ಶಿವಸೇನೆ, ಟಿಎಂಸಿ ಇಬ್ಬಾಗ: 2029ರಲ್ಲಿ ಬಿಜೆಪಿಗೆ ಗೆಲುವು ಸಲೀಸು? ಪ್ರಾದೇಶಿಕ ಪಕ್ಷಗಳ ಆಂತರಿಕ ಕದನದ ಹಿಂದೆ ಅಡಗಿರುವ ಅಸಲಿ ರಹಸ್ಯವೇನು? 
ದೇಶ

ಶಿವಸೇನೆ, ಟಿಎಂಸಿ ಇಬ್ಬಾಗ: 2029ರಲ್ಲಿ ಬಿಜೆಪಿಗೆ ಗೆಲುವು ಸಲೀಸು? ಪ್ರಾದೇಶಿಕ ಪಕ್ಷಗಳ ಆಂತರಿಕ ಕದನದ ಹಿಂದೆ ಅಡಗಿರುವ ಅಸಲಿ ರಹಸ್ಯವೇನು? BJP Strategy For 2029 Elections

ನವದೆಹಲಿ: ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (UBT) ಸಂಸದರ ಮಹಾ ವಲಸೆ ಮತ್ತು ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್(BJP Strategy For 2029 Elections) ಶಾಸಕರ ಉಚ್ಚಾಟನೆ ಬರೆ ಕೇವಲ ಆಯಾ ರಾಜ್ಯಗಳ ಆಂತರಿಕ ಬಿಕ್ಕಟ್ಟಲ್ಲ. ಇದರ ಹಿಂದೆ ಭಾರತೀಯ ರಾಜಕಾರಣದ ದಿಕ್ಸೂಚಿಯನ್ನೇ ಬದಲಿಸಬಲ್ಲ ದೀರ್ಘಕಾಲದ ರಾಜಕೀಯ ತಂತ್ರಗಾರಿಕೆ ಅಡಗಿದೆ ಎಂಬ ಚರ್ಚೆ ಈಗ ದೇಶಾದ್ಯಂತ ಜೋರಾಗಿದೆ.
2029ರ ಲೋಕಸಭಾ ಚುನಾವಣೆಗೂ ಮುನ್ನ ದೇಶದ ಎಲ್ಲಾ ಪ್ರಾದೇಶಿಕ ಪಕ್ಷಗಳನ್ನು ಮುಗಿಸುವುದೇ ಬಿಜೆಪಿಯ ಮೂಲ ಅಜೆಂಡಾ, ಎಂದು ಶಿವಸೇನೆ (UBT) ನಾಯಕ ಸಂಜಯ್ ರಾವುತ್ ಇತ್ತೀಚೆಗೆ ಗಂಭೀರ ಆರೋಪಿಸಿದ್ದರು. ಈ ಆರೋಪ ನಿಜವೋ ಸುಳ್ಳೋ, ಆದರೆ ಕಳೆದ ಕೆಲವು ವರ್ಷಗಳ ರಾಜಕೀಯ ವಿದ್ಯಮಾನಗಳನ್ನು ಗಮನಿಸಿದರೆ, ಭಾರತದ ಪ್ರಾದೇಶಿಕ ಪಕ್ಷಗಳು 1990ರ ದಶಕದ ನಂತರ ತಮ್ಮ ಇತಿಹಾಸದಲ್ಲೇ ಅತ್ಯಂತ ಕಠಿಣ ಮತ್ತು ಅಸ್ತಿತ್ವದ ಹೋರಾಟವನ್ನು ಎದುರಿಸುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ.

1. ಮೈತ್ರಿಕೂಟದ ಯುಗದಿಂದ ‘ಒಂದೇ ಪಕ್ಷ’ದ ಯುಗದತ್ತ ಭಾರತ!

