Mahayuti Alliance | ಉಪಮುಖ್ಯಮಂತ್ರಿ ಶಿಂಧೆಗೆ ತಪ್ಪಿದ ಆಮಂತ್ರಣ! 
ದೇಶ

ಉಪಮುಖ್ಯಮಂತ್ರಿ ಶಿಂಧೆಗೆ ತಪ್ಪಿದ ಆಮಂತ್ರಣ!...ಮಹಾಯುತಿ ಬಿರುಕನ್ನು ಬಹಿರಂಗಪಡಿಸಿತು ಆ ಒಂದು ನೋಟಿಸ್ | Mahayuti Alliance

ಮುಂಬೈ: ನವಿ ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮವೊಂದರ ಆಮಂತ್ರಣದ ವಿವಾದವು ಮಹಾರಾಷ್ಟ್ರದ ಆಡಳಿತಾರೂಢ ಮಹಾಯುತಿ ಮೈತ್ರಿಕೂಟದ (Mahayuti Alliance) ಒಳಗಿನ ಆಂತರಿಕ ಅಸಮಾಧಾನ ಮತ್ತು ಬಿಕ್ಕಟ್ಟನ್ನು ಮತ್ತೊಮ್ಮೆ ಬೀದಿಗೆ ತಂದಿದೆ.
ಮಹಾರಾಷ್ಟ್ರ ದಿನಾಚರಣೆಯಂದು ವಿಮಾನ ನಿಲ್ದಾಣದಲ್ಲಿ 20 ಅಡಿ ಎತ್ತರದ ಛತ್ರಪತಿ ಶಿವಾಜಿ ಮಹಾರಾಜ್ ಅವರ ಪ್ರತಿಮೆ ಅನಾವರಣಗೊಳಿಸುವ ಕಾರ್ಯಕ್ರಮಕ್ಕೆ ಉಪಮುಖ್ಯಮಂತ್ರಿ ಹಾಗೂ ನಗರಾಭಿವೃದ್ಧಿ ಸಚಿವ ಏಕನಾಥ್ ಶಿಂಧೆ ಅವರಿಗೆ ಆಮಂತ್ರಣ ನೀಡಲಾಗಿಲ್ಲ ಎಂಬ ಆರೋಪ ಕೇಳಿಬಂದಿದೆ. ಈ ಯೋಜನೆಯ ಪ್ರಮುಖ ಜವಾಬ್ದಾರಿ ಹೊತ್ತಿರುವ ಸಿಡ್ಕೊ (CIDCO) ಸಂಸ್ಥೆಯು ಶಿಂಧೆ ಅವರ ನಗರಾಭಿವೃದ್ಧಿ ಸಚಿವಾಲಯದ ನೇರ ಉಸ್ತುವಾರಿಯಲ್ಲೇ ಕಾರ್ಯನಿರ್ವಹಿಸುತ್ತಿದ್ದರೂ, ಅವರಿಗೆ ಆಮಂತ್ರಣ ನೀಡದಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಅದಾನಿ ಏರ್‌ಪೋರ್ಟ್ ಅಥಾರಿಟಿ ಮತ್ತು ಸಿಡ್ಕೊ ಜಂಟಿಯಾಗಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ರಾಯಗಢದ ಮಾಜಿ ಉಸ್ತುವಾರಿ ಸಚಿವೆ ಅದಿತಿ ತತ್ಕರೆ ಮತ್ತು ಅರಣ್ಯ ಸಚಿವ ಗಣೇಶ್ ನಾಯ್ಕ್ ಉಪಸ್ಥಿತರಿದ್ದರು. ಆದರೆ, ಈ ಕಾರ್ಯಕ್ರಮದ ಬಗ್ಗೆ ಏಕನಾಥ್ ಶಿಂಧೆ ಅವರಿಗೆ ಯಾವುದೇ ಮಾಹಿತಿ ಇರಲಿಲ್ಲ ಮತ್ತು ಮತ್ತೊಬ್ಬ ಉಪಮುಖ್ಯಮಂತ್ರಿ ಸುನೇತ್ರಾ ಪವಾರ್ ಅವರ ಹೆಸರನ್ನೂ ಸಹ ಅತಿಥಿಗಳ ಪಟ್ಟಿಯಿಂದ ಕೈಬಿಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ಶಿಂಧೆ ಬಣದ ತೀವ್ರ ಆಕ್ರೋಶ
ಈ ನಿರ್ಲಕ್ಷ್ಯವು ಮಹಾರಾಷ್ಟ್ರ ರಾಜಕಾರಣದಲ್ಲಿ ಭಾರಿ ವಿವಾದ ಸೃಷ್ಟಿಸಿದೆ. ಶಿಂಧೆ ನೇತೃತ್ವದ ಶಿವಸೇನೆ ಬಣದ ನಾಯಕರು, ಇದು ಆಕಸ್ಮಿಕವಾಗಿ ನಡೆದ ತಪ್ಪಲ್ಲ, ಬದಲಿಗೆ ಉದ್ದೇಶಪೂರ್ವಕವಾಗಿ ಮಾಡಿರುವ ಅವಮಾನ ಎಂದು ಆರೋಪಿಸಿದ್ದಾರೆ. ರಾಜ್ಯ ಸಚಿವ ಸಂಜಯ್ ಶಿರ್ಸಾತ್ ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಅಧಿಕಾರಶಾಹಿಯ ಒಂದು ವರ್ಗವು ರಾಜಕೀಯ ಒತ್ತಡದ ಅಡಿಯಲ್ಲಿ ಕೆಲಸ ಮಾಡುತ್ತಿದೆ ಮತ್ತು ಯೋಜನೆಗೆ ಸಿಗಬೇಕಾದ ಶ್ರೇಯಸ್ಸನ್ನು ತಪ್ಪಿಸಲು ಪ್ರಯತ್ನಿಸುತ್ತಿದೆ ಎಂದು ನೇರವಾಗಿ ವಾಗ್ದಾಳಿ ನಡೆಸಿದ್ದಾರೆ.

