ನವದೆಹಲಿ: ಇರಾನ್ ವಿರುದ್ಧದ ಯುದ್ಧದಿಂದ ಪಶ್ಚಿಮ ಏಷ್ಯಾದಲ್ಲಿನ ಪರಿಸ್ಥಿತಿ ಚಿಂತಾಜನಕವಾಗಿದ್ದು, ಇದು ಜಾಗತಿಕ ಆರ್ಥಿಕತೆ ಮತ್ತು ಜನರ ಜೀವನದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಭಾರತ ಅದಕ್ಕೆ ಆರಂಭಿಕ ಸಿದ್ಧತೆಯನ್ನು ಮಾಡಿಕೊಂಡಿದೆ ಎಂದು ಲೋಕಸಭೆಯಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ.
ಈ ಕುರಿತು ಸೋಮವಾರ(ಮಾ. 23) ಸದನವನ್ನುದ್ದೇಶಿ ಮಾತನಾಡಿರುವ ಅವರು, ಯುದ್ಧದಲ್ಲಿರುವ ಮತ್ತು ಸಂಘರ್ಷದಿಂದ ಪ್ರಭಾವಿತವಾಗಿರುವ ದೇಶಗಳೊಂದಿಗೆ ಭಾರತ ವ್ಯಾಪಕ ವ್ಯಾಪಾರ ಸಂಬಂಧವನ್ನು ಹೊಂದಿದೆ. ಮತ್ತು ಸಂಘರ್ಷದ ಪ್ರದೇಶವು ಪ್ರಪಂಚದಾದ್ಯಂತ ಇತರೆ ದೇಶಗಳೊಂದಿಗೆ ನಮ್ಮ ವ್ಯಾಪಾರ ಮತ್ತು ವಿಶೇಷವಾಗಿ ಕಚ್ಚಾತೈಲ ಮತ್ತು ಅನಿಲ ಅಗತ್ಯಗಳ ಸಾಗಾಣಿಕೆಗೆ ಪ್ರಮುಖ ಮಾರ್ಗವಾಗಿದೆ. ಅದರಿಂದ ಬಿಕ್ಕಟ್ಟು ಸೃಷ್ಟಿಯಾಗಿದೆ ಎಂದು ತಿಳಿಸಿದ್ದಾರೆ.
ಹೆಚ್ಚಿನ ಪ್ರಮಾಣದ ಕಚ್ಚಾತೈಲ, ಅನಿಲ, ರಸಗೊಬ್ಬರ ಹಾಗೂ ಅನೇಕ ಅಗತ್ಯ ವಸ್ತುಗಳು ಹಾರ್ಮುಜ್ ಜಲಸಂಧಿ ಮೂಲಕ ಭಾರತಕ್ಕೆ ಆಮದಾಗುತ್ತವೆ. ಯುದ್ಧದಿಂದ ಹಾರ್ಮುಜ್ ಜಲಸಂಧಿಯ ಮೂಲಕ ಹಡಗುಗಳ ಚಲನೆ ಬಹಳ ಕಷ್ಟಕರವಾಗಿದೆ. ಇದರ ಹೊರತಾಗಿಯೂ, ಪೆಟ್ರೋಲ್, ಡೀಸೆಲ್ ಮತ್ತು ಅನಿಲ ಪೂರೈಕೆಯ ಮೇಲೆ ತೀವ್ರ ಪರಿಣಾಮ ಬೀರದಂತೆ ನೋಡಿಕೊಳ್ಳಲು ನಮ್ಮ ಸರ್ಕಾರ ಪ್ರಯತ್ನಗಳನ್ನು ಮಾಡಿದೆ ಎಂದು ತಿಳಿಸಿದ್ದಾರೆ.
