ಬಂಗಾಳ ರಾಜಕೀಯದಲ್ಲಿ ಕಂಪನ: ದೀದಿ ಹಠಾತ್ ಉಚ್ಚಾಟನೆ; ನಮ್ಮದೆ ಅಸಲಿ ಟಿಎಂಸಿ ಎಂದು ರಿತಬ್ರತಾ ಬ್ಯಾನರ್ಜಿ ಘೋಷಿಣೆ!
ಕೋಲ್ಕತ್ತಾ: ಪಶ್ಚಿಮ ಬಂಗಾಳ ರಾಜಕಾರಣದಲ್ಲಿ ಭಾರಿ ಹೈಡ್ರಾಮಾ ನಡೆದಿದ್ದು, ಮಾಜಿ ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ಅವರದೇ ಪಕ್ಷದ ಬಂಡಾಯ ನಾಯಕರು ಬಿಗ್ ಶಾಕ್ ನೀಡಿದ್ದಾರೆ. ಉಲುಬೇರಿಯಾ ಪುರ್ಬಾ ಕ್ಷೇತ್ರದ ಶಾಸಕ ರಿತಬ್ರತಾ ಬ್ಯಾನರ್ಜಿ ನೇತೃತ್ವದ ಅಸಲಿ ಟಿಎಂಸಿ(TMC Split) ಬಣವು ಭಾನುವಾರ ಮಹತ್ವದ ಸಭೆ ನಡೆಸಿ, ಪಕ್ಷದ ಸಂಸ್ಥಾಪಕಿ ಮಮತಾ ಅವರನ್ನು ಅಧ್ಯಕ್ಷ ಸ್ಥಾನದಿಂದಲೇ ವಜಾಗೊಳಿಸಿದೆ. ಅಷ್ಟೇ ಅಲ್ಲದೆ, ಪಕ್ಷದ ಎರಡನೇ ಅತ್ಯುನ್ನತ ನಾಯಕರಾಗಿದ್ದ ದೀದಿ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರನ್ನು ಪಕ್ಷದಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದೆ. ಈ ಮೂಲಕ ಪಶ್ಚಿಮ ಬಂಗಾಳದಲ್ಲಿ ಮಹಾರಾಷ್ಟ್ರ ಮಾದರಿಯ ರಾಜಕೀಯ ದಂಗೆಯೊಂದು ಅಧಿಕೃತವಾಗಿ ಮುನ್ನೆಲೆಗೆ ಬಂದಿದೆ.
ಇತ್ತೀಚೆಗಷ್ಟೇ ಪಕ್ಷವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ರಿತಬ್ರತಾ ಬ್ಯಾನರ್ಜಿ ಅವರನ್ನು ಮಮತಾ ಬಣವು ಪಕ್ಷದಿಂದ ಉಚ್ಚಾಟಿಸಿತ್ತು. ಆದರೆ, ಈಗ ರಿತಬ್ರತಾ ಅವರೇ ಉಲ್ಟಾ ನಡೆ ಇಟ್ಟು ಮಮತಾ ಮತ್ತು ಅಭಿಷೇಕ್ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಮೂಲಕ ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದ್ದಾರೆ.
ನ್ಯೂ ಟೌನ್ ಹೋಟೆಲ್‌ನಲ್ಲಿ ರಹಸ್ಯ ಸಭೆ, ನೂತನ ಅಧ್ಯಕ್ಷರ ಆಯ್ಕೆ!
