Mamata Banerjee | ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ( ಸಂಗ್ರಹ ಚಿತ್ರ) 
ದೇಶ

ಇದು ತೀವ್ರ ಆತಂಕಕಾರಿ..ಎಸ್​ಐಆರ್​ ಕುರಿತಾಗಿ ಚುನಾವಣಾ ಆಯೋಗಕ್ಕೆ ಪತ್ರ ಬರೆದ ಸಿಎಂ ಮಮತಾ ಬ್ಯಾನರ್ಜಿ | Mamata Banerjee

ಕೊಲ್ಕತ್ತಾ: ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಮತ್ತು ಅದನ್ನು ರಾಜ್ಯದ ಜನರ ಮೇಲೆ ಹೇರಲಾಗಿರುವ ವಿಧಾನದ ಬಗ್ಗೆ ಆತಂಕ ಇದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.

 ಪತ್ರದಲ್ಲೇನಿದೆ....

ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆಯ ಬಗ್ಗೆ ಅನೇಕ ಸಲ ನನ್ನ ಕಳವಳಗಳನ್ನು ವ್ಯಕ್ತಪಡಿಸಿದ್ದೇನೆ. ಈಗಿನ ಪರಿಸ್ಥಿತಿಯು ತೀವ್ರ ಆತಂಕಕಾರಿ ಹಂತ ತಲುಪಿರುವುದರಿಂದ ಅನಿವಾರ್ಯವಾಗಿ ನಾನು ನಿಮಗೆ ಪತ್ರ ಬರೆಯಬೇಕಾಗಿದೆ. ಈ ಪ್ರಕ್ರಿಯೆಯು ರಚನಾತ್ಮಕವಾಗಿ ಕಳಪೆಯಾಗಿದ್ದು, ತರಬೇತಿಯಲ್ಲಿನ ಅಂತರ ಮತ್ತು ಪ್ರಕ್ರಿಯೆಗೆ ಅಗತ್ಯವಿರುವ ಕಡ್ಡಾಯ ದಾಖಲೆಗಳ ಬಗೆಗಿನ ಸ್ಪಷ್ಟತೆಯ ಕೊರತೆಯನ್ನು ಇದೇ ವೇಳೆ ಉಲ್ಲೇಖಿಸಿದ್ದಾರೆ. ಇದರಿಂದಾಗಿ ಬೂತ್ ಮಟ್ಟದ ಅಧಿಕಾರಿಗಳು, ರಾಜ್ಯದ ಸಾಮಾನ್ಯ ಜನರು ಸಮಸ್ಯೆಗಳನ್ನು ಎದುರಿಸುವಂತಾಗಿದೆ ಎಂದು ಬರೆದಿದ್ದಾರೆ.
ಅಧಿಕಾರಿಗಳು ಮತ್ತು ನಾಗರಿಕರ ಮೇಲೆ ಈ ಬಲವಂತದ ಪ್ರಕ್ರಿಯೆ ಯೋಜಿತವಲ್ಲದ್ದಾಗಿದ್ದು, ಇದು ಅಪಾಯಕಾರಿಯೂ ಆಗಿದೆ. ಪೂರ್ವ ತಯಾರಿ, ಸ್ಪಷ್ಟ ಸಂವಹನದ ಕೊರತೆ ಮೊದಲ ದಿನದಿಂದಲೂ ಈ ಪ್ರಕ್ರಿಯೆಯನ್ನು ಕುಂಠಿತಗೊಳಿಸಿದೆ. ಮತದಾರರ ಜೀವನೋಪಾಯದ ವೇಳಾಪಟ್ಟಿಯ ಮಧ್ಯೆ ಅವರನ್ನೆಲ್ಲಾ ಭೇಟಿ ಮಾಡುವುದು ಅಸಾಧ್ಯವಾದ ಕಾರಣ ಇದು ರಚನಾತ್ಮಕವಾಗಿ ದುರ್ಬಲವಾಗಿದೆ ಎಂದು ಉಲ್ಲೇಖಿಸಿದ್ದಾರೆ.
ಇಂತಹ ಒತ್ತಡದ ಸಂದರ್ಭದಲ್ಲಿಯೂ ಬಿಎಲ್​ಓಗಳ ಅಗಾಧವಾದ ಕೆಲಸದ ಹೊರೆ, ಶ್ರಮದಾಯಕ ಪ್ರಯತ್ನಗಳು ಶ್ಲಾಘಿನೀಯ. ಈ ರೀತಿಯ ದೊಡ್ಡ ಪ್ರಯತ್ನ ಕೈಗೊಳ್ಳುವಾಗ ಬೂತ್​ ಮಟ್ಟದ ಅಧಿಕಾರಿಗಳಿಗೆ ಅಗತ್ಯವಿರುವ ತರಬೇತಿ, ಬೆಂಬಲ ಮತ್ತು ಸಮಯವನ್ನು ನೀಡಿಲ್ಲ ಎನ್ನುವುದು ಇಲ್ಲಿ ಪ್ರಮುಖವಾಗಿದೆ ಎಂದರು.