1989 ರಿಂದ ಮುಂದಿನ 3 ದಶಕಗಳ ಕಾಲ ಭಾರತದ ರಾಜಕಾರಣವನ್ನು ಪ್ರಾದೇಶಿಕ ಪಕ್ಷಗಳೇ ನಿಯಂತ್ರಿಸುತ್ತಿದ್ದವು. ದೆಹಲಿಯಲ್ಲಿ ಯಾರು ಅಧಿಕಾರ ಹಿಡಿಯಬೇಕು ಎಂಬುದನ್ನು ತಮಿಳುನಾಡಿನ ಡಿಎಂಕೆ, ಎಐಎಡಿಎಂಕೆ, ಬಂಗಾಳದ ಟಿಎಂಸಿ, ಒಡಿಶಾದ ಬಿಜೆಡಿ, ಉತ್ತರ ಪ್ರದೇಶದ ಸಮಾಜವಾದಿ ಮತ್ತು ಬಹುಜನ ಸಮಾಜವಾದಿ ಪಕ್ಷಗಳು ಹಾಗೂ ಬಿಹಾರದ ಆರ್​ಜೆಡಿ, ಜೆಡಿಯು ನಿರ್ಧರಿಸುತ್ತಿದ್ದವು. ಭಾಷೆ, ಜಾತಿ ಮತ್ತು ಪ್ರಾದೇಶಿಕ ಅಸ್ಮಿತೆಯ ಆಧಾರದ ಮೇಲೆ ಬೆಳೆದ ಈ ಪಕ್ಷಗಳು ರಾಷ್ಟ್ರೀಯ ಪಕ್ಷಗಳಿಗೆ ಸಿಂಹಸ್ವಪ್ನವಾಗಿದ್ದವು.
ಆದರೆ, ಯಾವಾಗ ಬಿಜೆಪಿ ಹಿಂದಿ ಭಾಷಿಕ ರಾಜ್ಯಗಳನ್ನು ದಾಟಿ ಪ್ರಾದೇಶಿಕ ಪಕ್ಷಗಳ ಭದ್ರಕೋಟೆಗೆ ಲಗ್ಗೆ ಇಡಲು ಆರಂಭಿಸಿತೋ, ಅಲ್ಲಿಂದ ಈ ಪ್ರಾದೇಶಿಕ ಸಾಮ್ರಾಜ್ಯಗಳು ಬಿರುಕು ಬಿಡಲು ಆರಂಭಿಸಿದವು.

ಪ್ರಾದೇಶಿಕ ಕೋಟೆಗಳನ್ನು ಉರುಳಿಸಿದ ಬಿಜೆಪಿ:

ಒಡಿಶಾ: ಸತತ 24 ವರ್ಷಗಳ ಕಾಲ ನವೀನ್ ಪಟ್ನಾಯಕ್ ಅವರ ಬಿಜೆಡಿ ಹೊಂದಿದ್ದ ಏಕಸ್ವಾಮ್ಯವನ್ನು ಬಿಜೆಪಿ ಇತ್ತೀಚೆಗೆ ಧೂಳೀಪಟ ಮಾಡಿದೆ.
ದೆಹಲಿ: ಆಮ್ ಆದ್ಮಿ ಪಕ್ಷದ ಭದ್ರಕೋಟೆಯಲ್ಲೂ ಬಿಜೆಪಿ ಭಾರಿ ನುಸುಳುವಿಕೆ ಮಾಡಿದೆ.
ಮಹಾರಾಷ್ಟ್ರ: ಶಿವಸೇನೆ ಹಾಗೂ ಶರದ್ ಪವಾರ್ ಅವರ ಎನ್‌ಸಿಪಿ ಪಕ್ಷಗಳನ್ನು ಇಬ್ಬಾಗ ಮಾಡುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಸದ್ಯದ ಗಾಸಿಪ್‌ಗಳ ಪ್ರಕಾರ ಶರದ್ ಪವಾರ್ ಬಣದ 8 ಸಂಸದರ ಪೈಕಿ 5 ಸಂಸದರು ಎನ್‌ಡಿಎ ಕೂಟ ಸೇರಲು ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ.

2. ಸೋಲಿಗಿಂತ ‘ಪಕ್ಷ ಒಡೆಯುವುದು’ ಬಿಜೆಪಿಗೆ ಹೇಗೆ ಲಾಭ?

