ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ನಡೆಯುತ್ತಿರುವ ವಿರೋಧ ಪಕ್ಷಗಳ ಪ್ರತಿಭಟನೆಗೆ ಕಾಂಗ್ರೆಸ್ ಹಿರಿಯ ಸಂಸದ ಶಶಿ ತರೂರ್ (Shashi Tharoor Post) ಕೂಡ ಧ್ವನಿಗೂಡಿಸಿದ್ದು, ರಾಮಧಾರಿ ಸಿಂಗ್ ದಿನಕರ್ ಅವರ ಪ್ರಸಿದ್ಧ ಹಿಂದಿ ಕವಿತೆ ಜನತಂತ್ರ ಕಾ ಜನ್ಮದ ಸಾಲುಗಳನ್ನು ಉಲ್ಲೇಖಿಸುತ್ತಾ, ಅದರಲ್ಲಿ ಬರುವ ಸಿಂಹಾಸನ ಖಾಲಿ ಕರೋ ಕಿ ಜನತಾ ಆತಿ ಹೈ (ಸಿಂಹಾಸನವನ್ನು ಖಾಲಿ ಮಾಡಿ, ಜನತೆ ಬರುತ್ತಿದ್ದಾರೆ) ಎಂಬ ಸಾಲನ್ನು ಹಂಚಿಕೊಂಡಿದ್ದಾರೆ. ಅಲ್ಲದೆ, ಈ ಸರ್ಕಾರ ಹೋಗುತ್ತದೆ ಎಂಬ ರಾಹುಲ್ ಗಾಂಧಿ ಅವರ ಮಾತನ್ನು ಬೆಂಬಲಿಸುವ ಮೂಲಕ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಶನಿವಾರ ನಡೆದ ಪ್ರತಿಭಟನೆಯ ವೇಳೆ ವಿದ್ಯಾರ್ಥಿಗಳು ಹಾಗೂ ಮಹಿಳೆಯರ ಮೇಲೆ ನಡೆದ ಪೊಲೀಸ್ ಲಾಠಿಚಾರ್ಜ್ ಹಾಗೂ ಬಿಜೆಪಿ ಕಾರ್ಯಕರ್ತರ ದಾಳಿಯನ್ನು ವಿರೋಧಿಸಿ ಇಂಡಿಯಾ ಒಕ್ಕೂಟವು ರಾಷ್ಟ್ರರಾಜಧಾನಿಯಲ್ಲಿ ಬೃಹತ್ ಮೆರವಣಿಗೆಗೆ ಸಜ್ಜಾಗಿರುವ ಸಂದರ್ಭದಲ್ಲೇ ತರೂರ್ ಅವರ ಈ ಪೋಸ್ಟ್ ಹೊರಬಿದ್ದಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಳೆದ ಒಂದು ವಾರದಿಂದ ಸತತ ಪ್ರತಿಭಟನೆಗಳನ್ನು ನಡೆಸುತ್ತಾ ಬಂದಿದ್ದರೂ, ಶಶಿ ತರೂರ್ ಈವರೆಗೆ ನೇರವಾಗಿ ಪ್ರತಿಭಟನೆಗಳಿಂದ ಕೊಂಚ ದೂರವೇ ಉಳಿದಿದ್ದರು. ಹೀಗಾಗಿ ಅವರ ಈ ಹೊಸ ಹೇಳಿಕೆಗಳು ರಾಜಕೀಯವಾಗಿ ಹೆಚ್ಚು ಮಹತ್ವ ಪಡೆದುಕೊಂಡಿವೆ.
