ಸರ್ ನನ್ನ ಪತ್ನಿಯಿಂದ ನನ್ನನ್ನು ಕಾಪಾಡಿ... 10 ಮದ್ವೆ, ಲಕ್ಷ ಲಕ್ಷ ಹಣ ಸುಲಿಗೆ, ಕಳಚಿತು ಕಿಲಾಡಿ ಲೇಡಿಯ ಕರಾಳ ಮುಖ! Save Me From My Wife
- ಪತ್ನಿಯಿಂದ ಕಾಪಾಡಿ ಎಂದು ಪೊಲೀಸ್ ಠಾಣೆಯ ಮೆಟ್ಟಿಲೇರಿದ ಪತಿರಾಯ
- ಸರ್ ನನ್ನ ಪತ್ನಿ ಕೈಯಲ್ಲಿ ಗನ್ ಹಿಡಿದು ಹೆದರಿಸುತ್ತಾಳೆ ಎಂದು ದೂರು ದಾಖಲು
- ಮಧ್ಯಪ್ರದೇಶದ ಗ್ವಾಲಿಯರ್ ನಗರದ ಬಿಜೌಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ
- ತನ್ನ ಪತ್ನಿಗೆ ಈಗಾಗಲೇ 10 ಮದುವೆಯಾಗಿದೆ ಎಂದು ಆರೋಪಿಸಿದ ಗಂಡ
Save Me From My Wife : ಸಾಮಾನ್ಯವಾಗಿ ಕೌಟುಂಬಿಕ ಕಲಹಗಳ ಪ್ರಕರಣಗಳಲ್ಲಿ ಪತ್ನಿಯು ಪತಿಯ ವಿರುದ್ಧ ಪೊಲೀಸರಿಗೆ ದೂರು ನೀಡುವುದು ಸಾಮಾನ್ಯ. ಆದರೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಇದಕ್ಕೆ ತದ್ವಿರುದ್ಧವಾದ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿನ ವ್ಯಕ್ತಿಯೊಬ್ಬರು ನೇರವಾಗಿ ಎಸ್‌ಎಸ್‌ಪಿ ಕಚೇರಿಗೆ ಧಾವಿಸಿ, ಸರ್... ಕೈಯಲ್ಲಿ ಗನ್ ಹಿಡಿದು ಬೆದರಿಸುವ ನನ್ನ ಪತ್ನಿಯಿಂದ ದಯವಿಟ್ಟು ನನ್ನನ್ನು ಬದುಕಿಸಿ ಎಂದು ಪೊಲೀಸರ ಮುಂದೆ ಅಂಗಲಾಚಿದ್ದಾರೆ.
ತನ್ನ ಪತ್ನಿಗೆ ಈಗಾಗಲೇ 10 ಮದುವೆಗಳಾಗಿದ್ದು, ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಕದ್ದು ಈಗ ಐದು ಲಕ್ಷ ರೂಪಾಯಿ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದಾಳೆ ಎಂದು ಗಂಭೀರ ಆರೋಪ ಮಾಡಿರುವ ಗಂಡ, ಆಕೆ ಕೈಯಲ್ಲಿ ಗನ್ ಹಿಡಿದು ಫೋಟೋಗಳನ್ನು ತೆಗೆದುಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಭೀತಿ ಹುಟ್ಟಿಸುತ್ತಿದ್ದಾಳೆ ಅಂತಾನೂ ದೂರಿದ್ದಾನೆ. ಈ ವಿಲಕ್ಷಣ ಘಟನೆಯು ಸದ್ಯ ಗ್ವಾಲಿಯರ್‌ನಲ್ಲಿ ಭಾರಿ ಸಂಚಲನ ಮೂಡಿಸಿದೆ.