ರಾಜಕೀಯ ವಿಶ್ಲೇಷಕರ ಪ್ರಕಾರ, ಬಿಜೆಪಿ ಒಂದು ಪ್ರಾದೇಶಿಕ ಪಕ್ಷವನ್ನು ಚುನಾವಣೆಯಲ್ಲಿ ನೇರವಾಗಿ ಸೋಲಿಸುವುದಕ್ಕಿಂತ, ಆ ಪಕ್ಷದ ಒಳಗೇ ಒಡೆಯುವುದರಿಂದ ದೀರ್ಘಾವಧಿ ಲಾಭ ಪಡೆಯುತ್ತದೆ. ಮಹಾರಾಷ್ಟ್ರವೇ ಇದಕ್ಕೆ ಪ್ರತ್ಯಕ್ಷ ಉದಾಹರಣೆಯಾಗಿದೆ.
ಯಾವಾಗ ಉದ್ಧವ್ ಠಾಕ್ರೆ ಮತ್ತು ಏಕನಾಥ್ ಶಿಂಧೆ ನಡುವೆ ಪಕ್ಷ ಇಬ್ಬಾಗವಾಯಿತೋ, ಹಾಗೂ ಶರದ್ ಪವಾರ್ ಮತ್ತು ಅಜಿತ್ ಪವಾರ್ ನಡುವೆ ಬಿರುಕು ಮೂಡಿತೋ, ಆಗ ಆ ಪಕ್ಷಗಳ ಮತ ಬ್ಯಾಂಕ್, ತಳಮಟ್ಟದ ಕಾರ್ಯಕರ್ತರ ಜಾಲ ಮತ್ತು ಪ್ರಭಾವಿ ನಾಯಕತ್ವ ಎಲ್ಲವೂ ಹರಿದು ಹಂಚಿಹೋದವು. ಇಂತಹ ಸನ್ನಿವೇಶದಲ್ಲಿ ವಿಪಕ್ಷಗಳ ಮತಗಳು ವಿಭಜನೆಯಾಗಿ, ಅಂತಿಮವಾಗಿ ಮೊದಲ ಸ್ಥಾನ ಪಡೆಯುವ ಬಿಜೆಪಿಗೆ ಗೆಲುವು ಅತ್ಯಂತ ಸುಲಭವಾಗುತ್ತದೆ.
ಇದೇ ಮಾದರಿ ಈಗ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್‌ನಲ್ಲೂ ಕಾಣಿಸುತ್ತಿದೆ. ಚುನಾವಣೆ ಸೋಲಿನ ಬೆನ್ನಲ್ಲೇ ಮಮತಾ ವಿರುದ್ಧ ಬಂಡಾಯ ಎದ್ದಿರುವ ನಾಯಕರು ಪಕ್ಷವನ್ನು ಇಬ್ಬಾಗ ಮಾಡಲು ಹೊರಟಿದ್ದಾರೆ. ಇದರಿಂದಾಗಿ ಪ್ರಾದೇಶಿಕ ನಾಯಕರು ತಮ್ಮ ರಾಜ್ಯವನ್ನು ರಕ್ಷಿಸಿಕೊಳ್ಳುವ ಬದಲು, ತಮ್ಮ ಸ್ವಂತ ಪಕ್ಷವನ್ನು ಉಳಿಸಿಕೊಳ್ಳಲು ರಕ್ಷಣಾತ್ಮಕ ಹೋರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

