ಇಟಲಿಯಲ್ಲೂ ‘ಶೋಲೆ’ ಮೋಡಿ  
ದೇಶ

ಇಟಲಿಗೂ ಹಬ್ಬಿತು ‘ಶೋಲೆ’ ಹವಾ; ಜೈ-ವೀರು ಸ್ನೇಹಕ್ಕೆ ವಿದೇಶಿಗರು ಫಿದಾ | 'Sholay' vibes echo in Italy

ಪ್ರಮುಖ ಮುಖ್ಯಾಂಶಗಳು

  • 1975ರ ‘ಶೋಲೆ’ಗೆ 50 ವರ್ಷಗಳ ಬಳಿಕವೂ ಅದೇ ಕ್ರೇಜ್
  • ‘ಶೋಲೆ’ ವೀಕ್ಷಿಸಿದ ಸುಮಾರು 2,000 ಮಂದಿ ಇಟಾಲಿಯನ್ನರು
  • ಜೈ-ವೀರು ಸ್ನೇಹ ಹಾಗೂ ಗಬ್ಬರ್ ಸಿಂಗ್ ಲುಕ್​ಗೆ ವಿದೇಶಿಗರು ಫಿದಾ
Sholay: ‘ಕಿತ್ನೇ ಆದ್ಮಿ ಥೇ...? ‘ಯೇ ದೋಸ್ತಿ ಹಮ್ ನಹೀ ತೋಡೆಂಗೆ’... ಈ ಡೈಲಾಗ್‌ ಕೇಳಿದ ತಕ್ಷಣ ನೆನಪಾಗೋದು ಒಂದೇ ಸಿನಿಮಾ, ಅದು ‘ಶೋಲೆ’. 1975ರಲ್ಲಿ ಬಿಡುಗಡೆಯಾದ ಈ ಸಿನಿಮಾ 50 ವರ್ಷಗಳಾದರೂ ತನ್ನ ಕ್ರೇಜ್ ಕಳೆದುಕೊಂಡಿಲ್ಲ. ಇದೀಗ ‘ಶೋಲೆ’ ಹವಾ ಇಟಲಿಯಲ್ಲೂ ಮೊಳಗಿದೆ.
ಇನ್ನು, ಇಟಲಿಯ ಬೊಲೊಗ್ನಾದಲ್ಲಿ ನಡೆದ ವಿಶೇಷ ಪ್ರದರ್ಶನದಲ್ಲಿ ಬರೋಬ್ಬರಿ 2,000 ಮಂದಿ ಇಟಾಲಿಯನ್ನರು ರಾತ್ರಿ 11ರಿಂದ ಬೆಳಗಿನ ಜಾವ 3ರವರೆಗೆ ‘ಶೋಲೆ’ ಸಿನಿಮಾ ನೋಡಿದ್ದಾರೆ. ಈ ವಿಚಾರವನ್ನು ನಟ ಅಮಿತಾಭ್ ಬಚ್ಚನ್ ‘ಕೌನ್ ಬನೇಗಾ ಕರೋಡ್‌ಪತಿ-18’ ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ.

