Operation Tiger | ವಿಪ್ ಉಲ್ಲಂಘಿಸಿದ 6 ಶಿವಸೇನೆಯ ಸಂಸದರಿಗೆ ಸಂಕಷ್ಟ! 
ದೇಶ

ವಿಪ್ ಉಲ್ಲಂಘಿಸಿದ 6 ಶಿವಸೇನೆಯ ಸಂಸದರಿಗೆ ಸಂಕಷ್ಟ!... 24 ಗಂಟೆಗಳಲ್ಲಿ ಉತ್ತರಿಸದಿದ್ದರೆ ಉಚ್ಛಾಟನೆ ಫಿಕ್ಸ್ | Operation Tiger

ಮುಂಬೈ: ಪಕ್ಷದ ಆಜ್ಞೆ (ವ್ಹಿಪ್) ಮೀರಿ ಪ್ರಮುಖ ಸಭೆಗೆ ಗೈರಾದ ಸಂಸದರಿಗೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ (UBT) ಕಾರಣ ಕೇಳಿ ಹೊಸದಾಗಿ ನೋಟಿಸ್ ಜಾರಿ ಮಾಡಿದೆ. ಆಪರೇಷನ್ ಟೈಗರ್ (Operation Tiger) ವದಂತಿಗಳ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದ್ದು, ಪಕ್ಷದಲ್ಲಿನ ಭಿನ್ನಮತವನ್ನು ಹತ್ತಿಕ್ಕಲು ಉದ್ಧವ್ ಬಣ ಕಠಿಣ ನಿಲುವಿಗೆ ಮುಂದಾಗಿದೆ.
ಸಭೆಗೆ ಗೈರಾದ ಸಂಸದರು ತಮ್ಮ ಗೈರುಹಾಜರಿಗೆ ಸೂಕ್ತ ಕಾರಣ ನೀಡದಿದ್ದರೆ, ಅವರು ಸ್ವಯಂಪ್ರೇರಿತರಾಗಿ ಪಕ್ಷದ ಸದಸ್ಯತ್ವವನ್ನು ತ್ಯಜಿಸಿದ್ದಾರೆ ಎಂದು ಪರಿಗಣಿಸಿ, ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹತೆ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಪಕ್ಷ ಎಚ್ಚರಿಕೆ ನೀಡಿದೆ.

ಗೈರಾದ ಸಂಸದರಿಗೆ 24 ಗಂಟೆಗಳ ಗಡುವು!

ಲೋಕಸಭೆಯಲ್ಲಿ ಶಿವಸೇನಾ (UBT) ಮುಖ್ಯ ಸಚೇತಕ ಅನಿಲ್ ದೇಸಾಯಿ ಅವರು ಈ ನೋಟಿಸ್ ಜಾರಿ ಮಾಡಿದ್ದು, 24 ಗಂಟೆಗಳ ಒಳಗಾಗಿ ಲಿಖಿತ ವಿವರಣೆ ನೀಡುವಂತೆ ಗಡುವು ವಿಧಿಸಿದ್ದಾರೆ. ನಿಗದಿತ ಅವಧಿಯೊಳಗೆ ಸಂಸದರು ಪ್ರತಿಕ್ರಿಯಿಸದಿದ್ದರೆ, ಅವರು ಪಕ್ಷದೊಂದಿಗೆ ಸಂಬಂಧ ಕಡಿದುಕೊಂಡಿದ್ದಾರೆ ಎಂದು ಭಾವಿಸಿ, ಸಂವಿಧಾನದ 10 ನೇ ಶೆಡ್ಯೂಲ್ (ಪಕ್ಷಾಂತರ ನಿಷೇಧ ಕಾಯ್ದೆ) ಅಡಿಯಲ್ಲಿ ಕ್ರಮ ಕೈಗೊಳ್ಳಲು ಪಕ್ಷ ಸಿದ್ಧತೆ ನಡೆಸಿದೆ ಎಂದು ಅವರು ತಿಳಿಸಿದ್ದಾರೆ.
ಶಿವಸೇನಾ (UBT) ಪಕ್ಷದ ಒಟ್ಟು 9 ಲೋಕಸಭಾ ಸಂಸದರ ಪೈಕಿ 6 ಸಂಸದರು ಪ್ರಮುಖ ಸಭೆಗೆ ಗೈರಾಗುವುದರೊಂದಿಗೆ ಈ ವಿವಾದ ತಾರಕಕ್ಕೇರಿತು. ನಾಗೇಶ್ ಅಷ್ಟೀಕರ್, ಸಂಜಯ್ ದೇಶ್‌ಮುಖ್, ಸಂಜಯ್ ಜಾಧವ್, ಸಂಜಯ್ ದಿನಾ ಪಾಟೀಲ್, ಓಂಪ್ರಕಾಶ್ ರಾಜೇನಿಂಬಾಳ್ಕರ್ ಮತ್ತು ಭೌಸಾಹೇಬ್ ವಾಕಚೌರೆ ಸಭೆಗೆ ಗೈರಾದ ಸಂಸದರಾಗಿದ್ದಾರೆ. ಆದರೆ, ಹಿರಿಯ ನಾಯಕರಾದ ಅರವಿಂದ್ ಸಾವಂತ್, ಅನಿಲ್ ದೇಸಾಯಿ, ರಾಜಾಭಾವು ವಾಜೆ ಮತ್ತು ಸಂಜಯ್ ರಾವುತ್ ಸಭೆಯಲ್ಲಿ ಉಪಸ್ಥಿತರಿದ್ದರು.

