- ಮೊದಲ ಚುನಾವಣೆಯಲ್ಲೇ ಭರ್ಜರಿ ಗೆಲುವು ಕಂಡ ಟಿವಿಕೆ
- 107 ಸ್ಥಾನಗಳನ್ನು ಗೆದ್ದು, ಡಿಎಂಕೆ ಕೋಟೆಯನ್ನು ಉರುಳಿಸಿದ ಟಿವಿಕೆ
- ಟಿವಿಕೆ ಸಂಸ್ಥಾಪಕ ವಿಜಯ್ಗೆ ಅಭಿನಂದನೆ ಸಲ್ಲಿಸಿದ ಶಿವರಾಜ್ ಕುಮಾರ್
Shiva Rajkumar: ನಿಮ್ಮ ಪರಿಶ್ರಮಕ್ಕೆ ಸಿಕ್ಕ ಅರ್ಹವುಳ್ಳ ಗೆಲುವು. ನಿಮ್ಮ ವಿರುದ್ಧ ಟೀಕಾ ಪ್ರಹಾರಗಳು ಕೇಳಿ ಬಂದರೂ ಸಹ ಕೆಲಸ ಮುಖ್ಯ. ಮಾತಲ್ಲ ಎನ್ನುವ ಮೂಲಕ ನೀವು ಸಾಧಿಸಿದ್ದೀರಿ. ತಮಿಳು ನಾಡಿನ ಜನರಿಗೆ ಕೊಟ್ಟಿರುವ ಭರವಸೆ ಈಡೇರಿಸುವಂತಾಗಲಿ.. ನಿಮ್ಮ ಪ್ರತಿ ಕೆಲಸದಲ್ಲಿ ಪ್ರಗತಿ ಸಿಗುವಂತಾಗಲಿ ಹೀಗೆಂದು ಎಕ್ಸ್ನಲ್ಲಿ ಟ್ವೀಟ್ ಮಾಡಿ ತಮಿಳಿಗ ವೆಟ್ರಿ ಕಳಗಂನ ಸಂಸ್ಥಾಪಕ ವಿಜಯ್ಗೆ ಅಭಿನಂದನೆ ಸಲ್ಲಿಸಿದ್ದು ಕನ್ನಡದ ಎನರ್ಜಿಟಿಕ್ ಸ್ಟಾರ್ ಶಿವರಾಜ್ ಕುಮಾರ್ ಅವರು.
234 ಸ್ಥಾನಗಳಿಗೆ ನಡೆಸ 2026ರ ತಮಿಳುನಾಡಿನ ವಿಧಾನಸಭೆ ಚುನಾವಣೆಯಲ್ಲಿ ಟಿವಿಕೆ ಮುಖ್ಯಸ್ಥ ವಿಜಯ್ ಅವರ ಪಕ್ಷವು 100ಕ್ಕೂ ಹೆಚ್ಚು ಕ್ಷೇತ್ರದಲ್ಲಿ ಬಹುಮತವನ್ನು ಪಡೆದು ಮುನ್ನಡೆದಿದೆ, ವಿಜಯ್ ಕಿಂಗ್ ಮೇಕರ್ ಆಗಬಹುದು ಎನ್ನುವುದು ಎಲ್ಲರ ನಿರೀಕ್ಷೆಯಾಗಿತ್ತು. ಆದರೀಗ ತಾನೇ ಕಿಂಗ್ ಆಗಿದ್ದಾರೆ. ಇಷ್ಟೇ ಅಲ್ಲದೇ ಅವರ ಪಕ್ಷದ ಅಭ್ಯರ್ಥಿಗಳು ಡಿಎಂಕೆಯ ಘಟಾನುಘಟಿ ನಾಯಕರಿಗೆ ಸೋಲುಣಿಸಿರುವುದು ಮತ್ತೊಮದು ಅಭೂತಪೂರ್ವ ನಡೆಯಾಗಿದೆ.
