Yogendra Yadav | ಎಸ್​​ಐಆರ್​ ಪ್ರಕರಣದ ಅರ್ಜಿದಾರರಾದ ಯೋಗೇಂದ್ರ ಯಾದವ್ 
ದೇಶ

SIR ಪ್ರಕರಣದ ಭವಿಷ್ಯ ಮೊದಲೇ ನಿರ್ಧಾರವಾಗಿತ್ತು!; ಅಂತಿಮ ತೀರ್ಪಿನ ವೇಳೆ ಗೈರಾಗಿದ್ದಕ್ಕೆ ಕಾರಣ ತಿಳಿಸಿದ ಯೋಗೇಂದ್ರ ಯಾದವ್! | Yogendra Yadav

ನವದೆಹಲಿ: ಚುನಾವಣಾ ಆಯೋಗದ ಮತದಾರರ ಪಟ್ಟಿ ಪರಿಷ್ಕರಣೆ (SIR) ಅಧಿಕಾರವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿರುವ ಬೆನ್ನಲ್ಲೇ, ರಾಜಕೀಯ ವಿಶ್ಲೇಷಕ, ಪ್ರಕರಣದ ಅರ್ಜಿದಾರರಾದ ಯೋಗೇಂದ್ರ ಯಾದವ್ (Yogendra Yadav) ನ್ಯಾಯಾಲಯದ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ್ದು, ತೀರ್ಪು ಪ್ರಕಟವಾಗುವ ಮೊದಲೇ ಅದರ ಫಲಿತಾಂಶ ಏನಾಗಲಿದೆ ಎಂಬುದು ತಮಗೆ ಸ್ಪಷ್ಟವಾಗಿ ತಿಳಿದಿತ್ತು, ಇದೇ ಕಾರಣಕ್ಕಾಗಿ ಅಂತಿಮ ಆದೇಶದ ವೇಳೆ ನ್ಯಾಯಾಲಯಕ್ಕೆ ಹೋಗದೆ ದೂರ ಉಳಿದಿದ್ದಾಗಿ ತಿಳಿಸಿದ್ದಾರೆ.
ಇಂದು (ಬುಧವಾರ-ಮೇ 27) ತೀರ್ಪು ಪ್ರಕಟಿಸಿರುವ ಸುಪ್ರೀಂ ಕೋರ್ಟ್, ಚುನಾವಣಾ ಆಯೋಗವು ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ನಡೆಸುವ ಅಧಿಕಾರವನ್ನು ಎತ್ತಿಹಿಡಿದಿದೆ. ಈ ಪ್ರಕ್ರಿಯೆಯು ದೇಶದ ಪ್ರಜಾಪ್ರಭುತ್ವದ ಚುನಾವಣಾ ವ್ಯವಸ್ಥೆಗೆ ಜೀವ ತುಂಬುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಪಟ್ಟಿಯ ಶುದ್ಧೀಕರಣದ ಹೆಸರಿನಲ್ಲಿ ಭಾರಿ ಪ್ರಮಾಣದಲ್ಲಿ ಮತದಾರರ ಹೆಸರುಗಳನ್ನು ಕೈಬಿಡಲಾಗುತ್ತಿದೆ ಮತ್ತು ಇದು ರಾಜಕೀಯ ಪ್ರೇರಿತವಾಗಿದೆ ಎಂದು ಅನೇಕರು ಟೀಕಿಸಿದ್ದರು, ಚುನಾವಣಾ ಆಯೋಗದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು. ಇಂತಹ ಸಂದರ್ಭದಲ್ಲಿ ಬಂದಿರುವ ಸುಪ್ರೀಂ ಕೋರ್ಟ್‌ನ ಈ ತೀರ್ಪು ಆಯೋಗಕ್ಕೆ ದೊಡ್ಡ ಬೆಂಬಲವನ್ನು ನೀಡಿದಂತಾಗಿದ್ದು, ಮತದಾರರ ಪಟ್ಟಿಯಿಂದ ಒಬ್ಬ ವ್ಯಕ್ತಿಯ ಹೆಸರು ಕೈಬಿಟ್ಟು ಹೋಗುವುದನ್ನು ಪೌರತ್ವದ ಸ್ಥಾನಮಾನವನ್ನು ಕಳೆದುಕೊಳ್ಳುವುದಕ್ಕೆ ಹೋಲಿಸಲು ಸಾಧ್ಯವಿಲ್ಲ ಎಂದು ಪೀಠವು ಸ್ಪಷ್ಟಪಡಿಸಿದೆ.

