ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್
ನವದೆಹಲಿ: ಚಳಿಗಾಲದ ಅಧಿವೇಶನದ ಕೊನೆ ಗಳಿಗೆಯಲ್ಲಿ ಕೇಂದ್ರ ಸರ್ಕಾರ ಸಂಸತ್ನಲ್ಲಿ ಮಂಡಿಸಿ, ಅಂಗೀಕರಿಸಿದ ಶಾಂತಿ ಮಸೂದೆ-2025ರ(SHANTI Bill) ಬಗ್ಗೆ ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದ್ದು, ಅದನ್ನು ಟ್ರಂಪ್ ಕಾಯ್ದೆ ಎಂದು ಕರೆಯಬೇಕು ಎಂದು ಶನಿವಾರ(ಡಿ. 20) ಕಿಡಿಕಾರಿದೆ.
ಇತ್ತೀಚೆಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಮತ್ತು ಅಮೆರಿಕ ನಡುವಿನ ಪರಮಾಣು ಹೊಣೆಗಾರಿಕೆ ನಿಯಮಗಳ ಜಂಟಿ ಮೌಲ್ಯಮಾಪನಗಳನ್ನು ನಿರ್ದಿಷ್ಟವಾಗಿ ಉಲ್ಲೇಖಿಸುವ 2026ರ ಆರ್ಥಿಕ ವರ್ಷಕ್ಕಾಗಿ ಯುಎಸ್ ರಾಷ್ಟ್ರೀಯ ರಕ್ಷಣಾ ಅಧಿಕಾರ ಕಾಯ್ದೆಗೆ ಸಹಿ ಹಾಕಿದ್ದು, ಅದನ್ನು ಉಲ್ಲೇಖಿಸಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಹಾಕಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಅಮೆರಿಕದ ಹಿತಾಸಕ್ತಿಗಳನ್ನು ಪೂರೈಸಲು ಮತ್ತು ಪ್ರಧಾನಿಯವರು ತಮ್ಮ ಒಂದು ಕಾಲದಲ್ಲಿ ಉತ್ತಮ ಸ್ನೇಹಿತನೊಂದಿಗೆ ಶಾಂತಿಯನ್ನು ಮರುಸ್ಥಾಪಿಸಲು ಸಹಾಯ ಮಾಡಲು ಸಂಸತ್ತಿನ ಮೂಲಕ ಶಾಂತಿ ಮಸೂದೆಯನ್ನು ಬುಲ್ಡೋಜರ್ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
‘ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ 2026ರ ಹಣಕಾಸು ವರ್ಷದ ರಾಷ್ಟ್ರೀಯ ರಕ್ಷಣಾ ಅಧಿಕಾರ ಕಾಯ್ದೆಗೆ ಸಹಿ ಹಾಕಿದ್ದಾರೆ. ಈ ಕಾಯ್ದೆ 3,100 ಪುಟಗಳಷ್ಟು ಉದ್ದವಾಗಿದೆ. ಪುಟ 1,912 ರಲ್ಲಿ ಪರಮಾಣು ಹೊಣೆಗಾರಿಕೆ ನಿಯಮಗಳ ಕುರಿತು ಅಮೆರಿಕ ಮತ್ತು ಭಾರತದ ನಡುವಿನ ಜಂಟಿ ಮೌಲ್ಯಮಾಪನದ ಉಲ್ಲೇಖವಿದೆ. ಈ ವಾರದ ಆರಂಭದಲ್ಲಿ ಸರ್ಕಾರ ಶಾಂತಿ ಮಸೂದೆಯನ್ನು ಅಂಗೀಕರಿಸಲು ಏಕೆ ಬೇಗನೆ ಕ್ರಮ ಕೈಗೊಂಡಿತು ಎಂಬುದನ್ನು ಈ ಉಲ್ಲೇಖವು ಸ್ಪಷ್ಟಪಡಿಸುತ್ತದೆ ಎಂದಿದ್ದಾರೆ.
