ತಲೆ ಬೋಳಿಸಿಕೊಂಡು ವಂಚನೆಗೊಳಗಾದ ತಮಿಳುನಾಡಿನ ಮಹಿಳೆಯರು. 
ದೇಶ

ತಲೆ ಬೋಳಿಸಿಕೊಂಡರೆ ಪ್ರೋತ್ಸಾಹ ಧನ ಕೊಡುವ ಆಮಿಷ; ಕೂದಲಿನಿಂದ ಹರಡುವ ಹೊಸ ರೋಗಕ್ಕೆ ಹೆದರಿ ಮೋಸ ಹೋದ ಮಹಿಳೆಯರು..Tamil Nadu

ಪ್ರಮುಖ ಮುಖ್ಯಾಂಶಗಳು

  • ಕೂದಲಿನಿಂದ ಹರಡುವ ರೋಗದ ಬಗ್ಗೆ ಹೆದರಿಸಿ, ಪ್ರೋತ್ಸಾಹ ಧನ ನೀಡುವ ಹೆಸರಲ್ಲಿ ಮಹಿಳೆಯರಿಗೆ ವಂಚನೆ.
  • ಸರ್ಕಾರಿ ಇಲಾಖೆ ಅಧಿಕಾರಿ ಹೆಸರಲ್ಲಿ ಮೂವರು ಮಹಿಳೆಯರ ತಲೆ ಬೋಳಿಸಿದ ವಂಚಕ.
  • ತಲೆ ಬೋಳಿಸಿಕೊಂಡರೆ ಹದಿನೈದು ಸಾವಿರ ರೂಪಾಯಿ ಪ್ರೋತ್ಸಾಹ ಧನ ನೀಡುವ ಆಮಿಷ.
3 Tamil Nadu women duped with new disease scam: ಕಿಚ್ಚ ಸುದೀಪ್​ ನಟನೆಯ ವೀರ ಮದಕರಿ ಸಿನಿಮಾದಲ್ಲಿ ಶ್ರೀಮಂತರಾಗುವ ಆಮಿಷವೊಡ್ಡಿ ಮಹಿಳೆಯರ ಅರ್ಧ ತಲೆ ಬೋಳಿಸಿ, ಅವರಿಗೆ ವಂಚಿಸುತ್ತಿದ್ದ. ನಂತರ ಬರುವ ಕ್ಷೌರಿಕ ಪೂರ ತಲೆ ಬೋಳಿಸಿ ಹಣ ಪಡೆದುಕೊಳ್ಳುತ್ತಿದ್ದ. ಅದರಿಂದ ಬಂದ ಹಣವನ್ನು ವಂಚಕರು(ನಟ ಸುದೀಪ್​-ಅರುಣ್​ ಸಾಗರ್​) ಶೇರ್​ ಮಾಡಿಕೊಳ್ಳುತ್ತಿದ್ದ ಒಂದು ದೃಶ್ಯವಿದೆ. ಇದೇ ವಿಚಾರವನ್ನು ಹೋಲುವಂತೆ ತಮಿಳುನಾಡಿನ ಸೇಲಂನಲ್ಲಿ ಘಟನೆಯೊಂದು ಬೆಳಕಿಗೆ ಬಂದಿದೆ. .
ಸಾಮಾನ್ಯವಾಗಿ ಸೈಬರ್ ಸೇರಿದಂತೆ ಹಲವು ವಂಚನಾ ಹಾದಿ ಮೂಲಕ ವಂಚಕರು ಹಣ ದೋಚುವ ಕೇಸ್ ನೋಡಿದ್ದೇವೆ.ಆದರೆ, ತಮಿಳುನಾಡಿನ ಸೇಲಂನಲ್ಲಿ ತಲೆ ಬುಡಕ್ಕೆ ಕೈ ಹಾಕಲಾಗಿದೆ. ಹೌದು ಸರ್ಕಾರಿ ಇಲಾಖೆಯ ಅಧಿಕಾರಿ ಎಂದು ನಂಬಿಸಿ, ಕೋವಿಡ್​ನಂತೆ ತಲೆ ಕೂದಲಿನಿಂದ ದೊಡ್ಡ ರೋಗ ಹರಡುತ್ತದೆ ಎಂದು ನಂಬಿಸಿ ಮಹಿಳೆಯರ ತಲೆ ಬೋಳಿಸಿದ ಘಟನೆ ವರದಿಯಾಗಿದೆ. ಇದೊಂದು ಕೂದಲು ಮಾರಾಟ ಮಾಡುವ ವಂಚನೆ ಜಾಲ ಎಂದು ಪೊಲೀಸರು ಶಂಕಿಸಿದ್ದಾರೆ.
ಪ್ರೋತ್ಸಾಹ ಧನ ಕೊಡುವ ಭರವಸೆ
ಸಂತ್ರಸ್ತ ಮಹಿಳೆಯರಲ್ಲಿ ಒಬ್ಬರಿಗೆ ಕರೆ ಮಾಡಿದ ವಂಚಕ ಆಕೆಯ ಹೆಸರು, ಕುಟುಂಬಸ್ಥರ ಬಗ್ಗೆ ಹೇಳುವ ಮೂಲಕ, ಅವರ ಭರವಸೆಯನ್ನು ಗಳಿಸಿದ. ಆನಂತರ ಹೇಳಿದ್ದು ಹೀಗೆ, "ಕೋವಿಡ್ ಹೋಲುವ ಹೊಸ ಸಾಂಕ್ರಾಮಿಕ ರೋಗ ಮಾನವನ ತಲೆ ಕೂದಲಿನಿಂದ ಹರಡುತ್ತದೆ. ತಲೆ ಬೋಳಿಸಿಕೊಳ್ಳುವ ಮೂಲ ಈ ರೋಗವನ್ನು ತಡೆಗಟ್ಟಬಹುದು. ಈ ಪ್ರಕ್ರಿಯೆ ಪ್ರೋತ್ಸಾಹಿಸಿದವರಿಗೆ ಸರ್ಕಾರ ಮಹಿಳೆಯರಿಗೆ 15,000 ರೂ. ಹಾಗೂ ಶಾಲಾ- ಕಾಲೇಜು ಮಕ್ಕಳಿಗೆ ಲ್ಯಾಪ್‌ಟಾಪ್ ಜೊತೆಗೆ 45,000 ರೂ. ನೀಡಲಾಗುತ್ತದೆ. ಪುರುಷರಿಗೆ 6,000 ರೂ. ಪ್ರೋತ್ಸಾಹ ಧನ ನೀಡಲಾಗುತ್ತದೆ" ಎಂದು ನಂಬಿಸಿದ್ದಾರೆ.
"ಈ ಪ್ರಕ್ರಿಯೆಗೆ ನಿಮ್ಮ ಗ್ರಾಮ ಮಾತ್ರ ಆಯ್ಕೆಯಾಗಿದೆ. ಅದರಲ್ಲೂ ಕೆಲವರನ್ನು ಆಯ್ಕೆ ಮಾಡಲಾಗಿದೆ ವಿದೇಶದಲ್ಲಿಯೂ ಹಲವರು ತಲೆ ಬೋಳಿಸಿಕೊಂಡು ತಮ್ಮ ಮನೆಯಲ್ಲಿ ಸುರಕ್ಷಿತವಾಗಿದ್ದಾರೆ. ನಾಳೆ ಗ್ರಾಮಕ್ಕೆ ಅಧಿಕಾರಿ ಬಂದು ಹಣ ನೀಡುವ ಮುನ್ನ ತಲೆ ಬೋಳಿಸಿಕೊಂಡಿರಿ" ಎಂದು ಪುಂಗಿ ಹೂದಿದ್ದ ಎನ್ನುವುದು ಮಹಿಳೆಯರು ಕೊಟ್ಟ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ತಲೆ ಬೋಳಿಸಿಕೊಂಡ ಮೂವರು

