ಮಹಾರಾಷ್ಟ್ರದ ಥಾಣೆಯಲ್ಲಿ ಶಿವಸೇನೆ (ಯುಬಿಟಿ) ನಾಯಕ ಪ್ರದೀಪ್ ಪುರ್ನೇಕರ್ ಗುಂಡಿಟ್ಟು ಹತ್ಯೆ 
ದೇಶ

ಥಾಣೆಯಲ್ಲಿ ಶಿವಸೇನೆ ನಾಯಕನಿಗೆ ಗುಂಡೇಟು; ಆಸ್ಪತ್ರೆ ತಲುಪುವಷ್ಟರಲ್ಲಿ ಸಾವು, ರಾಜಕೀಯ ವಲಯದಲ್ಲಿ ಭಾರಿ ಸಂಚಲನ! Pradeep Purnekar

ಮಹಾರಾಷ್ಟ್ರದ ಥಾಣೆಯಲ್ಲಿ ಶಿವಸೇನೆ (ಯುಬಿಟಿ) ವಿಭಾಗ ಪ್ರಮುಖ್ ಪ್ರದೀಪ್ ಪುರ್ನೇಕರ್ ಗುಂಡಿಟ್ಟು ಹತ್ಯೆ. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವು. ರಾಜಕೀಯ ವಲಯದಲ್ಲಿ ಭಾರೀ ಆತಂಕ.

ಥಾಣೆ: ಮಹಾರಾಷ್ಟ್ರದ ಥಾಣೆ ನಗರದಲ್ಲಿ ನಡೆದ ಭೀಕರ ಘಟನೆ ಇಡೀ ರಾಜ್ಯದ ರಾಜಕೀಯ ವಲಯದಲ್ಲಿ ತೀವ್ರ ಆತಂಕ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ. ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (UBT) ಪಕ್ಷದ ಪ್ರಭಾವಿ ನಾಯಕ ಹಾಗೂ ಥಾಣೆ 'ವಿಭಾಗ ಪ್ರಮುಖ್' ಆಗಿದ್ದ ಪ್ರದೀಪ್ ಪುರ್ನೇಕರ್ (Pradeep Purnekar) ಮೇಲೆ ಮಂಗಳವಾರ (ಸೆ.29) ರಾತ್ರಿ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ಮಂಗಳವಾರ ರಾತ್ರಿ 9 ಗಂಟೆ ಸುಮಾರಿಗೆ ಕಪುರ್‌ಬಾವ್ಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕೃತ್ಯ ನಡೆದಿದ್ದು, ಚುನಾವಣಾ ಮತ್ತು ರಾಜಕೀಯ ಸಮರಗಳು ಜೋರಾಗಿರುವ ಬೆನ್ನಲ್ಲೇ ಈ ಕೊಲೆ ನಡೆದಿರುವುದು ಭಾರೀ ಸಂಚಲನಕ್ಕೆ ಕಾರಣವಾಗಿದೆ.

ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಕೊನೆಯುಸಿರೆಳೆದ ನಾಯಕ!

ಪ್ರದೀಪ್ ಪುರ್ನೇಕರ್ ಮೇಲೆ ಗುರುತಿಸಲಾಗದ ಕೆಲವು ದುಷ್ಕರ್ಮಿಗಳು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಇದರಿಂದ ತೀವ್ರವಾಗಿ ಗಾಯಗೊಂಡು ರಕ್ತಸಿಕ್ತರಾಗಿ ಬಿದ್ದಿದ್ದ ಪುರ್ನೇಕರ್ ರನ್ನು ತಕ್ಷಣವೇ ಘೋಡ್‌ಬಂದರ್ ರಸ್ತೆಯಲ್ಲಿರುವ ಇನ್ಫಿನಿಟಿ ಆಸ್ಪತ್ರೆಗೆ ತುರ್ತಾಗಿ ದಾಖಲಿಸಲಾಗಿದೆ.

ಆದರೆ, ಎದೆಗೆ ಹಾಗೂ ದೇಹದ ಇತರೆ ಭಾಗಗಳಿಗೆ ತೀವ್ರೃತವಾಗಿ ಗುಂಡೇಟು ತಗುಲಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ಹಾಗೂ ಪೊಲೀಸರು ಅಧಿಕೃತವಾಗಿ ಖಚಿತಪಡಿಸಿದ್ದಾರೆ.

