ತಾಯಿಯ ಹಾಲಿಲ್ಲ, ನಡೆಯಲು ಕಾಲಿಲ್ಲ! ಆನೆ ಮರಿ 'ರಾಜಾ'ಗೆ ಅನಂತ್​ ಅಂಬಾನಿಯ ವಂತಾರ ಜೀವದಾನ | Vantara  
ದೇಶ

ತಾಯಿಯ ಹಾಲಿಲ್ಲ, ನಡೆಯಲು ಕಾಲಿಲ್ಲ! ಆನೆ ಮರಿ 'ರಾಜಾ'ಗೆ ಅನಂತ್​ ಅಂಬಾನಿಯ ವಂತಾರ ಜೀವದಾನ | Vantara

Vantara: ಹುಟ್ಟಿದ ಮೊದಲ ದಿನವೇ ಕಾಲಿನ ಮೂಳೆ ಮುರಿತಕ್ಕೊಳಗಾಗಿ, ಕಳೆದ ಏಳು ವಾರಗಳಿಂದ ಜೀವನ್ಮರಣ ಹೋರಾಟ ನಡೆಸುತ್ತಿರುವ ಪುಟ್ಟ ಆನೆ ಮರಿ 'ರಾಜಾ'ಗೆ ಇದೀಗ ಅನಂತ್ ಅಂಬಾನಿ ಅವರ ವಂತಾರ ಜೀವದಾನ ನೀಡಿದೆ.

ಅಸ್ಸಾಂನ ಪೊಹುಮಾರಾದಲ್ಲಿರುವ ರಾಜಾನನ್ನು ಗುಜರಾತ್‌ನ ಜಾಮ್‌ನಗರದಲ್ಲಿರುವ ಅನಂತ್ ಅಂಬಾನಿ ಅವರ ವಂತಾರ ಪ್ರಾಣಿ ಆರೈಕೆ ಕೇಂದ್ರಕ್ಕೆ ವಿಮಾನದ ಮೂಲಕ 2,500 ಕಿ.ಮೀ ಏರ್​ಲಿಫ್ಟ್​ ಮಾಡಲಾಗಿದೆ. ರಾಜಾ ಆರೋಗ್ಯದ ಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ವೈದ್ಯಕೀಯ ಸೌಲಭ್ಯಗಳಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ.

ಇಂದು ಗುವಾಹಟಿಯಿಂದ ಜಾಮ್‌ನಗರಕ್ಕೆ ವಿಶೇಷ ವಿಮಾನದ ಮೂಲಕ ರಾಜಾನನ್ನು ಏರ್​ಲಿಫ್ಟ್​ ಮೂಲಕ ಕರೆದೊಯ್ಯಲಾಗುತ್ತಿದೆ. ಸುಮಾರು ನಾಲ್ಕು ಗಂಟೆಗಳ ಈ ಪ್ರಯಾಣಕ್ಕಾಗಿ ಮರಿಯ ದೇಹದ ಗಾತ್ರಕ್ಕೆ ಅನುಗುಣವಾಗಿ ವಿಶೇಷ ಪೆಟ್ಟಿಗೆಯನ್ನು ಸಿದ್ಧಪಡಿಸಲಾಗಿದೆ. ಕಾಲಿಗೆ ಪೆಟ್ಟು ಬೀಳದಂತೆ, ನೋವಾಗದಂತೆ ಸುರಕ್ಷಿತವಾಗಿ ಇರಿಸಲು ಮೃದುವಾದ ಹಾಸಿಗೆ ಮತ್ತು ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿದೆ. ವಂತಾರದ ಪಶುವೈದ್ಯರು ಹಾಗೂ ಆರೈಕೆ ಸಿಬ್ಬಂದಿ ಪ್ರಯಾಣದುದ್ದಕ್ಕೂ ಮರಿಯ ಆರೋಗ್ಯವನ್ನು ಗಮನಿಸಲಿದ್ದಾರೆ.

ಹುಟ್ಟಿದ ಮೊದಲ ದಿನವೇ ಮುರಿದಿತ್ತು ಮೂಳೆ!