ವ್ಯಕ್ತಿಯ ಮಾತು ನಂಬಿ ತಲೆ ಬೋಳಿಸಿಕೊಳ್ಳಲು 20 ಮಂದಿ ಮುಂದಾದರು. ಅದರಲ್ಲಿ ಮೂವರು ಅಂದೇ ತಲೆ ಬೋಳಿಸಿಕೊಂಡರು. ಸರ್ಕಾರ ಸಹಾಯ ಪಡೆದು ತಲೆ ಬೋಳಿಸಿಕೊಂಡು ನಮ್ಮನ್ನು ನಾವು ಸುರಕ್ಷಿತವಾಗಿಟ್ಟುಕೊಳ್ಳುತ್ತೇವೆ ಎಂದು ಮೂವರು ಹೇಳಿಕೊಂಡಿದ್ದರು.

ಫೋನ್ ಸ್ವಿಚ್​ ಆಫ್

ಸರ್ಕಾರಿ ಇಲಾಖೆಯ ಅಧಿಕಾರಿ ಎಂದು ಕರೆ ಮಾಡಿದ್ದ ವ್ಯಕ್ತಿಗೆ ಮಹಿಳೆಯರು ಕರೆ ಮಾಡಿದ್ದಾಗ ಆ ನಂಬರ್ ಸ್ವಿಚ್ ಆಫ್​ ಎಂದು ಬರುತ್ತತ್ತು. ಎಷ್ಟೇ ಬಾರಿ ಪ್ರಯತ್ನಿಸಿದರೂ ವಿಫಲವಾದಾಗ ತಾವು ಮೋಸ ಹೋಗಿದ್ದೇವೆ., ಇದೊಂದು ವಂಚನೆ ಜಾಲ ಎಂದು ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಆರೋಪಿಗಳಿಗಾಗಿ ಪತ್ತೆ ಕಾರ್ಯ ಮುಂದುವರೆದಿದೆ ಎನ್ನಲಾಗಿದೆ, (ಏಜೆನ್ಸೀಸ್).