ಈ ಮಸೂದೆಯು ಇತರ ವಿಷಯಗಳ ಜೊತೆಗೆ, 2010 ರ ಪರಮಾಣು ಹಾನಿಗಾಗಿ ನಾಗರಿಕ ಹೊಣೆಗಾರಿಕೆ ಕಾಯ್ದೆಯ ಪ್ರಮುಖ ನಿಬಂಧನೆಗಳನ್ನು ರದ್ದುಗೊಳಿಸಿತು. ಶಾಂತಿಯನ್ನು ಅವರ ಒಂದು ಕಾಲದ ಉತ್ತಮ ಸ್ನೇಹಿತನೊಂದಿಗೆ ಪುನಃಸ್ಥಾಪಿಸಲು ಇದು ಉದ್ದೇಶವಾಗಿತ್ತು ಎಂದು ಆರೋಪಿಸಿದ್ದು, ಶಾಂತಿ ಕಾಯ್ದೆಯನ್ನು ಟ್ರಂಪ್ ಕಾಯ್ದೆ. ರಿಯಾಕ್ಟರ್ ಬಳಕೆ ಮತ್ತು ನಿರ್ವಹಣಾ ಭರವಸೆ ಕಾಯ್ದೆ ಎಂದು ಕರೆಯಬಹುದು ಕಿಡಿಕಾರಿದ್ದಾರೆ.
ಏನಿದೂ ಶಾಂತಿ ಮಸೂದೆ?
ಕಳೆದ ಬುಧವಾರ ಸಂಸತ್ತಿನ ಎರಡೂ ಸದನಗಳಿಂದ ಅಂಗೀಕರಿಸಲ್ಪಟ್ಟ ಶಾಂತಿ ಮಸೂದೆಯು, ಭಾರತದ ಪರಮಾಣು ಇಂಧನ ವಲಯವನ್ನು ಖಾಸಗಿ ಭಾಗವಹಿಸುವಿಕೆಗೆ ಮುಕ್ತಗೊಳಿಸುತ್ತದೆ. ಪ್ರಸ್ತುತವಾಗಿ ಸರ್ಕಾರದ ಅಡಿಯಲ್ಲಿ ನಿರ್ವಹಿಸುವ ಇಂಧನ, ಶಸ್ತ್ರಾಸ್ತ್ರ ಸೇರಿ ಅಣುಶಕ್ತಿಗೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳಲ್ಲಿ ಖಾಸಗಿಯವರು ಭಾಗವಹಿಸಲು ಕಾಯ್ದೆಯಲ್ಲಿ ಅನುವು ಮಾಡಿಕೊಡಲಾಗಿದೆ.
ಹೊಸ ಶಾಂತಿ ಮಸೂದೆ ಕಾಯ್ದೆಯಾದರೆ ಖಾಸಗಿ ಕಂಪನಿಗಳು ಸಹ ಅಣುಸ್ಥಾವರಗಳನ್ನು ಸ್ಥಾಪಿಸಿ ನಿರ್ವಹಣೆ ಮಾಡಬಹುದು. ಆದರೆ ವಿರೋಧ ಪಕ್ಷಗಳು ಖಾಸಗಿಯವರಿಗೆ ಅವಕಾಶ ಮಾಡಿಕೊಡುವುದನ್ನು ವಿರೋಧಿಸಿದ್ದು, ಕಾಯ್ದೆಯನ್ನು ಅಧ್ಯಯನ ಮಾಡಲು ಜಂಟಿ ಸದನ ಸಮಿತಿಗೆ ಕಳುಹಿಸುವಂತೆ ಒತ್ತಾಯಿಸಿದ್ದವು. ಆದರೆ ಸರ್ಕಾರ ಅವರ ಬೇಡಿಕೆಯನ್ನು ತಿರಸ್ಕರಿಸಿತು. ಎರಡೂ ಸದನದಲ್ಲಿ ಅಂಗೀಕರಿಸಲಾಗಿದ್ದು, ರಾಷ್ಟ್ರಪತಿ ಒಪ್ಪಿಗೆಗೆ ಕಳುಹಿಸಲಾಗಿದೆ (ಏಜೆನ್ಸೀಸ್).