ರಾಜಾ 2026ರ ಅಕ್ಟೋಬರ್ 2ರಂದು ಅಸ್ಸಾಂನ ಗೊಗಾಮುಖ್‌ನಲ್ಲಿ ಜನಿಸಿತ್ತು. ಅದರ ತಾಯಿ ಆನೆಗೆ ಕೇವಲ 11 ವರ್ಷ ವಯಸ್ಸಾಗಿದ್ದು, ಮೊದಲ ಬಾರಿಗೆ ಮರಿಗೆ ಜನ್ಮ ನೀಡಿದ ಹಿನ್ನೆಲೆಯಲ್ಲಿ ಅನುಭವದ ಕೊರತೆ ಮತ್ತು ಆತಂಕದಿಂದ ನವಜಾತ ಮರಿಯನ್ನು ಕಾಲಿನಿಂದ ಒದ್ದಿತ್ತು ಎನ್ನಲಾಗಿದೆ. ಇದರಿಂದ ರಾಜಾನ ಹಿಂಬದಿಯ ಬಲಗಾಲಿನ ತೊಡೆಯ ಮೂಳೆ ಸಂಪೂರ್ಣವಾಗಿ ಮುರಿದಿತ್ತು.

ಸಾಮಾನ್ಯವಾಗಿ ಆನೆ ಮರಿಗಳು ಹುಟ್ಟಿದ ಕೆಲವೇ ಸಮಯದಲ್ಲಿ ತಾಯಿಯೊಂದಿಗೆ ನಡೆಯಲು ಆರಂಭಿಸುತ್ತವೆ. ಆದರೆ, ರಾಜಾಗೆ ನಿಲ್ಲಲು ಅಥವಾ ಕಾಲಿನ ಮೇಲೆ ಭಾರ ಹಾಕಲು ಸಾಧ್ಯವಾಗಿರಲಿಲ್ಲ. ತಾಯಿಯಿಂದ ಸಿಗಬೇಕಾದ ಮೊದಲ ಹಾಲು (ಕೊಲೊಸ್ಟ್ರಮ್) ಕೂಡ ದೊರೆಯದ ಕಾರಣ ಮರಿಯ ಆರೋಗ್ಯದ ಮೇಲೆ ಮತ್ತಷ್ಟು ಪರಿಣಾಮ ಬೀರಿತ್ತು. ಇದರಿಂದ ರಾಜನ ಪರಿಸ್ಥಿತಿ ಕೂಡ ದಿನದಿಂದ ದಿನಕ್ಕೆ ಹದಗೆಟ್ಟಿತ್ತು ಎನ್ನಲಾಗಿದೆ.

7 ವಾರಗಳಿಂದ ಮನೆಯಲ್ಲೇ ಚಿಕಿತ್ಸೆ

ರಾಜಾಗೆ ವಿಶೇಷ ಚಿಕಿತ್ಸೆಯ ಅಗತ್ಯವಿರುವುದನ್ನು ಅರಿತ ಮಾಲೀಕರು, ವಂತಾರ ತಂಡದ ಸಹಾಯ ಕೋರಿದ್ದರು. ಅಕ್ಟೋಬರ್ 8ರಂದು ವಂತಾರಾದ ತುರ್ತು ಪ್ರತಿಕ್ರಿಯಾ ತಂಡ ಸ್ಥಳಕ್ಕೆ ತಲುಪಿ, ಆನೆ ಮರಿಗೆ ಎಕ್ಸ್‌ರೇ ಪರೀಕ್ಷೆ ಮಾಡಿದ್ದರು. ಈ ವೇಳೆ, ಕಾಲಿನ ಮೂಳೆ ಸಂಪೂರ್ಣವಾಗಿ ಮುರಿದು, ಮೂಳೆಯ ತುಂಡುಗಳು ತಮ್ಮ ಸಹಜ ಸ್ಥಾನದಿಂದ ಜಾರಿರುವುದು ದೃಢಪಟ್ಟಿತು.

ಸೋಂಕು, ರಕ್ತದಲ್ಲಿನ ಸಕ್ಕರೆ ಪ್ರಮಾಣ ಇಳಿಕೆ!

