ಕಾಂಗ್ರೆಸ್​ ವಿರುದ್ಧ ಹರಿಹಾಯ್ದ ಸ್ಮೃತಿ ಇರಾನಿ! 
ದೇಶ

ಉಪಚುನಾವಣೆ ಫಲಿತಾಂಶ: ಗುಂಪುಗಾರಿಕೆಗೆ ಪ್ರಜಾಪ್ರಭುತ್ವದ ಸ್ಪಷ್ಟ ಉತ್ತರ ಎನ್ನುತ್ತಾ ಕಾಂಗ್ರೆಸ್​ ವಿರುದ್ಧ ಹರಿಹಾಯ್ದ ಸ್ಮೃತಿ ಇರಾನಿ! | Smriti Irani

ನವದೆಹಲಿ: ದೇಶದ ವಿವಿಧ ಭಾಗಗಳಲ್ಲಿ ನಡೆದ ಉಪಚುನಾವಣೆಗಳಲ್ಲಿ ಬಿಜೆಪಿ ಭರ್ಜರಿ ಜಯ ಗಳಿಸಿದ್ದು, ಈ ಗೆಲುವಿನ ಬಗ್ಗೆ ಮಾತನಾಡಿರುವ ಬಿಜೆಪಿ ಹಿರಿಯ ನಾಯಕಿ ಸ್ಮೃತಿ ಇರಾನಿ (Smriti Irani), ವಿರೋಧ ಪಕ್ಷಗಳ ಗುಂಪುಗಾರಿಕೆಗೆ ಪ್ರಜಾಪ್ರಭುತ್ವವು ತಕ್ಕ ಉತ್ತರ ನೀಡಿದೆ ಎಂದು ಹೇಳಿದ್ದಾರೆ.

ನವದೆಹಲಿ: ದೇಶದ ವಿವಿಧ ಭಾಗಗಳಲ್ಲಿ ನಡೆದ ಉಪಚುನಾವಣೆಗಳಲ್ಲಿ ಬಿಜೆಪಿ ಭರ್ಜರಿ ಜಯ ಗಳಿಸಿದ್ದು, ಈ ಗೆಲುವಿನ ಬಗ್ಗೆ ಮಾತನಾಡಿರುವ ಬಿಜೆಪಿ ಹಿರಿಯ ನಾಯಕಿ ಸ್ಮೃತಿ ಇರಾನಿ (Smriti Irani), ವಿರೋಧ ಪಕ್ಷಗಳ ಗುಂಪುಗಾರಿಕೆಗೆ ಪ್ರಜಾಪ್ರಭುತ್ವವು ತಕ್ಕ ಉತ್ತರ ನೀಡಿದೆ ಎಂದು ಹೇಳಿದ್ದಾರೆ.

ಇಂದು ಡೆಮಾಕ್ರಸಿ, ಮೋಬ್ರಾಕ್ರಸಿಗೆ ತಕ್ಕ ಉತ್ತರ ನೀಡಿದೆ. ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿರುವುದು ನಮಗೆ ಅತ್ಯಂತ ಸಂತಸ ತಂದಿದೆ. ಬಿಜೆಪಿ ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಪುದುಚೇರಿಯಲ್ಲೂ ಗೆಲುವು ಸಾಧಿಸಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ:ಯುಪಿ ರಾಜ್ಯಸಭಾ ಚುನಾವಣೆ: 8 ಸ್ಥಾನಗಳಲ್ಲಿ ಬಿಜೆಪಿ ಜಯಭೇರಿ, ಎಸ್‌ಪಿಗೆ 2 ಸೀಟ್​! | UP Rajya Sabha Elections

ತನ್ನದೇ ಸಂಸದರ ವಿರುದ್ಧ ಕ್ರಮ ಏಕಿಲ್ಲ..?

ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ತನ್ನದೇ ಸಂಸದರ ವಿರುದ್ಧ ಕಾಂಗ್ರೆಸ್ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಮೃತಿ ಇರಾನಿ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಪುರುಷಪ್ರಧಾನ ವ್ಯವಸ್ಥೆಯನ್ನು ಮಟ್ಟಹಾಕುವುದಾಗಿ ಮಾತನಾಡುತ್ತದೆ, ಆದರೆ ಲೈಂಗಿಕ ಕಿರುಕುಳ ಆರೋಪಗಳನ್ನು ಎದುರಿಸುತ್ತಿರುವ ತನ್ನದೇ ಆದ ಸಂಸದರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದರು. ಜೆಎನ್​ಯುನಿಂದ ಈಗ ವಜಾಗೊಂಡಿರುವ ಪ್ರಾಧ್ಯಾಪಕ ಹಾಗೂ ಕಾಂಗ್ರೆಸ್ ಸಂಸದ ಅಂಗೋಮ್ಚ ಬಿಮೋಲ್ ಅಕೋಯಿಜಮ್ ಅವರನ್ನು ಉಲ್ಲೇಖಿಸಿ ಇರಾನಿ ಈ ಆರೋಪ ಮಾಡಿದ್ದಾರೆ.

ನಂದಿಗ್ರಾಮದಲ್ಲಿ ಬಿಜೆಪಿ ದಿಗ್ವಿಜಯ!

ಪಶ್ಚಿಮ ಬಂಗಾಳದ ನಂದಿಗ್ರಾಮ ಮತ್ತು ಮುಸ್ಲಿಂ ಬಾಹುಳ್ಯದ ರೇಜಿನಗರ ಉಪಚುನಾವಣೆಗಳಲ್ಲಿ ಬಿಜೆಪಿ ಜಯಗಳಿಸಿದೆ. ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರ ಮಾಜಿ ಆಪ್ತ ಚಂದ್ರನಾಥ್ ರಾಥ್ ಅವರ ತಾಯಿ ಹಾಗೂ ಬಿಜೆಪಿ ಅಭ್ಯರ್ಥಿಯಾದ ಹಸಿನ್ ರಾಣಿ ರಾಥ್ ಅವರು, ತಮ್ಮ ಪ್ರತಿಸ್ಪರ್ಧಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್ ವಿರುದ್ಧ 1,22,753 ಮತಗಳ ಅಂತರದಿಂದ ( ಶೇ. 75 ರಷ್ಟು) ಭರ್ಜರಿ ಜಯ ಸಾಧಿಸಿದ್ದಾರೆ.

ಕೇಂದ್ರ ಚುನಾವಣಾ ಆಯೋಗ ಹಂಚಿಕೊಂಡ ಮಾಹಿತಿಯ ಪ್ರಕಾರ, ರಾಥ್ ಅವರು 1,64,427 ಮತಗಳನ್ನು ಪಡೆದರೆ, ಮಿಲನ್ ಪ್ರಧಾನ್ ಅವರು 41,674 ಮತಗಳನ್ನು ಪಡೆದಿದ್ದಾರೆ. ಹಾಗೆಯೇ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ನಾಯಕ ಸಾಂತಿ ಗೋಪಾಲ್ ಗಿರಿ 5,779 ಮತಗಳನ್ನು ಮತ್ತು ಆಲ್ ಇಂಡಿಯಾ ಸೆಕ್ಯುಲರ್ ಫ್ರಂಟ್ (AISF) ನಾಯಕ ಅಲಿ ಮೊಹಮ್ಮದ್ ಸಬ್ಸೆ ಮಿರಾಜ್ ಖಾನ್ 1,607 ಮತಗಳನ್ನು ಪಡೆದಿದ್ದಾರೆ.

ಸುವೇಂದು ಅಧಿಕಾರಿ ಭದ್ರಕೋಟೆ ಈ ನಂದಿಗ್ರಾಮ!

