ಮಮತಾ ಬ್ಯಾನರ್ಜಿ ಮತ್ತು ಸಂಸದೆ ಕಾಕೋಲಿ ಘೋಷ್ ದಸ್ತಿದಾರ್ 
ದೇಶ

ಸಂಸತ್​​​ನಲ್ಲೂ ಮಮತಾ ಬ್ಯಾನರ್ಜಿಗೆ ಶಾಕ್​: ಎನ್​ಡಿಎಗೆ ಬೆಂಬಲ ನೀಡಲು ನಿರ್ಧರಿಸಿ ಸ್ಪೀಕರ್​ಗೆ ಪತ್ರ ಬರೆದ 20 ಟಿಎಂಸಿ ಸಂಸದರು | 20 TMC MPs

ನವದೆಹಲಿ: ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಸೋಲಿನ ಬಳಿಕ ವಿಧಾನಸಭೆಯಲ್ಲಿ ಟಿಎಂಸಿ ಇಬ್ಬಾಗವಾಗಿದ್ದು, ಇದೀಗ ಸಂಸತ್​​ನಲ್ಲೂ ಪಕ್ಷದ ನಾಯಕತ್ವದ ವಿರುದ್ಧ ಬಂಡಾಯವೆದ್ದಿರುವ 20 ಸಂಸದರು(TMC MPs) ಆಡಳಿತರೂಢ ಎನ್​ಡಿಎಗೆ ಬೆಂಬಲ ನೀಡಲು ನಿರ್ಧರಿಸಿ ಸ್ಪೀಕರ್​ಗೆ ಪತ್ರ ಬರೆದಿದ್ದಾರೆ ಎಂದು ಸೋಮವಾರ (ಜೂ. 08) ವರದಿಯಾಗಿದೆ.
ಈ ಕುರಿತು ಪಿಟಿಐ ಜೊತೆ ಮಾತನಾಡಿರುವ ಟಿಎಂಸಿ ಹಿರಿಯ ಸಂಸದೆ ಕಾಕೋಲಿ ಘೋಷ್ ದಸ್ತಿದಾರ್, ನಾನು ಸೇರಿದಂತೆ ಸುಮಾರು 20 ಟಿಎಂಸಿ ಸಂಸದರು ಎನ್‌ಡಿಎಗೆ ಬೆಂಬಲ ನೀಡುವ ನಮ್ಮ ನಿರ್ಧಾರದ ಬಗ್ಗೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದೇವೆ ಎಂದು ತಿಳಿಸಿದ್ದಾರೆ.
ಎನ್ ಡಿಎ ಜೊತೆ ರಾಜಕೀಯವಾಗಿ ಹೊಂದಾಣಿಕೆ ಮಾಡಿಕೊಳ್ಳಲು ನಮ್ಮ ಗುಂಪು ನಿರ್ಧರಿಸಿದೆ. ಇದು ಜನಾದೇಶವನ್ನು ಪ್ರತಿಬಿಂಬಿಸುತ್ತದೆ. ನಾವು ಜನರ ತೀರ್ಪನ್ನು ಒಪ್ಪಿಕೊಂಡಿದ್ದೇವೆ. ಮತ್ತು ನಮ್ಮ ಭವಿಷ್ಯದ ರಾಜಕೀಯ ಹಾದಿಯು ಎನ್‌ಡಿಎ ಜೊತೆ ಹೊಂದಿಕೆಯಾಗಬೇಕು ಎಂದು ನಂಬುತ್ತೇವೆ ಎಂದು ಪ್ರತಿಪಾದಿಸಿದ್ದಾರೆ.
ಲೋಕಸಭೆಯಲ್ಲಿ ಪಕ್ಷದ ಮುಖ್ಯ ಸಚೇತಕರಾಗಿ ತಾವು ಮುಂದುವರೆದಿರುವುದಾಗಿ ಹೇಳಿಕೊಂಡಿರುವ ಅವರು, ಸಹ ಸಂಸದರೊಂದಿಗೆ ಸಮಾಲೋಚಿಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಇನ್ನೂ ಟಿಎಂಸಿ ಪ್ರಸ್ತುತ 28 ಲೋಕಸಭಾ ಸದಸ್ಯರು ಮತ್ತು 12 ರಾಜ್ಯಸಭಾ ಸದಸ್ಯರನ್ನು ಹೊಂದಿದೆ.

ಸುಖೇಂದು ಶೇಖರ್ ರೇ ರಾಜೀನಾಮೆ

ಟಿಎಂಸಿಯ ಸ್ಥಾಪಕ ಸದಸ್ಯರು ಮತ್ತು ಸಂಸತ್ತಿನಲ್ಲಿ ಪ್ರಮುಖ ಮುಖಗಳಲ್ಲಿ ಒಬ್ಬರಾಗಿದ್ದ ಪಕ್ಷದ ಹಿರಿಯ ನಾಯಕ ಮತ್ತು ಮಾಜಿ ಸಿಎಂ ಮಮತಾ ಬ್ಯಾನರ್ಜಿ ಅವರ ಆಪ್ತರಾಗಿದ್ದ ಸುಖೇಂದು ಶೇಖರ್ ರೇ ಅವರು ಇಂದು ಪಕ್ಷದ ನಾಯಕತ್ವದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ರಾಜ್ಯಸಭಾ ಸ್ಥಾನ ಮತ್ತು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ಇನ್ನೂ ಸಂಸದರ ಎನ್​ಡಿಎಗೆ ಬೆಂಬಲ ನೀಡುವ ನಿರ್ಧಾರ ಮತ್ತು ಸುಖೇಂದು ಶೇಖರ್ ರೇ ಅವರ ರಾಜೀನಾಮೆ ಬಗ್ಗೆ ಟಿಎಂಸಿ ನಾಯಕತ್ವವು ಇನ್ನೂ ಪ್ರತಿಕ್ರಿಯಿಸಿಲ್ಲ. ಇಂದು ಬೆಳಗ್ಗೆ ನಡೆದ ಇಂಡಿಯಾ ಮೈತ್ರಿಕೂಟದ ಸಭೆಯಲ್ಲಿ ಮಮತಾ ಬ್ಯಾನರ್ಜಿ ಭಾಗವಹಿಸಿದ್ದರು (ಏಜೆನ್ಸೀಸ್).