ವಿದೇಶದಿಂದ ಶೇ. 60ರಷ್ಟು ಎಲ್ಪಿಜಿಯನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಪೂರೈಕೆಯಲ್ಲಿನ ಅನಿಶ್ಚಿತತೆಯಿಂದಾಗಿ ದೇಶೀಯ ಎಲ್‌ಪಿಜಿ ಗ್ರಾಹಕರಿಗೆ ಆದ್ಯತೆ ನೀಡಿದೆ. ಅದೇ ಸಮಯದಲ್ಲಿ ಎಲ್‌ಪಿಜಿಯ ದೇಶೀಯ ಉತ್ಪಾದನೆಯನ್ನು ಸಹ ಹೆಚ್ಚಿಸಲಾಗುತ್ತಿದೆ. ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಯಥಾಸ್ಥಿತಿಯಲ್ಲಿವೆ ಎಂದು ಹೇಳಿದ್ದಾರೆ.
ರಾಜತಾಂತ್ರಿಕತೆಯಲ್ಲಿ ಭಾರತದ ನಿಲುವು ಸ್ಪಷ್ಟವಾಗಿದೆ. ಆರಂಭದಿಂದಲೂ ನಾವು ಈ ಸಂಘರ್ಷದ ಬಗ್ಗೆ ನಮ್ಮ ಆಳವಾದ ಕಳವಳವನ್ನು ವ್ಯಕ್ತಪಡಿಸಿದ್ದೇವೆ. ನಾಗರಿಕರು, ಇಂಧನ ಮತ್ತು ಸಾರಿಗೆ ಮೂಲಸೌಕರ್ಯಗಳ ಮೇಲಿನ ದಾಳಿಗಳನ್ನು ಭಾರತ ಖಂಡಿಸಿದೆ. ಪಶ್ಚಿಮ ಏಷ್ಯಾದ ಸಂಬಂಧಿತ ಎಲ್ಲಾ ನಾಯಕರೊಂದಿಗೆ ನಾನು ವೈಯಕ್ತಿಕವಾಗಿ ಮಾತನಾಡಿದ್ದೇನೆ. ಉದ್ವಿಗ್ನತೆಯನ್ನು ಕಡಿಮೆ ಮಾಡಿ ಈ ಸಂಘರ್ಷವನ್ನು ಕೊನೆಗೊಳಿಸುವಂತೆ ಒತ್ತಾಯಿಸಿದ್ದೇನೆ ಎಂದು ಹೇಳಿದ್ದಾರೆ.
ವಾಣಿಜ್ಯ ಹಡಗುಗಳ ಮೇಲಿನ ದಾಳಿಗಳು ಮತ್ತು ಹಾರ್ಮುಜ್ ಜಲಸಂಧಿಯಂತಹ ಅಂತರರಾಷ್ಟ್ರೀಯ ಜಲಮಾರ್ಗಗಳ ಅಡಚಣೆಯನ್ನು ಸ್ವೀಕಾರಾರ್ಹವಲ್ಲ. ಭಾರತೀಯ ಹಡಗುಗಳ ಸುರಕ್ಷಿತ ಹಾದಿಯನ್ನು ಖಚಿತಪಡಿಸಿಕೊಳ್ಳಲು ಭಾರತ ನಿರಂತರವಾಗಿ ರಾಜತಾಂತ್ರಿಕತೆಯ ಮೂಲಕ ಪ್ರಯತ್ನಗಳನ್ನು ಮಾಡುತ್ತಿದೆ. ಈ ಸಮಸ್ಯೆಗೆ ಸಂವಾದ ಮತ್ತು ರಾಜತಾಂತ್ರಿಕತೆಯೇ ಏಕೈಕ ಪರಿಹಾರ ಎಂದು ನಾನು ಪುನರುಚ್ಚರಿಸುತ್ತೇನೆ ಎಂದು ಸಂಘರ್ಷದ ಕುರಿತಾದ ಕೇಂದ್ರದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
ಸುಮಾರು 1 ಕೋಟಿ ಭಾರತೀಯರು ಕೆಲಸದ ಕಾರಣದಿಂದ ಗಲ್ಫ್ ದೇಶಗಳಲ್ಲಿ ವಾಸಿಸುತ್ತಿದ್ದಾರೆ. ವಾಣಿಜ್ಯ ಹಡಗುಗಳು ಅಲ್ಲಿ ಕಾರ್ಯನಿರ್ವಹಿಸುತ್ತವೆ. ಭಾರತೀಯ ಸಿಬ್ಬಂದಿ ಸದಸ್ಯರ ಸಂಖ್ಯೆಯೂ ತುಂಬಾ ಹೆಚ್ಚಾಗಿದೆ. ಈ ವಿವಿಧ ಕಾರಣಗಳಿಂದಾಗಿ ಭಾರತದ ಕಳವಳಗಳು ಸ್ವಾಭಾವಿಕವಾಗಿ ಹೆಚ್ಚಿದೆ. ಯುದ್ಧ ಆರಂಭವಾದಾಗಿನಿಂದ ಪೀಡಿತ ದೇಶಗಳಲ್ಲಿರುವ ಪ್ರತಿಯೊಬ್ಬ ಭಾರತೀಯರಿಗೂ ನೆರವು ನೀಡಲಾಗಿದೆ ಎಂದು ಹೇಳಿದ್ದಾರೆ.