ಪೂರ್ವ ಮೇದಿನಿಪುರ ಜಿಲ್ಲೆಯ ವ್ಯಾಪ್ತಿಗೆ ಬರುವ ಮತ್ತು ತಮ್ಲಿಕ್ ಲೋಕಸಭಾ ಕ್ಷೇತ್ರದ ಭಾಗವಾಗಿರುವ ನಂದಿಗ್ರಾಮವು ಸಿಎಂ ಅಧಿಕಾರಿ ಅವರ ಭದ್ರಕೋಟೆಯಾಗಿತ್ತು. ಅವರು ಇಲ್ಲಿ 2016, 2021 ಮತ್ತು 2026 ರಲ್ಲಿ ಮೂರು ಬಾರಿ ಗೆದ್ದಿದ್ದಾರೆ. ಆರು ತಿಂಗಳ ಹಿಂದೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಭವಾನಿಪುರ ಮತ್ತು ನಂದಿಗ್ರಾಮ ಎಂಬ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಿದ್ದ ಅಧಿಕಾರಿ ಎರಡರಲ್ಲೂ ಜಯಗಳಿಸಿದ್ದರು. ನಿಯಮದಂತೆ ಒಂದೇ ಕ್ಷೇತ್ರವನ್ನು ಉಳಿಸಿಕೊಳ್ಳಬೇಕಿದ್ದರಿಂದ ನಂದಿಗ್ರಾಮಕ್ಕೆ ರಾಜೀನಾಮೆ ನೀಡಿದ್ದರಿಂದ ಉಪಚುನಾವಣೆ ಎದುರಾಗಿತ್ತು.

ಟಿಎಂಸಿ ಅಭ್ಯರ್ಥಿ ಸಂಚಿತಾ ಪ್ರಧಾನ್ ದೇ ಅವರು ಸಿಎಂ ಅಧಿಕಾರಿ ಅವರೊಂದಿಗಿನ ಸಭೆಯ ನಂತರ ತಮ್ಮ ನಾಮಪತ್ರವನ್ನು ಹಿಂತೆಗೆದುಕೊಂಡಿದ್ದರು. ಇದಾದ ಬಳಿಕ, ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್ ಅವರನ್ನು ತೃಣಮೂಲ ಕಾಂಗ್ರೆಸ್ ಬೆಂಬಲಿಸಿತು. ಆದ್ದರಿಂದ ನಂದಿಗ್ರಾಮ ಉಪಚುನಾವಣೆಯು ಬಿಜೆಪಿ ಮತ್ತು ಇಂಡಿಯಾ ಒಕ್ಕೂಟದ ನಡುವಿನ ಸ್ಪರ್ಧೆಯಾಗಿ ಬದಲಾಯಿತು.

ಮೇ 6 ರಂದು (ಅಂದರೆ ಬಿಜೆಪಿ ವಿಧಾನಸಭಾ ಚುನಾವಣೆಗಳಲ್ಲಿ ಗೆದ್ದ ಎರಡು ದಿನಗಳ ನಂತರ) ಅವರ ಮಗ ಚಂದ್ರನಾಥ್ ಅವರನ್ನು ಗುಂಡಿಕ್ಕಿ ಕೊಲೆ ಮಾಡಿದ್ದರಿಂದ, ಹಸಿನ್ ರಾಣಿ ರಾಥ್ ಅವರ ಸ್ಪರ್ಧೆ ಈ ಉಪಚುನಾವಣೆಗೆ ಒಂದು ಭಾವನಾತ್ಮಕ ಆಯಾಮವನ್ನು ಪಡೆದುಕೊಂಡಿತು.

ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಕೇಸರಿ ಕಲಿ ಜಯಭೇರಿ!