ತಾಯಿಯ ಹಾಲು ಸಿಗದಿರುವುದು ಮತ್ತು ಮುಕ್ತವಾಗಿ ಚಲಿಸಲು ಸಾಧ್ಯವಾಗದಿರುವುದು ರಾಜಾನ ಆರೋಗ್ಯದ ಮೇಲೆ ಹಲವು ರೀತಿಯ ಪರಿಣಾಮ ಬೀರಿದೆ. ಮರಿಯಲ್ಲಿ ಅತಿಸಾರ ಕಾಣಿಸಿಕೊಂಡಿದ್ದು, ಪ್ರಯೋಗಾಲಯದ ಪರೀಕ್ಷೆಯಲ್ಲಿ Klebsiella pneumoniae ಎಂಬ ಬ್ಯಾಕ್ಟೀರಿಯಾದ ಸೋಂಕು ಪತ್ತೆಯಾಗಿದೆ. ರಕ್ತದಲ್ಲಿನ ಸಕ್ಕರೆ ಪ್ರಮಾಣವೂ ಪದೇ ಪದೇ ಕಡಿಮೆಯಾಗುತ್ತಿತ್ತು.

ಇದಲ್ಲದೆ, ಲಿವರ್​ ಕೆಲಸಕ್ಕೆ ಸಂಬಂಧಿಸಿದ ಕೆಲವು ಸೂಚಕಗಳ ಪ್ರಮಾಣ ಹೆಚ್ಚಾಗಿರುವುದು ಪರೀಕ್ಷೆಯಲ್ಲಿ ಕಂಡುಬಂದಿದೆ. ದೀರ್ಘಕಾಲ ಒಂದೇ ಸ್ಥಿತಿಯಲ್ಲಿ ಮಲಗಿರುವುದರಿಂದ ತಲೆಯ ಭಾಗದಲ್ಲಿ ಒತ್ತಡದ ಗಾಯಗಳೂ ಉಂಟಾಗಿವೆ. ಹೊಕ್ಕುಳಿನ ಭಾಗದಲ್ಲಿ ಹರ್ನಿಯಾ ಸಮಸ್ಯೆ ಹಾಗೂ ದೇಹದ ಸಾಮಾನ್ಯ ನಿಶ್ಶಕ್ತಿಯೂ ಕಾಣಿಸಿಕೊಂಡಿದೆ.

ಈ ಸಮಸ್ಯೆಗಳಿಗೆ ಪಶುವೈದ್ಯರು ಸೂಕ್ತ ಆ್ಯಂಟಿಬಯೋಟಿಕ್ ಔಷಧಗಳು, ಐವಿ ದ್ರವ, ಲಿವರ್​ನ ಆರೈಕೆಗೆ ಔಷಧಗಳು, ವಿಟಮಿನ್‌ಗಳು, ಖನಿಜಾಂಶಗಳು, ಪ್ರೋಬಯಾಟಿಕ್‌ಗಳು ಮತ್ತು ಗಾಯಗಳ ಆರೈಕೆಯ ಮೂಲಕ ಚಿಕಿತ್ಸೆ ನೀಡಿದ್ದಾರೆ. ಆದರೂ, ರಾಜಾನ ಸ್ಥಿತಿ ಗಂಭೀರವಾಗಿರುವುದರಿಂದ ಈಗ ಸಂಪೂರ್ಣ ಸೌಲಭ್ಯಗಳಿರುವ ವಿಶೇಷ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವುದು ಅನಿವಾರ್ಯವಾಗಿದೆ.

ಏನಿದು ವಂತಾರ?