ಸುಪ್ರೀಂ ಕೋರ್ಟ್ ಸಾಂವಿಧಾನಿಕ ನ್ಯಾಯಾಲಯದಂತೆ ನಡೆದುಕೊಳ್ಳಲಿಲ್ಲ

ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿರುವ ಯೋಗೇಂದ್ರ ಯಾದವ್, ಕಳೆದ ವರ್ಷ ಸುಪ್ರೀಂ ಕೋರ್ಟ್ ಈ ಪ್ರಕರಣದ ವಾದ-ಪ್ರತಿವಾದಗಳನ್ನು ಆಲಿಸಲು ಆರಂಭಿಸಿದ ಸಮಯವನ್ನು ಉಲ್ಲೇಖಿಸಿ, ನ್ಯಾಯಾಲಯದ ವಿರುದ್ಧ ಕೆಲವು ಆರೋಪಗಳನ್ನು ಮಾಡಿದ್ದಾರೆ. ನ್ಯಾಯಾಲಯವು ಸತತ ಮೂರು ದಿನಗಳ ಕಾಲ ವಾದಗಳನ್ನು ಆಲಿಸಿದ ನಂತರ, ಈ ಪ್ರಕ್ರಿಯೆಯ (SIR) ಸಾಂವಿಧಾನಿಕ ಸಿಂಧುತ್ವವನ್ನು ಪರಿಶೀಲಿಸುವ ಮುಖ್ಯ ಉದ್ದೇಶದಿಂದ ದೂರ ಸರಿಯಿತು, ಅದರ ಬದಲು ಕೇವಲ ಕುಂದುಕೊರತೆ ನಿವಾರಣೆ ಮತ್ತು ಮಧ್ಯಸ್ಥಿಕೆ ವಹಿಸುವ ಕೆಲಸಕ್ಕೆ ಹೆಚ್ಚಿನ ಆದ್ಯತೆ ನೀಡಿತು. ಈ ಮೂಲಕ ಸುಪ್ರೀಂ ಕೋರ್ಟ್ ಒಂದು ಸಾಂವಿಧಾನಿಕ ನ್ಯಾಯಾಲಯದಂತೆ ವರ್ತಿಸುವ ಬದಲಿಗೆ, ಗ್ರಾಹಕ ವೇದಿಕೆಯಂತೆ ಕಾರ್ಯನಿರ್ವಹಿಸಿತು ಎಂದು ಯಾದವ್ ಅಭಿಪ್ರಾಯಪಟ್ಟಿದ್ದಾರೆ.
ಈ ಪ್ರಕರಣದ ಪ್ರಮುಖ ಸಾಂವಿಧಾನಿಕ ಪ್ರಶ್ನೆಗಳನ್ನು ಇತ್ಯರ್ಥಪಡಿಸದೆ ಅಥವಾ ಪರಿಷ್ಕೃತ ಮತದಾರರ ಪಟ್ಟಿಯಲ್ಲಿದ್ದ ಲೋಪದೋಷಗಳನ್ನು ಸರಿಪಡಿಸಲು ಆದೇಶಿಸದೆ, ಬಿಹಾರ ವಿಧಾನಸಭಾ ಚುನಾವಣೆಯನ್ನು ನಡೆಸಲು ಚುನಾವಣಾ ಆಯೋಗಕ್ಕೆ ನ್ಯಾಯಾಲಯವು ಅನುಮತಿ ನೀಡಿದಾಗಲೇ ಈ ಪ್ರಕರಣದ ಭವಿಷ್ಯ ನಿರ್ಧಾರವಾಗಿತ್ತು ಎಂದು ಯಾದವ್ ಪ್ರತಿಪಾದಿಸಿದ್ದಾರೆ.

ಮುಗಿದ ಹೋದ ಅಧ್ಯಾಯ...

ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗಲೇ, ಚುನಾವಣಾ ಆಯೋಗವು ದೇಶದ ವಿವಿಧೆಡೆ ಮುಂದಿನ ಹಂತಗಳ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಗಳನ್ನು ಮುಂದುವರಿಸಲು ಅನುಮತಿ ನೀಡಿದ್ದರಿಂದ, ಇಡೀ ಪ್ರಕ್ರಿಯೆಯು ಈಗಾಗಲೇ ಮುಗಿದ ಹೋದ ಅಧ್ಯಾಯವಾಗಿ ಮಾರ್ಪಟ್ಟಿತು ಎಂದಿರುವ ಯಾದವ್​, ವಿಚಾರಣೆಯ ಸಂದರ್ಭದಲ್ಲಿ ನ್ಯಾಯಪೀಠವು ವ್ಯಕ್ತಪಡಿಸಿತು ಎನ್ನಲಾದ ಕೆಲವು ಅಭಿಪ್ರಾಯಗಳನ್ನು ಇಲ್ಲಿ ಪ್ರಸ್ತಾಪಿಸಿದ್ದಾರೆ.
ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟು ಹೋಗಿರುವವರು ಮುಂದಿನ ಚುನಾವಣೆಯಲ್ಲಿ ಭಾಗವಹಿಸಬಹುದು ಎಂದು ನ್ಯಾಯಾಲಯ ಹೇಳಿರುವುದು, ಅದು ತನ್ನ ಸಾಂವಿಧಾನಿಕ ಜವಾಬ್ದಾರಿಯಿಂದ ನುಣುಚಿಕೊಂಡಿರುವುದನ್ನು ತೋರಿಸುತ್ತದೆ ಎಂದು ಯಾದವ್​ ಆರೋಪಿಸಿದ್ದು, ನ್ಯಾಯಾಲಯದ ಈ ಧೋರಣೆಯು ದೇಶದಲ್ಲಿ ಭಾರಿ ಪ್ರಮಾಣದಲ್ಲಿ ಮತದಾರರನ್ನು ಹಕ್ಕುಗಳಿಂದ ವಂಚಿತಗೊಳಿಸುವುದಕ್ಕೆ ಅಧಿಕೃತ ಮುದ್ರೆ ಒತ್ತಿದಂತಾಗಿದೆ ಮತ್ತು ಇದು ಸಾಂವಿಧಾನಿಕ ರಕ್ಷಣಾ ಕವಚಗಳ ಅವನತಿಯನ್ನು ಸೂಚಿಸುವ ಆತಂಕಕಾರಿ ಕ್ಷಣವಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ(ಏಜೆನ್ಸೀಸ್​​).