ಸ್ಥಳಕ್ಕೆ ಪೊಲೀಸರ ದೌಡು; 'ನಾಕಾಬಂದಿ' ಕಾವಲು!

ಘಟನೆ ನಡೆದ ತಕ್ಷಣವೇ ಸ್ಥಳಕ್ಕೆ ಧಾವಿಸಿದ ಕಪುರ್‌ಬಾವ್ಡಿ ಠಾಣೆಯ ಪೊಲೀಸರು ಹಾಗೂ ಹಿರಿಯ ಅಧಿಕಾರಿಗಳು ಇಡೀ ಪ್ರದೇಶವನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ವಿಧಿವಿಜ್ಞಾನ ತಜ್ಞರನ್ನು ಸ್ಥಳಕ್ಕೆ ಕರೆಸಿ ಸಾಕ್ಷ್ಯಗಳನ್ನು ಸಂಗ್ರಹಿಸುವ ಕೆಲಸ ನಡೆಯುತ್ತಿದೆ.

ಅಲ್ಲದೆ, ದಾಳಿಕೋರರು ತಪ್ಪಿಸಿಕೊಳ್ಳಲು ಬಳಸಿದ ಮಾರ್ಗ ಹಾಗೂ ಅವರ ಮುಖಚರ್ಯೆಯನ್ನು ಪತ್ತೆಹಚ್ಚಲು ಸುತ್ತಮುತ್ತಲಿನ ರಸ್ತೆಗಳ ಎಲ್ಲಾ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಥಾಣೆ ನಗರದ ಪ್ರಮುಖ ನಿರ್ಗಮನ ದ್ವಾರಗಳಲ್ಲೆಲ್ಲಾ ಕಟ್ಟುನಿಟ್ಟಿನ ತಪಾಸಣೆಗಾಗಿ ನಾಕಾಬಂದಿ ವ್ಯವಸ್ಥೆ ಮಾಡಲಾಗಿದ್ದು, ಹಂತಕರ ಪತ್ತೆಗಾಗಿ ವಿಶೇಷ ಪೊಲೀಸ್ ತಂಡಗಳನ್ನು ರಚಿಸಿರುವ ಕುರಿತು ಮಾಹಿತಿ ದೊರೆತಿದೆ.

ರಾಜಕೀಯ ವೈಷಮ್ಯವೇ ಕೊಲೆಗೆ ಕಾರಣ?

ಪ್ರದೀಪ್ ಪುರ್ನೇಕರ್ ಹತ್ಯೆಗೆ ನಿಖರವಾದ ಕಾರಣವೇನು ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಆದರೆ ಇದು ರಾಜಕೀಯ ದ್ವೇಷದಿಂದ ನಡೆದ ಕೃತ್ಯವೇ ಅಥವಾ ಹಳೆಯ ವೈಯಕ್ತಿಕ ವೈಷಮ್ಯವೇ ಎಂಬ ಆಯಾಮದಲ್ಲಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

ಒಂದು ಕಡೆ ಚುನಾವಣಾ ಆಯೋಗದ ವಿರುದ್ಧ ವಿರೋಧ ಪಕ್ಷಗಳು ಈಗಾಗಲೇ ರಸ್ತೆಗಿಳಿದು ಹೋರಾಟ ನಡೆಸುತ್ತಿರುವ ಈ ಸಮಯದಲ್ಲಿ, ಶಿವಸೇನೆ (ಯುಬಿಟಿ) ಪ್ರಮುಖ ನಾಯಕನೊಬ್ಬನ ಹತ್ಯೆಯಾಗಿರುವುದು ಥಾಣೆಯಲ್ಲಿ ತೀವ್ರ ಉದ್ವಿಗ್ನತೆಯನ್ನು ಸೃಷ್ಟಿಸಿದೆ. ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಆಸ್ಪತ್ರೆ ಮತ್ತು ಪೊಲೀಸ್ ಠಾಣೆಯ ಮುಂದೆ ಜಮಾಯಿಸಿದ್ದು, ತಪ್ಪಿತಸ್ಥರನ್ನು ತಕ್ಷಣವೇ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ, (ಏಜೆನ್ಸೀಸ್​).