ರಿಲಯನ್ಸ್​ ಇಂಡಸ್ಟ್ರೀಸ್​ ನಿರ್ದೇಶಕ ಅನಂತ್​ ಅಂಬಾನಿ ಅವರು ವಿಶ್ವದ ಅತಿ ದೊಡ್ಡ ಮೃಗಾಲಯ, ಪ್ರಾಣಿ ಸಂರಕ್ಷಣಾ ಹಾಗೂ ಪುನರ್ವಸತಿ ಕೇಂದ್ರವನ್ನು ತೆರೆಯುವ ತಮ್ಮ ಮಹತ್ವಾಕಾಂಕ್ಷೆಯ ಪ್ರಾಜೆಕ್ಟ್​ ಅನ್ನು 2024ರ ಫೆ.26ರಂದು ಘೋಷಣೆ ಮಾಡಿದರು. ಈ ಪ್ರಾಜೆಕ್ಟ್​ ಹೆಸರು ವಂತಾರಾ. ಇದರ ಅರ್ಥ ಕಾಡಿನ ನಕ್ಷತ್ರ. ಪ್ರಾಣಿಗಳ ರಕ್ಷಣೆ, ಚಿಕಿತ್ಸೆ, ಪೋಷಣೆ ಮತ್ತು ಗಾಯಗೊಂಡ ಪ್ರಾಣಿಗಳ ಪುನರ್ವಸತಿ, ಅಳಿವಿನಂಚಿನಲ್ಲಿರುವ ಪ್ರಾಣಿಗಳ ಸಂರಕ್ಷಣೆ ಈ ಯೋಜನೆಯ ಪ್ರಮುಖ ಗುರಿಯಾಗಿದ್ದು, ದೇಶ ಮತ್ತು ವಿದೇಶ ಎರಡರಲ್ಲೂ ಕಾರ್ಯನಿರ್ವಹಿಸಲಿದೆ.

ಗುಜರಾತಿನ ರಿಲಯನ್ಸ್​ನ ಜಾಮ್‌ನಗರ ರಿಫೈನರಿ ಕಾಂಪ್ಲೆಕ್ಸ್‌ನ ಗ್ರೀನ್ ಬೆಲ್ಟ್‌ನಲ್ಲಿ 3000 ಎಕರೆಗಳಷ್ಟು ವಿಶಾಲ ಪ್ರದೇಶವಿದ್ದು, ವಂತಾರಾ ಕಾರ್ಯಕ್ರಮದ ಅಡಿಯಲ್ಲಿ ಈ ಜಾಗವನ್ನು ಕಾಡಿನಂತಹ ಪರಿಸರಕ್ಕೆ ಪರಿವರ್ತಿಸಲಾಗಿದೆ. ಸಂರಕ್ಷಿಸಲ್ಪಟ್ಟ ಪ್ರಾಣಿಗಳ ಪಾಲನೆಗಾಗಿ ನೈಸರ್ಗಿಕ, ಸಮೃದ್ಧ ಮತ್ತು ಹಸಿರು ಆವಾಸಸ್ಥಾನವನ್ನು ಹೊಂದಿದೆ. ಜಾಗತಿಕವಾಗಿ ಪ್ರಾಣಿ ಸಂರಕ್ಷಣಾ ಪ್ರಯತ್ನಗಳಿಗೆ ಪ್ರಮುಖ ಕೊಡುಗೆ ನೀಡುವವರಲ್ಲಿ ಮೂಂಚೂಣಿ ಸ್ಥಾನದಲ್ಲಿ ನಿಲ್ಲುವ ಗುರಿಯನ್ನು ವಂತಾರಾ ಗುರಿ ಹೊಂದಿದೆ ಎಂದು ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಈ ವಂತಾರ ಪ್ರಾಜೆಕ್ಟ್​ ಗುಜರಾತಿನ ಜಾಮ್‌ನಗರದಲ್ಲಿ ರಿಲಯನ್ಸ್‌ನ ನವೀಕರಿಸಬಹುದಾದ ಇಂಧನ ವ್ಯವಹಾರವನ್ನು ಮುನ್ನಡೆಸುತ್ತಿರುವ ರಿಲಯನ್ಸ್​ ಇಂಡಸ್ಟ್ರಿ ಲಿಮಿಟೆಡ್​ ಮತ್ತು ರಿಲಯನ್ಸ್ ಫೌಂಡೇಶನ್ ಮಂಡಳಿಗಳ ನಿರ್ದೇಶಕರಾದ ಅನಂತ್​ ಅಂಬಾನಿ ಅವರ ಪರಿಕಲ್ಪನೆಯಾಗಿದೆ ಮತ್ತು ಕನಸಿನ ಯೋಜನೆಯೂ ಆಗಿದೆ.