ಪಶ್ಚಿಮ ಏಷ್ಯಾದ ಹೆಚ್ಚಿನ ರಾಷ್ಟ್ರಗಳ ಮುಖ್ಯಸ್ಥರೊಂದಿಗೆ ನಾನು ಎರಡು ಸುತ್ತು ದೂರವಾಣಿಯಲ್ಲಿ ಮಾತನಾಡಿದ್ದೇನೆ. ಎಲ್ಲರೂ ಭಾರತೀಯರ ಸುರಕ್ಷತೆಯನ್ನು ಖಚಿತಪಡಿಸಿದ್ದಾರೆ. ಸಂಘರ್ಷದ ಸಮಯದಲ್ಲಿ, ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಕೆಲವರು ಗಾಯಗೊಂಡಿದ್ದಾರೆ. ಪೀಡಿತ ದೇಶಗಳಲ್ಲಿ 24/7 ಔಟ್ರೀಚ್ ಕೊಠಡಿಗಳು ಮತ್ತು ತುರ್ತು ಸಹಾಯವಾಣಿಗಳನ್ನು ಸ್ಥಾಪಿಸಲಾಗಿದೆ ಎಂದಿದ್ದಾರೆ.
ಇದುವರೆಗೂ 3,75,000 ಕ್ಕೂ ಹೆಚ್ಚು ಭಾರತೀಯರು ಸ್ವದೇಶಕ್ಕೆ ಸುರಕ್ಷಿತವಾಗಿ ಮರಳಿದ್ದಾರೆ. ಇರಾನ್‌ನಿಂದ ಇಲ್ಲಿಯವರೆಗೆ ಸುಮಾರು 700ಕ್ಕೂ ಹೆಚ್ಚು ಮೆಡಿಕಲ್ ವಿದ್ಯಾರ್ಥಿಗಳು ಸೇರಿ 1,000 ಭಾರತೀಯರು ಸುರಕ್ಷಿತವಾಗಿ ಮರಳಿದ್ದಾರೆ. ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಸಿಬಿಎಸ್‌ಇ ಗಲ್ಫ್ ರಾಷ್ಟ್ರಗಳಲ್ಲಿನ ಶಾಲೆಗಳಲ್ಲಿ 10 ಮತ್ತು 12 ನೇ ತರಗತಿ ಪರೀಕ್ಷೆಗಳನ್ನು ರದ್ದುಗೊಳಿಸಿದೆ ಮತ್ತು ವಿದ್ಯಾರ್ಥಿಗಳ ಶಿಕ್ಷಣವು ಯಾವುದೇ ಅಡೆತಡೆಯಿಲ್ಲದೆ ಮುಂದುವರಿಯುವುದನ್ನು ಖಚಿತಪಡಿಸಿಕೊಳ್ಳಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಮಾಹಿತಿ ನೀಡಿದ್ದಾರೆ (ಏಜೆನ್ಸೀಸ್).