ಕೋಲ್ಕತಾದ ನ್ಯೂ ಟೌನ್‌ನಲ್ಲಿರುವ ಖಾಸಗಿ ಹೋಟೆಲ್ ಒಂದರಲ್ಲಿ ರಿತಬ್ರತಾ ಬ್ಯಾನರ್ಜಿ ನೇತೃತ್ವದಲ್ಲಿ ಭಾನುವಾರ ದಿಕ್ಸೂಚಿ ಸಭೆ ನಡೆಯಿತು. ಈ ಸಭೆಯಲ್ಲಿ ಟಿಎಂಸಿಯ 60 ಶಾಸಕರು ಹಾಗೂ ಕೋಲ್ಕತ್ತಾ ಮಹಾನಗರ ಪಾಲಿಕೆಯ (KMC) 70 ಕೌನ್ಸಿಲರ್‌ಗಳು ಭಾಗವಹಿಸಿ ರಿತಬ್ರತಾ ಬಣಕ್ಕೆ ಜೈ ಎಂದಿದ್ದಾರೆ. ಸಭೆಯಲ್ಲಿ ಮಮತಾ ಅವರನ್ನು ಉಚ್ಚಾಟಿಸಿ, ಅವರ ಜಾಗಕ್ಕೆ ಹೌರಾ ಮಧ್ಯಮ ಕ್ಷೇತ್ರದ ಶಾಸಕ ಅರೂಪ್ ರಾಯ್ ಅವರನ್ನು ತೃಣಮೂಲ ಕಾಂಗ್ರೆಸ್‌ನ ನೂತನ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಸಂವಿಧಾನದ ಬಿಕ್ಕಟ್ಟು ಎಂದ ಬಂಡಾಯ ಪಡೆ!
ಪಕ್ಷದಲ್ಲಿ ಅರಾಜಕತೆ ಸೃಷ್ಟಿಯಾಗಿದ್ದರಿಂದಲೇ ತಾವು ಈ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಯಿತು ಎಂದು ಬಂಡಾಯ ನಾಯಕರು ಸಮರ್ಥಿಸಿಕೊಂಡಿದ್ದಾರೆ. ಸಭೆಯನ್ನುದ್ದೇಶಿಸಿ ಮಾತನಾಡಿದ ಪಶ್ಚಿಮ ಬಂಗಾಳ ವಿಧಾನಸಭೆಯ ವಿಪಕ್ಷದ ನಾಯಕರೂ ಆಗಿರುವ ರಿತಬ್ರತಾ ಬ್ಯಾನರ್ಜಿ, ಪಕ್ಷದ ಸಂವಿಧಾನದ ಪ್ರಕಾರ ಪ್ರತಿ ಮೂರು ವರ್ಷಕ್ಕೊಮ್ಮೆ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿಯನ್ನು ಪುನರ್ ರಚಿಸಬೇಕು. ಆದರೆ, 2022ರ ಫೆಬ್ರವರಿ ಬಳಿಕ ಯಾವುದೇ ಹೊಸ ಸಮಿತಿ ರಚನೆಯಾಗಿಲ್ಲ. ಹಳೆಯ ಸಮಿತಿಯ ಅವಧಿ ಮುಗಿದಿದ್ದರಿಂದ ಪಕ್ಷದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗಿತ್ತು. ಹೀಗಾಗಿ ನಾವು ನೂತನ ನಾಯಕತ್ವವನ್ನು ಆಯ್ಕೆ ಮಾಡಿದ್ದೇವೆ ಎಂದು ಘೋಷಿಸಿದ್ದಾರೆ.
ಮೂರು ಹೋಳಾದ ತೃಣಮೂಲ ಕಾಂಗ್ರೆಸ್!
ಈ ತಾಜಾ ಬೆಳವಣಿಗೆಯೊಂದಿಗೆ ಮಮತಾ ಅವರು ಕಟ್ಟಿ ಬೆಳೆಸಿದ ತೃಣಮೂಲ ಕಾಂಗ್ರೆಸ್ ಈಗ ಅಧಿಕೃತವಾಗಿ ಮೂರು ಭಾಗಗಳಾಗಿ ವಿಭಜನೆಗೊಂಡಿದೆ.
ಮಮತಾ ಬ್ಯಾನರ್ಜಿ ಬಣ: ಮಮತಾ ನೇತೃತ್ವದ ಮೂಲ ಟಿಎಂಸಿ.
