Maharashtra Civic Polls | ಮಹಾರಾಷ್ಟ್ರ ಡಿಸಿಎಂ ಏಕನಾಥ್​ ಶಿಂಧೆ 
ದೇಶ

Maharashtra Civic Polls | ಒಂದೇ ಕುಟುಂಬದ ಆರು ಜನರಿಗೆ ಶಿಂಧೆ ಶಿವಸೇನೆ ಟಿಕೆಟ್​; ಬಿಜೆಪಿ ಅಸಮಾಧಾನ

ಮುಂಬೈ: ಮಹಾರಾಷ್ಟ್ರದಲ್ಲಿ ಕುಟುಂಬ ರಾಜಕಾರಣ ಎನ್ನವುದು ದಶಕಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದ್ದು, ಈಗ ಅದು ಮಿತಿಮಿರಿದೆ, ಯಾವ ಪಕ್ಷಗಳು ಇದಕ್ಕೆ ಹೊರತಾಗಿಲ್ಲ ಎನ್ನುವುದು ಇಲ್ಲಿ ಗಮನಿಸಬೇಕಾದ ಸಂಗತಿ.
ರಾಜ್ಯದಲ್ಲಿ ನಡೆಯಲಿರುವ ಮುನ್ಸಿಪಲ್ ಕೌನ್ಸಿಲ್ ಚುನಾವಣೆಯಲ್ಲಿ, ಕುಲ್ಗಾಂವ್-ಬದ್ಲಾಪುರ್ ಪ್ರದೇಶದಿಂದ ಶಿವಸೇನೆ (ಏಕನಾಥ್​ ಶಿಂಧೆ ಬಣ) ತನ್ನ ಹಿರಿಯ ನಾಯಕ ವಾಮನ್ ಮ್ಹಾತ್ರೆ ಕುಟುಂಬದ ಆರು ಜನರಿಗೆ ಟಿಕೆಟ್ ನೀಡಿದ ಬಳಿಕ ಮಹಾಯುತಿ ಮೈತ್ರಿಕೂಟದಲ್ಲಿ ಬಿರುಕು ಮೂಡಿದ್ದು, ಮಿತ್ರಪಕ್ಷದ ಈ ನಡೆಗೆ ಬಿಜೆಪಿಯಿಂದ ತೀವ್ರ ವಿರೋಧ ವ್ಯಕ್ತವಾಗಿದೆ ಎಂದು ಮೂಲಗಳ ಮಾಹಿತಿ.
ಸ್ಥಳೀಯ ಮಟ್ಟದ ರಾಜಕೀಯದಲ್ಲಿ ತಮ್ಮದೇ ಆದ ಹಿಡಿತ ಹೊಂದಿರುವ ಪಕ್ಷದ ನಗರ ಘಟಕದ ಮುಖ್ಯಸ್ಥ ವಾಮನ್ ಮ್ಹಾತ್ರೆಯ ಪತ್ನಿ, ಮಗ, ಸಹೋದರ, ಅತ್ತಿಗೆ ಮತ್ತು ಸೋದರಳಿಯ ಚುನಾವಣಾ ಕಣದಲ್ಲಿರುವವರು. 49 ಸ್ಥಾನಗಳ ನಗರ ಪಾಲಿಕೆಯಲ್ಲಿ, ಆರು ಜನ ಕುಟುಂಬದ ಸದಸ್ಯರೆ ಚುನಾವಣೆಗೆ ಸ್ಪರ್ಧಿಸುತ್ತಿರುವುದನ್ನು ಬಿಜೆಪಿ ವಿರೋಧಿಸಿದೆ.
ಡಿಸಿಎಂ ಏಕನಾಥ್​ ಶಿಂಧೆ ನೇತೃತ್ವದ ಶಿವಸೇನೆ ಸ್ವಜನಪಕ್ಷಪಾತವನ್ನು ಉತ್ತೇಜಿಸುತ್ತಿದ್ದು, ಇದು ಸಮರ್ಥ ನಾಯಕತ್ವದ ಕೊರತೆಯನ್ನು ಪ್ರತಿಬಿಂಬಿಸುತ್ತದೆ, ವಂಶಪಾರಂಪರ್ಯ ರಾಜಕೀಯಕ್ಕೆ ಪ್ರೋತ್ಸಾಹಿಸಿದಂತಾಗುತ್ತದೆಮ, ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ ಅನ್ಯಾಯ ಮಾಡಿದಂತಾಗುತ್ತದೆ ಎನ್ನುವ ವಿಶ್ಲೇಷಣೆಗಳು ಬಿಜೆಪಿ ವಲಯದಿಂದ ಕೇಳಿ ಬರುತ್ತಿವೆ. ಒಂದು ದಶಕದ ಹಿಂದಿನಿಂದ ಬದ್ಲಾಪುರ ಭಾಗದಲ್ಲಿ ಮ್ಹಾತ್ರೆ ಕುಟುಂಬ ಹಿಡಿತ ಹೊಂದಿದ್ದು, 2015 ರ ಪುರಸಭೆಯ ಚುನಾವಣೆಯಲ್ಲಿ ಆ ಕುಟುಂಬದ ನಾಲ್ವರು ಸದಸ್ಯರು ಕೌನ್ಸಿಲ್ ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರು.
ಶಿಂಧೆ ಬಣವು ಮಾಜಿ ಕೌನ್ಸಿಲರ್ ಪ್ರವೀಣ್ ರಾವತ್ ಕುಟುಂಬಕ್ಕೂ ಮೂರು ಟಿಕೆಟ್‌ಗಳನ್ನು ನೀಡಿದ್ದು, ಮೈತ್ರಿಕೂಟದೊಳಗೆ ಪ್ರಾರಂಭಿಕ ಕಿಡಿ ಹೊತ್ತುಕೊಳ್ಳಲು ಕಾರಣವಾಗಿದೆ ಎನ್ನಲಾಗಿದೆ. ಪ್ರವೀಣ್​ ರಾವತ್​ ಪತ್ನಿ ಶೀತಲ್ ರಾವತ್ ಮತ್ತು ಅತ್ತಿಗೆ ವಿಜಯ ರಾವತ್ ಚುನಾವಣಾ ಕಣದಲ್ಲಿದ್ದಾರೆ. ಈ ರೀತಿಯ ಕುಟುಂಬದ ಬಗೆಗಿನ ಸ್ವಜನಪಕ್ಷಪಾತ ಧೋರಣೆ ಮೈತ್ರಿಕೂಟಗಳನ್ನು ಸಹಜವಾಗಿ ಕೆರಳಿಸಿದೆ. ಕುಟುಂಬ ಕೇಂದ್ರಿತ ಟಿಕೆಟ್ ಹಂಚಿಕೆಯಿಂದ ಬಿಜೆಪಿ ಕೂಡ ಹೊರತಾಗಿಲ್ಲ, ಬದ್ಲಾಪುರ ನಗರ ಅಧ್ಯಕ್ಷ ರಾಜೇಂದ್ರ ಘೋರ್ಪಡೆ ಪರಿಷತ್ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದರೆ, ಪತ್ನಿ ರಚಿತಾ ಘೋರ್ಪಡೆ ನಾಗರಿಕ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ(ಏಜೆನ್ಸೀಸ್​).