ಮೈತ್ರಿಕೂಟವನ್ನು ಲೇವಡಿ ಮಾಡಿದ ವಿರೋಧ ಪಕ್ಷಗಳು

ಈ ವಿವಾದವು ವಿರೋಧ ಪಕ್ಷಗಳಿಗೆ ಆಡಳಿತ ಪಕ್ಷದ ವಿರುದ್ಧ ಮುಗಿಬೀಳಲು ದೊಡ್ಡ ಅಸ್ತ್ರವನ್ನು ನೀಡಿದ್ದು, ಶಿವಸೇನೆ (ಯುಬಿಟಿ) ನಾಯಕ ಅಂಬಾದಾಸ್ ದಾನ್ವೆ, ಮೈತ್ರಿಕೂಟದಲ್ಲಿ ಏಕನಾಥ್ ಶಿಂಧೆ ಸ್ಥಾನಮಾನವನ್ನು ಲೇವಡಿ ಮಾಡಿದ್ದಾರೆ. ಮಹಾಯುತಿ ಪಾಲುದಾರರ ನಡುವೆ ಆಂತರಿಕ ಭಿನ್ನಾಭಿಪ್ರಾಯ ಮತ್ತು ಬಿರುಕು ಎಷ್ಟು ಹೆಚ್ಚಾಗಿದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ ಎಂದು ಅವರು ವ್ಯಂಗ್ಯವಾಡಿದ್ದಾರೆ.

ಸಿಡ್ಕೊ, ಅದಾನಿ ಸಂಸ್ಥೆಗೆ ಶೋಕಾಸ್ ನೋಟಿಸ್!

ವಿವಾದ ಮತ್ತು ಟೀಕೆಗಳು ತೀವ್ರಗೊಳ್ಳುತ್ತಿದ್ದಂತೆ ಎಚ್ಚೆತ್ತುಕೊಂಡ ಮುಖ್ಯಮಂತ್ರಿಗಳ ಕಚೇರಿ ಪರಿಸ್ಥಿತಿಯನ್ನು ನಿಯಂತ್ರಿಸಲು ತಕ್ಷಣದ ಕ್ರಮ ಕೈಗೊಂಡಿದೆ. ಅಧಿಕೃತ ಶಿಷ್ಟಾಚಾರವನ್ನು ಉಲ್ಲಂಘಿಸಿರುವುದು ಮತ್ತು ಉಪಮುಖ್ಯಮಂತ್ರಿಗಳನ್ನು ಕಾರ್ಯಕ್ರಮದಿಂದ ಹೊರಗಿಟ್ಟಿರುವುದಕ್ಕೆ ಸೂಕ್ತ ಕಾರಣ ನೀಡುವಂತೆ ಸಿಡ್ಕೊ ಮತ್ತು ಅದಾನಿ ಏರ್‌ಪೋರ್ಟ್ ಅಥಾರಿಟಿ ಎರಡಕ್ಕೂ ಮುಖ್ಯಮಂತ್ರಿ ಕಚೇರಿ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ.
ಮಹಾರಾಷ್ಟ್ರದಲ್ಲಿ ಪ್ರಮುಖ ಚುನಾವಣೆಗಳು ಹತ್ತಿರ ಬರುತ್ತಿರುವ ಈ ಸಮಯದಲ್ಲಿ, ಕ್ರೆಡಿಟ್ ವಾರ್ ಮತ್ತು ಸಮನ್ವಯದ ಕೊರತೆಯಿಂದ ಎದ್ದಿರುವ ಈ ವಿವಾದವು ಮೈತ್ರಿಕೂಟದ ಭವಿಷ್ಯದ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುದನ್ನು ಕಾದುನೋಡಬೇಕಿದೆ(ಏಜೆನ್ಸೀಸ್​).