ರಿತಬ್ರತಾ ಬ್ಯಾನರ್ಜಿ ಬಣ (ಅಸಲಿ ಟಿಎಂಸಿ): ಬಂಗಾಳ ವಿಧಾನಸಭೆಯಲ್ಲಿ 60ಕ್ಕೂ ಹೆಚ್ಚು ಶಾಸಕರ ಬೆಂಬಲದೊಂದಿಗೆ ಈಗ ಅಧಿಕೃತ ವಿರೋಧ ಪಕ್ಷವಾಗಿ ಗುರುತಿಸಿಕೊಂಡಿದೆ.
ಸಂಸದರ ಮೂರನೇ ಬಣ: ಟಿಎಂಸಿಯ ಸುಮಾರು ಎರಡು ಡಜನ್ (24ಕ್ಕೂ ಹೆಚ್ಚು) ಲೋಕಸಭಾ ಸಂಸದರು ಈಗಾಗಲೇ ದಿಢೀರನೆ ಬಂಡಾಯ ಎದ್ದು, ನ್ಯಾಷನಲ್ ಸಿಟಿಜನ್ಸ್ ಪಾರ್ಟಿ (NCP) ಎಂಬ ಪ್ರಾದೇಶಿಕ ಪಕ್ಷದೊಂದಿಗೆ ವಿಲೀನಗೊಂಡಿದ್ದಾರೆ. ಇವರು ಕೇಂದ್ರದ ಆಡಳಿತಾರೂಢ ಎನ್‌ಡಿಎ ಸರ್ಕಾರಕ್ಕೆ ಬೆಂಬಲ ಘೋಷಿಸಿದ್ದಾರೆ.
ಲೋಗೋ ಮತ್ತು 1,100 ಕೋಟಿ ರೂ. ಹಣಕ್ಕಾಗಿ ಸುಪ್ರೀಂ ಮೆಟ್ಟಿಲೇರಲು ಸಿದ್ಧತೆ!
ಪಕ್ಷ ಸೀಳಿದ ಬೆನ್ನಲ್ಲೇ ಈಗ ಅಸಲಿ ಟಿಎಂಸಿ ಯಾರು ಎಂಬ ಕಾನೂನು ಹೋರಾಟ ಶುರುವಾಗಿದೆ. ಪಕ್ಷದ ಅಧಿಕೃತ ಲೋಗೋ (ಜೋಡಾ ಫೂಲ್ - ಎರಡು ಹೂವುಗಳ ಗುರುತು) ತಮಗೇ ಸಿಗಬೇಕು ಎಂದು ಬಂಡಾಯ ಸಂಸದರು ಮತ್ತು ಶಾಸಕರು ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಸಿದ್ಧತೆ ನಡೆಸಿದ್ದಾರೆ. ಮತ್ತೊಂದೆಡೆ, ಪಕ್ಷದ ಬ್ಯಾಂಕ್ ಖಾತೆಯಲ್ಲಿರುವ ಬರೋಬ್ಬರಿ 1,100 ಕೋಟಿ ರೂಪಾಯಿಗಳ ಬೃಹತ್ ಚುನಾವಣಾ ನಿಧಿ ಯಾರಿಗೆ ಸೇರಬೇಕು ಎನ್ನುವ ಗೊಂದಲ ಇನ್ನು ಬಗೆಹರಿದಿಲ್ಲ.
ಒಟ್ಟಿನಲ್ಲಿ, ಬಂಗಾಳದ ಸಾರಥಿ ಎನಿಸಿಕೊಂಡಿದ್ದ ‘ದೀದಿ ಅವರಿಗೆ ಅವರದ್ದೇ ಪಕ್ಷದ ಶಾಸಕರು ತಲೆಕೆಳಗಾದ ಶಾಕ್ ನೀಡಿದ್ದು, ಬಂಗಾಳದ ರಾಜಕೀಯ ಭವಿಷ್ಯ ಕೋರ್ಟ್ ಅಂಗಳ ತಲುಪುವುದು ನಿಶ್ಚಿತವಾಗಿದೆ,(ಏಜೆನ್ಸೀಸ್).