ಈ ಪ್ರಕರಣದ ವಿವರಣೆಗೆ ಬರುವುದಾದರೆ, ಬಿಜೌಲಿ ಪೊಲೀಸ್ ಠಾಣಾ ವ್ಯಾಪ್ತಿಯ ಮುಗುಲ್ಪುರ ನಿವಾಸಿಯಾದ ರಾಹುಲ್ ಜಾತವ್ ಎಂಬಾತ, ತನ್ನ ಪತ್ನಿ ಮತ್ತು ಆಕೆಯ ಸಂಬಂಧಿಕರು ಸೇರಿ ಒಂದು ದೊಡ್ಡ ದರೋಡೆ ಗ್ಯಾಂಗ್ ಅನ್ನೇ ನಡೆಸುತ್ತಿದ್ದಾರೆ ಎಂದು ಆರೋಪಿಸಿ, ದೂರನ್ನು ದಾಖಲಿಸಿದ್ದಾನೆ. ಮದುವೆಯ ಹೆಸರಿನಲ್ಲಿ ಅಮಾಯಕರನ್ನು ಜಾಲಕ್ಕೆ ಸೆಳೆದು, ಬಳಿಕ ಸಂಚು ರೂಪಿಸಿ ಹಣ ಹಾಗೂ ಆಸ್ತಿಯನ್ನು ದೋಚುವುದೇ ಈ ಗ್ಯಾಂಗ್‌ನ ಮುಖ್ಯ ಕಾಯಕವಾಗಿದೆ ಎಂದು ರಾಹುಲ್ ಪೊಲೀಸರ ಮುಂದೆ ವಿವರಿಸಿದ್ದಾನೆ.
ಸಂತ್ರಸ್ತ ಗಂಡ ರಾಹುಲ್ ಜಾತವ್ ಪೊಲೀಸರಿಗೆ ನೀಡಿರುವ ಲಿಖಿತ ದೂರಿನಲ್ಲಿ, ತನಗೆ ಶಿವಪುರಿ ನಿವಾಸಿಯಾದ ರಾಖಿ ಜಾತವ್ ಎಂಬಾಕೆಯೊಂದಿಗೆ 2026ರ ಏಪ್ರಿಲ್ 14 ರಂದು ವಿವಾಹವಾಗಿತ್ತು ಎಂದು ತಿಳಿಸಿದ್ದಾನೆ. ಮದುವೆಯಾದ ಕೆಲವೇ ದಿನಗಳಲ್ಲಿ ಆಕೆಯ ನಡವಳಿಕೆ ಹಾಗೂ ಸಂಶಯಾಸ್ಪದ ಚಟುವಟಿಕೆಗಳ ಮೇಲೆ ರಾಹುಲ್‌ಗೆ ಅನುಮಾನ ಬರಲು ಶುರುವಾಗಿತ್ತು. ಮೇ 15 ರಂದು ಆಕೆ ತನ್ನ ಅತ್ತೆಯ ಮನೆಗೆ ಬಂದಿದ್ದಳು, ಆದರೆ ಅಲ್ಲಿಗೆ ಬಂದ ಕೆಲವೇ ದಿನಗಳಲ್ಲಿ ಅಂದರೆ ಮೇ 23 ರಂದು ಯಾರಿಗೂ ಹೇಳದೆಯೇ ಇದ್ದಕ್ಕಿದ್ದಂತೆ ಮನೆಯಿಂದ ನಾಪತ್ತೆಯಾಗಿದ್ದಾಳೆ.
