ನವದೆಹಲಿ: ರಾಜ್ಯದಲ್ಲಿ ನಡೆದಿದೆ ಎನ್ನಲಾದ ಸ್ಟಿಂಗ್ ಆಪರೇಷನ್ ವಿಚಾರದ ಚರ್ಚೆ ನಡೆಯುತ್ತಿರುವಾಗಲೇ ದೆಹಲಿಯಲ್ಲಿ ಕಾಂಗ್ರೆಸ್ ನಾಯಕ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರನ್ನು ಮಾಜಿ ಸಿಎಂ ಸಿದ್ದರಾಮಯ್ಯನವರು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.
ರಾಹುಲ್ ಗಾಂಧಿ ಭೇಟಿ ವೇಳೆ ಸಿದ್ದರಾಮಯ್ಯನವರ ಜೊತೆ ಪುತ್ರ ಮತ್ತು ಸಚಿವ ಯತೀಂದ್ರ ಸಿದ್ದರಾಮಯ್ಯ ಹಾಗೂ ಶಾಸಕ ಎ.ಎಸ್.ಪೊನ್ನಣ್ಣ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸ್ಟಿಂಗ್ ಆಪರೇಷನ್ ವಿಡಿಯೋ ವಿಚಾರವಾಗಿ ರಾಹುಲ್ ಗಾಂಧಿಯವರ ಮುಂದೆ ಸಿದ್ದರಾಮಯ್ಯನವರು ತೀವ್ರ ಬೇಸರ ಹೊರಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಿಮ್ಮ ಮಾತಿಗೆ ಗೌರವ ನೀಡಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ, ಆದರೆ ನಾನು ರಾಜೀನಾಮೆ ನೀಡಿದ ಮೇಲೆ ಆ ವಿಡಿಯೋ ಯಾಕೆ ಬಂತು, ಅದರ ಅವಶ್ಯಕತೆ ಏನಿತ್ತು. ಇದರಿಂದ ನನ್ನ ಮಾನಿ ಹಾನಿಯಾಗಿಲ್ಲವೇ? ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಎಂದು ಹೇಳಿದ್ದೇನೆ. ಮತ್ತು ಮುಖ್ಯಮಂತ್ರಿ ಹುದ್ದೆಯ ಸ್ಪರ್ಧಿಯಲ್ಲ. ಅದಾಗ್ಯೂ ಈ ರಾಜಕೀಯ ಷ್ಯಡ್ಯಂತ್ರ ನಡೆಸಿದ್ದು ಯಾರು? ವಿಡಿಯೋ ಹಂಚಿಕೊಂಡವರು ಯಾರು ಎಂದು ನನಗೆ ಗೊತ್ತಿಲ್ಲ. ನನಗೆ ಯಾರ ಮೇಲೇಯೂ ಆರೋಪ ಮಾಡೋಕೆ ಇಷ್ಟ ಇಲ್ಲಾ, ಆದರೆ ವಿಡಿಯೋ ಮಾಡಿದ್ದು ಯಾರು, ಅದರ ಹಿಂದಿನ ಉದ್ದೇಶ ಏನು? ಈ ಬಗ್ಗೆ ತನಿಖೆ ಆಗಬೇಕು, ವಿಚಾರ ಹೊರಗಡೆ ಬರಬೇಕು ಎಂದು ಹೇಳಿದ್ದಾರೆ ಎನ್ನಲಾಗಿದೆ.
ಸ್ಟಿಂಗ್ ಆಪರೇಷನ್ ವಿಚಾರವಾಗಿ ನನಗೆ ತೀವ್ರ ಬೇಸರವಾಗಿದೆ. ಮುಂದಿನ ಚುನಾವಣೆಗೆ ಪ್ರಚಾರಕ್ಕೆ ಬರಬೇಕಾದರೆ ನನ್ನ ಇಮೇಜ್ ದಕ್ಕೆಯಾಗಬಾರದು. ನನಗೆ ಗೌರವ ಸಿಕ್ಕರೆ ಮಾತ್ರ ಮುಂದಿನ ಚುನಾವಣೆ ಪ್ರಚಾರಕ್ಕೆ ಬರುತ್ತೇನೆ. ಗೌರವ ಸಿಗದಿದ್ದರೇ ಮುಂದಿನ ಚುನಾವಣೆಯಲ್ಲಿ ಯಾವುದೇ ಕಾರ್ಯನಿರ್ವಹಣೆ ಮಾಡಲ್ಲ ಎಂದು ಕಡ್ಡಿ ಮುರಿದಂತೆ ರಾಹುಲ್ ಮುಂದೆ ತಿಳಿಸಿದ್ದಾರೆ ಎನ್ನಲಾಗಿದೆ.
ನನ್ನ ಘನತೆಗೆ ಧಕ್ಕೆ ಮುಂದುವರೆದ್ರೆ ನಾನು ಯಾವುದೇ ಪ್ರಚಾರಕ್ಕೆ ಬರಲ್ಲ. ಇತ್ತೀಚೆಗೆ ನಡೆದ ಪರಿಷತ್ನ ನಾಲ್ಕು ಸ್ಥಾನಗಳು ಸೋಲಲು ಸ್ಟಿಂಗ್ ವಿಚಾರವೇ ಕಾರಣ. ಈ ವಿಡಿಯೋದಿಂದ ವೈಯಕ್ತಿಕವಾಗಿ ನನಗೆ ಮತ್ತು ಪಕ್ಷಕ್ಕೆ ಡ್ಯಾಮೇಜ್ ಆಗಿದೆ. ಈ ರೀತಿಯ ಮಾನಹಾನಿ ಸರಿಯಲ್ಲ. ವಿಡಿಯೋ ಹಿಂದಿನವರು ಯಾರು, ಅವರ ಉದ್ದೇಶ ಏನು ಗೊತ್ತಾಗಬೇಕು. ಈ ಕಾರಣಕ್ಕಾಗಿಯೇ ಪರಿಷತ್ ಚುನಾವಣೆಯಲ್ಲಿ ಅಹಿಂದ ಮತಗಳು ಕಾಂಗ್ರೆಸ್ಗೆ ಬಂದಿಲ್ಲ, ಮುಂದಿನ ಚುನಾವಣೆಯಲ್ಲೂ ಸಹ ಅಷ್ಟು ಸುಲಭವಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯನವರು, ರಾಹುಲ್ ಗಾಂಧಿ ಭೇಟಿ ಮಾಡಿದ್ದು, ರಾಜ್ಯದ ಅಭಿವೃದ್ಧಿ ವಿಚಾರವಾಗಿ ಚರ್ಚೆ ನಡೆಸಿದ್ದೇನೆ. ಮತ್ತು ಪಕ್ಷದ ಬೆಳವಣಿಗೆ, ರಾಜಕೀಯ ವಿದ್ಯಮಾನಗಳು, ಪಕ್ಷ ಸಂಘಟನೆ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿಯವರ ಜೊತೆ ಸ್ಟಿಂಗ್ ಆಪರೇಷನ್ ಕುರಿತು ಯಾವುದೇ ಚರ್ಚೆ ಮಾಡಿಲ್ಲ. ಮತ್ತು ಕುಮಾರಸ್ವಾಮಿಯವರ ಮನೆಯ ಪಾತ್ರದ ಬಗ್ಗೆ ಕಮಿಷನರ್ ಹೇಳಿಕೆ ಬಗ್ಗೆ ನನಗೆ ಗೊತ್ತಿಲ್ಲ ಎಂದು ತಿಳಿಸಿದ್ದಾರೆ.