ಇದಲ್ಲದೆ, ರೇಜಿನಗರ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿಯ ಶಂಖರವ್ ಸರ್ಕಾರ್ ಅವರು ತಮ್ಮ ಪ್ರತಿಸ್ಪರ್ಧಿ ಆಮ್ ಜನತಾ ಉನ್ನಯನ್ ಪಕ್ಷದ (AJUP) ಅಭ್ಯರ್ಥಿ ಗೋಲಾಂ ನಬಿ ಆಜಾದ್ ಅಲಿಯಾಸ್ ರಾಬಿನ್ ವಿರುದ್ಧ 75,816 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಸರ್ಕಾರ್ ಅವರು 1,29,914 ಮತಗಳನ್ನು ಪಡೆದಿದ್ದು, ಇದು ಚಲಾವಣೆಯಾದ ಒಟ್ಟು ಮತಗಳ ಶೇ. 63.14 ರಷ್ಟಾಗಿದೆ. ಇತ್ತ ಆಜಾದ್ ಅವರು 54,098 ಮತಗಳನ್ನು (ಶೇ. 26.29) ಪಡೆದಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಅಬ್ದುಲ್ಲಾಹಿಲ್ ಕಾಫಿ ಅವರು 6,168 ಮತ(ಶೇ. 3), ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ರಬಿಲ್ ಆಲಮ್ ಚೌಧರಿ 3,847 ಮತ (ಶೇ. 1.87), ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಅಭ್ಯರ್ಥಿ ಎಂ.ಡಿ. ಸಯೀದ್ 3,797 ಮತ (ಶೇ. 1.85), ಡೆಮಾಕ್ರಟಿಕ್ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ಸೈಫುಜ್ಜಮಾನ್ ಸೈಖ್ ಅವರು 2,044 ಮತಗಳನ್ನು (ಶೇ. 0.99) ಪಡೆದಿದ್ದಾರೆ.

ಮುರ್ಷಿದಾಬಾದ್ ಜಿಲ್ಲೆಯಲ್ಲಿ ಬರುವ ಈ ರೇಜಿನಗರ ಕ್ಷೇತ್ರದಲ್ಲಿ ಶೇ. 70ರಷ್ಟು ಮುಸ್ಲಿಂ ಮತದಾರರಿದ್ದಾರೆ. ಹಾಗಾಗಿ, ಇಲ್ಲಿ ಇಲ್ಲಿಯವರೆಗೆ ಕಾಂಗ್ರೆಸ್, ಟಿಎಂಸಿ ಮತ್ತು ಸ್ಥಳೀಯ ಪ್ರಾದೇಶಿಕ ಪಕ್ಷಗಳ ನಡುವಷ್ಟೇ ನೇರ ಪೈಪೋಟಿ ಇರುತ್ತಿತ್ತು. ಆದರೆ ಈ ಬಾರಿ ಬಿಜೆಪಿಯು ದೊಡ್ಡ ಗೆಲುವು ಸಾಧಿಸಿದೆ. ಇದಕ್ಕೆ ಮುಖ್ಯ ಕಾರಣವೆಂದರೆ, ವಿರೋಧ ಪಕ್ಷಗಳ ಮತಗಳು ಚದುರಿಹೋಗಿರುವುದು ಮತ್ತು ಕಣದಲ್ಲಿ ಬರೋಬ್ಬರಿ 15 ಜನ ಅಭ್ಯರ್ಥಿಗಳು ನಿಂತಿದ್ದು ರಾಜಕೀಯ ಲೆಕ್ಕಾಚಾರವನ್ನೇ ಬದಲಾಯಿಸಿದೆ. ಈ ರೀತಿಯ ತೀವ್ರ ಪೈಪೋಟಿ ಮತ್ತು ವಿರೋಧ ಪಕ್ಷಗಳ ನಡುವಿನ ಬಿರುಕು ಅಂತಿಮವಾಗಿ ಬಿಜೆಪಿಗೆ ವರವಾಗಿ ಪರಿಣಮಿಸಿದೆ ಎನ್ನಬಹುದು(ಏಜೆನ್ಸೀಸ್​).