ಮಧ್ಯರಾತ್ರಿಯಲ್ಲೂ ‘ಶೋಲೆ’ ಕ್ರೇಜ್

ಬೊಲೊಗ್ನಾದ ಐತಿಹಾಸಿಕ ಪಿಯಾಝಾ ಮ್ಯಾಗಿಯೋರ್‌ನಲ್ಲಿ ನಡೆದ ಈ ವಿಶೇಷ ಪ್ರದರ್ಶನದಲ್ಲಿ ಪ್ರೇಕ್ಷಕರು ಬೆಳಗಿನ ಜಾವದವರೆಗೂ ಸಿನಿಮಾ ನೋಡಿದ್ದಾರೆ. ಜೈ-ವೀರು ಸ್ನೇಹ, ಗಬ್ಬರ್ ಸಿಂಗ್‌ನ ಖದರ್, ಠಾಕೂರ್‌ನ ಪ್ರತೀಕಾರದ ಕಥೆ ಹಾಗೂ ಸಿನಿಮಾದ ಜನಪ್ರಿಯ ಡೈಲಾಗ್‌ಗಳು ವಿದೇಶಿ ಪ್ರೇಕ್ಷಕರನ್ನೂ ಸೆಳೆದಿವೆ.್ 2025ರ ಜೂನ್ 27ರಂದು ‘ಇಲ್ ಸಿನಿಮಾ ರಿಟ್ರೋವಾಟೊ’ ಚಲನಚಿತ್ರೋತ್ಸವದ ಭಾಗವಾಗಿ ಶೋಲೆಯ ರಿಸ್ಟೋರ್ಡ್ ಮಾಡಿದ ಆವೃತ್ತಿಯ ಪ್ರದರ್ಶನ ನಡೆದಿತ್ತು. ಸುಮಾರು 204 ನಿಮಿಷಗಳ ಈ ಚಿತ್ರ ತೆರೆದ ಮೈದಾನದಲ್ಲಿ ಪ್ರದರ್ಶಿಸಲಾಗಿತ್ತು.

ಮತ್ತೆ ಬಂತು ಮೂಲ ಕ್ಲೈಮ್ಯಾಕ್ಸ್

ಈ ಪುನಃಸ್ಥಾಪಿತ ಆವೃತ್ತಿಯ ಮತ್ತೊಂದು ವಿಶೇಷತೆ ಎಂದರೆ ಮೂಲ ಕ್ಲೈಮ್ಯಾಕ್ಸ್. 1975ರಲ್ಲಿ ಸೆನ್ಸಾರ್ ಕಾರಣಕ್ಕೆ ಸಿನಿಮಾದ ಅಂತ್ಯವನ್ನು ಬದಲಿಸಲಾಗಿತ್ತು. ಮೂಲ ಆವೃತ್ತಿಯಲ್ಲಿ ಠಾಕೂರ್ ಗಬ್ಬರ್‌ನನ್ನು ಕೊಲ್ಲುತ್ತಾನೆ. ಆದರೆ ಬಿಡುಗಡೆಯಾದ ಆವೃತ್ತಿಯಲ್ಲಿ ಗಬ್ಬರ್‌ನನ್ನು ಪೊಲೀಸರು ಬಂಧಿಸುತ್ತಾರೆ. ಇದೀಗ ಪುನಃಸ್ಥಾಪಿತ ಕಟ್‌ನಲ್ಲಿ ನಿರ್ದೇಶಕ ರಮೇಶ್ ಸಿಪ್ಪಿ ಅವರ ಮೂಲ ಕ್ಲೈಮ್ಯಾಕ್ಸ್‌ಗೆ ಮತ್ತೆ ಜಾಗ ಸಿಕ್ಕಿದೆ.

ಬಹು ದೊಡ್ಡ ತಾರಾಗಣ

ಅಮಿತಾಭ್ ಬಚ್ಚನ್, ಧರ್ಮೇಂದ್ರ, ಸಂಜೀವ್ ಕುಮಾರ್, ಹೇಮಾ ಮಾಲಿನಿ, ಜಯಾ ಬಚ್ಚನ್ ಮತ್ತು ಅಮ್ಜದ್ ಖಾನ್ ಅಭಿನಯದ ‘ಶೋಲೆ’ ಭಾರತೀಯ ಸಿನಿಮಾದ ಕ್ಲಾಸಿಕ್‌ಗಳಲ್ಲಿ ಒಂದು. ಇದೀಗ ಇಟಲಿಯಲ್ಲಿ ಸಾವಿರಾರು ಮಂದಿ ಮಧ್ಯರಾತ್ರಿಯವರೆಗೂ ಕುಳಿತು ಸಿನಿಮಾ ವೀಕ್ಷಿಸಿರುವುದು ‘ಶೋಲೆ’ಗೆ ಗಡಿಗಳೇ ಇಲ್ಲ ಅನ್ನೋದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ,(ಏಜೆನ್ಸೀಸ್).