ಇಂದು (ಸೋಮವಾರ ಅ.12) ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಶಶಿ ತರೂರ್, ರಾಮಧಾರಿ ಸಿಂಗ್ ದಿನಕರ್ ಅವರ ಜನತಂತ್ರ ಕಾ ಜನ್ಮ ಕವಿತೆಯನ್ನು ಉಲ್ಲೇಖಿಸಿದ್ದು, ಇದು ಜನರ ಅಧಿಕಾರ ಹಾಗೂ ಆಡಳಿತ ನಡೆಸುವವರ ಅಂತಿಮ ಶಕ್ತಿ ಜನರೇ ಎಂಬ ಸಂದೇಶ ಸಾರುತ್ತದೆ. ಈ ಹಿಂದೆ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರು ಕೂಡ ಇಂದಿರಾ ಗಾಂಧಿ ಸರ್ಕಾರದ ವಿರುದ್ಧ ಪ್ರತಿಭಟಿಸಲು ಇದೇ ಕವಿತೆಯ ಸಾಲುಗಳನ್ನು ಬಳಸಿದ್ದರು ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ.
ದೆಹಲಿಯಲ್ಲಿ ನಡೆದ ಪ್ರತಿಭಟನೆಯ ವೇಳೆ ಸಿಪಿಎಂ ರಾಜ್ಯಸಭಾ ಸಂಸದ ಜಾನ್ ಬ್ರಿಟ್ಟಾಸ್ ಅವರೊಂದಿಗೆ ದೆಹಲಿ ಪೊಲೀಸ್ ಸಿಬ್ಬಂದಿ ನಡೆದುಕೊಂಡ ರೀತಿಗೆ ಶಶಿ ತರೂರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಸದ ಜಾನ್ ಬ್ರಿಟ್ಟಾಸ್ ಅವರು ಸಂಸದೀಯ ವ್ಯವಹಾರಗಳ ಸ್ಥಾಯಿ ಸಮಿತಿಯ ಗೌರವಾನ್ವಿತ ಸದಸ್ಯರಾಗಿದ್ದು, ಅವರಂತಹ ಹಿರಿಯ ಜನಪ್ರತಿನಿಧಿಗೆ ಅಗೌರವ ತೋರಿರುವುದು ಆಘಾತಕಾರಿಯಾಗಿದೆ ಎಂದಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಪೊಲೀಸರು ಅನುಸರಿಸಬೇಕಾದ ಕನಿಷ್ಠ ಮಾನದಂಡಗಳನ್ನು ಕಾಯ್ದುಕೊಳ್ಳಬೇಕು ಎನ್ನುತ್ತಾ, ಈ ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ದೆಹಲಿ ಪೊಲೀಸರಿಗೆ ಆಗ್ರಹಿಸಿದ್ದಾರೆ.
ಶನಿವಾರ ನಡೆದ ಪ್ರತಿಭಟನೆಯ ವೇಳೆ ದೆಹಲಿ ಪೊಲೀಸರು ಅರವಿಂದ ಕೇಜ್ರಿವಾಲ್, ಮಮತಾ ಬ್ಯಾನರ್ಜಿ, ಪಿಣರಾಯಿ ವಿಜಯನ್, ಮಾಣಿಕ್ ಸರ್ಕಾರ್, ಎಂ.ಎ. ಬೇಬಿ, ಮನೋಜ್ ಝಾ ಸೇರಿದಂತೆ ಹಲವು ಪ್ರಮುಖ ವಿರೋಧ ಪಕ್ಷದ ನಾಯಕರು, ಮಾಜಿ ಮುಖ್ಯಮಂತ್ರಿಗಳು ಹಾಗೂ ವಿದ್ಯಾರ್ಥಿ ಮುಖಂಡರನ್ನು ವಶಕ್ಕೆ ಪಡೆದಿದ್ದರು. ಒಟ್ಟಾರೆಯಾಗಿ, ಶಶಿ ತರೂರ್ ಅವರ ಕವಿತೆಯ ಉಲ್ಲೇಖ ಮತ್ತು ಪೊಲೀಸರ ಕ್ರಮದ ವಿರುದ್ಧದ ಆಕ್ರೋಶವು ಪ್ರಸ್ತುತ ವಿರೋಧ ಪಕ್ಷಗಳ ಹೋರಾಟಕ್ಕೆ ಮತ್ತಷ್ಟು ಬಲ ತಂದುಕೊಟ್ಟಿದೆ(ಏಜೆನ್ಸೀಸ್).