ಮದುವೆಯ ಸಂಭ್ರಮದ ಸಂದರ್ಭದಲ್ಲೇ ತನ್ನ ಪತ್ನಿಯು ತನ್ನ ಸಂಬಂಧಿಕರು ಹಾಗೂ ಇತರ ಸಹಚರರ ಸಹಾಯದಿಂದ ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಕದ್ದಿದ್ದಾಳೆ ಎಂದು ರಾಹುಲ್ ಆರೋಪಿಸಿದ್ದಾನೆ. ಈ ಕಳ್ಳತನದ ಬಗ್ಗೆ ಆತ ಈಗಾಗಲೇ ಸ್ಥಳೀಯ ಪೊಲೀಸ್ ಠಾಣೆಯಲ್ಲೂ ದೂರನ್ನು ದಾಖಲಿಸಿದ್ದಾನೆ. ಇದೀಗ ಮನೆಯಿಂದ ಓಡಿಹೋಗಿರುವ ಆಕೆ ಬೇರೆ ಬೇರೆ ನಂಬರ್‌ಗಳಿಂದ ಕರೆ ಮಾಡಿ 5 ಲಕ್ಷ ರೂಪಾಯಿ ನೀಡುವಂತೆ ಬೇಡಿಕೆ ಇಡುತ್ತಿದ್ದಾಳೆ, ಒಂದು ವೇಳೆ ಹಣ ನೀಡದಿದ್ದರೆ ಸುಳ್ಳು ಕೇಸುಗಳಲ್ಲಿ ಸಿಲುಕಿಸುವುದಾಗಿ ಹಾಗೂ ಮಾಧ್ಯಮಗಳ ಮುಂದೆ ಹೋಗಿ ಕುಟುಂಬದ ಮಾನ ಹರಾಜು ಹಾಕುವುದಾಗಿ ಬೆದರಿಕೆ ಹಾಕುತ್ತಿದ್ದಾಳೆ ಎಂದು ರಾಹುಲ್ ದೂರಿನಲ್ಲಿ ವಿವರಿಸಿದ್ದಾನೆ.
ತನ್ನ ಆರೋಪಗಳಿಗೆ ಪುರಾವೆಯಾಗಿ ರಾಹುಲ್ ತನ್ನ ಪತ್ನಿಯ ಕೆಲವು ಫೋಟೋಗಳು ಮತ್ತು ವಿಡಿಯೋಗಳನ್ನು ಪೊಲೀಸರಿಗೆ ಹಸ್ತಾಂತರಿಸಿದ್ದಾನೆ. ಈಕೆಗೆ ಮಾರಕಾಸ್ತ್ರಗಳೆಂದರೆ ಎಲ್ಲಿಲ್ಲದ ಮೋಹವಾಗಿದ್ದು, ಕೈಯಲ್ಲಿ ಗನ್ ಹಿಡಿದಿರುವ ತನ್ನ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಸ್ಟೇಟಸ್ ಆಗಿ ಹಾಕಿಕೊಳ್ಳುತ್ತಿದ್ದಾಳೆ. ಈ ಮೂಲಕ ಆಕೆ ಜನರ ಮೇಲೆ ಒತ್ತಡ ಹೇರಲು ಮತ್ತು ಸಮಾಜದಲ್ಲಿ ಭೀತಿ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾಳೆ ಎಂದು ರಾಹುಲ್ ಆರೋಪಿಸಿದ್ದಾನೆ. ಅಷ್ಟೇ ಅಲ್ಲದೆ, ಪ್ರಸ್ತುತ ತನಗೆ ಅಪರಿಚಿತ ನಂಬರ್‌ಗಳಿಂದ ಕೊಲೆ ಬೆದರಿಕೆ ಕರೆಗಳು ಬರುತ್ತಿವೆ ಎಂದೂ ಆತ ಆತಂಕ ವ್ಯಕ್ತಪಡಿಸಿದ್ದಾನೆ.