ಈ ಹಂತದಲ್ಲಿ ಚುನಾವಣಾ ಆಯೋಗದ ಪ್ರತಿಕ್ರಿಯೆ ವಿಶೇಷವಾಗಿ ಸ್ವೀಕಾರಾರ್ಹವಲ್ಲ. ಬೆಂಬಲ ನೀಡುವ, ಕಾಲಮಿತಿಯನ್ನು ವಿಸ್ತರಿಸುವ ಮತ್ತು ವ್ಯವಸ್ಥೆಯ ನ್ಯೂನತೆಗಳನ್ನು ಪರಿಹರಿಸುವ ಬದಲು, ಪಶ್ಚಿಮ ಬಂಗಾಳ ರಾಜ್ಯ ಚುನಾವಣಾ ಆಯೋಗದ ಕಚೇರಿ ಬೆದರಿಕೆ ತಂತ್ರ ಅನುಸರಿಸುತ್ತಿದೆ, ಯಾವುದೇ ಸಮರ್ಥನೆ ಇಲ್ಲದೆ ಶೋಕಾಸ್ ನೋಟಿಸ್‌ಗಳನ್ನು ನೀಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಪಟ್ಟಿ ಪರಿಷ್ಕರಣೆಯ ಸಮಯವೂ ಅಷ್ಟು ಸಮರ್ಥನೀಯವಲ್ಲ. ಪಶ್ಚಿಮ ಬಂಗಾಳದಲ್ಲಿ ಪ್ರಸ್ತುತ ಭತ್ತದ ಕೊಯ್ಲಿನಲ್ಲಿ ತೊಡಗಿಕೊಂಡಿರುತ್ತಾರೆ. ಇದು 2025 ರ ಡಿಸೆಂಬರ್ ಮಧ್ಯಭಾಗದವರೆಗೆ ಮುಂದುವರಿಯುತ್ತದೆ. ಲಕ್ಷಾಂತರ ರೈತರು ಮತ್ತು ಕಾರ್ಮಿಕರು ಅಗತ್ಯ ಕೃಷಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ ಮತ್ತು ಎಸ್‌ಐಆರ್ ಸಲುವಾಗಿ ಅವರೆಲ್ಲಾ ಹೊಲಗಳನ್ನು ಬಿಟ್ಟು ಮನೆಯಲ್ಲಿರಲು ಸಾಧ್ಯ ಇಲ್ಲ ಎಂದರು.
ಈ ಪ್ರಕ್ರಿಯೆ ಪ್ರಾರಂಭವಾದಾಗಿನಿಂದ ಹಲವಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ಹಿಂದೆ ಮೂರು ವರ್ಷಗಳ ಕಾಲ ಕಾಯಬೇಕಾಗಿದ್ದ ಪರಿಷ್ಕರಣೆಯನ್ನು ಈಗ ಬಲವಂತವಾಗಿ ಮೂರು ತಿಂಗಳುಗಳಿಗೆ ಮೊಟಕುಗೊಳಿಸಲಾಗಿದೆ. ಬೂತ್​ ಮಟ್ಟದ ಅಧಿಕಾರಿಗಳನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ, ಸಾಮಾನ್ಯ ಜನರನ್ನು ಭಯ ಮತ್ತು ಅನಿಶ್ಚಿತತೆಯ ನೆರಳಿನಲ್ಲಿ ಇರಿಸಲಾಗುತ್ತಿದೆ ಎಂದು ಬರೆದಿದ್ದಾರೆ.
ತಕ್ಷಣವೇ ಇದನ್ನು ಸರಿಪಡಿಸಬೇಕು, ಈ ಯೋಜಿತವಲ್ಲದ, ಬಲವಂತದ ಕ್ರಮವನ್ನು ಮುಂದುವರಿಸುವುದರಿಂದ ಹೆಚ್ಚಿನ ಜೀವಗಳಿಗೆ ಅಪಾಯವಾಗುವುದಲ್ಲದೆ, ಚುನಾವಣಾ ಪರಿಷ್ಕರಣೆಯ ನ್ಯಾಯಸಮ್ಮತತೆಗೆ ಅಪಾಯವನ್ನುಂಟುಮಾಡುತ್ತದೆ ಎಂದು ಸಿಎಂ ಮಮತಾ ಬ್ಯಾನರ್ಜಿ ಪತ್ರದಲ್ಲಿ ಬರೆದಿದ್ದಾರೆ(ಏಜೆನ್ಸೀಸ್​).