ಸೆಲಬ್ರೆಟೀಸ್ನಿಂದ ಅಭಿನಂದನೆಯ ಮಹಾಪೂರ
ಮೊದಲ ಚುನಾವಣೆಯಲ್ಲಿ ಚೊಚ್ಚಲ ಗೆಲುವು ಕಂಡಿರುವ ವಿಜಯ್ ಅವರಿಗೆ ದಕ್ಷಿಣ ಭಾರತದ ಸೆಲಬ್ರೆಟಿಗಳು ಅಭಿನಂದನೆ ಸಲ್ಲಿಸುತ್ತಿದ್ದಾರೆ, ಕಾಜಲ್ ಅಗರ್ ವಾಲ್, ರಶ್ಮಿಕಾ ಮಂದಣ್ಣ, ರಜನೀಕಾಂತ್ ಸೇರಿದಂತೆ ಹಲವಾರು ನಾಯಕ-ನಟಿಯರು ಇದು ಅರ್ಹ ಗೆಲುವು ಎನ್ನುತ್ತಿದ್ದಾರೆ. ಇನ್ನು ಸ್ಯಾಂಡಲ್ವುಡ್ನ ಎನರ್ಜಿಟಿಕ್ ಹೀರೋ ಶಿವಣ್ಣ ಅವರು ಎಕ್ಸ್ನಲ್ಲಿ ಈ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದಾರೆ.
ಶಿವಣ್ಣನ ಪೋಸ್ಟ್ನಲ್ಲಿ ಹೀಗಿದೆ..
'ವಿಜಯ್ ನಿಮಗೆ ಸಿಕ್ಕ ಅರ್ಹ ಗೆಲುವು ಇದು. ನೀವು ರಾಜಕೀಯಕ್ಕೆ ಕಾಲಿಟ್ಟ ನಂತರ ನಿಮ್ಮ ಮೇಲೆ ಸಾಕಷ್ಟು ಟೀಕಾ ಪ್ರಹಾರಗಳು ಕೇಳಿ ಬಂದವು. ಹಲವು ಸವಾಲುಗಳನ್ನು ನೀವು ಕ್ರಮೇಣವಾಗಿ ಅನುಭವಿಸಿದ್ದೀರಿ. ಆದರೆ, ನೀವೆಲ್ಲೂ ಕುಗ್ಗಿಲ್ಲ. ಮಾತಿಗಿಂತ ಕೆಲಸ ಮುಖ್ಯ ಎನ್ನುತ್ತಾರೆ. ಹಾಗೆಯೇ ನೀವು ಮೌನವಾಗಿಯೇ ಇದ್ದು ಬಹುದೊಡ್ಡ ಜಯವನ್ನು ಕಂಡಿದ್ದೀರಿ. ನಾನೊಂದು ಕಾರ್ಯಕ್ರಮದಲ್ಲಿ ತಮಾಷೆಯಾಗಿ Try Vijay As King ಎಂದಿದ್ದೆ. ನೀವು ನಿಜಕ್ಕೂ ರಾಜನಷ್ಟು ಎತ್ತರಕ್ಕೆ ಬೆಳೆದು ಬಿಟ್ಟಿರಿ. ನೀವೀಗ ತಮಿಳುನಾಡಿನ ಜನರಿಗೆ ಕೊಟ್ಟಿರುವ ಭರವಸೆ ಈಡೇರಿಸುವ ಸಮಯ ಬಂದಿದೆ. ನಿಮ್ಮ ಮುಂದಿನ ಅಭಿವೃದ್ಧಿ ಕಾರ್ಯಗಳಿಗೆ ಒಳಿತಾಗಲಿ, ಪ್ರಗತಿ ಸಿಗಲಿ' ಎಂದು ಶಿವರಾಜ್ ಕುಮಾರ್ ಟ್ವೀಟ್ ಮಾಡಿದ್ದಾರೆ,(ಏಜೆನ್ಸೀಸ್).