ದಮಯಂತಿ ಸೇನ್ ಹೌರಾದಲ್ಲಿ ನಿಗೂಢವಾಗಿ ನಾಪತ್ತೆ 
ದೇಶ

ದಿನಸಿ ತರಲು ಹೋದ ಶೂಟರ್ ನಾಪತ್ತೆ: ಬಂಗಾಳದ ಬಾಲಕಿ ದಮಯಂತಿ ಸೇನ್ ಕಣ್ಮರೆ; ಕ್ರೀಡಾ ವಲಯದಲ್ಲಿ ತಲ್ಲಣ ಸೃಷ್ಟಿಸಿದ ಪ್ರಕರಣ! Shooter Damayanti Sen Missing

ಪ್ರಮುಖ ಮುಖ್ಯಾಂಶಗಳು

  • ದಮಯಂತಿ ಸೇನ್ ಹೌರಾದಲ್ಲಿ ನಿಗೂಢವಾಗಿ ನಾಪತ್ತೆ
  • ರಾಷ್ಟ್ರೀಯ ಶೂಟಿಂಗ್ ತಂಡದ ಟ್ರಯಲ್ಸ್‌ಗೆ ಆಯ್ಕೆಯಾಗಿದ್ದ 15 ವರ್ಷದ ದಮಯಂತಿ ಸೇನ್
  • ಹೌರಾ ರೈಲ್ವೆ ನಿಲ್ದಾಣದ ಸಿಸಿಟಿವಿಯಲ್ಲಿ ಕೊನೆಯ ದೃಶ್ಯ ಪತ್ತೆ
ಹೌರಾ: ಇತ್ತೀಚೆಗಷ್ಟೇ ರಾಷ್ಟ್ರೀಯ ಶೂಟಿಂಗ್ ತಂಡದ ಟ್ರಯಲ್ಸ್‌ಗೆ ಆಯ್ಕೆಯಾಗಿ ದೇಶದ ಗಮನ ಸೆಳೆದಿದ್ದ ಪಶ್ಚಿಮ ಬಂಗಾಳದ 15 ವರ್ಷದ ಪ್ರತಿಭಾವಂತ ಶೂಟರ್ ದಮಯಂತಿ ಸೇನ್ (Shooter Damayanti Sen Missing) ರಹಸ್ಯವಾಗಿ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಗುರುವಾರ (ಜು.16) ಮಧ್ಯಾಹ್ನದಿಂದ ಕಾಣೆಯಾಗಿರುವ ಈ ಬಾಲಕಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದು, ಇಡೀ ಕ್ರೀಡಾ ವಲಯದಲ್ಲಿ ಈ ಘಟನೆ ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ.

ನಡೆದಿದ್ದೇನು?

ಹೌರಾದ ಉಮಾಚರಣ್ ಭಟ್ಟಾಚಾರ್ಜಿ ಲೇನ್ ನಿವಾಸಿಯಾದ ದಮಯಂತಿ ಸೇನ್, ಪಶ್ಚಿಮ ಬಂಗಾಳದ ಶೂಟಿಂಗ್ ಬಳಗದಲ್ಲಿ ಸಕ್ರಿಯವಾಗಿದ್ದವರು. ಗುರುವಾರ (ಜು.16) ಮಧ್ಯಾಹ್ನ ಮನೆಯ ಬಳಿ ಇರುವ ದಿನಸಿ ಅಂಗಡಿಗೆ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಲು ಹೋದವರು ಮತ್ತೆ ಮನೆಗೆ ಮರಳಿಲ್ಲ.
ಮಗಳು ಎಷ್ಟು ಹೊತ್ತಾದರೂ ಮನೆಗೆ ಬರದಿದ್ದಾಗ ಗಾಬರಿಗೊಂಡ ಪಾಲಕರು ದಮಯಂತಿಯ ಸ್ನೇಹಿತರು, ಸಂಬಂಧಿಕರು ಹಾಗೂ ಆಕೆಯ ಜೊತೆ ತರಬೇತಿ ಪಡೆಯುತ್ತಿದ್ದ ಸಹ ಶೂಟರ್‌ಗಳಿಗೆ ಕರೆ ಮಾಡಿ ವಿಚಾರಿಸಿದ್ದಾರೆ. ಆದರೆ ಎಲ್ಲಿಯೂ ಆಕೆಯ ಸುಳಿವು ಸಿಗದಿದ್ದಾಗ, ತಡಮಾಡದೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತಕ್ಷಣವೇ ತನಿಖೆ ಆರಂಭಿಸಿದ್ದಾರೆ.

