗಳನ್ನು ವಾರಣಾಸಿಯ ಬನಾರಸ್ ರೈಲ್ವೆ ನಿಲ್ದಾಣದಲ್ಲಿ ವಶಪಡಿಸಿಕೊಳ್ಳಲಾಗಿದೆ.

ವನ್ಯಜೀವಿ ಕಳ್ಳಸಾಗಣೆ ತಡೆಯಲು ನಡೆಸಲಾಗುತ್ತಿರುವ ಆಪರೇಷನ್ ವೈಲೆಪ್ (Operation Wilep) ಅಡಿಯಲ್ಲಿ ರೈಲ್ವೆ ರಕ್ಷಣಾ ಪಡೆ (RPF), ಸರ್ಕಾರಿ ರೈಲ್ವೆ ಪೊಲೀಸ್ (GRP) ಮತ್ತು ಅಪರಾಧ ಗುಪ್ತಚರ ವಿಭಾಗ (CIB) ಜಂಟಿಯಾಗಿ ಈ ಭರ್ಜರಿ ಕಾರ್ಯಾಚರಣೆ ನಡೆಸಿವೆ.

ಬುಧವಾರ (ನ. 18) ನಿಲ್ದಾಣದ ಎರಡನೇ ಪ್ರವೇಶ ದ್ವಾರದ ಬಳಿಯಿರುವ ನಂದಿ ಪಾರ್ಕ್ ಸಮೀಪ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಇಬ್ಬರು ಮಹಿಳೆಯರನ್ನು ತಡೆದು ಪರಿಶೀಲಿಸಿದಾಗ ಈ ಕಳ್ಳಸಾಗಣೆ ಜಾಲ ಬಯಲಾಗಿದೆ.

ಬಂಧಿತ ಮಹಿಳೆಯರು ಯಾರು?

ಪೊಲೀಸರ ಬಲೆಗೆ ಬಿದ್ದ ಆರೋಪಿಗಳನ್ನು ಉತ್ತರ ಪ್ರದೇಶದ ಸುಲ್ತಾನ್‌ಪುರ ಜಿಲ್ಲೆಯ ಪಾಕ್ರಿ ಭಾದರ್ ಗ್ರಾಮದ ನಿವಾಸಿಗಳಾದ 25 ವರ್ಷದ ಮನೀಷಾ ಮತ್ತು 28 ವರ್ಷದ ಸಪ್ನಾ ಎಂದು ಗುರುತಿಸಲಾಗಿದೆ. ಯಾವುದೇ ಪರವಾನಗಿ ಇಲ್ಲದೆ ಇವರಿಬ್ಬರು ಅಪರೂಪದ ಪ್ರಭೇದದ ಆಮೆಗಳನ್ನು ಬ್ಯಾಗ್‌ಗಳಲ್ಲಿ ತುಂಬಿಕೊಂಡು ಪಶ್ಚಿಮ ಬಂಗಾಳಕ್ಕೆ ಸಾಗಿಸಲು ಹೊಂಚು ಹಾಕಿದ್ದರು ಎಂದು ವಾರಣಾಸಿಯ ಪ್ರಾದೇಶಿಕ ಅರಣ್ಯಾಧಿಕಾರಿ ರಾಜ್‌ಪಾಲ್ ಗೌತಮ್ ತಿಳಿಸಿದ್ದಾರೆ.

ಆಮೆಗಳನ್ನು ಹಿಡಿದಿದ್ದೆಲ್ಲಿ? ಸಾಗಿಸುತ್ತಿದ್ದುದು ಏಕೆ?

ಪೊಲೀಸರು ಮತ್ತು ಅರಣ್ಯಾಧಿಕಾರಿಗಳು ತೀವ್ರ ವಿಚಾರಣೆ ನಡೆಸಿದಾಗ ಮಹಿಳೆಯರು ಅಸಲಿ ಸತ್ಯವನ್ನು ಬಾಯ್ಬಿಟ್ಟಿದ್ದಾರೆ. ಉತ್ತರ ಪ್ರದೇಶದ ಸುಲ್ತಾನ್‌ಪುರ ಮತ್ತು ಅಮೇಥಿ ಜಿಲ್ಲೆಗಳ ಕೆರೆಗಳಿಂದ ಈ ಆಮೆಗಳನ್ನು ಹಿಡಿದಿರುವುದಾಗಿ ಅವರು ಒಪ್ಪಿಕೊಂಡಿದ್ದಾರೆ.

ಅಪರೂಪದ ಆಮೆಗಳಿಗೆ ಕಾಳಸಂತೆಯಲ್ಲಿ ಭಾರಿ ಬೇಡಿಕೆಯಿದೆ. ಅರಣ್ಯ ಇಲಾಖೆಯ ಮಾಹಿತಿಯ ಪ್ರಕಾರ, ಈ ಆಮೆಗಳನ್ನು ಮಾಂಸಕ್ಕಾಗಿ ಕೆಲವು ವಿಶೇಷ ಔಷಧಿಗಳ ತಯಾರಿಕೆಗೆ ಮತ್ತು ಮುಖ್ಯವಾಗಿ ಮಾಟ-ಮಂತ್ರ ಹಾಗೂ ತಾಂತ್ರಿಕ ವಿಧಿವಿಧಾನಗಳಿಗೆ ಬಳಸಲಾಗುತ್ತದೆ. ಇದೇ ಕಾರಣಕ್ಕೆ ಪಶ್ಚಿಮ ಬಂಗಾಳದಲ್ಲಿ ಇವುಗಳಿಗೆ ಲಕ್ಷಾಂತರ ರೂಪಾಯಿ ಬೆಲೆ ಸಿಗುತ್ತದೆ ಎಂದು ತಿಳಿದುಬಂದಿದೆ.

ಸದ್ಯ ವಶಪಡಿಸಿಕೊಂಡ ಎಲ್ಲಾ 23 ಆಮೆಗಳು ಸುರಕ್ಷಿತವಾಗಿ ಮತ್ತು ಜೀವಂತವಾಗಿವೆ. ಬಂಧಿತ ಇಬ್ಬರೂ ಮಹಿಳೆಯರನ್ನು ಹಾಗೂ ಆಮೆಗಳನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ, (ಏಜೆನ್ಸೀಸ್​).