3. 2029ರ ಚುನಾವಣೆಯಲ್ಲಿ ಬಿಜೆಪಿಗೆ ಸಿಗಲಿರುವ ಮೂರು ದೊಡ್ಡ ಅನುಕೂಲಗಳು

ಪ್ರಾದೇಶಿಕ ಪಕ್ಷಗಳ ಈ ಸರಣಿ ಪತನದಿಂದ 2029ರ ಮಹಾ ಚುನಾವಣೆಯಲ್ಲಿ ಬಿಜೆಪಿಗೆ ಮೂರು ಪ್ರಮುಖ ರಾಜಕೀಯ ಲಾಭಗಳು ಸಿಗಲಿವೆ.
ಪ್ರಬಲ ಪ್ರಾದೇಶಿಕ ನಾಯಕರ ಕೊರತೆ: ಬಿಜೆಪಿಯ ದೆಹಲಿ ನಾಯಕತ್ವವನ್ನು ಪ್ರಾದೇಶಿಕ ಮಟ್ಟದಲ್ಲಿ ತಡೆದು ನಿಲ್ಲಬಲ್ಲ ಮಮತಾ ಬ್ಯಾನರ್ಜಿ, ಉದ್ಧವ್ ಠಾಕ್ರೆ, ಶರದ್ ಪವಾರ್ ಅವರಂತಹ ‘ಸ್ಥಳೀಯ ಪ್ರಭಾವಿ ನಾಯಕರ’ ಶಕ್ತಿ ಕುಂದುತ್ತದೆ.
ವಿಪಕ್ಷಗಳ ಮತಗಳ ವಿಭಜನೆ: ಒಂದೇ ಹೆಸರಿನ ಎರಡು ಪಕ್ಷಗಳು (ಉದಾಹರಣೆಗೆ ಇಬ್ಬರು ಶಿವಸೇನೆ ಅಥವಾ ಇಬ್ಬರು ಟಿಎಂಸಿ) ಮುಖಾಮುಖಿಯಾದಾಗ ಆಡಳಿತ ವಿರೋಧಿ ಮತಗಳು ಹಂಚಿಹೋಗಿ, ಬಿಜೆಪಿ ಸಲೀಸಾಗಿ ಗೆಲ್ಲುತ್ತದೆ.
ಕಾಂಗ್ರೆಸ್ ಹೆಗಲಿಗೆ ಭಾರಿ ಹೊರೆ: ಪ್ರಾದೇಶಿಕ ಮಿತ್ರಪಕ್ಷಗಳು ದುರ್ಬಲಗೊಂಡಷ್ಟೂ, ಇಡೀ ವಿಪಕ್ಷಗಳ ಒಕ್ಕೂಟವನ್ನು ಮುನ್ನಡೆಸುವ ಒಂಟಿ ಜವಾಬ್ದಾರಿ ಕಾಂಗ್ರೆಸ್ ಹೆಗಲಿಗೆ ಬೀಳುತ್ತದೆ. ಇತಿಹಾಸದ ಪ್ರಕಾರ, ಬಿಜೆಪಿ ಮತ್ತು ಕಾಂಗ್ರೆಸ್ ನೇರ ಮುಖಾಮುಖಿಯಾಗುವ ರಾಜ್ಯಗಳಲ್ಲಿ ಬಿಜೆಪಿಯ ಗೆಲುವಿನ ಪ್ರಮಾಣ ಶೇ. 80 ಕ್ಕಿಂತ ಹೆಚ್ಚಿರುತ್ತದೆ.

‘ಒಂದು ದೇಶ, ಒಂದು ಸಂಸ್ಕೃತಿ’ ಸಿದ್ದಾಂತದ ಯಶಸ್ಸು?

ರಾಜಕೀಯ ತಜ್ಞರ ಪ್ರಕಾರ, ಇದು ಕೇವಲ ಚುನಾವಣಾ ತಂತ್ರವಲ್ಲ, ಬದಲಿಗೆ ಇದೊಂದು ಸೈದ್ಧಾಂತಿಕ ಬದಲಾವಣೆ. ಪ್ರಾದೇಶಿಕ ಪಕ್ಷಗಳು ಸ್ಥಳೀಯ ಭಾಷೆ ಮತ್ತು ಅಸ್ಮಿತೆಯ ಹೆಸರಿನಲ್ಲಿ ಕೇಂದ್ರದ ವಿರುದ್ಧ ಹೋರಾಡುತ್ತಿದ್ದವು. ಆದರೆ ದೇಶದ ಮತದಾರರು ಪ್ರಾದೇಶಿಕ ಚಿಂತನೆಗಿಂತ ರಾಷ್ಟ್ರೀಯ ಚಿಂತನೆ ಹಾಗೂ ಒಂದೇ ನಾಯಕತ್ವಕ್ಕೆ ಹೆಚ್ಚು ಒಲವು ತೋರುತ್ತಿರುವುದರಿಂದ ಪ್ರಾದೇಶಿಕ ಪಕ್ಷಗಳ ಅಸ್ತಿತ್ವಕ್ಕೆ ಧಕ್ಕೆ ಬರುತ್ತಿದೆ.
ಒಟ್ಟಾರೆಯಾಗಿ ಹೇಳುವುದಾದರೆ, 2029ರ ಲೋಕಸಭಾ ಚುನಾವಣೆಗೆ ಇನ್ನು ಕಾಲಾವಕಾಶವಿದ್ದರೂ, ಅದಕ್ಕಾಗಿನ ಕಣ ಈಗಿನಿಂದಲೇ ಸಿದ್ಧವಾಗುತ್ತಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಎಷ್ಟು ಸೀಟು ಗೆಲ್ಲುತ್ತದೆ ಎನ್ನುವುದಕ್ಕಿಂತ, ಅದರ ಎದುರಾಳಿ ಪ್ರಾದೇಶಿಕ ಪಕ್ಷಗಳು ಎಷ್ಟು ದುರ್ಬಲವಾಗಿ ಕಣಕ್ಕಿಳಿಯಲಿವೆ ಎಂಬುದೇ ಬಿಜೆಪಿಯ ಅತ್ಯಂತ ದೊಡ್ಡ ಚುನಾವಣಾ ಬಲವಾಗಲಿದೆ,(ಏಜೆನ್ಸೀಸ್).