ಸಾಂದರ್ಭಿಕ ಚಿತ್ರ 
ದೇಶ

SIR ಕರಡು ಪಟ್ಟಿ ಬಿಡುಗಡೆ; ಮೃತರ ಪಟ್ಟಿಯಲ್ಲಿ ಟಿಎಂಸಿ ಕೌನ್ಸಿಲರ್ ಹೆಸರು; ಚು. ಆಯೋಗ ಈಗ ಸ್ಮಶಾನಕ್ಕೆ ಬಂದು ನನ್ನ ಅಂತ್ಯಸಂಸ್ಕಾರ ಮಾಡಲಿ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮತದಾರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯ (SIR) ಕರಡು ಪಟ್ಟಿಯನ್ನು ಇಂದು(ಡಿ. 16) ಚುನಾವಣೆ ಆಯೋಗ ಬಿಡುಗಡೆ ಮಾಡಿದ್ದು, ಅದರಲ್ಲಿ ಟಿಎಂಸಿ ವಾರ್ಡ್ ಕೌನ್ಸಿಲ್​ರೊಬ್ಬರ ಹೆಸರನ್ನು ಮೃತರ ಪಟ್ಟಿಯಲ್ಲಿ ಸೇರಿಸಲಾಗಿದೆ ಎನ್ನಲಾಗಿದೆ.
ಡಂಕುನಿ ಪುರಸಭೆಯ ವಾರ್ಡ್ 18ರ ಟಿಎಂಸಿ ಕೌನ್ಸಿಲರ್ ಸೂರ್ಯ ಡೇ, ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯಕ್ಕೆ ಸಂಬಂಧಿಸಿದ ಪಟ್ಟಿಗಳನ್ನು ಪರಿಶೀಲಿಸುವಾಗ, ತಮ್ಮ ಹೆಸರು ಸತ್ತವರ ಪಟ್ಟಿಯಲ್ಲಿ ಸೇರಿದೆ ಎಂದು ಆರೋಪಿಸಿದ್ದಾರೆ. ಹಾಗೆಯೇ ಬೆಂಬಲಿಗರನ್ನು ಕರೆದುಕೊಂಡು ಸ್ಮಶಾನಕ್ಕೆ ತೆರಳಿದ್ದು ಚು. ಅಧಿಕಾರಿಗಳು ಬಂದು ಈಗ ನನ್ನ ಅಂತ್ಯ ಸಂಸ್ಕಾರ ಮಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಆಯೋಗವು ನನ್ನನ್ನು ಸತ್ತನೆಂದು ಘೋಷಿಸಿರುವುದರಿಂದ, ಅದು ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಅಧಿಕಾರಿಗಳು ಬಂದು ನನ್ನನ್ನು ದಹನ ಮಾಡಲಿ. ಪ್ರಕ್ರಿಯೆ ವೇಳೆ ನನ್ನ ಎಣಿಕೆ ನಮೂನೆಯನ್ನು ಭರ್ತಿ ಮಾಡಿ ಬಿಎಲ್​ಓಗೆ ಕೊಟ್ಟಿದ್ದೇನೆ ಆದರೂ ನನ್ನನ್ನು ಸತ್ತವರ ಪಟ್ಟಿಯಲ್ಲಿ ಸೇರಿಸಿದ್ದಾರೆ. ನಾನು ಚುನಾಯಿತ ಸಾರ್ವಜನಿಕ ಪ್ರತಿನಿಧಿ. ನಾನು ಜೀವಂತವಾಗಿರುವಾಗ ಕಾಗದದ ಮೇಲೆ ಸತ್ತಂತೆ ತೋರಿಸಬಹುದಾದರೆ, ಸಾಮಾನ್ಯ ಮತದಾರರಿಗೆ ಏನಾಗಬಹುದು ಎಂದು ಊಹಿಸಿ ಎಂದು ಕಿಡಿಕಾರಿದ್ದಾರೆ (ಏಜೆನ್ಸೀಸ್).