Rider Posts New Gurugram Hit-And-Run Clip
- ಗುರುಗ್ರಾಮ್ನಲ್ಲಿ ಹಿಟ್ ಅಂಡ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ವಿಡಿಯೋ ವೈರಲ್ ಗುರುಗ್ರಾಮ್
- ನಿಜಕ್ಕೂ ಮಹಿಳೆಯರಿಗೆ ಸುರಕ್ಷಿತ ತಾಣವಾಗಿದೆಯೇ ಎಂದು ಪ್ರಶ್ನೆ ಮಾಡಿದ ಮತ್ತೊಬ್ಬ ರೈಡರ್
- ಕಾರಿನಲ್ಲಿದ್ದ ವ್ಯಕ್ತಿಯ ಮಾತು ಕೇಳದಿದ್ದಕ್ಕೆ ಡಿಕ್ಕಿ ಹೊಡೆದಿದ್ದಾಗಿ ವಿಡಿಯೋ ಹಂಚಿಕೊಂಡ ಮತ್ತೊಬ್ಬ ರೈಡರ್
ಚಂಡೀಗಢ: ಹರಿಯಾಣದ ಗುರುಗ್ರಾಮ್ನ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ನಡೆದಿದ್ದ ಬೆಚ್ಚಿಬೀಳಿಸುವ ರೋಡ್ರೇಜ್ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಮಹಿಳಾ ರೈಡರ್ ಸಿಯಾ ಬೈಕ್ ಕಾರಿನಲ್ಲಿ ಚೇಸ್ ಮಾಡಿ, ಭೀಕರವಾಗಿ ಡಿಕ್ಕಿ ಹೊಡೆದ ಹಿಟ್-ಅಂಡ್-ರೇನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ವೀಡಿಯೊವೊಂದು ಹೊರಬಿದ್ದಿದೆ. ಸಂತ್ರಸ್ತೆಯ ಹಿಂದೆ ಬೈಕ್ನಲ್ಲಿ ಬರುತ್ತಿದ್ದ ಅವರ ಪರಿಚಿತರೊಬ್ಬರು ಈ ದೃಶ್ಯಾವಳಿಯನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆದ ವಿಡಿಯೋಗಳ ಪ್ರಕಾರ ಸಿಯಾ ತನ್ನ ಅಪ್ರಿಲಿಯಾ ಆರ್ಎಸ್ 457 (Aprilia RS 457) ಸ್ಪೋರ್ಟ್ಸ್ ಬೈಕ್ನಲ್ಲಿ ಇತರ ಸವಾರರೊಂದಿಗೆ ತೆರಳುತ್ತಿದ್ದಾಗ ಬಿಳಿ ಬಣ್ಣದ ಸೆಡಾನ್ ಕಾರು ಆಕೆಯನ್ನು ಹಿಂಬಾಲಿಸಿದೆ. ಕಾರಿನಲ್ಲಿದ್ದ ಆರೋಪಿ ಕಲ್ಯಾಣ್ ಬೈನ್ಸ್ಲಾ ಹಿಟ್ ಅಂಡ್ ರನ್ ಮಾಡಿದ್ದಾನೆ. ಆತ ಡಿಕ್ಕಿ ಹೊಡೆದರಭಸಕ್ಕೆ ಸಿಯಾ ಬೈಕ್ನಿಂದ ರಸ್ತೆಗೆ ಉರುಳಿರುವುದು ಕಂಡುಬಂದಿದೆ.
ಹೊಸ ವಿಡಿಯೋದಲ್ಲಿ ಏನಿದೆ?
ಸಂತ್ರಸ್ತೆ ರೈಡರ್ ಹಿಂಬದಿಯಿಂದ ಬರುತ್ತಿದ್ದ youknowabhishek_Abhishek Sharma ಎಂಬ ಇನ್ಸ್ಟಾಗ್ರಾಮ್ ಖಾತೆ ಹೊಂದಿರುವ ವ್ಯಕ್ತಿ ಘಟನೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಆತ ಆಕೆಗೆ ಏನನ್ನೋ ಹೇಳುತ್ತಾ.. ನಿರಂತರವಾಗಿ ಚೇಸ್ ಮಾಡುತ್ತಿದೆ. ಆಕೆ ನಿಲ್ಲಿಸಲೇ ಇಲ್ಲ. ಕೊನೆಗೆ ತುಂಬಾ ಕೆಟ್ಟದಾಗಿ ಆಕೆಯ ಗಾಡಿಗೆ ಡಿಕ್ಕಿ ಹೊಡೆದಿದ್ದಾನೆ. ನಿಜವಾಗಲೂ ಗುರುಗ್ರಾಮ್ ಮಹಿಳೆಯರಿಗೆ ಸುರಕ್ಷಿತ ಸ್ಥಳವಾಗಿದ್ಯಾ ಎನ್ನುವ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ.
