ಎಸ್​ಐಆರ್​ ಪ್ರಜಾಪ್ರಭುತ್ವಕ್ಕೆ ಧಕ್ಕೆ: ಚುನಾವಣಾ ಆಯೋಗಕ್ಕೆ ಅವಾಜ್​ ಹಾಕಿದ ಟಿಎಂಸಿ ಶಾಸಕ 
ದೇಶ

ಎಸ್​ಐಆರ್​ ಪ್ರಜಾಪ್ರಭುತ್ವಕ್ಕೆ ಧಕ್ಕೆ: ಚುನಾವಣಾ ಆಯೋಗಕ್ಕೆ ಅವಾಜ್​ ಹಾಕಿದ ಟಿಎಂಸಿ ಶಾಸಕ | Monirul Islam

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆ ನಡೆಯುತ್ತಿರುವ ಬೆನ್ನಲ್ಲೇ, ಫರಕ್ಕಾ ಕ್ಷೇತ್ರದ ತೃಣಮೂಲ ಕಾಂಗ್ರೆಸ್ (TMC) ಶಾಸಕ ಮನಿರುಲ್ ಇಸ್ಲಾಂ(Monirul Islam) ಅವರು ಕೇಂದ್ರ ಚುನಾವಣಾ ಆಯೋಗಕ್ಕೆ ಬಹಿರಂಗವಾಗಿ ಹಿಂಸಾತ್ಮಕ ಬೆದರಿಕೆ ಹಾಕುವ ಮೂಲಕ ಹೊಸ ರಾಜಕೀಯ ಸಂಚಲನ ಸೃಷ್ಟಿಸಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತರ ವಿರುದ್ಧವೇ ಅಶ್ಲೀಲ ಪದಬಳಕೆ ಹಾಗೂ ವೈಯಕ್ತಿಕ ದಾಳಿ ನಡೆಸಿರುವ ಶಾಸಕರ ನಡೆ, ಸಾಂವಿಧಾನಿಕ ಸಂಸ್ಥೆಗಳ ಭದ್ರತೆ ಮತ್ತು ಪ್ರಾಧಿಕಾರದ ಬಗ್ಗೆ ಆತಂಕ ಮೂಡಿಸಿದೆ.

ಘಟನೆಯ ಹಿನ್ನೆಲೆ: SIR ಒಪ್ಪಲು ಸಾಧ್ಯವಿಲ್ಲ

ಈ ಬಗ್ಗೆ ಫರಕ್ಕಾದಲ್ಲಿ ನಡೆದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮನಿರುಲ್ ಇಸ್ಲಾಂ, ಚುನಾವಣಾ ಆಯೋಗದ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯ ವಿರುದ್ಧ ಕಿಡಿಕಾರಿದ್ದಾರೆ. ಈ ವೇಳೆ ಅವರು ಮುಖ್ಯ ಚುನಾವಣಾ ಆಯುಕ್ತರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುವುದಲ್ಲದೆ, ಪ್ರಕ್ರಿಯೆಯನ್ನು ತಡೆಯಲು ತನ್ನ ಬೆಂಬಲಿಗರಿಗೆ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಕೇವಲ ಭಾಷಣಕ್ಕೆ ಸೀಮಿತವಾಗದ ಈ ಆಕ್ರೋಶ, ಫರಕ್ಕಾದ ಬ್ಲಾಕ್ ಡೆವಲಪ್‌ಮೆಂಟ್ ಆಫೀಸ್ (BDO) ಮೇಲೆ ದಾಳಿಗೆ ಕಾರಣವಾಯಿತು. ಅಲ್ಲದೆ, ಶಾಸಕರ ಸಮ್ಮುಖದಲ್ಲೇ ಉದ್ರಿಕ್ತ ಗುಂಪು ಕಚೇರಿಯ ಪೀಠೋಪಕರಣಗಳನ್ನು ಧ್ವಂಸಗೊಳಿಸಿತು. ನಾನು ಎಸ್‌ಐಆರ್ (SIR) ಒಪ್ಪುವುದಿಲ್ಲ, ನಾನು ಒಪ್ಪುವುದಿಲ್ಲ ಎಂದು ಶಾಸಕರು ಕಿರುಚುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ವಿವಾದಕ್ಕೆ ಕಾರಣವೇನು? 58 ಲಕ್ಷ ಹೆಸರುಗಳ ಕಡಿತ

ಚುನಾವಣಾ ಆಯೋಗವು ಪಶ್ಚಿಮ ಬಂಗಾಳದ ಮತದಾರರ ಪಟ್ಟಿಯಲ್ಲಿರುವ ಅಕ್ರಮಗಳನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.
ತಾಂತ್ರಿಕ ದೋಷ, ಮರಣ ಅಥವಾ ವಿಳಾಸ ಬದಲಾವಣೆ ಹಿನ್ನೆಲೆಯಲ್ಲಿ ಬರೋಬ್ಬರಿ 58 ಲಕ್ಷ ಹೆಸರುಗಳನ್ನು ಕರಡು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಅಲ್ಲದೆ, ದಾಖಲೆಗಳ ಪರಿಶೀಲನೆಗಾಗಿ ಸುಮಾರು 1.36 ಕೋಟಿ ಜನರಿಗೆ ಖುದ್ದಾಗಿ ಹಾಜರಾಗುವಂತೆ ಆಯೋಗ ನೋಟಿಸ್ ನೀಡಿದೆ. ಬಂಗಾಳದ ಜನರನ್ನು ಆಯೋಗವು ಹಠಾತ್ ವಿಚಾರಣೆ ಹೆಸರಿನಲ್ಲಿ ಕಿರುಕುಳ ನೀಡುತ್ತಿದೆ ಎಂದು ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಈಗಾಗಲೇ ಕಿಡಿಕಾರಿದ್ದಾರೆ.

ಹೆಚ್ಚಿದ ರಾಜಕೀಯ ಸಂಘರ್ಷ

ಈ ಬೆಳವಣಿಗೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ. ಆಡಳಿತ ಪಕ್ಷದ ನಾಯಕರೇ ಸಾಂವಿಧಾನಿಕ ಸಂಸ್ಥೆಗಳ ಮೇಲೆ ದಾಳಿ ಮಾಡಲು ಪ್ರಚೋದನೆ ನೀಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸಮಿಕ್ ಭಟ್ಟಾಚಾರ್ಯ ಟೀಕಿಸಿದ್ದಾರೆ. ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಅಗರ್ವಾಲ್, ಚುನಾವಣಾ ಕಾರ್ಯದಲ್ಲಿರುವ ಅಧಿಕಾರಿಗಳಿಗೆ ಸೂಕ್ತ ಭದ್ರತೆ ನೀಡುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ (DGP) ಸೂಚಿಸಿದ್ದಾರೆ,(ಏಜೆನ್ಸೀಸ್).