ಕಳಚಿಬಿತ್ತು ಅಸಲಿ ಮುಖವಾಡ
ಈ ಇಡೀ ಪ್ರಕರಣದಲ್ಲೇ ಅತ್ಯಂತ ಆಘಾತಕಾರಿ ವಿಷಯವೆಂದರೆ, ರಾಹುಲ್ ತನ್ನ ಪತ್ನಿಯ ಬಗ್ಗೆ ಸತ್ಯಾಸತ್ಯತೆ ತಿಳಿದುಕೊಳ್ಳಲು ಸ್ವತಃ ಶಿವಪುರಿಗೆ ಹೋದಾಗ ಆಕೆಯ ಅಸಲಿ ಮುಖವಾಡ ಬಯಲಾಗಿದೆ. ಈ ಮಹಿಳೆಯು ಇವನಿಗಿಂತ ಮುಂಚೆಯೇ ಹಲವು ಯುವಕರನ್ನು ಮದುವೆಯಾಗಿ ವಂಚಿಸಿರುವುದು ತನಿಖೆಯಿಂದ ಆತನಿಗೆ ತಿಳಿದುಬಂದಿದೆ. ತನ್ನನ್ನು ಸೇರಿ ಆಕೆಗೆ ಇದು ಬರೋಬ್ಬರಿ 10ನೇ ಮದುವೆ ಎಂದು ರಾಹುಲ್ ಪೊಲೀಸರ ಮುಂದೆ ಅತ್ಯಂತ ಶಾಕಿಂಗ್ ಆದ ಸತ್ಯವನ್ನು ಬಿಚ್ಚಿಟ್ಟಿದ್ದಾನೆ.
ಇಷ್ಟೇ ಅಲ್ಲದೆ, ಶಿವಪುರಿ ಸೈಬರ್ ಸೆಲ್‌ನಲ್ಲಿ ಕೆಲಸ ಮಾಡುತ್ತಿರುವ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧವೂ ರಾಹುಲ್ ಅತ್ಯಂತ ಗಂಭೀರವಾದ ಆರೋಪಗಳನ್ನು ಮಾಡಿದ್ದಾನೆ. ಈ ಪೊಲೀಸ್ ಅಧಿಕಾರಿಯು ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ, ರಾಹುಲ್‌ನ ವೈಯಕ್ತಿಕ ಮಾಹಿತಿಗಳನ್ನು ಕದ್ದು ಆತನ ಪತ್ನಿಗೆ ತಲುಪಿಸುತ್ತಿದ್ದಾನೆ ಎಂದು ಆತ ತನ್ನ ದೂರಿನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾನೆ. ಮತ್ತೊಂದೆಡೆ, ತನ್ನ ಪತ್ನಿ, ಅತ್ತೆ ಮತ್ತು ಭಾವನ ಬ್ಯಾಂಕ್ ಖಾತೆಗಳ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ರಾಹುಲ್ ಪೊಲೀಸರನ್ನು ವಿನಂತಿಸಿದ್ದಾನೆ. ಅವರ ಹಣಕಾಸಿನ ವಹಿವಾಟುಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ, ಈ 'ಕಿಲಾಡಿ ವಧು' ಗ್ಯಾಂಗ್‌ನ ಹಲವು ಕರಾಳ ಕೃತ್ಯಗಳು ಮತ್ತು ಅವರ ದೊಡ್ಡ ವಂಚನೆಯ ಜಾಲವು ಬಯಲಿಗೆ ಬರಬಹುದು ಎಂದಿದ್ದಾನೆ.
ಸದ್ಯ ಗ್ವಾಲಿಯರ್‌ನ ಹಿರಿಯ ಪೊಲೀಸ್ ಅಧಿಕಾರಿಗಳು ಈ ದೂರನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದಾರೆ. ಮುಂದಿನ ತನಿಖೆಗಾಗಿ ಈ ಪ್ರಕರಣವನ್ನು ಈಗ ಬಿಜೌಲಿ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ. ಪೊಲೀಸರು ಪ್ರಸ್ತುತ ರಾಹುಲ್ ನೀಡಿರುವ ಸಾಕ್ಷ್ಯಗಳು ಮತ್ತು ಬ್ಯಾಂಕ್ ಖಾತೆಗಳ ವಿವರಗಳನ್ನು ಪರಿಶೀಲಿಸುತ್ತಿದ್ದು, ತನಿಖೆಯ ವೇಳೆ ಹೊರಬರುವ ಸತ್ಯಾಂಶಗಳ ಆಧಾರದ ಮೇಲೆ ಮುಂದಿನ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ, (ಏಜೆನ್ಸೀಸ್).