ಗುರುಗ್ರಾಮ್ ಈಗ ಹೆಣ್ಣುಮಕ್ಕಳಿಗೆ ಸುರಕ್ಷಿತವಾಗಿದೆ ಎಂದು ನನಗೆನಿಸುವುದಿಲ್ಲ. ಈ ಕ್ಲಿಪ್ನಲ್ಲಿ ನೀವು ನೋಡುವಂತೆ ಆ ವ್ಯಕ್ತಿ ಉದ್ದೇಶಪೂರ್ವಕವಾಗಿಯೇ ಆಕೆಗೆ ಡಿಕ್ಕಿ ಹೊಡೆದಿದ್ದಾನೆ. ಹರಿಯಾಣ ಪೊಲೀಸರು ಇಂತವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಸಿಯಾ (rebelwheels_sia_) ತನ್ನನ್ನು ದಾಟಿ ಹೋದಾಗ ಒಂದು ಕಾರು ಆಕೆಯನ್ನು ಹಿಂಬಾಲಿಸುತ್ತಿರುವುದನ್ನು ಮತ್ತು ತುಂಬಾ ಹತ್ತಿರದಿಂದ ಟಾರ್ಗೆಟ್ ಮಾಡಿದ್ದು ಗಮನಕ್ಕೆ ಬಂತು. ಆ ಕಾರು ಮತ್ತು ಬೈಕ್ ಮಧ್ಯೆ ಹೋಗಿ ನೋಡಿದಾಗ, ಕಾರಿನಲ್ಲಿದ್ದ ಮೂವರು ವ್ಯಕ್ತಿಗಳು ಮದ್ಯಪಾನ ಮಾಡಿದ್ದರು. ಕಿಟಕಿಗಳು ಕಪ್ಪಾಗಿದ್ದವು ಎಂದಿದ್ದಾರೆ. ಸೆಂಟ್ರಲ್ ಪ್ಲಾಜಾ ಬಳಿ ರಸ್ತೆ ತಿರುವು ಪಡೆಯುತ್ತಿದ್ದಂತೆ ಕಾರು ವೇಗವಾಗಿ ಬಂದು ಸಿಯಾ ಅವರ ಬೈಕಿಗೆ ಡಿಕ್ಕಿ ಹೊಡೆದು ಎಸ್ಕೇಪ್ ಆದರು ಎಂದು Abhishek Sharma ಹೇಳಿಕೊಂಡಿದ್ದಾರೆ.
ಬೆಂಬಲಕ್ಕೆ ಧನ್ಯವಾದ ಎಂದ ಮಹಿಳಾ ಬೈಕರ್
ಘಟನೆ ವೈರಲ್ ಆಗುತ್ತಲೇ ಹಲವರು ಪ್ರಕರಣದ ಬಗ್ಗೆ ನಾನಾ ವಿಚಾರವನ್ನು ಮುಂದಿಡುತ್ತಿದ್ದಾರೆ, ಆ ಬೆನ್ನಲ್ಲೇಸಂತ್ರಸ್ತೆ ಮಹಿಳಾ ಬೈಕರ್ ಸಿಯಾ ಅವರು ಸಹ ಹೊಸ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಬೆಂಬಲವಾಗಿ ನಿಂತ ಜನರಿಗೆ ಧನ್ಯವಾದ ತಿಳಿಸಿರುವ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಕೀಲರೊಂದಿಗೆ ತೆರಳಿ ಇಂದು ಸಂಜೆಯೊಳಗೆ ಎಫ್ಐಆರ್ ದಾಖಲಿಸುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು, (ಏಜೆನ್ಸೀಸ್).