ಆಪರೇಷನ್ ಟೈಗರ್ ವದಂತಿಗೆ ಸಿಕ್ತು ಪುಷ್ಟಿ!

ಬಹುಪಾಲು ಸಂಸದರ ಗೈರುಹಾಜರಿಯು ಮಹಾರಾಷ್ಟ್ರ ರಾಜಕೀಯದಲ್ಲಿ ಆಪರೇಷನ್ ಟೈಗರ್ ವದಂತಿಗಳಿಗೆ ರೆಕ್ಕೆಪುಕ್ಕ ನೀಡಿದೆ. ಶಿವಸೇನಾ ಎಂಎಲ್‌ಸಿ ಚಂದ್ರಕಾಂತ್ ರಘುವಂಶಿ ಅವರು, ಉದ್ಧವ್ ಬಣದ 6 ಸಂಸದರು ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆ ನಾಯಕತ್ವದ ಮೇಲೆ ವಿಶ್ವಾಸ ವ್ಯಕ್ತಪಡಿಸಿದ್ದು, ಈಗಾಗಲೇ ಅವರ ಬಣದೊಂದಿಗೆ ಗುರುತಿಸಿಕೊಂಡಿದ್ದಾರೆ ಎಂದು ಹೇಳಿರುವುದು ಉದ್ಧವ್ ಕ್ಯಾಂಪ್‌ನಲ್ಲಿ ಭಾರಿ ಆತಂಕ ಸೃಷ್ಟಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ನಾಯಕ ಸಂಜಯ್ ರಾವತ್, ಗೈರಾದ ಸಂಸದರ ವಿರುದ್ಧ ಅನರ್ಹತೆ ಪ್ರಕ್ರಿಯೆಯನ್ನು ಈಗಾಗಲೇ ಆರಂಭಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಸಂವಿಧಾನದ ನಿಯಮಗಳು ಮತ್ತು ನ್ಯಾಯಾಲಯದ ಮಾರ್ಗಸೂಚಿಗಳನ್ನು ಪಾಲಿಸಿದರೆ ಬಂಡಾಯ ಸಂಸದರು ಕಠಿಣ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ಸಹ ನೀಡಿದ್ದಾರೆ.

ಭಾವನಾತ್ಮಕ ಕಾರ್ಡ್ ಪ್ಲೇ ಮಾಡಿದ ಉದ್ಧವ್ ಠಾಕ್ರೆ!

ಏಕನಾಥ್ ಶಿಂಧೆ ಅವರ ಮೊದಲ ಬಂಡಾಯ ನಡೆದು ಸುಮಾರು 4 ವರ್ಷಗಳ ಬಳಿಕ ಉದ್ಧವ್ ಸೇನೆಗೆ ಮತ್ತೊಂದು ಅಗ್ನಿಪರೀಕ್ಷೆ ಎದುರಾಗಿದೆ. ಮುಂಬೈನಲ್ಲಿ ನಡೆದ ಪಕ್ಷದ 60ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಉದ್ಧವ್ ಠಾಕ್ರೆ, ನಾನು ಪಕ್ಷವನ್ನು ಮುನ್ನಡೆಸಲು ವಿಫಲನಾಗಿದ್ದೇನೆ ಎಂದು ಕಾರ್ಯಕರ್ತರು ಭಾವಿಸಿದರೆ, ನಾನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲು ಸಿದ್ಧ ಎಂದು ಹೇಳುವ ಮೂಲಕ ಕಾರ್ಯಕರ್ತರನ್ನು ಒಟ್ಟುಗೂಡಿಸಲು ಭಾವನಾತ್ಮಕ ಕಾರ್ಡ್ ಪ್ಲೇ ಮಾಡಿದ್ದಾರೆ(ಏಜೆನ್ಸೀಸ್​​).