ಹೌರಾ ರೈಲ್ವೆ ನಿಲ್ದಾಣದ ಸಿಸಿಟಿವಿಯಲ್ಲಿ ಕೊನೆಯ ದೃಶ್ಯ!

ತನಿಖೆ ಕೈಗೆತ್ತಿಕೊಂಡ ಪೊಲೀಸರು ಹೌರಾ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಜಾಲಾಡಿದ್ದಾರೆ. ಈ ವೇಳೆ ಹೌರಾ ರೈಲ್ವೆ ನಿಲ್ದಾಣದ 4 ಮತ್ತು 5 ನೇ ಪ್ಲಾಟ್‌ಫಾರ್ಮ್‌ಗಳ ನಡುವೆ ದಮಯಂತಿ ನಡೆದುಕೊಂಡು ಹೋಗುತ್ತಿರುವ ದೃಶ್ಯ ಸೆರೆಯಾಗಿದೆ. ಮನೆಯಿಂದ ಹೊರಡುವಾಗ ದಮಯಂತಿ ಕೈಯಲ್ಲಿ ಮೊಬೈಲ್ ಫೋನ್ ಇತ್ತು ಎನ್ನಲಾಗಿದ್ದು, ಪೊಲೀಸರು ಮೊಬೈಲ್ ಲೊಕೇಶನ್ ಹಾಗೂ ಕಾಲ್ ರೆಕಾರ್ಡ್ಸ್ ಮೂಲಕ ಆಕೆ ಎಲ್ಲಿದ್ದಾಳೆಂದು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ.

ಯಾವುದೇ ಕೌಟುಂಬಿಕ ಕಲಹ ಇರಲಿಲ್ಲ!

ರಾಷ್ಟ್ರೀಯ ತಂಡದ ಟ್ರಯಲ್ಸ್‌ಗೆ ಆಯ್ಕೆಯಾದ ನಂತರ ದಮಯಂತಿ ಅತ್ಯಂತ ಶಿಸ್ತುಬದ್ಧ ಜೀವನ ನಡೆಸುತ್ತಿದ್ದರು. ಪ್ರತಿದಿನ ಬೆಳಗ್ಗೆ ತಪ್ಪದೇ ತರಬೇತಿಗೆ ಹೋಗುತ್ತಿದ್ದ ಆಕೆ ಕ್ರೀಡೆಯಲ್ಲಿ ದೊಡ್ಡ ಸಾಧನೆ ಮಾಡುವ ಕನಸು ಕಂಡಿದ್ದರು. ಮನೆಯಲ್ಲಿ ಯಾವುದೇ ರೀತಿಯ ಗಲಾಟೆ ಅಥವಾ ಸಮಸ್ಯೆಗಳಿರಲಿಲ್ಲ. ಅವಳು ತುಂಬಾನೇ ಖುಷಿಯಾಗಿದ್ದಳು ಎಂದು ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಯಾವುದೇ ಕೌಟುಂಬಿಕ ವಿವಾದಗಳಿಲ್ಲದೆ, ಕೈಯಲ್ಲಿ ಮೊಬೈಲ್ ಇಟ್ಟುಕೊಂಡು ಕೇವಲ ದಿನಸಿ ತರಲು ಹೋದ ಬಾಲಕಿ ನೇರವಾಗಿ ರೈಲ್ವೆ ನಿಲ್ದಾಣಕ್ಕೆ ಹೋಗಿದ್ದು ಯಾಕೆ? ಯಾರಾದರೂ ಆಕೆಯನ್ನು ಅಪಹರಿಸಿದ್ದಾರಾ ಅಥವಾ ಆಕೆಯೇ ಸ್ವತಃ ಎಲ್ಲಾದರೂ ಹೊರಟು ಹೋದಳಾ ಎಂಬ ಪ್ರಶ್ನೆಗಳಿಗೆ ಪೊಲೀಸ್​ ತನಿಖೆ ನಂತರವೇ ಉತ್ತರ ಸಿಗಬೇಕಾಗಿದೆ, (ಏಜನ್ಸೀಸ್​).